Skip to content
Opens in a new window
Listen to this chapter • 4:06

[1] ಯಾಕೋಬನು ಕಣ್ಣೆತ್ತಿ ನೋಡಿದಾಗ, ಏಸಾವನು ನಾನೂರು ಮಂದಿ ಜನರ ಸಮೇತ ಬರುವುದನ್ನು ಕಂಡನು. ಆಗ ಅವನು ಲೇಯಳಿಗೂ ರಾಹೇಲಳಿಗೂ ಇಬ್ಬರು ದಾಸಿಯರಿಗೂ ಅವರವರ ಮಕ್ಕಳನ್ನು ಒಪ್ಪಿಸಿ ಅವರನ್ನು ಬೇರೆ ಬೇರೆ ಮಾಡಿ

[2] ಮುಂದುಗಡೆಯಲ್ಲಿ ದಾಸಿಯರನ್ನೂ ಅವರ ಮಕ್ಕಳನ್ನೂ ಅವರ ಹಿಂದೆ ಲೇಯಳನ್ನೂ ಆಕೆಯ ಮಕ್ಕಳನ್ನೂ ಕಡೆಯಲ್ಲಿ ರಾಹೇಲಳನ್ನೂ ಯೋಸೇಫನನ್ನೂ ನಿಲ್ಲಿಸಿದನು.

[3] ತಾನೇ ಅವರ ಮುಂದಾಗಿ ಹೋಗಿ ತನ್ನ ಅಣ್ಣನು ಹತ್ತಿರ ಸಮೀಪಿಸುತ್ತಿರುವಾಗ ಏಳು ಸಾರಿ ನೆಲದವರೆಗೆ ತಲೆಬಾಗಿ ನಮಸ್ಕರಿಸಿದನು.

[4] ಆಗ ಏಸಾವನು ಅವನನ್ನು ಎದುರುಗೊಳ್ಳುವುದಕ್ಕೆ ಓಡಿ ಬಂದು ಅವನ ಕೊರಳನ್ನು ಅಪ್ಪಿಕೊಂಡು ಮುದ್ದಿಟ್ಟನು. ಅವರಿಬ್ಬರೂ ಅತ್ತರು.

[5] ತರುವಾಯ ಏಸಾವನು ಕಣ್ಣೆತ್ತಿ ಆ ಸ್ತ್ರೀಯರನ್ನೂ ಮಕ್ಕಳನ್ನೂ ಕಂಡು, “ನಿನ್ನ ಜೊತೆಯಲ್ಲಿರುವ ಜನರು ಯಾರು?” ಎಂದು ಕೇಳಲು ಯಾಕೋಬನು ಅವನಿಗೆ, “ದೇವರು ನಿನ್ನ ಸೇವಕನಿಗೆ ಕೃಪೆಯಿಂದ ಅನುಗ್ರಹಿಸಿಕೊಟ್ಟ ಮಕ್ಕಳೇ ಇವರು” ಎಂದು ಹೇಳಿದನು.

[6] ಆಗ ಅವನ ದಾಸಿಯರಿಬ್ಬರೂ ತಮ್ಮ ಮಕ್ಕಳನ್ನು ಕರೆದುಕೊಂಡು ಹತ್ತಿರಕ್ಕೆ ಬಂದು ಅಡ್ಡಬಿದ್ದರು.

[7] ಆ ಮೇಲೆ ಲೇಯಳು ತನ್ನ ಮಕ್ಕಳೊಡನೆ ಬಂದು ಅಡ್ಡಬಿದ್ದಳು. ಕೊನೆಗೆ ಯೋಸೇಫನೂ ರಾಹೇಲಳೂ ಬಂದು ಅಡ್ಡಬಿದ್ದರು.

[8] ಏಸಾವನು, “ನಾನು ದಾರಿಯಲ್ಲಿ ಕಂಡ ಆ ಪಶುಗಳು ಯಾತಕ್ಕೆ?” ಎಂದು ಕೇಳಲು ಯಾಕೋಬನು, “ಸ್ವಾಮಿಯವರ ದಯೆ ನನಗೆ ದೊರಕಬೇಕೆಂದು ನಾನು ತಮಗೆ ಅವುಗಳನ್ನು ಕಳುಹಿಸಿಕೊಟ್ಟೆನು” ಎಂದನು.

[9] ಏಸಾವನು ಅದಕ್ಕೆ, “ತಮ್ಮನೇ, ನನಗೆ ಬೇಕಾದಷ್ಟು ಆಸ್ತಿಯುಂಟು, ನಿನ್ನದು ನಿನಗೇ ಇರಲಿ” ಎನ್ನಲು,

[10] ಯಾಕೋಬನು, “ಹಾಗಲ್ಲ, ನಿನಗೆ ನನ್ನ ಮೇಲೆ ದಯೆಯಿದ್ದರೆ, ನಾನು ಸಮರ್ಪಿಸುವ ಕಾಣಿಕೆಯನ್ನು ಅಂಗೀಕರಿಸಬೇಕು. ನಿನ್ನನ್ನು ನೋಡಿದ್ದು ದೇವರನ್ನು ನೋಡಿದ ಹಾಗಾಯಿತು, ನನ್ನನ್ನು ಪ್ರೀತಿಯಿಂದ ಅಂಗೀಕರಿಸಿದ್ದೇ ವಿಶೇಷ ಸಂಗತಿಯಾಗಿದೆ.

[11] ದೇವರು ನನಗೆ ಕೃಪೆಯನ್ನು ತೋರಿದ್ದರಿಂದ ನನಗೆ ಸಮೃದ್ಧಿಯುಂಟಾಯಿತು. ಆದಕಾರಣ ನಾನು ಸಮರ್ಪಿಸುವ ಉಡುಗೊರೆಯನ್ನು ನೀನು ದಯವಿಟ್ಟು ಅಂಗೀಕರಿಸಬೇಕು” ಎಂದು ಹೇಳಿ ಏಸಾವನನ್ನು ಬಲವಂತ ಮಾಡಿದ್ದರಿಂದ ಅವನು ಆ ಉಡುಗೊರೆಯನ್ನು ತೆಗೆದುಕೊಂಡನು.

[12] ತರುವಾಯ ಏಸಾವನು, “ನಾವು ಮುಂದಕ್ಕೆ ಪ್ರಯಾಣವನ್ನು ಬೆಳೆಸೋಣ. ನಾನು ಮುಂದಾಗಿ ಹೋಗುತ್ತೇನೆ” ಎಂದನು.

[13] ಅದಕ್ಕೆ ಯಾಕೋಬನು, “ನನ್ನ ಮಕ್ಕಳು ಎಳೇ ಪ್ರಾಯದವರು ಇದಲ್ಲದೆ ಎಳೆಯ ದನಕುರಿಗಳು ನನ್ನ ಬಳಿಯಲ್ಲಿರುವುದು ಪ್ರಭುವಿಗೆ ತಿಳಿದಿದೆ. ಒಂದು ದಿನ ಹೆಚ್ಚಾಗಿ ಅವುಗಳನ್ನು ನಡಿಸಿದರೆ ಆಡುಕುರಿಗಳ ಹಿಂಡುಗಳೆಲ್ಲವೂ ಸತ್ತು ಹೋದಾವು.

[14] ತಾವು ದಯವಿಟ್ಟು ಸೇವಕನಿಗಿಂತಲೂ ಮುಂಚೆ ಹೋಗಬಹುದು ನಾನು ನನ್ನ ಮುಂದಿರುವ ಆಡುಕುರಿಗಳ ನಡಿಗೆಗೂ ಮಕ್ಕಳ ಶಕ್ತಿಗೂ ಸರಿಯಾಗಿ ಮೆಲ್ಲಮೆಲ್ಲನೆ ನಡೆದು ನನ್ನ ಪ್ರಭುವಿನ ಸೀಮೆಯಾಗಿರುವ ಸೇಯೀರಿಗೆ ಬರುತ್ತೇನೆ” ಎಂದನು.

[15] ಏಸಾವನು, “ನನ್ನ ಆಳುಗಳಲ್ಲಿ ಕೆಲವರನ್ನು ನಿನ್ನ ಸಂಗಡ ಬಿಟ್ಟು ಹೋಗುತ್ತೇನೆ” ಎನ್ನಲು ಯಾಕೋಬನು, “ಅದರ ಅಗತ್ಯವೇನು? ಒಡೆಯನೇ, ತಮ್ಮ ದಯೆ ನನ್ನ ಮೇಲಿದ್ದರೆ ಸಾಕು” ಎಂದು ಹೇಳಿದನು.

[16] ಹೀಗೆ ಏಸಾವನು ಆ ದಿನವೇ ಸೇಯೀರ್ ಸೀಮೆಗೆ ಹೊರಟುಹೋದನು.

[17] ಯಾಕೋಬನು ಪ್ರಯಾಣಮಾಡಿ ಸುಕ್ಕೋತಿಗೆ ಬಂದನು. ಅಲ್ಲಿ ತನಗೋಸ್ಕರ ಮನೆಯನ್ನೂ ದನಗಳಿಗೆ ಆಶ್ರಯವನ್ನೂ ಮಾಡಿಸಿದನು. ಆದುದರಿಂದ ಆ ಸ್ಥಳಕ್ಕೆ “ಸುಕ್ಕೋತ್” ಎಂದು ಹೆಸರಾಯಿತು.

[18] ಯಾಕೋಬನು ಪದ್ದನ್ ಅರಾಮಿನಿಂದ ಬಂದು, ಕಾನಾನ್ ದೇಶದ ಶೆಕೆಮ್ ಪಟ್ಟಣವನ್ನು ಸುರಕ್ಷಿತವಾಗಿ ಸೇರಿದನು. ಆ ಊರಿನ ಬಳಿಯಲ್ಲಿ ತನ್ನ ಗುಡಾರಗಳನ್ನು ಹಾಕಿಸಿಕೊಂಡನು.

[19] ಅವನು ತನ್ನ ಗುಡಾರಗಳನ್ನು ಹಾಕಿಸಿದ ಭೂಮಿಯನ್ನು ಹಮೋರನ ಮಕ್ಕಳಿಗೆ ನೂರು ನಾಣ್ಯ ಕೊಟ್ಟು ಅವರಿಂದ ಕೊಂಡುಕೊಂಡನು. ಹಮೋರನು ಶೆಕೆಮನ ತಂದೆ.

[20] ಅಲ್ಲಿ ಯಾಕೋಬನು ಯೆಹೋವನ ಯಜ್ಞವೇದಿಯನ್ನು ಕಟ್ಟಿಸಿ ಅದಕ್ಕೆ “ಏಲ್ ಎಲೋಹೆ ಇಸ್ರಾಯೇಲ್” ಎಂದು ಹೆಸರಿಟ್ಟನು.

ಆದಿಕಾಂಡ — Chapters