Skip to content
Opens in a new window
Listen to this chapter • 5:09

[1] ದೇವರು ಯಾಕೋಬನಿಗೆ, “ನೀನು ಈ ಸ್ಥಳವನ್ನು ಬಿಟ್ಟು ಗಟ್ಟಾ ಹತ್ತಿ ಬೇತೇಲಿಗೆ ಹೋಗಿ ಅಲ್ಲಿ ವಾಸಮಾಡು. ನೀನು ನಿನ್ನ ಅಣ್ಣನಾದ ಏಸಾವನ ಬಳಿಯಿಂದ ಓಡಿ ಹೋದ ಕಾಲದಲ್ಲಿ ದೇವರು ಅಲ್ಲಿ ನಿನಗೆ ದರ್ಶನಕೊಟ್ಟನಲ್ಲಾ, ಆತನಿಗಾಗಿ ಯಜ್ಞವೇದಿಯನ್ನು ಕಟ್ಟಿಸು” ಎಂದು ಹೇಳಿದನು.

[2] ಆಗ ಯಾಕೋಬನು ತನ್ನ ಮನೆಯವರಿಗೂ ತನ್ನ ಸಂಗಡ ಇದ್ದವರೆಲ್ಲರಿಗೂ “ನಿಮ್ಮ ಮಧ್ಯಲ್ಲಿರುವ ಅನ್ಯ ದೇವರುಗಳನ್ನು ತೆಗೆದುಹಾಕಿ ನಿಮ್ಮನ್ನು ಶುದ್ಧಪಡಿಸಿಕೊಂಡು, ವಸ್ತ್ರಗಳನ್ನು ಬದಲಾಯಿಸಿರಿ,

[3] ನಾವು ಇಲ್ಲಿಂದ ಬೇತೇಲಿಗೆ ಹೋಗೋಣ. ಕಷ್ಟಕಾಲದಲ್ಲಿ ನನ್ನ ವಿಜ್ಞಾಪನೆಯನ್ನು ಲಾಲಿಸಿ ನಾನು ಹೋದ ಮಾರ್ಗದಲ್ಲೆಲ್ಲಾ ನನ್ನ ಸಂಗಡ ಇದ್ದ ದೇವರಿಗೆ ಅಲ್ಲಿ ಯಜ್ಞವೇದಿಯನ್ನು ಕಟ್ಟಿಸುತ್ತೇನೆ” ಎಂದು ಹೇಳಿದನು.

[4] ಆಗ ಅವರು ತಮ್ಮಲ್ಲಿದ್ದ ಎಲ್ಲಾ ಅನ್ಯ ದೇವರುಗಳನ್ನು, ತಮ್ಮ ಕಿವಿಯಲ್ಲಿದ್ದ ಓಲೆಗಳನ್ನು ಯಾಕೋಬನಿಗೆ ಕೊಟ್ಟರು. ಅವನು ಅವುಗಳನ್ನು ಶೆಕೆಮ್ ಪಟ್ಟಣದ ಹತ್ತಿರವಿರುವ ಏಲಾ ಮರದ ಕೆಳಗೆ ಹೂಣಿಟ್ಟನು.

[5] ಆಮೇಲೆ ಅವರು ಪ್ರಯಾಣ ಮಾಡುತ್ತಿರುವಾಗ, ಸುತ್ತಲಿರುವ ಊರುಗಳಲ್ಲಿ ದೇವರ ಭಯವು ಇದ್ದುದರಿಂದ ಅವರು ಯಾಕೋಬನ ಮಕ್ಕಳನ್ನು ಬೆನ್ನಟ್ಟಿ ಬರಲಿಲ್ಲ.

[6] ಹೀಗೆ ಯಾಕೋಬನೂ ಅವನ ಸಂಗಡ ಇದ್ದ ಜನರೆಲ್ಲರೂ ಕಾನಾನ್ ದೇಶದಲ್ಲಿರುವ ಬೇತೇಲ್ ಎಂಬ ಲೂಜಿಗೆ ಬಂದರು.

[7] ಅವನು ತನ್ನ ಅಣ್ಣನ ಬಳಿಯಿಂದ ಓಡಿಹೋದಾಗ ದೇವರು ಅವನಿಗೆ ಪ್ರತ್ಯಕ್ಷನಾದನು. ಅದುದರಿಂದ ಅವನು ಅಲ್ಲಿ ಯಜ್ಞವೇದಿಯನ್ನು ಕಟ್ಟಿಸಿ ಆ ಸ್ಥಳಕ್ಕೆ ಏಲ್ ಬೇತೇಲ್ ಎಂದು ಹೆಸರಿಟ್ಟನು.

[8] ಅಲ್ಲಿ ರೆಬೆಕ್ಕಳ ದಾಸಿಯಾದ ದೆಬೋರಳು ಸತ್ತು ಹೋದಾಗ, ಅವರು ಆಕೆಯನ್ನು ಬೇತೇಲಿನ ತಗ್ಗಿನಲ್ಲಿರುವ ಅಲ್ಲೋನ್ ಮರದ ಬುಡದಲ್ಲಿ ಸಮಾಧಿಮಾಡಿದರು. ಆ ಸ್ಥಳಕ್ಕೆ ಅಲ್ಲೋನ್ ಬಾಕೂತ್ ಎಂದು ಹೆಸರಿಟ್ಟರು.

[9] ಯಾಕೋಬನು ಪದ್ದನ್ ಅರಾಮಿನಿಂದ ಬಂದಾಗ ದೇವರು ಪುನಃ ಅವನಿಗೆ ದರ್ಶನ ಕೊಟ್ಟು ಅವನನ್ನು ಆಶೀರ್ವದಿಸಿದನು.

[10] ದೇವರು ಅವನಿಗೆ, “ಈಗ ನಿನಗೆ ಯಾಕೋಬನೆಂದು ಹೆಸರಿರುವುದು. ಇನ್ನು ಮೇಲೆ ನೀನು ಯಾಕೋಬನೆಂದು ಕರೆಯಿಸಿಕೊಳ್ಳದೆ ‘ಇಸ್ರಾಯೇಲ್’ ಎಂದು ಕರೆಯಿಸಿಕೊಳ್ಳುವೆ” ಎಂದು ಹೇಳಿ ಅವನಿಗೆ ಇಸ್ರಾಯೇಲ್ ಎಂದು ಹೆಸರಿಟ್ಟನು.

[11] ದೇವರು ಅವನಿಗೆ, “ನಾನೇ ಸರ್ವಶಕ್ತನಾದ ದೇವರು, ನೀನು ಬಹು ಸಂತಾನವುಳ್ಳವನಾಗಿ ಹೆಚ್ಚುವೆ, ನಿನ್ನಿಂದ ಜನಾಂಗವೂ, ಜನಾಂಗಗಳ ಗುಂಪು ಉಂಟಾಗುವುದು. ಅನೇಕ ಜನಾಂಗಗಳ ಅರಸರು ನಿನ್ನಿಂದ ಹುಟ್ಟುವರು.

[12] ನಾನು ಅಬ್ರಹಾಮ ಮತ್ತು ಇಸಾಕರಿಗೆ ವಾಗ್ದಾನ ಮಾಡಿದ ದೇಶವನ್ನು ನಿನಗೂ ನಿನ್ನ ತರುವಾಯ ಬರುವ ನಿನ್ನ ಸಂತತಿಯವರಿಗೂ ಕೊಡುವೆನು” ಎಂದು ಹೇಳಿದನು.

[13] ಅನಂತರ ದೇವರು ಅವನ ಸಂಗಡ ಮಾತನಾಡಿದ ಸ್ಥಳದಿಂದ ಮೇಲಕ್ಕೇರಿ ಹೋದನು.

[14] ಯಾಕೋಬನು ತನ್ನ ಸಂಗಡ ದೇವರು ಮಾತನಾಡಿದ ಸ್ಥಳದಲ್ಲಿ ಕಲ್ಲಿನ ಸ್ತಂಭವನ್ನು ನಿಲ್ಲಿಸಿ ಅದರ ಮೇಲೆ ಪಾನಕಾಭಿಷೇಕಮಾಡಿ ಎಣ್ಣೆಯನ್ನು ಹೊಯ್ದನು.

[15] ಯಾಕೋಬನು ತನ್ನ ಸಂಗಡ ದೇವರು ಮಾತನಾಡಿದ ಸ್ಥಳಕ್ಕೆ “ಬೇತೇಲ್” ಎಂದು ಹೆಸರಿಟ್ಟನು.

[16] ಅವರು ಬೇತೇಲಿನಿಂದ ಪ್ರಯಾಣಮಾಡುತ್ತಿರಲು ಎಫ್ರಾತಿಗೆ ಸೇರುವುದಕ್ಕೆ ಇನ್ನೂ ಸ್ವಲ್ಪ ದೂರವಿದ್ದಾಗ ರಾಹೇಲಳು ಪ್ರಸವ ವೇದನೆಯಿಂದ ನರಳಿದಳು.

[17] ಆಕೆಯು ಹೆರಿಗೆಯ ನೋವಿನಿಂದ ಬಹು ಕಷ್ಟಪಡುತ್ತಿರುವಾಗ ಸೂಲಗಿತ್ತಿಯು ಆಕೆಗೆ, “ಅಂಜಬೇಡ ಇನ್ನೊಂದು ಗಂಡು ಮಗುವು ಹುಟ್ಟುವುದು” ಎಂದು ಹೇಳಿದಳು.

[18] ಆದರೆ ರಾಹೇಲಳು ಸತ್ತುಹೋದಳು. ಪ್ರಾಣಬಿಡುವಾಗ ಆಕೆಯು ಆ ಮಗುವಿಗೆ, “ಬೆನೋನಿ” ಎಂದು ಹೆಸರಿಟ್ಟಳು. ಆದರೆ ಅದರ ತಂದೆಯು ಅದಕ್ಕೆ, “ಬೆನ್ಯಾಮೀನ” ಎಂದು ಹೆಸರಿಟ್ಟನು.

[19] ರಾಹೇಲಳು ಸತ್ತ ಮೇಲೆ, ಬೇತ್ಲೆಹೇಮ್ ಎಂಬ ಎಫ್ರಾತಿಗೆ ಹೋಗುವ ದಾರಿಯಲ್ಲಿ ಆಕೆಯನ್ನು ಸಮಾಧಿಮಾಡಿದರು.

[20] ಯಾಕೋಬನು ಆಕೆಯ ಸಮಾಧಿಯ ಮೇಲೆ ಸ್ತಂಭವನ್ನು ನಿಲ್ಲಿಸಿದನು. ಅದು ಇಂದಿನವರೆಗೂ “ರಾಹೇಲಳ ಸಮಾಧಿಯ ಸ್ತಂಭ” ಎಂದೇ ಎನಿಸಿಕೊಂಡಿದೆ.

[21] ಅಲ್ಲಿಂದ ಇಸ್ರಾಯೇಲನು ಪ್ರಯಾಣ ಮಾಡಿ ಮಿಗ್ದಲ್ ಏದರಿನ ಆಚೆಯಲ್ಲಿ ತನ್ನ ಗುಡಾರವನ್ನು ಹಾಕಿಸಿದನು.

[22] ಇಸ್ರಾಯೇಲನು ಆ ದೇಶದಲ್ಲಿ ವಾಸವಾಗಿದ್ದಾಗ ರೂಬೇನನು ತನ್ನ ತಂದೆಯ ಉಪಪತ್ನಿಯಾದ ಬಿಲ್ಹಳನ್ನು ಸಂಗಮಿಸಿದನು. ಈ ಸಂಗತಿಯು ಇಸ್ರಾಯೇಲನಿಗೆ ತಿಳಿಯಿತು. ಯಾಕೋಬನಿಗೆ ಹನ್ನೆರಡು ಮಂದಿ ಗಂಡು ಮಕ್ಕಳಿದ್ದರು.

[23] ಯಾಕೋಬನಿಗೆ ಲೇಯಳಲ್ಲಿ ಹುಟ್ಟಿದವರು ಯಾರೆಂದರೆ: ಯಾಕೋಬನ ಚೊಚ್ಚಲ ಮಗನಾದ ರೂಬೇನ್ ಮತ್ತು ಸಿಮೆಯೋನ್, ಲೇವಿ, ಯೆಹೂದ, ಇಸ್ಸಾಕಾರ್, ಜೆಬುಲೂನ್.

[24] ರಾಹೇಲಳಲ್ಲಿ ಹುಟ್ಟಿದವರು: ಯೋಸೇಫನು ಮತ್ತು ಬೆನ್ಯಾಮೀನನು.

[25] ರಾಹೇಲಳ ದಾಸಿಯಾದ ಬಿಲ್ಹಳಲ್ಲಿ ಹುಟ್ಟಿದವರು: ದಾನ್, ನಫ್ತಾಲಿ.

[26] ಲೇಯಳ ದಾಸಿಯಾದ ಜಿಲ್ಪಳಲ್ಲಿ ಹುಟ್ಟಿದವರು: ಗಾದ್, ಆಶೇರ್. ಪದ್ದನ್ ಅರಾಮಿನಲ್ಲಿ ಯಾಕೋಬನಿಗೆ ಹುಟ್ಟಿದ ಮಕ್ಕಳು ಇವರೇ.

[27] ಯಾಕೋಬನು ತನ್ನ ತಂದೆಯಾದ ಇಸಾಕನ ಬಳಿಗೆ ಮಮ್ರೆಗೆ ಬಂದನು. ಮಮ್ರೆಯು ಹೆಬ್ರೋನೆಂಬ ಕಿರ್ಯತರ್ಬಕ್ಕೆ ಸೇರಿರುವುದು. ಅದು ಅಬ್ರಹಾಮ ಇಸಾಕರು ಪರದೇಶಸ್ಥರಾಗಿ ವಾಸವಾಗಿದ್ದ ಸ್ಥಳ.

[28] ಇಸಾಕನು ದಿನತುಂಬಿದ ಮುದುಕನಾಗಿದ್ದು ನೂರ ಎಂಭತ್ತನೆಯ ವರ್ಷದಲ್ಲಿ ಪ್ರಾಣಬಿಟ್ಟು ತನ್ನ ಪೂರ್ವಿಕರ ಬಳಿಗೆ ಸೇರಿದನು.

[29] ಇಸಾಕನ ಮಕ್ಕಳಾದ ಏಸಾವ, ಯಾಕೋಬರು ಅವನನ್ನು ಸಮಾಧಿಮಾಡಿದರು.

ಆದಿಕಾಂಡ — Chapters