Skip to content
Opens in a new window
Listen to this chapter • 7:02

[1] ಅಬ್ರಹಾಮನ ಕಾಲದಲ್ಲಿ ಬಂದ ಮೊದಲನೆಯ ಬರಗಾಲವಲ್ಲದೆ ಇನ್ನೊಂದು ಬರಗಾಲವು ಕಾನಾನ್ ದೇಶಕ್ಕೆ ಬಂದಿತು. ಆಗ ಇಸಾಕನು ಫಿಲಿಷ್ಟಿಯರ ಅರಸನಾದ ಅಬೀಮೆಲೆಕನ ಬಳಿಗೆ ಗೆರಾರಿಗೆ ಹೋದನು.

[2] ಅಲ್ಲಿ ಯೆಹೋವನು ಇಸಾಕನಿಗೆ ದರ್ಶನಕೊಟ್ಟು, “ನೀನು ಐಗುಪ್ತ ದೇಶಕ್ಕೆ ಇಳಿದು ಹೋಗಬೇಡ; ನಾನು ಹೇಳುವ ದೇಶದಲ್ಲಿ ನೀನು ವಾಸಮಾಡಬೇಕು.

[3] ನೀನು ಈ ದೇಶದಲ್ಲಿ ಪ್ರವಾಸಿಯಾಗಿರು; ನಾನು ನಿನ್ನ ಬಳಿಯಲ್ಲಿದ್ದು ನಿನ್ನನ್ನು ಅಭಿವೃದ್ಧಿಪಡಿಸಿ ನಿನಗೂ, ನಿನ್ನ ಸಂತತಿಯವರಿಗೂ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ಹೀಗೆ ನಿನ್ನ ತಂದೆಯಾದ ಅಬ್ರಹಾಮನಿಗೆ ಮಾಡಿದ ವಾಗ್ದಾನವನ್ನು ನೆರವೇರಿಸುವೆನು,

[4] ನಿನ್ನ ಸಂತತಿಯವರನ್ನು ಆಕಾಶದಲ್ಲಿರುವ ನಕ್ಷತ್ರಗಳಂತೆ ಹೆಚ್ಚಿಸುವೆನು. ನಿನ್ನ ಸಂತತಿಗೆ ಈ ಪ್ರದೇಶಗಳನ್ನೆಲ್ಲಾ ಕೊಡುವೆನು. ನಿನ್ನ ಸಂತತಿಯ ಮೂಲಕ ಭೂಮಿಯ ಎಲ್ಲಾ ಜನಾಂಗಗಳಿಗೂ ಆಶೀರ್ವಾದವುಂಟಾಗುವುದು.

[5] ಏಕೆಂದರೆ ಅಬ್ರಹಾಮನು ನನ್ನ ಮಾತಿಗೆ ವಿಧೇಯನಾಗಿ ನನ್ನ ವಿಧಿಗಳನ್ನು, ನನ್ನ ಆಜ್ಞೆಗಳನ್ನು, ನನ್ನ ನೇಮಗಳನ್ನು, ನನ್ನ ಕಟ್ಟಳೆಗಳನ್ನು, ಕೈಗೊಂಡು ನಡೆದನು” ಎಂದನು.

[6] ಇಸಾಕನು ಗೆರಾರಿನಲ್ಲಿ ವಾಸವಾಗಿದ್ದನು.

[7] ಆ ಸ್ಥಳದ ಜನರು ಅವನ ಹೆಂಡತಿಯನ್ನು ನೋಡಿ ಆಕೆಯನ್ನು ಕುರಿತು ವಿಚಾರಿಸಿದಾಗ ಅವನು ರೆಬೆಕ್ಕಳು ಸುಂದರಿಯಾಗಿರುವುದರಿಂದ ಈ ಸ್ಥಳದ ಜನರು ಈಕೆಯ ನಿಮಿತ್ತ ನನ್ನನ್ನು ಕೊಂದಾರು ಅಂದುಕೊಂಡು ಆಕೆಯನ್ನು ತನ್ನ ಹೆಂಡತಿ ಎಂದು ಹೇಳುವುದಕ್ಕೆ ಭಯಪಟ್ಟು ತಂಗಿಯಾಗಬೇಕು ಎಂದು ಹೇಳಿದನು.

[8] ಅವನು ಆ ಸ್ಥಳದಲ್ಲಿ ಬಹಳ ದಿನ ಇದ್ದ ಮೇಲೆ ಒಂದು ದಿನ ಫಿಲಿಷ್ಟಿಯರ ಅರಸನಾದ ಅಬೀಮೆಲೆಕನು ಕಿಟಿಕಿಯಿಂದ ನೋಡಿದಾಗ ಇಸಾಕನು ತನ್ನ ಹೆಂಡತಿಯಾದ ರೆಬೆಕ್ಕಳ ಸಂಗಡ ಸರಸವಾಡುವುದನ್ನು ಕಂಡನು.

[9] ಆಗ ಅಬೀಮೆಲೆಕನು ಇಸಾಕನನ್ನು ಕರೆಯಿಸಿ, “ನಿಶ್ಚಯವಾಗಿ ಈಕೆಯ ನಿನ್ನ ಹೆಂಡತಿಯಲ್ಲವೇ, ತಂಗಿ ಎಂದು ಯಾಕೆ ಹೇಳಿದೆ” ಎಂದು ಕೇಳಲು ಇಸಾಕನು, “ಜನರು ಈಕೆಯ ನಿಮಿತ್ತ ನನ್ನನ್ನು ಕೊಂದಾರೆಂದು ಹಾಗೆ ಹೇಳಿದೆನು” ಎಂದನು.

[10] ಅದಕ್ಕೆ ಅಬೀಮೆಲೆಕನು, “ನೀನು ನಮಗೆ ಹೀಗೆ ಯಾಕೆ ಮಾಡಿದೆ? ಜನರಲ್ಲಿ ಒಬ್ಬನು ನಿನ್ನ ಹೆಂಡತಿಯೊಡನೆ ಸಂಗಮಿಸುವುದಕ್ಕೆ ಆಸ್ಪದವಾಗುತ್ತಿತ್ತು. ನಿನ್ನ ಮೂಲಕ ನಮಗೆ ದೋಷ ಪ್ರಾಪ್ತವಾಗುತ್ತಿತ್ತಲ್ಲಾ?”

[11] ಎಂದು ಹೇಳಿ ಅಬೀಮೆಲೆಕನು ತನ್ನ ಪ್ರಜೆಗಳಿಗೆ, “ಈ ಮನುಷ್ಯನಿಗಾಗಲಿ ಇವನ ಹೆಂಡತಿಗಾಗಲಿ ಕೇಡುಮಾಡುವವನಿಗೆ ತಪ್ಪದೆ ಮರಣ ದಂಡನೆಯಾಗುವುದು” ಎಂದು ಆಜ್ಞೆ ಮಾಡಿದನು.

[12] ಇಸಾಕನು ಆ ದೇಶದಲ್ಲಿ ಬೀಜವನ್ನು ಬಿತ್ತಿ ಅದೇ ವರ್ಷದಲ್ಲಿ ನೂರರಷ್ಟು ಬೆಳೆಯನ್ನು ಕೊಯ್ದನು; ಯೆಹೋವನು ಅವನನ್ನು ಅಭಿವೃದ್ಧಿಪಡಿಸಿದನು;

[13] ಅವನ ಐಶ್ವರ್ಯವು ದಿನೇ ದಿನೇ ಹೆಚ್ಚಿದ್ದರಿಂದ ಬಹು ಧನವಂತನಾದನು.

[14] ಅವನಿಗೆ ದನಕುರಿಗಳೂ, ಸಂಪತ್ತೂ, ಸೇವಕರು ಹೇರಳವಾಗಿದ್ದುದನ್ನು ನೋಡಿ ಫಿಲಿಷ್ಟಿಯರು ಹೊಟ್ಟೆಕಿಚ್ಚುಪಟ್ಟರು.

[15] ಅವನ ತಂದೆಯಾದ ಅಬ್ರಹಾಮನ ಸೇವಕರು ಅಬ್ರಹಾಮನ ಕಾಲದಲ್ಲೇ ತೋಡಿದ್ದ ಬಾವಿಗಳನ್ನು ಫಿಲಿಷ್ಟಿಯರು ಮಣ್ಣುಹಾಕಿ ಮುಚ್ಚಿದ್ದರು.

[16] ಹೀಗಿರಲಾಗಿ ಅಬೀಮೆಲೆಕನು ಇಸಾಕನಿಗೆ, “ನೀನು ನಮಗಿಂತ ಬಹು ಬಲಿಷ್ಠನಾಗಿದ್ದೀ;

[17] ಆದ್ದರಿಂದ ನಮ್ಮ ಬಳಿಯಿಂದ ಹೊರಟುಹೋಗಬೇಕು” ಎಂದು ಹೇಳಲು ಇಸಾಕನು ಅಲ್ಲಿಂದ ಹೋಗಿ ಗೆರಾರ್ ತಗ್ಗಿನ ಬಯಲಿನಲ್ಲಿ ಬಿಡಾರ ಮಾಡಿಕೊಂಡು ಅಲ್ಲಿ ವಾಸವಾಗಿದ್ದನು.

[18] ಅಬ್ರಹಾಮನು ತೋಡಿಸಿದ್ದ ಬಾವಿಗಳನ್ನು ಅವನು ಸತ್ತ ನಂತರ ಫಿಲಿಷ್ಟಿಯರು ಮುಚ್ಚಿ ಹಾಕಿದ್ದರಿಂದ ಇಸಾಕನು ಅವುಗಳನ್ನು ತಿರುಗಿ ಅಗೆಸಿ, ತಂದೆ ಇಟ್ಟಿದ್ದ ಹೆಸರುಗಳನ್ನೇ ಇಟ್ಟನು.

[19] ಇಸಾಕನ ಸೇವಕರು ತಗ್ಗಿನಲ್ಲಿ ಅಗೆಯುವಾಗ ಅವರಿಗೆ ಉಕ್ಕುವ ಒರತೆಯ ನೀರಿನ ಬಾವಿಯು ಸಿಕ್ಕಿತು.

[20] ಗೆರಾರಿನ ದನ ಕಾಯುವವರು ಬಂದು ಆ ನೀರು ತಮ್ಮದು ಎಂದು ಹೇಳಿ ಇಸಾಕನ ದನ ಕಾಯುವವರ ಸಂಗಡ ಜಗಳವಾಡಿದ್ದರಿಂದ ಇಸಾಕನು ಆ ಬಾವಿಗೆ “ಏಸೆಕ್” ಎಂದು ಹೆಸರಿಟ್ಟನು.

[21] ತರುವಾಯ ಅವನ ಜನರು ಬೇರೊಂದು ಬಾವಿಯನ್ನು ತೋಡಿದಾಗ ಆ ದೇಶದವರು ಅದಕ್ಕಾಗಿಯೂ ಜಗಳವಾಡಿದ್ದರಿಂದ ಅವನು ಅದಕ್ಕೆ “ಸಿಟ್ನಾ” ಎಂದು ಹೆಸರಿಟ್ಟನು.

[22] ಅವನು ಅಲ್ಲಿಂದ ಹೊರಟು ಮತ್ತೊಂದು ಬಾವಿಯನ್ನೂ ತೋಡಿಸಿದಾಗ ಅದರ ವಿಷಯದಲ್ಲಿ ಯಾರೂ ಜಗಳವಾಡದೆ ಹೋದುದರಿಂದ ಅವನು, “ಈಗ ಯೆಹೋವನು ನಮಗೋಸ್ಕರ ಸ್ಥಳ ಮಾಡಿದ್ದರಿಂದ ಅಭಿವೃದ್ಧಿಯಾಗುವೆವು” ಎಂದು ಹೇಳಿ ಅದಕ್ಕೆ “ರೆಹೋಬೋತ್” ಎಂದು ಹೆಸರಿಟ್ಟನು.

[23] ಇಸಾಕನು ಅಲ್ಲಿಂದ ಹೊರಟು ಗಟ್ಟಾ ಹತ್ತಿ ಬೇರ್ಷೆಬಕ್ಕೆ ಬಂದನು.

[24] ಆ ರಾತ್ರಿ ಯೆಹೋವನು ಅವನಿಗೆ ಕಾಣಿಸಿಕೊಂಡು, “ನಾನು ನಿನ್ನ ತಂದೆಯಾದ ಅಬ್ರಹಾಮನ ದೇವರು; ನೀನು ಭಯಪಡಬೇಡ; ನಾನು ನಿನ್ನ ಸಂಗಡ ಇದ್ದೇನೆ; ನನ್ನ ಸೇವಕನಾದ ಅಬ್ರಹಾಮನ ನಿಮಿತ್ತ ನಿನ್ನನ್ನು ಆಶೀರ್ವದಿಸಿ ನಿನ್ನ ಸಂತತಿಯನ್ನು ಹೆಚ್ಚಿಸುವೆನು” ಎಂದು ಹೇಳಿದನು.

[25] ಇಸಾಕನು ಯಜ್ಞವೇದಿಯನ್ನು ಕಟ್ಟಿಸಿ ಯೆಹೋವನ ಹೆಸರನ್ನು ಹೇಳಿಕೊಂಡು ಆರಾಧಿಸಿ ಅಲ್ಲಿ ತನ್ನ ಗುಡಾರವನ್ನು ಹಾಕಿಸಿಕೊಂಡನು.

[26] ಅಲ್ಲಿಯೂ ಇಸಾಕನ ಸೇವಕರು ಬಾವಿಯನ್ನು ಅಗೆದರು. ಆ ಸಮಯದಲ್ಲಿ ಅಬೀಮೆಲೆಕನು ತನ್ನ ಮಂತ್ರಿಯಾದ ಅಹುಜ್ಜತನನ್ನೂ, ಸೇನಾಪತಿಯಾದ ಫೀಕೋಲನನ್ನೂ ಸಂಗಡ ಕರೆದುಕೊಂಡು ಗೆರಾರಿನಿಂದ ಇಸಾಕನ ಬಳಿಗೆ ಬರಲು ಇಸಾಕನು.

[27] ನೀವು, “ನನ್ನನ್ನು ದ್ವೇಷಿಸಿ ನಿಮ್ಮ ಬಳಿಯಿಂದ ಕಳುಹಿಸಿ ಬಿಟ್ಟಿರಲ್ಲಾ; ಈಗ ನನ್ನ ಬಳಿಗೆ ಯಾಕೆ ಬಂದಿರಿ” ಎಂದು ಅವರನ್ನು ಕೇಳಿದ್ದಕ್ಕೆ ಅವರು,

[28] “ಯೆಹೋವನು ನಿನ್ನ ಸಂಗಡ ಇದ್ದಾನೆ ಎಂದು ನಮಗೆ ಸ್ಪಷ್ಟವಾಗಿ ಕಂಡು ಬಂದುದರಿಂದ ನೀನೂ, ನಾವೂ ಒಬ್ಬರಿಗೊಬ್ಬರು ಪ್ರಮಾಣಪೂರ್ವಕವಾಗಿ ಒಡಂಬಡಿಕೆ ಮಾಡಿಕೊಳ್ಳೋಣವೆಂದು ಆಲೋಚಿಸಿದೆವು.

[29] ನಾವು ನಿನಗೆ ಯಾವ ಕೇಡನ್ನೂ ಮಾಡದೆ ಹಿತವನ್ನೇ ಮಾಡಿ ನಿನ್ನನ್ನು ಸಮಾಧಾನದಿಂದ ಕಳುಹಿಸಿದೆವಲ್ಲಾ. ಅದರಂತೆ ನೀನು ನಮಗೆ ಕೇಡನ್ನು ಮಾಡುವುದಿಲ್ಲವೆಂಬುದಾಗಿ ಪ್ರಮಾಣಮಾಡಬೇಕು. ನೀನು ಈಗ ಯೆಹೋವನ ದಯೆಯನ್ನು ಹೊಂದಿದವನಾಗಿದ್ದೀಯಲ್ಲವೇ” ಎಂದು ಹೇಳಿದರು.

[30] ಆಗ ಇಸಾಕನು ಅವರಿಗೆ ಔತಣವನ್ನು ಮಾಡಿಸಿದನು. ಅವರೆಲ್ಲರೂ ಭೋಜನ ಉಪಚಾರಗಳನ್ನು ಮುಗಿಸಿಕೊಂಡರು.

[31] ಅವರು ಬೆಳಿಗ್ಗೆ ಎದ್ದು ಒಬ್ಬರಿಗೊಬ್ಬರು ಒಡಂಬಡಿಕೆ ಮಾಡಿಕೊಂಡರು. ಇಸಾಕನು ಅವರನ್ನು ಕಳುಹಿಸಲು ಅವರು ಸಮಾಧಾನದಿಂದ ಹೊರಟುಹೋದರು.

[32] ಅದೇ ದಿನದಲ್ಲಿ ಇಸಾಕನ ಸೇವಕರು ಬಂದು, “ನಮಗೆ ನೀರು ಸಿಕ್ಕಿತು” ಎಂದು ಹೇಳಿ ತಾವು ತೋಡಿದ ಬಾವಿಯ ಸಂಗತಿಯನ್ನು ತಿಳಿಸಿದರು.

[33] ಅವನು ಆ ಬಾವಿಗೆ “ಷಿಬಾ” ಎಂದು ಹೆಸರಿಟ್ಟನು. ಆದುದರಿಂದ ಅಲ್ಲಿರುವ ಊರಿಗೆ ಇಂದಿನವರೆಗೂ “ಬೇರ್ಷೆಬ” ಎಂದು ಹೆಸರಾಯಿತು.

[34] ಏಸಾವನು ನಲವತ್ತು ವರ್ಷದವನಾದಾಗ ಹಿತ್ತಿಯನಾದ ಬೇರಿಯ ಮಗಳಾದ ಯೆಹೂದೀತಳನ್ನೂ ಹಿತ್ತಿಯನಾದ ಏಲೋನನ ಮಗಳಾದ ಬಾಸೆಮತಳನ್ನೂ ಮದುವೆ ಮಾಡಿಕೊಂಡನು.

[35] ಇವರ ದೆಸೆಯಿಂದ ಇಸಾಕನಿಗೂ ರೆಬೆಕ್ಕಳಿಗೂ ಮನೋವ್ಯಥೆ ಉಂಟಾಯಿತು.

ಆದಿಕಾಂಡ — Chapters