[1] ಎದೋಮ್ ಎಂಬ ಏಸಾವನ ವಂಶಾವಳಿ ಇದು:
[2] ಏಸಾವನು ಕಾನಾನ್ಯರ ಸ್ತ್ರೀಯರನ್ನು ಮದುವೆಮಾಡಿಕೊಂಡನು. ಅವರು ಯಾರೆಂದರೆ, ಹಿತ್ತಿಯನಾದ ಏಲೋನನ ಮಗಳಾಗಿದ್ದ ಆದಾ, ಹಿವ್ವಿಯನಾದ ಸಿಬಿಯೋನನ ಮಗಳಾದ ಅನಾಹಳ ಮಗಳು ಒಹೊಲೀಬಾಮಳನ್ನು,
[3] ಮತ್ತು ಇಷ್ಮಾಯೇಲನ ಮಗಳೂ ನೆಬಾಯೋತನ ತಂಗಿಯೂ ಆಗಿದ್ದ ಬಾಸೆಮತ್ ಇವರನ್ನು ಮದುವೆಯಾಗಿದ್ದನು.
[4] ಆದಾಳು ಏಸಾವನಿಗೆ ಎಲೀಫಜನನ್ನು ಹೆತ್ತಳು. ಬಾಸೆಮತಳು ರೆಗೂವೇಲನನ್ನು ಹೆತ್ತಳು.
[5] ಒಹೊಲೀಬಾಮಳು ಯೆಗೂಷನನ್ನು ಯಳಾಮನನ್ನೂ, ಕೋರಹನನ್ನು ಹೆತ್ತಳು. ಕಾನಾನ್ ದೇಶದಲ್ಲಿ ಏಸಾವನಿಗೆ ಹುಟ್ಟಿದ ಮಕ್ಕಳು ಇವರೇ.
[6] ತರುವಾಯ ಏಸಾವನು ತನ್ನ ಹೆಂಡತಿಯರನ್ನೂ, ಗಂಡುಹೆಣ್ಣು ಮಕ್ಕಳನ್ನೂ, ತನ್ನ ಮನೆಗೆ ಸೇರಿದ ಸೇವಕರೆಲ್ಲರನ್ನೂ, ತನಗಿದ್ದ ಎಲ್ಲಾ ಪಶುಪ್ರಾಣಿಗಳ ಹಿಂಡುಗಳನ್ನೂ ಕಾನಾನ್ ದೇಶದಲ್ಲಿ ಸಂಪಾದಿಸಿದ್ದ ಆಸ್ತಿಯೆಲ್ಲವನ್ನೂ ತೆಗೆದುಕೊಂಡು ತನ್ನ ತಮ್ಮನಾದ ಯಾಕೋಬನ ಬಳಿಯಿಂದ ಬೇರೆ ದೇಶಕ್ಕೆ ಹೊರಟುಹೋದನು.
[7] ಅವರ ಸಂಪತ್ತು ಹೆಚ್ಚಿದ್ದದರಿಂದ ಅವರಿಬ್ಬರೂ ಒಂದೇ ಸ್ಥಳದಲ್ಲಿರುವುದಕ್ಕೆ ಸಾಧ್ಯವಿರಲಿಲ್ಲ. ಅವರಿಗೆ ಪಶುಪ್ರಾಣಿಗಳು ಬಹಳವಾಗಿದ್ದುದರಿಂದ ಅವರು ಪ್ರವಾಸವಾಗಿದ್ದ ದೇಶವು ಅವರಿಗೆ ಸಾಲದೆ ಹೋಯಿತು.
[8] ಹೀಗೆ ಏಸಾವನು ಸೇಯೀರ್ ಬೆಟ್ಟದ ಸೀಮೆಗೆ ಹೋಗಿ ಅಲ್ಲೇ ವಾಸವಾಗಿದ್ದನು. ಏಸಾವನೆಂದರೆ ಎದೋಮನು.
[9] ಸೇಯೀರ್ ಬೆಟ್ಟದ ಸೀಮೆಯಲ್ಲಿದ್ದ ಎದೋಮ್ಯರ ಮೂಲಪುರುಷನಾದ ಏಸಾವನ ವಂಶದ ಚರಿತ್ರೆ:
[10] ಏಸಾವನ ಮಕ್ಕಳ ಹೆಸರುಗಳು ಯಾವುವೆಂದರೆ: ಎಲೀಫಜನು, ಏಸಾವನ ಹೆಂಡತಿಯಾದ ಆದಾ ಎಂಬಾಕೆಯ ಮಗನು. ರೆಗೂವೇಲನು ಏಸಾವನ ಹೆಂಡತಿಯಾದ ಬಾಸೆಮತಳ ಮಗನು.
[11] ಎಲೀಫಜನ ಮಕ್ಕಳು ಯಾರೆಂದರೆ: ತೇಮಾನ್, ಓಮಾರ್, ಚೆಫೋ, ಗತಾಮ್, ಕೆನೆಜ್,
[12] ತಿಮ್ನ ಎಂಬವಳು ಏಸಾವನ ಮಗನಾದ ಎಲೀಫಜನಿಗೆ ಉಪಪತ್ನಿಯಾಗಿದ್ದು ಆಕೆಯು ಅವನಿಗೆ ಅಮಾಲೇಕನನ್ನು ಹೆತ್ತಳು. ಇವರೇ ಏಸಾವನ ಹೆಂಡತಿಯಾದ ಆದಾ ಎಂಬಾಕೆಯ ಮಕ್ಕಳು.
[13] ರೆಗೂವೇಲನ ಮಕ್ಕಳು ಯಾರೆಂದರೆ: ನಹತ್, ಜೆರಹ, ಶಮ್ಮಾ ಮಿಜ್ಜಾ ಇವರು ಏಸಾವನ ಹೆಂಡತಿಯಾದ ಬಾಸೆಮತಳ ಪುತ್ರರು.
[14] ಏಸಾವನ ಹೆಂಡತಿಯಾದ ಸಿಬಿಯೋನನ ಮಗಳಾದ ಅನಾಹನ ಮಗಳಾದ ಒಹೊಲೀಬಾಮಳ ಮಕ್ಕಳು ಯಾರೆಂದರೆ: ಯೆಗೂಷ್ ವಂಶಸ್ಥರನ್ನು, ಯಳಾಮ ಕೋರಹ ಇವರನ್ನು ಹೆತ್ತಳು.
[15] ಏಸಾವನ ಪುತ್ರರ ಮುಖಂಡರು ಯಾರೆಂದರೆ: ಏಸಾವನ ಚೊಚ್ಚಲ ಮಗನಾದ ಎಲೀಫಜನಿಂದ ಹುಟ್ಟಿದವರು ಯಾರೆಂದರೆ: ತೇಮಾನ್, ಓಮಾರ್, ಚೆಫೋ, ಕೆನೆಜ್,
[16] ಕೋರಹ, ಗತಾಮ್, ಅಮಾಲೇಕ್, ಇವರೇ, ಈ ಕುಲಪತಿಗಳು ಎದೋಮ್ಯರ ದೇಶದಲ್ಲಿದ್ದ ಎಲೀಫಜನಿಂದ ಬಂದವರು. ಇವರು ಆದಾಳ ಮೊಮ್ಮಕ್ಕಳು.
[17] ಏಸಾವನ ಮಗನಾದ ರೆಗೂವೇಲನಿಗೆ ಹುಟ್ಟಿದವರು ಯಾರೆಂದರೆ: ನಹತ್, ಜೆರಹ, ಶಮ್ಮಾ, ಮಿಜ್ಜಾ ಎಂಬ ಕುಲನಾಯಕರು ಹುಟ್ಟಿದರು. ಇವರು ಎದೋಮ್ಯರ ದೇಶದಲ್ಲಿ ಏಸಾವನ ಹೆಂಡತಿಯಾದ ಬಾಸೆಮತಳಿಗೆ ಹುಟ್ಟಿದ ಮೊಮ್ಮಕ್ಕಳು.
[18] ಏಸಾವನ ಹೆಂಡತಿಯಾಗಿದ್ದ ಒಹೊಲೀಬಾಮಳ ಮಗಳಾದ ಅನಾಳ ಸಂತಾನದ ಕುಲನಾಯಕರು ಯಾರೆಂದರೆ: ಯೆಗೂಷ್, ಯಳಾಮ, ಮತ್ತು ಕೋರಹ. ಇವರೇ ಅನಾಹನ ಮಗಳೂ ಏಸಾವನ ಹೆಂಡತಿಯೂ ಆಗಿದ ಒಹೊಲೀಬಾಮಳ ಸಂತಾನದವರು.
[19] ಎದೋಮನೆನ್ನಿಸಿಕೊಳ್ಳುವ ಏಸಾವನಿಂದ ಹುಟ್ಟಿದ ಕುಲಗಳಿಗೆ ಇವರೇ ಮುಖಂಡರು.
[20] ಆ ಸೀಮೆಯ ಮೂಲನಿವಾಸಿಗಳು ಹೋರಿಯನಾದ ಸೇಯೀರಿನಿಂದ ಹುಟ್ಟಿದವರು. ಅವರು ಯಾರೆಂದರೆ: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ,
[21] ದೀಶೋನ್, ಏಚೆರ್, ದೀಶಾನ್ ಇವರು ಎದೋಮ್ಯರ ದೇಶದಲ್ಲಿ ಸೇಯೀರನ ಸಂತತಿಯವರಾದ ಹೋರಿಯಲ್ಲಿ ಹುಟ್ಟಿದ ಮುಖಂಡರು.
[22] ಲೋಟಾನನ ಮಕ್ಕಳು: ಹೋರಿ, ಹೇಮಾಮ್, ಲೋಟಾನನ ತಂಗಿ ತಿಮ್ನಾ.
[23] ಶೋಬಾಲನ ಮಕ್ಕಳು: ಅಲ್ವಾನ್, ಮಾನಹತ್, ಗೇಬಾಲ್, ಶೆಫೋ ಮತ್ತು ಓನಾಮ್.
[24] ಸಿಬೆಯೋನನ ಮಕ್ಕಳು: ಅಯ್ಯಾ ಮತ್ತು ಅನಾಹ ಎಂಬವರು. ಈ ಅನಾಹನೇ ತನ್ನ ತಂದೆಯಾದ ಸಿಬಿಯೋನನ ಕತ್ತೆಗಳನ್ನು ಮೇಯಿಸುತ್ತಿದ್ದಾಗ ಕಾಡಿನಲ್ಲಿ ಬಿಸಿ ನೀರಿನ ಒರತೆಗಳನ್ನು ಕಂಡುಕೊಂಡವನು.
[25] ಅನಾಹನ ಮಕ್ಕಳು: ದೀಶೋನ್ ಮತ್ತು ಅನಾಹನ ಮಗಳಾದ ಒಹೊಲೀಬಾಮಳು.
[26] ದೀಶೋನನ ಮಕ್ಕಳು: ಹೆಮ್ದಾನ್, ಎಷ್ಬಾನ್, ಇತ್ರಾನ್, ಕೆರಾನ್.
[27] ಏಚೆರನ ಮಕ್ಕಳು: ಬಿಲ್ಹಾನ್, ಜಾವಾನ್, ಅಕಾನ್.
[28] ದೀಶಾನನ ಮಕ್ಕಳು: ಊಚ್ ಮತ್ತು ಅರಾನ್.
[29] ಹೋರಿಯರಿಂದ ಹುಟ್ಟಿದ ಮುಖಂಡರು: ಲೋಟಾನ್, ಶೋಬಾಲ್, ಸಿಬೆಯೋನ್, ಅನಾಹ
[30] ದೀಶೋನ್, ಏಚೆರ್, ದೀಶಾನ್ ಇವರೇ. ಇವರು ಹೋರಿಯರಿಂದ ಹುಟ್ಟಿದವರಾಗಿ ಸೇಯೀರ್ ಸೀಮೆಯಲ್ಲಿ ಅಧಿಪತ್ಯ ನಡಿಸಿದ ಮುಖಂಡರು.
[31] ಇಸ್ರಾಯೇಲ್ಯರ ಅರಸರು ಆಳುವುದಕ್ಕಿಂತ ಮೊದಲು ಎದೋಮ್ಯರ ದೇಶದಲ್ಲಿ ಆಳುತ್ತಿದ್ದ ಅರಸರ ಚರಿತ್ರೆ:
[32] ಬೆಯೋರನ ಮಗನಾದ ಬೆಲಗನು ಎದೋಮ್ಯರನ್ನು ಆಳಿದನು. ಅವನ ಪಟ್ಟಣದ ಹೆಸರು ದಿನ್ಹಾಬಾ.
[33] ಬೆಲಗನು ಸತ್ತ ನಂತರ ಬೊಚ್ರದವನಾದ ಜೆರಹನ ಮಗನಾಗಿದ್ದ ಯೋಬಾಬನು ಅಧಿಪತ್ಯಕ್ಕೆ ಬಂದನು.
[34] ಯೋಬಾಬನು ಸತ್ತ ನಂತರ ತೇಮಾನೀಯರ ಹುಷಾಮನು ಅವನಿಗೆ ಬದಲಾಗಿ ಆಳಿದನು.
[35] ಹುಷಾಮನು ಸತ್ತ ನಂತರ ಮೋವಾಬ್ಯರ ಬಯಲಿನಲ್ಲಿ ಮಿದ್ಯಾನರನ್ನು ಸೋಲಿಸಿದ ಬೆದದನ ಮಗನಾದ ಹದದನು ಅರಸನಾದನು. ಅವನ ರಾಜಧಾನಿಯ ಹೆಸರು ಅವೀತ್.
[36] ಹದದನು ಸತ್ತ ನಂತರ ಮಸ್ರೇಕದವನಾದ ಸಮ್ಲಾಹನು ಪಟ್ಟಕ್ಕೆ ಬಂದನು.
[37] ಸಮ್ಲಾಹನು ಸತ್ತ ಮೇಲೆ ನದಿ ತೀರದಲ್ಲಿರುವ ರೆಹೋಬೋತೂರಿನ ಸೌಲನು ಅರಸನಾದನು.
[38] ಸೌಲನು ಸತ್ತ ನಂತರ ಅಕ್ಬೋರನ ಮಗನಾದ ಬಾಳ್ಹಾನಾನನು ಅರಸನಾದನು.
[39] ಅಕ್ಬೋರನ ಮಗನಾದ ಬಾಳ್ಹಾನಾನನು ಸತ್ತ ಮೇಲೆ ಹದರನು ಅರಸನಾದನು. ಅವನ ರಾಜಧಾನಿಯ ಹೆಸರು ಪಾಗು. ಅವನ ಹೆಂಡತಿಯ ಹೆಸರು ಮಹೇಟಬೇಲ್; ಆಕೆಯು ಮೇಜಾಹಾಬನ ಮಗಳಾದ ಮಟ್ರೇದಳ ಮಗಳು.
[40] ಸ್ಥಳ, ಕುಲ, ಹೆಸರುಗಳ ಪ್ರಕಾರವಾಗಿ ಏಸಾವನಿಂದ ಹುಟ್ಟಿದ ಕುಲಪತಿಗಳ ಹೆಸರುಗಳು ಯಾವುವೆಂದರೆ: ತಿಮ್ನ, ಅಲ್ವಾ, ಯೆತೇತ,
[41] ಒಹೋಲಿಬಾಮ, ಏಲಾ, ಪೀನೋನ್,
[42] ಕೆನೆಜ್, ತೇಮಾನ್, ಮಿಪ್ಚಾರ್
[43] ಮಗ್ದೀಯೇಲ್ ಗೀರಾಮ್ ಇವರೇ ತಮ್ಮ ದೇಶದ ನಿವಾಸ ಸ್ಥಳಗಳ ಪ್ರಕಾರ ಎದೋಮ್ಯರ ಮುಖಂಡರು. ಈ ಎದೋಮ್ಯರ ಮೂಲ ಪುರುಷನೇ ಏಸಾವನು.