Skip to content
Opens in a new window
Listen to this chapter • 6:43

[1] ಯಾಕೋಬನು ತನ್ನ ಮಕ್ಕಳನ್ನು ಕರೆಯಿಸಿ ಅವರಿಗೆ, ನೀವೆಲ್ಲರೂ ಕೂಡಿ ಬನ್ನಿರಿ. ಮುಂದಿನ ದಿನಗಳಲ್ಲಿ ನಿಮಗೆ ಸಂಭವಿಸುವುದನ್ನು ನಿಮಗೆ ತಿಳಿಸುತ್ತೇನೆ.

[2] ಯಾಕೋಬನ ಮಕ್ಕಳೇ, ನೀವೆಲ್ಲರೂ ಕೂಡಿ ಬಂದು ಕೇಳಿರಿ. ನಿಮ್ಮ ತಂದೆಯಾದ ಇಸ್ರಾಯೇಲನ ಮಾತನ್ನು ಲಾಲಿಸಿರಿ.

[3] ರೂಬೇನನೇ, ನೀನು ನನ್ನ ಚೊಚ್ಚಲಮಗನೂ, ನನ್ನ ಚೈತನ್ಯಸ್ವರೂಪನೂ, ನನ್ನ ಪ್ರಥಮಫಲವೂ, ಗೌರವದಲ್ಲಿಯೂ, ಅಧಿಕಾರದಲ್ಲಿಯೂ ಪ್ರಮುಖನೂ ಆಗಿದ್ದೀ.

[4] ಆದರೆ ದಡಮೀರಿದ ಪ್ರವಾಹದಂತಿರುವ ನೀನು ಇನ್ನು ಶ್ರೇಷ್ಠನಾಗುವುದಿಲ್ಲ. ಏಕೆಂದರೆ ನೀನು ನಿನ್ನ ತಂದೆಯ ಹಾಸಿಗೆಯನ್ನು ಹತ್ತಿ, ಅದನ್ನು ಹೊಲೆ ಮಾಡಿದಿಯಲ್ಲಾ. ಇವನು ನನ್ನ ಮಂಚವನ್ನು ಹತ್ತಿದನು!

[5] ಸಿಮೆಯೋನನು ಲೇವಿಯೂ ಅಣ್ಣತಮ್ಮಂದಿರು. ಇವರ ಕತ್ತಿಗಳು ಹಿಂಸಾಚಾರದ ಆಯುಧಗಳು.

[6] ನನ್ನ ಪ್ರಾಣವೇ ಅವರ ಗುಪ್ತವಾದ ದುರಾಲೋಚನೆಗಳಿಗೆ ನೀನು ಒಳಪಡಬಾರದು. ನನ್ನ ಮನವೇ ಅವರ ಗುಂಪಿಗೆ ನೀನು ಸೇರಬೇಡ. ಆದುದರಿಂದ ನನ್ನ ಹೃದಯವು ಸಂತೋಷಿಸುತ್ತದೆ. ಅವರು ಕೋಪೋದ್ರೆಕದಿಂದ ಮನುಷ್ಯರನ್ನು ಸಂಹರಿಸಿದರು. ಮದದಿಂದ ಎತ್ತುಗಳನ್ನು ದುರ್ಬಲಗೊಳಿಸಿದರು.

[7] ಅವರ ಕೋಪವು ಭಯಂಕರವಾಗಿಯೂ ಅವರ ರೌದ್ರವು ಕ್ರೂರವಾಗಿಯೂ ಇದ್ದು ಅದು ಶಾಪಗ್ರಸ್ಥವಾದುದಾಗಿದೆ. ಯಾಕೋಬನ ಕುಲದವರಲ್ಲಿ ಅವರನ್ನು ವಿಭಾಗಿಸುವೆನು. ಇಸ್ರಾಯೇಲರಲ್ಲಿ ಅವರನ್ನು ಚದುರಿಸುವೆನು.

[8] ಯೆಹೂದನೇ, ನಿನ್ನ ಅಣ್ಣತಮ್ಮಂದಿರು ನಿನ್ನನ್ನೇ ಸ್ತುತಿಸುವರು. ನಿನ್ನ ಕೈ ನಿನ್ನ ಶತ್ರುಗಳ ಕುತ್ತಿಗೆಯ ಮೇಲಿರುವುದು. ನಿನ್ನ ಸಹೋದರರು ನಿನಗೆ ಆಡ್ಡ ಬೀಳುವರು.

[9] ಯೆಹೂದನು ಪ್ರಾಯದ ಸಿಂಹದಂತಿದ್ದಾನೆ. ನನ್ನ ಪುತ್ರನೇ, ನೀನು ಮೃಗವನ್ನು ಹಿಡಿದು ಕೊಂದು ಬೆಟ್ಟವನ್ನು ಸೇರಿದ ಸಿಂಹದೋಪಾದಿಯಲ್ಲಿದ್ದೀ. ಅವನು ಸಿಂಹದಂತೆ ಕಾಲು ಮುದುರಿ ಹೊಂಚುಹಾಕಿಕೊಂಡಿದ್ದಾನೆ. ಮೃಗ ರಾಜನಿಗೆ ಸಮನಾದ ಇವನನ್ನು ಕೆಣಕುವುದು ಯಾರಿಂದಾದೀತು?

[10] ರಾಜದಂಡವನ್ನು ಹಿಡಿಯತಕ್ಕವನು ಶಿಲೋವಿನಿಂದ ಬರುವ ತನಕ ಆ ದಂಡವು ಯೆಹೂದನ ಕೈಯಿಂದ ತಪ್ಪುವುದಿಲ್ಲ. ಮುದ್ರೆ ಕೋಲು ಅವನ ಪಾದಗಳ ಬಳಿಯಿಂದ ಕದಲುವುದಿಲ್ಲ. ಅನ್ಯಜನಾಂಗಗಳೂ ಅವನಿಗೆ ವಿಧೇಯರಾಗಿರುವರು.

[11] ಅವನು ತನ್ನ ವಾಹನ ಮೃಗವನ್ನು ವಿಶಿಷ್ಟವಾದ ದ್ರಾಕ್ಷಾಲತೆಗೆ ಕಟ್ಟುವನು. ದ್ರಾಕ್ಷಿಯ ಬಳ್ಳಿಗೆ ತನ್ನ ಕತ್ತೆಮರಿಯನ್ನು ಬಿಗಿಯುವನು; ದ್ರಾಕ್ಷಾರಸದಲ್ಲಿ ತನ್ನ ಅಂಗಿಗಳನ್ನು ಒಗೆಯುವನು; ದ್ರಾಕ್ಷಾರಸದಲ್ಲಿಯೇ ತನ್ನ ವಸ್ತ್ರಗಳನ್ನು ಅದ್ದಿ ತೊಳೆಯುವನು.

[12] ದ್ರಾಕ್ಷಾರಸದ ಸಮೃದ್ಧಿಯಿಂದ ಅವನ ಕಣ್ಣುಗಳು ಕೆಂಪಾಗಿ ಇರುವವು. ಹಾಲಿನ ಸಮೃದ್ಧಿಯಿಂದ ಅವನ ಹಲ್ಲುಗಳು ಬೆಳ್ಳಗಾಗಿ ಇರುವವು.

[13] ಜೆಬುಲೂನನು ಸಮುದ್ರದ ಕರಾವಳಿಯಲ್ಲಿ ವಾಸಮಾಡುವನು. ಅವನಿಗೆ ಹಡಗುಗಳು ಸೇರುವ ಬಂದರು ಇರುವುದು. ಅವನ ಸೀಮೆಯ ಒಂದು ಮೇರೆ ಚೀದೋನಿಗೆ ಮುಟ್ಟುವುದು.

[14] ಇಸ್ಸಾಕಾರನು ಕುರಿಯ ಹಟ್ಟಿಗಳ ನಡುವೆ ಮಲಗಿಕೊಂಡಿರುವ ಬಲವುಳ್ಳ ಕತ್ತೆಯಂತಿರುವನು.

[15] ತಾನು ಸೇರಿದ ಪ್ರದೇಶವು ವಿಶ್ರಾಂತಿಗೆ ಅನುಕೂಲವೂ ಸುಖಾಸ್ಪದವೂ ಆಗಿರುವುದನ್ನು ಕಂಡನು. ಅವನು ಹೊರೆಯನ್ನು ಹೊರುವುದಕ್ಕೆ ಬೆನ್ನು ಬಗ್ಗಿಸಿಕೊಂಡು ಬಿಟ್ಟೀ ಸೇವೆಮಾಡುವನು.

[16] ದಾನನು ಇಸ್ರಾಯೇಲರ ಕುಲಗಳಲ್ಲಿ ಒಂದರಂತೆ ತನ್ನ ಜನರಿಗೆ ನ್ಯಾಯತೀರಿಸುವನು.

[17] ದಾನನು ಮಾರ್ಗದ ಮಧ್ಯದಲ್ಲಿರುವ ವಿಷಸರ್ಪದಂತೆ ಇರುವನು ಅದು ಕುದುರೆಯ ಹಿಮ್ಮಡಿಯನ್ನು ಕಚ್ಚುವುದು. ಸವಾರನು ಕೆಳಗೆ ಅಂಗಾತವಾಗಿ ಬೀಳುವನು.

[18] ಯೆಹೋವನೇ, ನಾನು ನಿನ್ನ ರಕ್ಷಣೆಯ ಮಾರ್ಗವನ್ನು ನಿರೀಕ್ಷಿಸಿಕೊಂಡಿದ್ದೇನೆ.

[19] ಗಾದನ ಮೇಲೆ ಸುಲಿಗೆ ಮಾಡುವವರು ಬೀಳಲು, ಇವನು ಅವರನ್ನು ಹಿಮ್ಮಟ್ಟಿಕೊಂಡು ಹೋಗುವನು.

[20] ಆಶೇರನಿಗೆ ಧಾನ್ಯ ಸಮೃದ್ಧಿಯಾಗುವುದು. ಅವನಲ್ಲಿ ರಾಜಭೋಗ ಪದಾರ್ಥಗಳು ದೊರಕುವವು.

[21] ನಫ್ತಾಲಿಯು ಸ್ವತಂತ್ರವಾಗಿ ಜಿಂಕೆಯಂತಿದ್ದಾನೆ. ಅವನಿಂದ ಇಂಪಾದ ಮಾತುಗಳುಂಟಾಗುವವು.

[22] ಯೋಸೇಫನು ಫಲಭರಿತವಾದ ವೃಕ್ಷವು, ಒರತೆಯ ಬಳಿಯಲ್ಲಿರುವ ಫಲವತ್ತಾದ ವೃಕ್ಷವೇ ಆಗಿದ್ದಾನೆ. ಗೋಡೆಯ ಆಚೆಗೆ ಅದರ ರೆಂಬೆಗಳು ಹರಡಿವೆ.

[23] ಬಿಲ್ಲುಗಾರರು ಅವನನ್ನು ಆಕ್ರಮಿಸುವರು, ಹಗೆತನದಿಂದ ಬಾಣವನ್ನು ಅವನ ಮೇಲೆ ಪ್ರಯೋಗಿಸುವರು.

[24] ಆದರೂ ಯಾಕೋಬನ ವಂಶಸ್ಥರನ್ನು ರಕ್ಷಿಸುವ ಪರಾಕ್ರಮಿಯ ಭುಜಬಲದಿಂದಲೂ, ಇಸ್ರಾಯೇಲನಿಗೆ ಪಾಲಕನೂ ಬಂಡೆಯೂ ಆಗಿರುವಾತನಿಂದಲೂ ಅವನ ಕೈಗಳ ಬಿಲ್ಲು ಸ್ಥಿರವಾಗಿ ನಿಂತಿರುವುದು. ಅವನ ಕೈಗಳು ಯಾಕೋಬನ ಒಡೆಯನಿಂದ ಬಲಗೊಂಡಿವೆ.

[25] ನಿನ್ನ ತಂದೆಯ ದೇವರು ನಿನಗೆ ಸಹಾಯ ಹಸ್ತವಾಗಿದ್ದಾನೆ. ನಿನ್ನ ತಂದೆಯ ದೇವರು ನಿನ್ನನ್ನು ಆಶೀರ್ವದಿಸುವನು. ಸರ್ವಶಕ್ತನಾದ ದೇವರು, ಆತನು ಮೇಲಣ ಆಕಾಶದಿಂದಲೂ, ಕೆಳಗಣ ಸಾಗರದ ಸೆಲೆಗಳಿಂದಲೂ, ಸ್ತನದಿಂದಲೂ, ಗರ್ಭಫಲದಿಂದಲೂ ಉಂಟಾಗುವ ಸೌಭಾಗ್ಯಗಳನ್ನು ಕೊಟ್ಟು ನಿನ್ನನ್ನು ಆಶೀರ್ವದಿಸಲಿ.

[26] ನಿನ್ನ ತಂದೆಯ ಆಶೀರ್ವಾದಗಳು ನಿನ್ನ ಪೂರ್ವಿಕರ ಆಶೀರ್ವಾದಕ್ಕಿಂತಲೂ ಮೀಗಿಲಾಗಿರುತ್ತದೆ. ಆದಿಯಿಂದಲೂ ಪರ್ವತಗಳಿಂದ ಉಂಟಾಗುವ ಎಲ್ಲಾ ಮೇಲುಗಳಿಗಿಂತಲೂ, ಸದಾಕಾಲ ಪ್ರಕೃತಿಯಿಂದ ಉಂಟಾಗುವ ಎಲ್ಲಾ ಸುಫಲಗಳು ಕೊನೆಯವರೆಗೂ ಯೋಸೇಫನಿಗೂ ಅವನ ಅಣ್ಣತಮ್ಮಂದಿರಿಗೂ ಸಮೃದ್ಧಿಯಾಗಿ ದೊರೆಯುವುದು.

[27] “ಬೆನ್ಯಾಮೀನನು ಕುರಿಗಳನ್ನು ಹಿಡಿದುಕೊಳ್ಳುವ ತೋಳದಂತಿದ್ದಾನೆ. ರಾತ್ರಿ ಹಿಡಿದುಕೊಂಡದ್ದನ್ನು ಬೆಳಿಗ್ಗೆ ತಿನ್ನುತ್ತಾನೆ. ಕೊಳ್ಳೆಮಾಡಿದ್ದನ್ನು ಸಂಜೆಯಲ್ಲಿ ಹಂಚಿಕೊಳ್ಳುವನು” ಎಂದನು.

[28] ಇವರೆಲ್ಲರೂ ಇಸ್ರಾಯೇಲನಿಂದುಂಟಾದ ಹನ್ನೆರಡು ಕುಲಗಳು. ಅವರ ತಂದೆ ಅವರನ್ನು ಆಶೀರ್ವದಿಸಿ ಹೇಳಿದ ನುಡಿಗಳು ಇವುಗಳೇ. ಅವನು ಪ್ರತಿಯೊಬ್ಬನಿಗೂ ಅವನವನಿಗೆ ತಕ್ಕ ಆಶೀರ್ವಾದದ ಪ್ರಕಾರ ಆಶೀರ್ವಚನಗಳನ್ನು ನುಡಿದನು.

[29] ಇಸ್ರಾಯೇಲನು ತನ್ನ ಮಕ್ಕಳಿಗೆ ಆಜ್ಞಾಪಿಸಿ ಹೇಳಿದ್ದೇನಂದರೆ, “ನಾನು ನನ್ನ ಪೂರ್ವಿಕರ ಬಳಿಗೆ ಸೇರಬೇಕಾದ ಕಾಲವು ಸಮೀಪಿಸಿತು. ಹಿತ್ತಿಯನಾದ ಎಫ್ರೋನನ ಭೂಮಿಯಲ್ಲಿರುವ ಗವಿಯೊಳಗೆ ನನ್ನನ್ನು ನನ್ನ ಪೂರ್ವಿಕರ ಬಳಿಯಲ್ಲಿ ಸಮಾಧಿಮಾಡಬೇಕು.

[30] ಆ ಗವಿಯು ಕಾನಾನ್ ದೇಶದ ಮಮ್ರೆಗೆದುರಾಗಿರುವ ಮಕ್ಪೇಲ ಎಂಬ ಬಯಲಿನಲ್ಲಿ ಇದೆ. ಅದನ್ನು ಅಬ್ರಹಾಮನು ಅದರ ಸುತ್ತಲಿರುವ ಭೂಮಿ ಸಹಿತವಾಗಿ ಹಿತ್ತಿಯನಾದ ಎಫ್ರೋನನಿಂದ ಸ್ವಂತ ಸ್ಮಶಾನ ಭೂಮಿಗಾಗಿ ಕೊಂಡುಕೊಂಡನು.

[31] ಅಲ್ಲಿ ಅಬ್ರಹಾಮನಿಗೂ ಅವನ ಪತ್ನಿಯಾದ ಸಾರಳಿಗೂ ಸಮಾಧಿಯಾಯಿತು. ಅಲ್ಲೇ ಇಸಾಕನಿಗೂ ಅವನ ಹೆಂಡತಿಯಾದ ರೆಬೆಕ್ಕಳಿಗೂ ಸಮಾಧಿಯಾಯಿತು. ಅಲ್ಲಿ ನಾನು ಲೇಯಳನ್ನು ಸಮಾಧಿಮಾಡಿದ್ದೇನೆ.

[32] ಹೊಲದೊಂದಿಗೆ ಹಿತ್ತಿಯರಿಂದ ಕ್ರಯಕ್ಕೆ ತೆಗೆದುಕೊಂಡ ಆ ಗುಹೆಯೊಳಗೆ ನನಗೂ ಸಮಾಧಿಮಾಡಬೇಕು” ಎಂದನು.

[33] ಯಾಕೋಬನು ತನ್ನ ಮಕ್ಕಳಿಗೆ ಅಪ್ಪಣೆ ಕೊಡುವುದನ್ನು ಮುಗಿಸಿದ ನಂತರ ಹಾಸಿಗೆಯ ಮೇಲೆ ತನ್ನ ಕಾಲುಗಳನ್ನು ಮಡಚಿಕೊಂಡು ಪ್ರಾಣಬಿಟ್ಟು ಪೂರ್ವಿಕರ ಬಳಿಗೆ ಸೇರಿದನು.

ಆದಿಕಾಂಡ — Chapters