Skip to content
Opens in a new window
Listen to this chapter • 5:30

[1] ಯೆಹೋವನು ತಾನು ವಾಗ್ದಾನ ಮಾಡಿದಂತೆಯೇ ಸಾರಳ ಮೇಲೆ ದಯವಿಟ್ಟು ಆಕೆಗೆ ಕೊಟ್ಟ ಮಾತನ್ನು ನೆರವೇರಿಸಿದನು.

[2] ಅದರಂತೆ ಸಾರಳು ಬಸುರಾಗಿ, ದೇವರು ಮೊದಲು ಸೂಚಿಸಿದ ಕಾಲದಲ್ಲಿ ಅಬ್ರಹಾಮನಿಂದ ಅವನ ಮುಪ್ಪಿನಲ್ಲೇ ಅವನಿಗೆ ಒಬ್ಬ ಮಗನನ್ನು ಹೆತ್ತಳು.

[3] ಅಬ್ರಹಾಮನು ಸಾರಳಲ್ಲಿ ತನ್ನಿಂದ ಹುಟ್ಟಿದ ಮಗನಿಗೆ “ಇಸಾಕ” ಎಂದು ಹೆಸರಿಟ್ಟನು.

[4] ಎಂಟನೆಯ ದಿನದಲ್ಲಿ ದೇವರ ಅಪ್ಪಣೆಯ ಮೇರೆಗೆ ಅಬ್ರಹಾಮನು ಇಸಾಕನಿಗೆ ಸುನ್ನತಿ ಮಾಡಿದನು.

[5] ಇಸಾಕನು ಹುಟ್ಟಿದಾಗ ಅಬ್ರಹಾಮನು ನೂರು ವರ್ಷದವನಾಗಿದ್ದನು.

[6] ಸಾರಳು, “ದೇವರು ನನ್ನನ್ನು ಸಂತೋಷಪಡಿಸಿ ನಗುವಂತೆ ಮಾಡಿದ್ದಾನೆ; ಇದುವರೆಗೂ ಈ ಬಗ್ಗೆ ಕೇಳಿದವರು ನನ್ನೊಡನೆ ನಗುವರು.

[7] ಸಾರಳೂ ಮಕ್ಕಳಿಗೆ ಮೊಲೆ ಕುಡಿಸುವಳೆಂದು ಯಾರಾದರೂ ಅಬ್ರಹಾಮನಿಗೆ ಹೇಳಲು ಸಾಧ್ಯವಿತ್ತೇ? ಆದರೆ ದೇವರ ಚಿತ್ತದಿಂದ ನನ್ನ ಮುಪ್ಪಿನಲ್ಲಿ ಮತ್ತು ಅಬ್ರಹಾಮನ ಮುಪ್ಪಿನಲ್ಲೇ ಅವನಿಗೆ ಮಗನನ್ನು ಹೆತ್ತಿದ್ದೇನಲ್ಲಾ” ಎಂದು ಹೇಳಿಕೊಂಡಳು.

[8] ಆ ಕೂಸು ಬೆಳೆದು ಮೊಲೆಬಿಟ್ಟಿತು. ಇಸಾಕನು ಮೊಲೆ ಬಿಟ್ಟ ದಿನದಲ್ಲಿ ಅಬ್ರಹಾಮನು ದೊಡ್ಡ ಔತಣವನ್ನು ಮಾಡಿಸಿದನು.

[9] ಆದರೆ ಐಗುಪ್ತಳಾದ ಹಾಗರಳಲ್ಲಿ ಅಬ್ರಹಾಮನಿಗೆ ಹುಟ್ಟಿದ್ದ ಮಗನು ಇಸಾಕನ ವಿಷಯದಲ್ಲಿ ಹಾಸ್ಯಮಾಡುವುದನ್ನು ಕಂಡು ಸಾರಳು,

[10] ಅಬ್ರಹಾಮನಿಗೆ, “ಈ ದಾಸಿಯನ್ನೂ ಅವಳ ಮಗನನ್ನೂ ಹೊರಗೆ ಹಾಕು; ಈ ದಾಸಿಯ ಮಗನು ನನ್ನ ಮಗನಾದ ಇಸಾಕನೊಂದಿಗೆ ಬಾಧ್ಯಸ್ಥನಾಗಬಾರದು” ಎಂದು ಹೇಳಿದಳು.

[11] ಮಗನ ಬಗ್ಗೆ ಆಡಿದ ಈ ಮಾತು ಅಬ್ರಹಾಮನಿಗೆ ಬಹು ದುಃಖವುಂಟುಮಾಡಿತು.

[12] ಆದರೆ ದೇವರು ಅವನಿಗೆ, “ಮಗನ ಮತ್ತು ದಾಸಿಯ ದೆಸೆಯಿಂದ ನಿನಗೆ ವ್ಯಥೆಯಾಗಬಾರದು; ಸಾರಳು ಹೇಳಿದಂತೆಯೇ ಮಾಡು; ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಅನ್ನಿಸಿಕೊಳ್ಳುವರು;

[13] ಈ ದಾಸಿಯ ಮಗನು ನಿನ್ನಿಂದ ಹುಟ್ಟಿದವನಾದುದರಿಂದ ಅವನಿಂದಲೂ ಬಹು ಜನಾಂಗವಾಗುವಂತೆ ಆಶೀರ್ವಾದ ಮಾಡುವೆನು” ಎಂದು ಹೇಳಿದನು.

[14] ಮಾರನೆಯ ದಿನ ಬೆಳಗ್ಗೆ ಅಬ್ರಹಾಮನು ಎದ್ದು, ಹಾಗರಳಿಗೆ ಬುತ್ತಿಯನ್ನೂ, ಒಂದು ತಿತ್ತಿ ತಣ್ಣೀರನ್ನೂ ಅವಳ ಹೆಗಲಿನ ಮೇಲೆ ಇಟ್ಟು, ಮಗುವನ್ನು ಒಪ್ಪಿಸಿ ಅವಳನ್ನು ಕಳುಹಿಸಿಬಿಟ್ಟನು. ಅವಳು ಹೊರಟು ಬೇರ್ಷೆಬದ ಕಾಡಿನಲ್ಲಿ ಅಲೆಯುತ್ತಿದ್ದಳು.

[15] ತಿತ್ತಿಯಲ್ಲಿದ್ದ ನೀರು ಮುಗಿದ ಮೇಲೆ ಅವಳು ಮಗುವನ್ನು ಒಂದು ಗಿಡದ ನೆರಳಿನಲ್ಲಿ ಮಲಗಿಸಿ,

[16] ಕಲ್ಲೆಸೆಯುವಷ್ಟು ದೂರ ಹೋಗಿ ಕುಳಿತುಕೊಂಡು, “ಮಗುವು ಸಾಯುವುದನ್ನು ನೋಡಲಾರೆನು” ಎಂದು ಹೇಳಿ ಜೋರಾಗಿ ಅತ್ತಳು.

[17] ಆ ಹುಡುಗನ ಮೊರೆಯು ದೇವರಿಗೆ ಕೇಳಿಸಿತು; ದೇವದೂತನು ಆಕಾಶದಿಂದ ಹಾಗರಳನ್ನು ಕರೆದು ಆಕೆಗೆ, “ಹಾಗರಳೇ, ನಿನಗೇನಾಯಿತು? ಹೆದರಬೇಡ; ಆ ಹುಡುಗನ ಕೂಗು ದೇವರಿಗೆ ಕೇಳಿಸಿತು;

[18] ನೀನು ಎದ್ದು ಮಗನನ್ನು ಎತ್ತಿಕೊಂಡು ಸಂತೈಸು. ಏಕೆಂದರೆ ಅವನಿಂದ ಮಹಾ ಜನಾಂಗವಾಗುವಂತೆ ಮಾಡುವೆನು” ಎಂದು ಹೇಳಿದನು.

[19] ಇದಲ್ಲದೆ ದೇವರು ಅವಳ ಕಣ್ಣನ್ನು ತೆರೆದಿದ್ದರಿಂದ, ಅವಳು ಅಲ್ಲಿ ನೀರಿನ ಬಾವಿಯನ್ನು ಕಂಡು ತಿತ್ತಿಯಲ್ಲಿ ನೀರನ್ನು ತುಂಬಿಕೊಂಡು ಮಗನಿಗೆ ಕುಡಿಸಿದಳು.

[20] ದೇವರು ಆ ಹುಡುಗನ ಸಂಗಡ ಇದ್ದನು; ಅವನು ಬೆಳೆದು ಕಾಡಿನಲ್ಲಿ ವಾಸವಾಗಿದ್ದು ಬಿಲ್ಲುಗಾರನಾದನು.

[21] ಅವನು ಪಾರಾನಿನ ಅರಣ್ಯದಲ್ಲಿ ವಾಸ ಮಾಡಿದನು. ಅವನ ತಾಯಿ ಐಗುಪ್ತ ದೇಶದಿಂದ ಕನ್ಯೆಯನ್ನು ತಂದು ಅವನಿಗೆ ಮದುವೆ ಮಾಡಿಸಿದಳು.

[22] ಆ ಕಾಲದಲ್ಲಿ ಅಬೀಮೆಲೆಕನು ತನ್ನ ಸೇನಾಧಿಪತಿಯಾದ ಫೀಕೋಲನ ಸಮೇತ ಅಬ್ರಹಾಮನಿಗೆ, “ನೀನು ಮಾಡುವ ಎಲ್ಲಾ ಕೆಲಸಗಳಲ್ಲಿಯೂ ದೇವರು ನಿನ್ನ ಸಂಗಡ ಇದ್ದಾನೆ.

[23] ಆದುದರಿಂದ ನೀನು ನನಗೂ, ನನ್ನ ಮಕ್ಕಳಿಗೂ, ನನ್ನ ಸಂತತಿಗೂ ಅನ್ಯಾಯ ಮಾಡದೆ, ನಾನು ನಿನಗೆ ಹಿತವನ್ನು ಮಾಡಿದಂತೆಯೇ, ನನಗೂ, ನೀನು ವಾಸಿಸುವ ಈ ದೇಶಕ್ಕೂ ಹಿತವನ್ನು ಮಾಡುವುದಾಗಿ ದೇವರ ಮೇಲೆ ಪ್ರಮಾಣ ಮಾಡಬೇಕು” ಎಂದು ಹೇಳಿದನು.

[24] ಅದಕ್ಕೆ ಅಬ್ರಹಾಮನು “ಹಾಗೆಯೇ” ಪ್ರಮಾಣಮಾಡುತ್ತೇನೆ ಅಂದನು.

[25] ಅಬೀಮೆಲೆಕನ ಆಳುಗಳು ಒಂದು ಬಾವಿಯನ್ನು ಬಲವಂತವಾಗಿ ಸ್ವಾಧೀನಪಡಿಸಿಕೊಂಡದ್ದರಿಂದ ಅಬ್ರಹಾಮನು ಅಬೀಮೆಲೆಕನ ಮೇಲೆ ತಪ್ಪು ಹೊರಿಸಲು,

[26] ಅಬೀಮೆಲೆಕನು, “ಈ ಕೆಲಸವನ್ನು ಮಾಡಿದವರು ಯಾರೋ ನಾನರಿಯೆ; ನೀನು ನನಗೆ ತಿಳಿಸಲೂ ಇಲ್ಲ, ಈಗಿನ ವರೆಗೆ ನಾನು ಈ ಸಂಗತಿಯನ್ನು ಕೇಳಲೂ ಇಲ್ಲ” ಎಂದನು.

[27] ಆ ನಂತರ ಅಬ್ರಹಾಮನು ಕುರಿದನಗಳನ್ನು ಅಬೀಮೆಲೆಕನಿಗೆ ದಾನ ಮಾಡಿದನು.

[28] ತರುವಾಯ ಅಬ್ರಹಾಮನು ಹಿಂಡಿನ ಏಳು ಹೆಣ್ಣು ಕುರಿಮರಿಗಳನ್ನು ಪ್ರತ್ಯೇಕವಾಗಿ ಇರಿಸಲು,

[29] ಅಬೀಮೆಲೆಕನು ಅಬ್ರಹಾಮನಿಗೆ “ನೀನು ಈ ಏಳು ಹೆಣ್ಣು ಕುರಿಮರಿಗಳನ್ನು ಪ್ರತ್ಯೇಕವಾಗಿ ಇರಿಸಲು ಕಾರಣವೇನು?” ಎಂದು ಕೇಳಿದನು.

[30] ಅದಕ್ಕೆ ಅಬ್ರಹಾಮನು, “ಈ ಬಾವಿಯನ್ನು ತೋಡಿಸಿದವನು ನಾನೇ ಎಂಬುದಕ್ಕೆ ಸಾಕ್ಷಿಯಾಗಿ ನೀನು ಈ ಏಳು ಹೆಣ್ಣು ಕುರಿಮರಿಗಳನ್ನು ನನ್ನ ಕೈಯಿಂದ ತೆಗೆದುಕೊಳ್ಳಬೇಕು” ಎಂದು ಹೇಳಿ, ಅವರಿಬ್ಬರೂ ಒಡಂಬಡಿಕೆ ಮಾಡಿಕೊಂಡರು.

[31] ಅವರಿಬ್ಬರು ಅಲ್ಲಿ ಪ್ರಮಾಣಮಾಡಿದ್ದರಿಂದ ಆ ಸ್ಥಳಕ್ಕೆ ಬೇರ್ಷೆಬ ಎಂದು ಹೆಸರಾಯಿತು.

[32] ಬೇರ್ಷೆಬದಲ್ಲಿ ಅವರು ಒಡಂಬಡಿಕೆಯನ್ನು ಮಾಡಿಕೊಂಡ ತರುವಾಯ ಅಬೀಮೆಲೆಕನೂ ಅವನ ಸೇನಾಧಿಪತಿಯಾದ ಫೀಕೋಲನೂ ಫಿಲಿಷ್ಟಿಯರ ದೇಶಕ್ಕೆ ಹಿಂತಿರುಗಿ ಹೊರಟು ಹೋದರು.

[33] ಅಬ್ರಹಾಮನು ಬೇರ್ಷೆಬದಲ್ಲಿ ಪಿಚುಲ ವೃಕ್ಷವನ್ನು ನೆಟ್ಟು ಅಲ್ಲಿ ನಿತ್ಯದೇವರಾದ ಯೆಹೋವನ ಹೆಸರನ್ನು ಹೇಳಿಕೊಂಡು ಆರಾಧಿಸಿದನು.

[34] ಅಬ್ರಹಾಮನು ಫಿಲಿಷ್ಟಿಯರ ದೇಶದಲ್ಲಿ ಬಹಳ ದಿನಗಳ ಕಾಲ ವಾಸವಾಗಿದ್ದನು.

ಆದಿಕಾಂಡ — Chapters