Skip to content
Opens in a new window
Listen to this chapter • 3:34

[1] ಆದಾಮನ ವಂಶದವರ ದಾಖಲೆ: ದೇವರು ಸೃಷ್ಟಿಕಾಲದಲ್ಲಿ ಮನುಷ್ಯನನ್ನು ತನ್ನ ಹೋಲಿಕೆಗನುಸಾರವಾಗಿ ಸೃಷ್ಟಿ ಮಾಡಿದನು.

[2] ಅವರನ್ನು ಗಂಡು ಮತ್ತು ಹೆಣ್ಣಾಗಿ ಉಂಟು ಮಾಡಿದನು. ಇದಲ್ಲದೆ, ಅವರನ್ನು ಸೃಷ್ಟಿಸಿದ ದಿನದಲ್ಲಿ, ಅವರನ್ನು ಆಶೀರ್ವದಿಸಿ ಅವರಿಗೆ “ಮನುಷ್ಯ” ಎಂದು ಹೆಸರಿಟ್ಟನು.

[3] ಆದಾಮನು ನೂರಮೂವತ್ತು ವರ್ಷದವನಾದಾಗ, ರೂಪದಲ್ಲಿ ತನ್ನ ಹೋಲಿಕೆಗೆ ಸರಿಯಾದ ಮಗನನ್ನು ಪಡೆದು ಅವನಿಗೆ ಸೇತನೆಂದು ಹೆಸರಿಟ್ಟನು.

[4] ಸೇತನು ಹುಟ್ಟಿದ ಮೇಲೆ, ಆದಾಮನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರು ವರ್ಷ ಬದುಕಿದನು.

[5] ಆದಾಮನು ಒಟ್ಟು ಒಂಭೈನೂರ ಮೂವತ್ತು ವರ್ಷ ಬದುಕಿ ನಂತರ ಸತ್ತನು.

[6] ಸೇತನು ನೂರ ಐದು ವರ್ಷದವನಾದಾಗ, ಎನೋಷನನ್ನು ಪಡೆದನು.

[7] ಎನೋಷನು ಹುಟ್ಟಿದ ಮೇಲೆ, ಸೇತನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು, ಎಂಟುನೂರ ಏಳು ವರ್ಷ ಬದುಕಿದನು.

[8] ಸೇತನು ಒಟ್ಟು ಒಂಭೈನೂರ ಹನ್ನೆರಡು ವರ್ಷ ಬದುಕಿ ನಂತರ ಸತ್ತನು.

[9] ಎನೋಷನು ತೊಂಭತ್ತು ವರ್ಷದವನಾದಾಗ, ಕೇನಾನನನ್ನು ಪಡೆದನು.

[10] ಕೇನಾನನು ಹುಟ್ಟಿದ ಮೇಲೆ ಎನೋಷನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಹದಿನೈದು ವರ್ಷ ಬದುಕಿದನು.

[11] ಎನೋಷನು ಒಟ್ಟು ಒಂಭೈನೂರ ಐದು ವರ್ಷ ಬದುಕಿ ನಂತರ ಸತ್ತನು.

[12] ಕೇನಾನನು ಎಪ್ಪತ್ತು ವರ್ಷದವನಾದಾಗ, ಮಹಲಲೇಲನನ್ನು ಪಡೆದನು.

[13] ಮಹಲಲೇಲನು ಹುಟ್ಟಿದ ಮೇಲೆ ಕೇನಾನನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ನಲ್ವತ್ತು ವರ್ಷ ಬದುಕಿದನು.

[14] ಕೇನಾನನು ಒಟ್ಟು ಒಂಭೈನೂರ ಹತ್ತು ವರ್ಷ ಬದುಕಿ ನಂತರ ಸತ್ತನು.

[15] ಮಹಲಲೇಲನು ಅರವತ್ತೈದು ವರ್ಷದವನಾದಾಗ ಯೆರೆದನನ್ನು ಪಡೆದನು.

[16] ಯೆರೆದನು ಹುಟ್ಟಿದ ಮೇಲೆ ಮಹಲಲೇಲನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಎಂಟುನೂರ ಮೂವತ್ತು ವರ್ಷ ಬದುಕಿದನು.

[17] ಮಹಲಲೇಲನು ಒಟ್ಟು ಎಂಟುನೂರ ತೊಂಭತ್ತೈದು ವರ್ಷ ಬದುಕಿ ನಂತರ ಸತ್ತನು.

[18] ಯೆರೆದನು ನೂರ ಅರುವತ್ತೆರಡು ವರ್ಷದವನಾದಾಗ ಹನೋಕನನ್ನು ಪಡೆದನು.

[19] ಹನೋಕನು ಹುಟ್ಟಿದ ಮೇಲೆ ಯೆರೆದನು ಎಂಟುನೂರು ವರ್ಷ ಬದುಕಿದನು.

[20] ಯೆರೆದನು ಒಟ್ಟು ಒಂಭೈನೂರ ಅರುವತ್ತೆರಡು ವರ್ಷ ಬದುಕಿ ನಂತರ ಸತ್ತನು.

[21] ಹನೋಕನು ಅರುವತ್ತೈದು ವರ್ಷದವನಾದಾಗ ಮೆತೂಷೆಲಹನನ್ನು ಪಡೆದನು.

[22] ಮೆತೂಷೆಲಹನು ಹುಟ್ಟಿದ ಮೇಲೆ ಹನೋಕನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ದೇವರ ಅನ್ಯೋನ್ಯತೆಯಲ್ಲಿ ಮುನ್ನೂರು ವರ್ಷ ಬದುಕಿದನು.

[23] ಹನೋಕನು ಬದುಕಿದ ಒಟ್ಟು ಕಾಲ ಮುನ್ನೂರ ಅರುವತ್ತೈದು ವರ್ಷಗಳು.

[24] ಹನೋಕನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಳ್ಳುತ್ತಾ ಇರುವಾಗ ದೇವರು ಅವನನ್ನು ಕರೆದುಕೊಂಡ ಕಾರಣ ಕಣ್ಮರೆಯಾಗಿ ಕಾಣದೆ ಹೋದನು.

[25] ಮೆತೂಷೆಲಹನು ನೂರ ಎಂಭತ್ತೇಳು ವರ್ಷದವನಾದಾಗ ಲೆಮೆಕನನ್ನು ಪಡೆದನು.

[26] ಲೆಮೆಕನು ಹುಟ್ಟಿದ ಮೇಲೆ ಮೆತೂಷೆಲಹನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಏಳುನೂರ ಎಂಭತ್ತೆರಡು ವರ್ಷ ಬದುಕಿದನು.

[27] ಮೆತೂಷೆಲಹನು ಒಟ್ಟು ಒಂಭೈನೂರ ಅರುವತ್ತೊಂಭತ್ತು ವರ್ಷ ಬದುಕಿ ನಂತರ ಸತ್ತನು.

[28] ಲೆಮೆಕನು ನೂರ ಎಂಭತ್ತೆರಡು ವರ್ಷದವನಾದಾಗ ಒಬ್ಬ ಮಗನನ್ನು ಪಡೆದನು.

[29] ಅವನಿಗೆ “ನೋಹ” ಎಂದು ಹೆಸರಿಟ್ಟು, “ಯೆಹೋವನು ಶಾಪಕೊಟ್ಟ ಭೂಮಿಯಲ್ಲಿ ನಾವು ಕೈಕೆಸರಾಗಿಸಿಕೊಂಡು ಅನುಭವಿಸುತ್ತಿರುವ ಶ್ರಮೆಗೆ ಈ ಮಗನಿಂದ ಆದರಣೆ ಸಿಕ್ಕುವುದು” ಎಂದು ಹೇಳಿದನು.

[30] ನೋಹನು ಹುಟ್ಟಿದ ಮೇಲೆ ಲೆಮೆಕನು ಗಂಡು ಮತ್ತು ಹೆಣ್ಣು ಮಕ್ಕಳನ್ನು ಪಡೆದು ಐನೂರ ತೊಂಭತ್ತೈದು ವರ್ಷ ಬದುಕಿದನು.

[31] ಲೆಮೆಕನು ಒಟ್ಟು ಏಳುನೂರ ಎಪ್ಪತ್ತೇಳು ವರ್ಷ ಬದುಕಿ ನಂತರ ಸತ್ತನು.

[32] ನೋಹನು ಐನೂರು ವರ್ಷದವನಾದಾಗ ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಗಂಡು ಮಕ್ಕಳನ್ನು ಪಡೆದನು.

ಆದಿಕಾಂಡ — Chapters