Skip to content
Opens in a new window
Listen to this chapter • 4:45

[1] ಅಬ್ರಾಮನು ತೊಂಭತೊಂಭತ್ತು ವರ್ಷದವನಾದಾಗ ಯೆಹೋವನು ಅವನಿಗೆ ದರ್ಶನದಲ್ಲಿ, “ನಾನು ಸರ್ವಶಕ್ತನಾದ ದೇವರು; ನನ್ನೆದುರಿನಲ್ಲಿ ದೋಷ ಇಲ್ಲದವನಾಗಿ ನಡೆದುಕೊ.

[2] ನಾನು ನಿನ್ನ ಸಂಗಡ ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಅತ್ಯಧಿಕವಾದ ಸಂತತಿಯನ್ನು ನಿನಗೆ ಕೊಡುವೆನು” ಎಂದನು.

[3] ಅಬ್ರಾಮನು ಅಡ್ಡಬೀಳಲು ದೇವರು ಅವನ ಸಂಗಡ ಮಾತನಾಡಿ,

[4] “ನಾನು ನಿನ್ನೊಂದಿಗೆ ಒಂದು ಒಡಂಬಡಿಕೆ ಮಾಡಿಕೊಳ್ಳುತ್ತೇನೆ; ಅದೇನೆಂದರೆ ನೀನು ಅನೇಕ ಜನಾಂಗಗಳಿಗೆ ಮೂಲಪುರುಷನಾಗುವಿ,

[5] ಇನ್ನು ಮುಂದೆ ನಿನಗೆ ಅಬ್ರಾಮ ಎಂದು ಹೆಸರಿರುವುದಿಲ್ಲ. ನಿನ್ನನ್ನು ಅನೇಕ ಜನಾಂಗಗಳಿಗೆ ಮೂಲಪಿತೃವಾಗಿ ನೇಮಿಸಿರುವುದರಿಂದ ನಿನಗೆ ಇನ್ನು ಮೇಲೆ ಅಬ್ರಹಾಮ ಎಂದು ಹೆಸರಿರುವುದು.

[6] ನಿನಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನು ನಿನ್ನಿಂದ ಜನಾಂಗಗಳು ಉತ್ಪತ್ತಿಯಾಗಿ ಅರಸರು ಹುಟ್ಟುವರು.

[7] ನಾನು ನಿನಗೂ ನಿನ್ನ ಸಂತತಿಗೂ ದೇವರಾಗಿರುವೆನೆಂದೂ ನಿನಗೋಸ್ಕರವೂ ನಿನ್ನ ಸಂತತಿಯ ಎಲ್ಲಾ ತಲತಲಾಂತರಗಳಿಗೋಸ್ಕರವೂ ಮಾಡಿಕೊಂಡ ನನ್ನ ಒಡಂಬಡಿಕೆಯನ್ನು ಸ್ಥಿರಪಡಿಸುವೆನು.

[8] ನೀನು ಪ್ರವಾಸಿಯಾಗಿರುವ ಕಾನಾನ್ ದೇಶವನ್ನೆಲ್ಲಾ ನಿನಗೂ ನಿನ್ನ ಸಂತತಿಗೂ ಶಾಶ್ವತ ಸ್ವತ್ತಾಗಿ ಕೊಟ್ಟು ಎಂದೆಂದಿಗೂ ಅವರಿಗೆ ದೇವರಾಗಿರುವೆನು” ಎಂದನು.

[9] ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನಂತೂ ನನ್ನ ಒಡಂಬಡಿಕೆಯನ್ನು ಕೈಕೊಂಡು ನಡೆಯಬೇಕು. ನೀನು ಮಾತ್ರವಲ್ಲದೆ ನಿನ್ನ ಸಂತತಿಯವರು ತಲತಲಾಂತರಗಳಲ್ಲಿ ಅದನ್ನು ಕೈಕೊಂಡು ನಡೆಯಬೇಕು.

[10] ನೀನೂ ನಿನ್ನ ಸಂತತಿಯುವರೂ ಕೈಕೊಳ್ಳಬೇಕಾದ ನನ್ನ ಒಡಂಬಡಿಕೆ ಯಾವುದೆಂದರೆ, ನಿಮ್ಮಲ್ಲಿರುವ ಗಂಡಸರೆಲ್ಲರಿಗೂ ಸುನ್ನತಿಯಾಗಬೇಕು ಎಂಬುದೇ.

[11] ಅದೇ ನಿಮಗೂ ನನಗೂ ಉಂಟಾದ ಒಡಂಬಡಿಕೆಯ ಗುರುತಾಗಿದೆ.

[12] ಮುಂದಿನ ಎಲ್ಲಾ ತಲತಲಾಂತರವಾಗಿ ಬರುವ ನಿಮ್ಮ ಪ್ರತಿಯೊಂದು ಗಂಡು ಮಗುವಿಗೂ, ಎಂಟು ದಿನಗಳಾದ ಮೇಲೆ ಸುನ್ನತಿ ಮಾಡಿಸಬೇಕು; ಮನೆಯಲ್ಲಿ ಹುಟ್ಟಿದವನಾಗಲಿ, ನಿನ್ನ ಸಂತತಿಯಲ್ಲದೆ ಪರರ ಮಕ್ಕಳಾಗಲಿ, ಅನ್ಯರಿಂದ ಕ್ರಯಕ್ಕೆ ತೆಗೆದುಕೊಂಡವನಾಗಲಿ;

[13] ನಿನ್ನ ಮನೆಯಲ್ಲಿ ಹುಟ್ಟಿದವನಿಗೂ, ನೀನು ಕ್ರಯಕ್ಕೆ ತೆಗೆದುಕೊಂಡವನಿಗೂ ತಪ್ಪದೆ ಸುನ್ನತಿಯಾಗಬೇಕು. ಹೀಗೆ ನಾನು ಮಾಡುವ ಒಡಂಬಡಿಕೆಯ ಗುರುತು ನಿಮ್ಮ ಶರೀರದಲ್ಲೇ ಇದ್ದು, ಶಾಶ್ವತವಾದ ಒಡಂಬಡಿಕೆಯನ್ನು ಸೂಚಿಸುವುದು.

[14] ಸುನ್ನತಿಮಾಡಿಸಿಕೊಳ್ಳದ ಪುರುಷನಿಗೆ ನನ್ನ ಒಡಂಬಡಿಕೆಯನ್ನು ಉಲ್ಲಂಘಿಸಿದಂತೆ ಆಗುವ ಕಾರಣ ಅವನನ್ನು ಕುಲದಿಂದ ಬಹಿಷ್ಕರಿಸಬೇಕು” ಎಂದು ಹೇಳಿದನು.

[15] ಇದಲ್ಲದೆ ದೇವರು ಅಬ್ರಹಾಮನಿಗೆ, “ನೀನು ಇನ್ನು ಮುಂದೆ ನಿನ್ನ ಹೆಂಡತಿಯನ್ನು ಸಾರಯಳೆಂದು ಕರೆಯದೆ ‘ಸಾರಾ’ (ರಾಣಿ) ಎಂದು ಕರೆಯಬೇಕು.

[16] ನಾನು ಆಕೆಯನ್ನು ಆಶೀರ್ವದಿಸಿ, ಆಕೆಯಿಂದ ನಿನಗೆ ಒಬ್ಬ ಮಗನನ್ನು ಕೊಡುವೆನು. ನಾನು ಆಕೆಯನ್ನು ಆಶೀರ್ವದಿಸಿದ್ದರಿಂದ ಆಕೆಯಿಂದ ಅನೇಕ ಜನಾಂಗಗಳೂ ಅರಸರೂ ಉತ್ಪತ್ತಿಯಾಗುವರು” ಎಂದು ಹೇಳಿದನು.

[17] ಅಬ್ರಹಾಮನು ಅಡ್ಡ ಬಿದ್ದು ನಕ್ಕು, “ನೂರು ವರ್ಷದವನಿಗೆ ಮಗ ಹುಟ್ಟುವುದುಂಟೇ? ತೊಂಭತ್ತು ವರ್ಷದವಳಾದ ಸಾರಳು ಹೆರಲು ಸಾಧ್ಯವೇ?” ಎಂದು ಮನಸ್ಸಿನಲ್ಲಿ ಅಂದುಕೊಂಡನು.

[18] ಅಬ್ರಹಾಮನು ದೇವರಿಗೆ, “ಇಷ್ಮಾಯೇಲ್ ಇದ್ದಾನಲ್ಲಾ, ಅವನೇ ನಿನ್ನ ದಯೆ ಹೊಂದಿ ಬಾಳಲಿ” ಎನ್ನಲು.

[19] ದೇವರು, “ಹಾಗಲ್ಲ ನಿನ್ನ ಹೆಂಡತಿಯಾದ ಸಾರಳಲ್ಲಿಯೇ ನಿನಗೆ ಮಗನು ಹುಟ್ಟುವನು. ಅವನಿಗೆ ‘ಇಸಾಕ’ ಎಂದು ಹೆಸರಿಡಬೇಕು. ಅವನ ಸಂಗಡ ನನ್ನ ಒಡಂಬಡಿಕೆಯನ್ನು ಸ್ಥಾಪಿಸಿಕೊಳ್ಳುವೆನು; ಅದು ಅವನ ಸಂತತಿಯವರಲ್ಲಿಯೂ ಶಾಶ್ವತವಾಗಿರುವುದು.

[20] ಇಷ್ಮಾಯೇಲನ ವಿಷಯದಲ್ಲಿ ನೀನು ಮಾಡಿದ ಬಿನ್ನಹವನ್ನು ಕಿವಿಗೊಟ್ಟು ಕೇಳಿದ್ದೇನೆ. ಅವನನ್ನೂ ಆಶೀರ್ವದಿಸಿದ್ದೇನೆ; ಅವನನ್ನು ಅಭಿವೃದ್ಧಿಮಾಡಿ ಅವನಿಗೆ ಅತ್ಯಧಿಕವಾದ ಸಂತಾನವನ್ನು ಕೊಡುವೆನು. ಅವನು ಹನ್ನೆರಡು ಮಂದಿ ಅರಸರನ್ನು ಪಡೆಯುವನು, ಅವನಿಂದ ಮಹಾ ಜನಾಂಗವಾಗುವಂತೆ ಮಾಡುವೆನು.

[21] ಆದರೆ ಆ ನನ್ನ ಒಡಂಬಡಿಕೆಯನ್ನು ಇಸಾಕನೊಂದಿಗೆ ಸ್ಥಾಪಿಸಿಕೊಳ್ಳುತ್ತೇನೆ; ಬರುವ ವರ್ಷ ಇದೇ ವೇಳೆಗೆ ಸಾರಳು ಅವನನ್ನು ಹೆರುವಳು” ಅಂದನು.

[22] ಆ ನಂತರ ದೇವರು ಅಬ್ರಹಾಮನ ಸಂಗಡ ಮಾತನಾಡುವುದನ್ನು ಮುಗಿಸಿ ಅವನ ಬಳಿಯಿಂದ ಮೇಲಕ್ಕೆ ಏರಿ ಹೋದನು.

[23] ಅದೇ ದಿನದಲ್ಲಿ ಅಬ್ರಹಾಮನು ತನ್ನ ಮಗನಾದ ಇಷ್ಮಾಯೇಲನಿಗೂ ತನ್ನ ಮನೆಯಲ್ಲಿದ್ದ ಎಲ್ಲಾ ಗಂಡಸರಿಗೂ, ಅಂದರೆ ಮನೆಯಲ್ಲಿ ಹುಟ್ಟಿದವರಿಗೆ ಮಾತ್ರವಲ್ಲದೆ, ತಾನು ಕ್ರಯಕ್ಕೆ ತೆಗೆದುಕೊಂಡವರಿಗೂ ದೇವರ ಅಪ್ಪಣೆಯಂತೆ ಸುನ್ನತಿಮಾಡಿಸಿದನು.

[24] ಅಬ್ರಹಾಮನಿಗೆ ಸುನ್ನತಿಯಾದಾಗ ಅವನಿಗೆ ತೊಂಭತ್ತೊಂಭತ್ತು ವರ್ಷವಾಗಿತ್ತು.

[25] ಇಷ್ಮಾಯೇಲನಿಗೆ ಸುನ್ನತಿಯಾದಾಗ ಅವನಿಗೆ ಹದಿಮೂರು ವರ್ಷವಾಗಿತ್ತು.

[26] ಅಬ್ರಹಾಮನಿಗೂ ಅವನ ಮಗನಾದ ಇಷ್ಮಾಯೇಲನಿಗೂ ಒಂದೇ ದಿನದಲ್ಲಿ ಸುನ್ನತಿಯಾಯಿತು.

[27] ಅವನ ಮನೆಯಲ್ಲಿದ್ದ ಗಂಡಸರೆಲ್ಲರಿಗೂ ಅಂದರೆ ಮನೆಯಲ್ಲಿ ಹುಟ್ಟಿದವರಿಗೆ ಮಾತ್ರವಲ್ಲದೆ, ಅನ್ಯರಿಂದ ಕ್ರಯಕ್ಕೆ ತೆಗೆದುಕೊಂಡವರಿಗೂ ಅವನೊಂದಿಗೆ ಸುನ್ನತಿಯಾಯಿತು.

ಆದಿಕಾಂಡ — Chapters