[1] ರಾಹೇಲಳು ತಾನು ಯಾಕೋಬನಿಗೆ ಮಕ್ಕಳನ್ನು ಹೆರದೆ ಇರುವುದನ್ನು ನೋಡಿ ತನ್ನ ಅಕ್ಕನ ಮೇಲೆ ಹೊಟ್ಟೆಕಿಚ್ಚುಪಟ್ಟು, ಯಾಕೋಬನಿಗೆ, “ಮಕ್ಕಳನ್ನು ನನಗೆ ಕೊಡು, ಇಲ್ಲದಿದ್ದರೆ ಸಾಯುವೆನು” ಎಂದು ಹೇಳಿದಳು.
[2] ಯಾಕೋಬನು ರಾಹೇಲಳ ಮೇಲೆ ಕೋಪಗೊಂಡು, “ದೇವರು ನಿನಗೆ ಮಕ್ಕಳನ್ನು ಕೊಡದೆ ಹೋದ ಮೇಲೆ ಕೊಡಲಿಕ್ಕೆ ನನ್ನಿಂದಾದೀತೋ” ಎಂದನು.
[3] ಅದಕ್ಕೆ ಆಕೆಯು, “ನನ್ನ ದಾಸಿಯಾದ ಬಿಲ್ಹಾ ಇದ್ದಾಳಲ್ಲಾ, ಅವಳನ್ನು ಸಂಗಮಿಸು, ಅವಳು ಬಸುರಾದರೆ ಆ ಮಗುವನ್ನು ನನ್ನ ಮಡಿಲಲ್ಲಿ ಹಾಕಲಿ. ಆಗ ನನಗೂ ಸಂತಾನವಾಗುವುದು” ಎಂದು ಹೇಳಿ,
[4] ತನ್ನ ದಾಸಿಯಾದ ಬಿಲ್ಹಳನ್ನು ಯಾಕೋಬನಿಗೆ ಹೆಂಡತಿಯಾಗುವುದಕ್ಕೆ ಒಪ್ಪಿಸಿದಳು.
[5] ಯಾಕೋಬನು ಅವಳನ್ನು ಸಂಗಮಿಸಲು ಬಿಲ್ಹಳು ಗರ್ಭಿಣಿಯಾಗಿ ಗಂಡು ಮಗುವನ್ನು ಹೆರಲು,
[6] ರಾಹೇಲಳು, “ದೇವರು ನನ್ನ ಕಡೆಗೆ ನ್ಯಾಯತೀರಿಸಿದ್ದಾನೆ. ಆತನು ನನ್ನ ಮೊರೆಯನ್ನು ಕೇಳಿ ನನಗೆ ಮಗನನ್ನು ಅನುಗ್ರಹಿಸಿದ್ದಾನೆ” ಎಂದು ಹೇಳಿ ಅದಕ್ಕೆ “ದಾನ್” ಎಂದು ಹೆಸರಿಟ್ಟಳು.
[7] ರಾಹೇಲಳ ದಾಸಿಯಾದ ಬಿಲ್ಹಳು ತಿರುಗಿ ಬಸುರಾಗಿ ಯಾಕೋಬನಿಗೆ ಎರಡನೆಯ ಗಂಡು ಮಗುವನ್ನು ಹೆರಲು,
[8] ರಾಹೇಲಳು, “ನನ್ನ ಅಕ್ಕನ ಸಂಗಡ ಬಲವಾಗಿ ಹೋರಾಡಿ ಜಯಿಸಿದ್ದೇನೆ” ಎಂದು ಹೇಳಿ ಅದಕ್ಕೆ “ನಫ್ತಾಲಿ” ಎಂದು ಹೆಸರಿಟ್ಟಳು.
[9] ಲೇಯಳು ತನಗೆ ಹೆರಿಗೆ ನಿಂತುಹೋಗಿರುವುದನ್ನು ತಿಳಿದು ತನ್ನ ದಾಸಿಯಾದ ಜಿಲ್ಪಳನ್ನು ಯಾಕೋಬನ ಹೆಂಡತಿಯಾಗುವುದಕ್ಕೆ ಒಪ್ಪಿಸಿದಳು.
[10] ಲೇಯಳ ದಾಸಿಯಾದ ಜಿಲ್ಪಳು ಯಾಕೋಬನಿಗೆ ಗಂಡು ಮಗುವನ್ನು ಹೆರಲು,
[11] ಲೇಯಳು, “ನನಗೆ ಶುಭವಾಯಿತೆಂದು” ಹೇಳಿ ಅದಕ್ಕೆ “ಗಾದ್” ಎಂದು ಹೆಸರಿಟ್ಟಳು.
[12] ಲೇಯಳ ದಾಸಿಯಾದ ಜಿಲ್ಪಳು ಯಾಕೋಬನಿಗೆ ಇನ್ನೊಂದು ಗಂಡು ಮಗುವನ್ನು ಹೆರಲು,
[13] ಲೇಯಳು, “ನಾನು ಧನ್ಯಳಾದೆ, ಸ್ತ್ರೀಯರು ನನ್ನನ್ನು ಧನ್ಯಳೆಂದು ಹೊಗಳುವರು” ಎಂದು ಹೇಳಿ ಅದಕ್ಕೆ “ಆಶೇರ್” ಎಂದು ಹೆಸರಿಟ್ಟಳು.
[14] ಗೋದಿ ಸುಗ್ಗಿಯ ಕಾಲದಲ್ಲಿ ರೂಬೇನನು ಅಡವಿಗೆ ಹೋಗಿದ್ದಾಗ ಕಾಮಜನಕ ಹಣ್ಣುಗಳನ್ನು ಕಂಡು ತನ್ನ ತಾಯಿಯಾದ ಲೇಯಳಿಗೆ ತಂದು ಕೊಡಲು ರಾಹೇಲಳು ಆಕೆಗೆ, “ನಿನ್ನ ಮಗನು ತಂದಿರುವ ಕಾಮಜನಕ ಹಣ್ಣುಗಳಲ್ಲಿ ಕೆಲವನ್ನು ನನಗೆ ಕೊಡು” ಎಂದು ಕೇಳಿಕೊಂಡಳು.
[15] ಅದಕ್ಕೆ ಲೇಯಳು, “ನೀನು ನನ್ನ ಗಂಡನನ್ನು ತೆಗೆದುಕೊಂಡದ್ದು ಸಾಲದೋ? ನನ್ನ ಮಗನು ತಂದ ಕಾಮಜನಕ ಹಣ್ಣುಗಳನ್ನೂ ತೆಗೆದುಕೊಳ್ಳಬೇಕೆಂದು ಅಪೇಕ್ಷಿಸುತ್ತೀಯಾ?” ಎಂದು ಹೇಳಲು ರಾಹೇಲಳು, “ಒಳ್ಳೆಯದು, ನೀನು ನಿನ್ನ ಮಗನು ತಂದ ಹಣ್ಣುಗಳನ್ನು ನನಗೆ ಕೊಟ್ಟರೆ ಗಂಡನು ಈ ಹೊತ್ತು ರಾತ್ರಿ ನಿನ್ನಲ್ಲೇ ಇರಲಿ” ಎಂದಳು.
[16] ಸಾಯಂಕಾಲದಲ್ಲಿ ಯಾಕೋಬನು ಅಡವಿಯಿಂದ ಬರುವಾಗ ಲೇಯಳು ಅವನೆದುರಿಗೆ ಹೋಗಿ, “ನೀನು ನನ್ನಲ್ಲಿ ಬರಬೇಕು, ನಾನು ನನ್ನ ಮಗನು ತಂದ ಕಾಮಜನಕ ಹಣ್ಣುಗಳನ್ನು ಕೊಟ್ಟು ನಿನ್ನನ್ನು ಸಂಪಾದಿಸಿಕೊಂಡಿದ್ದೇನೆ” ಎಂದಳು. ಆ ಹೊತ್ತು ರಾತ್ರಿ ಅವನು ಆಕೆಯೊಂದಿಗೆ ಇದ್ದನು.
[17] ದೇವರು ಲೇಯಳ ಪ್ರಾರ್ಥನೆಯನ್ನು ಕೇಳಿದನು. ಆಕೆಯು ಗರ್ಭಿಣಿಯಾಗಿ ಯಾಕೋಬನಿಗೆ ಐದನೆಯ ಗಂಡು ಮಗುವನ್ನು ಹೆತ್ತಳು.
[18] ಲೇಯಳು, “ನನ್ನ ದಾಸಿಯನ್ನು ನನ್ನ ಗಂಡನ ವಶಕ್ಕೆ ಒಪ್ಪಿಸಿದ್ದರಿಂದ ದೇವರು ನನಗೆ ಪ್ರತಿಫಲವನ್ನು ಕೊಟ್ಟಿದ್ದಾನೆ” ಎಂದು ಹೇಳಿ ಅದಕ್ಕೆ “ಇಸ್ಸಾಕಾರ್” ಎಂದು ಹೆಸರಿಟ್ಟಳು.
[19] ಲೇಯಳು ಪುನಃ ಗರ್ಭಿಣಿಯಾಗಿ ಯಾಕೋಬನಿಗೆ ಆರನೆಯ ಗಂಡು ಮಗುವನ್ನು ಹೆತ್ತಳು.
[20] ಲೇಯಳು, “ದೇವರು ನನಗೆ ಒಳ್ಳೆಯ ವರದಾನವನ್ನು ಕೊಟ್ಟಿದ್ದಾನೆ. ನಾನು ನನ್ನ ಗಂಡನಿಗೆ ಆರು ಮಂದಿ ಗಂಡು ಮಕ್ಕಳನ್ನು ಹೆತ್ತದ್ದರಿಂದ ಅವನು ನನ್ನೊಡನೆಯೇ ವಾಸಿಸುವನು” ಎಂದು ಹೇಳಿ ಅದಕ್ಕೆ “ಜೆಬುಲೂನ್” ಎಂದು ಹೆಸರಿಟ್ಟಳು.
[21] ತರುವಾಯ ಆಕೆಯು ಹೆಣ್ಣು ಮಗುವನ್ನು ಹೆತ್ತು ಅದಕ್ಕೆ “ದೀನಾ” ಎಂದು ಹೆಸರಿಟ್ಟಳು.
[22] ಆಮೇಲೆ ದೇವರು ರಾಹೇಲಳನ್ನು ನೆನಪಿಸಿಕೊಂಡು ಆಕೆಯ ಮೊರೆಯನ್ನು ಕೇಳಿ ಆಕೆಗೆ ಮಕ್ಕಳಾಗುವಂತೆ ಮಾಡಿದನು.
[23] ಆಕೆಯು ಗರ್ಭಿಣಿಯಾಗಿ ಗಂಡು ಮಗುವನ್ನು ಹೆತ್ತು, “ದೇವರು ನನಗಿದ್ದ ಅವಮಾನವನ್ನು ಪರಿಹರಿಸಿದ್ದಾನೆ” ಎಂದಳು.
[24] ಇದಲ್ಲದೆ ಆಕೆಯು, “ಯೆಹೋವನು ಇನ್ನೊಂದು ಗಂಡು ಮಗುವನ್ನು ನನಗೆ ದಯಪಾಲಿಸುವನು” ಎಂದು ಹೇಳಿ ಅದಕ್ಕೆ “ಯೋಸೇಫ್” ಎಂದು ಹೆಸರಿಟ್ಟಳು.
[25] ರಾಹೇಲಳು ಯೋಸೇಫನನ್ನು ಹೆತ್ತ ನಂತರ ಯಾಕೋಬನು ಲಾಬಾನನಿಗೆ, “ನಾನು ನನ್ನ ದೇಶದಲ್ಲಿರುವ ಸ್ವಂತ ಊರಿಗೆ ಹೋಗಲು ನನಗೆ ಅಪ್ಪಣೆಯಾಗಬೇಕು.
[26] ನಾನು ಸೇವೆಮಾಡಿ ಪಡೆದುಕೊಂಡ ಹೆಂಡತಿಯರನ್ನೂ ನನ್ನ ಮಕ್ಕಳನ್ನೂ ನನ್ನೊಂದಿಗೆ ಕಳುಹಿಸಿಕೊಡಬೇಕು.
[27] ನಾನು ನಿನಗೆ ಮಾಡಿದ ಸೇವೆಯನ್ನು ನೀನು ಬಲ್ಲವನಾಗಿರುವೆ” ಎಂದು ಹೇಳಲು ಲಾಬಾನನು ಅವನಿಗೆ, “ನನ್ನ ಮೇಲೆ ದಯೆ ಇಟ್ಟು ನನ್ನ ಬಳಿಯಲ್ಲೇ ಇರು. ಯೆಹೋವನು ನಿನ್ನ ನಿಮಿತ್ತ ನನ್ನನ್ನು ಅಭಿವೃದ್ಧಿಪಡಿಸಿದ್ದಾನೆಂದು ಚೆನ್ನಾಗಿ ತಿಳಿದುಕೊಂಡಿದ್ದೇನೆ.
[28] ನಾನು ನಿನಗೆ ಏನು ಕೊಡಬೇಕು ಹೇಳು ಕೊಡುತ್ತೇನೆ” ಎಂದು ಹೇಳಿದನು.
[29] ಅದಕ್ಕೆ ಯಾಕೋಬನು, “ನಾನು ನಿನಗೆ ಮಾಡಿದ ಸೇವೆಯನ್ನೂ ನನ್ನ ವಶದಲ್ಲಿದ್ದ ನಿನ್ನ ಪಶುಪ್ರಾಣಿಗಳು ಅಭಿವೃದ್ದಿಯಾದುದ್ದನ್ನೂ ನೀನು ಬಲ್ಲೇ.
[30] ನಾನು ಬರುವುದಕ್ಕೆ ಮೊದಲು ನಿನಗಿದ್ದದ್ದು ಸ್ವಲ್ಪವೇ. ಈಗ ಅದು ಬಹಳವಾಗಿ ಹೆಚ್ಚಿದೆ. ನಾನು ಕೈಹಾಕಿದ ಎಲ್ಲಾ ಕೆಲಸದಲ್ಲಿಯೂ ಯೆಹೋವನು ನಿನ್ನನ್ನು ಅಭಿವೃದ್ಧಿಪಡಿಸಿದ್ದಾನೆ. ಇನ್ನು ನಾನು ನನ್ನ ಸ್ವಂತ ಮನೆಗೋಸ್ಕರ ಯಾವಾಗ ಸಂಪಾದನೆ ಮಾಡಿಕೊಳ್ಳಲಿ” ಎಂದು ಹೇಳಿದನು.
[31] ಅದಕ್ಕೆ ಲಾಬಾನನು, “ನಿನಗೆ ನಾನೇನು ಕೊಡಬೇಕು ಹೇಳು” ಅನ್ನಲು ಯಾಕೋಬನು, “ನನಗೆ ಏನೂ ಕೊಡಬೇಡ, ನೀನು ನನಗೆ ಈ ಒಂದು ಕಾರ್ಯ ಮಾತ್ರ ಮಾಡಿದರೆ ಸಾಕು, ನಾನು ಪುನಃ ನಿನ್ನ ಹಿಂಡನ್ನು ಮೇಯಿಸಿ ಕಾಯುವೆನು”
[32] ಅದೇನೆಂದರೆ, “ಈ ಹೊತ್ತು ನಾನು ನಿನ್ನ ಹಿಂಡಿನೊಳಗೆ ಹೋಗಿ, ಕುರಿಗಳಲ್ಲಿ ಚುಕ್ಕೆ ಮತ್ತು ಮಚ್ಚೆಗಳಿರುವವುಗಳನ್ನೂ, ಕುರಿಗಳಲ್ಲಿ ಕಪ್ಪಾಗಿರುವವುಗಳನ್ನೂ, ಆಡುಗಳಲ್ಲಿ ಚುಕ್ಕೆ ಮತ್ತು ಮಚ್ಚೆಗಳಿರುವುಗಳನ್ನೂ ವಿಂಗಡಿಸುವೆನು. ಅವೇ ನನ್ನ ಸಂಬಳವಾಗಿರಲಿ.
[33] ಹೀಗಿದ್ದರೆ ಬರುವ ಕಾಲದಲ್ಲಿ ನನ್ನ ಸಂಬಳಕ್ಕಾಗಿ ನಾನು ನಿನ್ನ ಮುಂದೆ ಬಂದಾಗ ನನ್ನ ಪ್ರಾಮಾಣಿಕತೆಯೇ ನನಗೆ ಸಾಕ್ಷಿ ಕೊಡುವುದು. ಆಡುಗಳಲ್ಲಿ ಚುಕ್ಕೆ ಮಚ್ಚೆಗಳಿಲ್ಲದ್ದು, ಕುರಿಗಳಲ್ಲಿ ಕಪ್ಪಿಲ್ಲದ್ದು, ನನ್ನ ಬಳಿಯಲ್ಲಿ ಸಿಕ್ಕಿದರೆ ಅದನ್ನು ಕದ್ದದ್ದೆಂದು ಎಣಿಸಬಹುದು” ಎಂದನು.
[34] ಅದಕ್ಕೆ ಲಾಬಾನನು, “ಒಳ್ಳೆಯದು, ನೀನು ಹೇಳಿದಂತೆಯೇ ಆಗಲಿ” ಎಂದನು.
[35] ಅದೇ ದಿನ ಲಾಬಾನನು ಆಡುಗಳಲ್ಲಿ ರೇಖೆ ಮಚ್ಚೆ ಇದ್ದವುಗಳನ್ನೂ, ಮೇಕೆಗಳಲ್ಲಿ ಚುಕ್ಕೆ ಮಚ್ಚೆ ಇದ್ದವುಗಳನ್ನೂ, ಅಂದರೆ ಸ್ವಲ್ಪ ಬಿಳುಪಾದ ಬಣ್ಣವು ತೋರಿದ ಎಲ್ಲವುಗಳನ್ನೂ, ಕುರಿಗಳಲ್ಲಿ ಕಪ್ಪಾಗಿದ್ದುವುಗಳನ್ನೂ ವಿಂಗಡಿಸಿ ತನ್ನ ಮಕ್ಕಳ ವಶಕ್ಕೆ ಒಪ್ಪಿಸಿಕೊಟ್ಟನು.
[36] ಲಾಬಾನನು ತನಗೂ, ಯಾಕೋಬನಿಗೂ ಮೂರು ದಿನದ ಪ್ರಯಾಣದಷ್ಟು ದೂರ ಅಂತರವನ್ನು ಬಿಟ್ಟನು. ಯಾಕೋಬನು ಲಾಬಾನನ ಹಿಂಡಿನಲ್ಲಿ ಮಿಕ್ಕಾದವುಗಳನ್ನು ಮೇಯಿಸಿದನು.
[37] ಹೀಗಿರುವಲ್ಲಿ ಯಾಕೋಬನು ಚಿನಾರು, ಬಾದಾಮಿ, ಅರ್ಮೋನ್ ಎಂಬ ಮರಗಳ ಹಸಿ ಕೋಲುಗಳನ್ನು ತೆಗೆದುಕೊಂಡು ಪಟ್ಟೆಪಟ್ಟೆಯಾಗಿ ತೊಗಟೆಯನ್ನು ಸುಲಿದು,
[38] ಅವುಗಳಲ್ಲಿರುವ ಬಿಳಿಯ ಬಣ್ಣವು ಕಾಣಿಸುವಂತೆ ಮಾಡಿದನು. ಆ ಕೋಲುಗಳನ್ನು ಆಡುಕುರಿಗಳ ಹಿಂಡು ನೀರು ಕುಡಿಯುವ ತೊಟ್ಟಿಗಳಲ್ಲಿ ಇಟ್ಟನು. ಆಡುಕುರಿಗಳಿಗೆ ನೀರು ಕುಡಿಯುವ ಸಮಯ, ಸಂಗಮ ಸಮಯ.
[39] ಆಡುಕುರಿಗಳು ಆ ಕೋಲುಗಳನ್ನು ನೋಡುತ್ತಾ ಸಂಗಮಮಾದಿದ್ದರಿಂದ ರೇಖೆ, ಚುಕ್ಕೆ, ಮಚ್ಚೆಗಳುಳ್ಳ ಮರಿಗಳನ್ನು ಈಯುತ್ತಿದ್ದವು.
[40] ಯಾಕೋಬನು ಆ ಮರಿಗಳನ್ನು ಲಾಬಾನನ ಹಿಂಡಿಗೆ ಸೇರಿಸದೆ ತನ್ನವೆಂದು ಪ್ರತ್ಯೇಕಿಸಿದನು ಮತ್ತು ಲಾಬಾನನ ಆಡು ಕುರಿಗಳ ಮುಖಗಳನ್ನು ರೇಖೆಯುಳ್ಳ ಆ ಆಡುಗಳ ಮತ್ತು ಕಪ್ಪಾದ ಕುರಿಗಳ ಕಡೆಗೆ ತಿರುಗಿಸಿದನು.
[41] ಇದಲ್ಲದೆ ಬಲಿಷ್ಠವಾದ ಆಡು ಕುರಿಗಳು ಸಂಗಮಮಾಡುವಾಗ ಆ ಕೋಲುಗಳನ್ನು ನೋಡುತ್ತಾ ಸಂಗಮಮಾಡಲಿ ಎಂದು ಯಾಕೋಬನು ತೊಟ್ಟಿಗಳಲ್ಲಿ ಕೋಲುಗಳನ್ನಿಟ್ಟನು. ಆದರೆ ಆಡುಕುರಿಗಳು ಬಲಹೀನವಾಗಿದ್ದಾಗ ಅವನು ಕೋಲುಗಳನ್ನು ತೊಟ್ಟಿಗಳಲ್ಲಿ ಇಡುತ್ತಿರಲಿಲ್ಲ.
[42] ಹೀಗಾಗಿ ಬಲಹೀನವಾದ ಹಿಂಡು ಲಾಬಾನನ ಪಾಲಿಗೆ ಬಂದವು, ಬಲಿಷ್ಠವಾದವುಗಳು ಯಾಕೋಬನು ಪಾಲಿಗೆ ಬಂದವು.
[43] ಈ ಪ್ರಕಾರ ಯಾಕೋಬನು ಬಹಳ ಸಂಪತ್ತುಳ್ಳವನಾದನು. ಅವನಿಗೆ ಕುರಿಹಿಂಡುಗಳು, ದಾಸದಾಸಿಯರು, ಒಂಟೆ ಕತ್ತೆಗಳು, ಹೇರಳವಾಗಿದ್ದವು.