[1] ಆಗ ಯೆಹೋವನು ನೋಹನಿಗೆ, “ನೀನೂ ನಿನ್ನ ಮನೆಯವರೆಲ್ಲರೂ ನಾವೆಯಲ್ಲಿ ಸೇರಿರಿ; ಈಗಿರುವ ಮನುಷ್ಯ ಸಂತತಿಯಲ್ಲಿ ನೀನೊಬ್ಬನೇ ನನ್ನ ಮುಂದೆ ನೀತಿಯಿಂದ ನಡೆಯುವುದನ್ನು ನೋಡಿದ್ದೇನೆ.
[2] ಎಲ್ಲಾ ಶುದ್ಧ ಪಶುಗಳಲ್ಲಿ ಏಳೇಳು ಗಂಡುಹೆಣ್ಣುಗಳನ್ನು ಶುದ್ಧವಲ್ಲದ ಪಶುಗಳಲ್ಲಿ ಎರಡೆರಡು ಗಂಡುಹೆಣ್ಣುಗಳನ್ನೂ ನಿನ್ನೊಂದಿಗೆ ತೆಗೆದುಕೊಳ್ಳಬೇಕು.
[3] ಪಕ್ಷಿಗಳಲ್ಲಿಯೂ ಏಳೇಳು ಗಂಡು ಹೆಣ್ಣುಗಳನ್ನು ತೆಗೆದುಕೊಳ್ಳಬೇಕು. ಹೀಗೆ ಆಯಾ ಜಾತಿಯನ್ನು ಭೂಮಿಯ ಮೇಲೆ ಉಳಿಸಿ ಕಾಪಾಡಬೇಕು.
[4] ಏಳು ದಿನಗಳ ನಂತರ ನಾನು ಭೂಮಿಯ ಮೇಲೆ ನಲ್ವತ್ತು ದಿನ ಹಗಲಿರುಳು ಮಳೆಯನ್ನು ಸುರಿಸಿ, ನಾನು ಸೃಷ್ಟಿಮಾಡಿದ ಜೀವರಾಶಿಗಳನ್ನೆಲ್ಲಾ ಭೂಮಿಯ ಮೇಲಿನಿಂದ ನಾಶಮಾಡುತ್ತೇನೆ” ಎಂದು ಹೇಳಿದನು.
[5] ಯೆಹೋವನು ಆಜ್ಞಾಪಿಸಿದ್ದನ್ನೆಲ್ಲಾ ನೋಹನು ಮಾಡಿದನು.
[6] ಭೂಮಿಯ ಮೇಲೆ ಜಲಪ್ರಳಯವುಂಟಾದಾಗ ನೋಹನು ಆರುನೂರು ವರ್ಷದವನಾಗಿದ್ದನು.
[7] ಆಗ ನೋಹನು ಪ್ರಳಯದಿಂದ ತಪ್ಪಿಸಿಕೊಳ್ಳುವುದಕ್ಕಾಗಿ ಹೆಂಡತಿ, ಮಕ್ಕಳು, ಸೊಸೆಯರು ಸಹಿತವಾಗಿ ನಾವೆಯಲ್ಲಿ ಸೇರಿದನು.
[8] ದೇವರು ನೋಹನಿಗೆ ಅಪ್ಪಣೆಕೊಟ್ಟಂತೆ ಶುದ್ಧ, ಅಶುದ್ಧ, ಪಶು ಪಕ್ಷಿಗಳಲ್ಲಿಯೂ ಕ್ರಿಮಿಕೀಟಗಳಲ್ಲಿಯೂ
[9] ಗಂಡು ಹೆಣ್ಣುಗಳು ಜೋಡಿ ಜೋಡಿಯಾಗಿ ಬಂದು ದೇವರ ಅಪ್ಪಣೆಯಂತೆ ನೋಹನ ನಾವೆಯಲ್ಲಿ ಸೇರಿದವು.
[10] ಆ ಏಳು ದಿನಗಳಾದ ನಂತರ ಜಲಪ್ರಳಯವು ಭೂಮಿ ಮೇಲೆ ಬಂತು.
[11] ನೋಹನ ಜೀವಮಾನದ ಆರುನೂರು ವರ್ಷದ ಎರಡನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ಭೂಮಿಯ ಕೆಳಗಿರುವ ಸಾಗರದ ಒರತೆಗಳು ತೆರೆದುಕೊಂಡವು; ಆಕಾಶದ ತೂಬುಗಳೂ ತೆರೆದವು.
[12] ನಲ್ವತ್ತು ದಿನ ಹಗಲಿರುಳು ಭೂಮಿಯ ಮೇಲೆ ಬಿರುಮಳೆ ಸುರಿಯಿತು.
[13] ಆ ದಿನದಲ್ಲಿ ನೋಹನೂ ಶೇಮ್, ಹಾಮ್, ಯೆಫೆತರೆಂಬ ಅವನ ಮಕ್ಕಳು, ಅವನ ಹೆಂಡತಿಯೂ ಮೂರು ಮಂದಿ ಸೊಸೆಯರೂ ನಾವೆಯಲ್ಲಿ ಸೇರಿದರು.
[14] ಎಲ್ಲಾ ಪ್ರಾಣಿಗಳಲ್ಲಿ ಅಂದರೆ ಸಕಲ ಜಾತಿಯ ಮೃಗ, ಪಶು, ಕ್ರಿಮಿಕೀಟಗಳಲ್ಲಿಯೂ ಪಕ್ಷಿ ಮೊದಲಾದ ರೆಕ್ಕೆಯಿರುವ ಎಲ್ಲಾ ಜೀವಿಗಳಲ್ಲಿಯೂ
[15] ಎರಡೆರಡು ತಮ್ಮ ತಮ್ಮ ಜಾತಿಗನುಸಾರವಾಗಿ ನೋಹನ ಬಳಿಗೆ ಬಂದು ನಾವೆಯಲ್ಲಿ ಸೇರಿದವು.
[16] ದೇವರು ನೋಹನಿಗೆ ಅಪ್ಪಣೆ ಕೊಟ್ಟಂತೆ ಎಲ್ಲಾ ಪ್ರಾಣಿಗಳಲ್ಲಿ ಒಂದು ಗಂಡು ಒಂದು ಹೆಣ್ಣು ಈ ಮೇರೆಗೆ ಸೇರಿದವು. ಯೆಹೋವನು ನೋಹನನ್ನು ಒಳಗೆ ಇಟ್ಟು ಬಾಗಿಲನ್ನು ಮುಚ್ಚಿದನು.
[17] ಜಲಪ್ರಳಯವು ನಲ್ವತ್ತು ದಿನ ಭೂಮಿಯ ಮೇಲೆ ಬಂದು ನೀರು ಹೆಚ್ಚುತ್ತಾ ನಾವೆಯನ್ನು ಮೇಲಕ್ಕೆ ಎತ್ತಲು ಅದು ನೀರಿನ ಮೇಲೆ ತೇಲಾಡಿತು.
[18] ನೀರು ಪ್ರಬಲವಾಗಿ ಭೂಮಿಯ ಮೇಲೆ ಹೆಚ್ಚಲು ನಾವೆಯು ಅದರ ಮೇಲೆ ಚಲಿಸಿತು.
[19] ನೀರು ಭೂಮಿಯ ಮೇಲೆ ಅತ್ಯಧಿಕವಾಗಿ ಪ್ರಬಲವಾಗಿದ್ದರಿಂದ ಆಕಾಶಮಂಡಲದ ಕೆಳಗಿರುವ ಎಲ್ಲಾ ದೊಡ್ಡ ಬೆಟ್ಟಗಳೂ ಮುಚ್ಚಿಹೋದವು.
[20] ನೀರು ಆ ಬೆಟ್ಟಗಳಿಂತಲೂ ಹದಿನೈದು ಮೊಳ ಮೇಲಕ್ಕೆ ಹೆಚ್ಚಲು ಅವುಗಳು ಸಂಪೂರ್ಣ ಮುಚ್ಚಿಹೋದುದರಿಂದ,
[21] ಪಶು, ಪಕ್ಷಿ, ಮೃಗ, ಕ್ರಿಮಿಕೀಟಗಳು ಮನುಷ್ಯರ ಸಹಿತವಾಗಿ ಭೂಮಿಯ ಮೇಲೆ ಚಲಿಸುವ ಸಕಲ ಭೂಜಂತುಗಳೆಲ್ಲವೂ ನಾಶವಾದವು.
[22] ಮೂಗಿನಿಂದ ಉಸಿರಾಡುವ ಭೂಜಂತುಗಳೆಲ್ಲವೂ ಸತ್ತವು.
[23] ಮನುಷ್ಯ ಮೊದಲುಗೊಂಡು ಪಶು, ಪಕ್ಷಿ, ಕ್ರಿಮಿಕೀಟಗಳ ವರೆಗೂ ಭೂಮಿಯ ಮೇಲಿದ್ದದ್ದೆಲ್ಲಾ ನಾಶವಾಯಿತು; ನೋಹನೂ ಅವನೊಂದಿಗೆ ನಾವೆಯಲ್ಲಿದ್ದ ಜೀವಿಗಳೂ ಮಾತ್ರ ಉಳಿದುಕೊಂಡವು.
[24] ಪ್ರಳಯದ ನೀರು ಭೂಮಿಯ ಮೇಲೆ ನೂರೈವತ್ತು ದಿನ ಪ್ರಬಲವಾಗಿ ನಿಂತಿತು.