[1] ಆ ದೂತರಿಬ್ಬರು ಸಾಯಂಕಾಲದಲ್ಲಿ ಸೊದೋಮಿಗೆ ಬಂದಾಗ ಲೋಟನು ಸೊದೋಮಿನ ಊರು ಬಾಗಿಲಲ್ಲಿ ಕುಳಿತುಕೊಂಡಿದ್ದನು. ಅವನು ಅವರನ್ನು ಕಂಡಾಗ ಎದ್ದು, ಎದುರುಗೊಂಡು ತಲೆ ಬಾಗಿ ನಮಸ್ಕರಿಸಿ,
[2] “ಸ್ವಾಮಿಗಳೇ, ನಿಮ್ಮ ದಾಸನ ಮನೆಗೆ ಬಂದು ಇಳಿದುಕೊಂಡು ಕಾಲುಗಳನ್ನು ತೊಳೆದುಕೊಳ್ಳಿರಿ; ಬೆಳಿಗ್ಗೆ ನಿಮ್ಮ ಮಾರ್ಗ ಹಿಡಿದುಕೊಂಡು ಹೋಗಬಹುದು” ಅಂದನು. ಅವರು, “ಹಾಗಲ್ಲ, ಬೀದಿಯಲ್ಲೇ ರಾತ್ರಿ ಕಳೆಯುತ್ತೇವೆ” ಎನ್ನಲು
[3] ಅವನು ಅವರನ್ನು ಬಹಳ ಬಲವಂತ ಮಾಡಿದ್ದರಿಂದ ಅವರು ಅವನ ಬಳಿಯಲ್ಲಿ ಇಳಿದುಕೊಳ್ಳುವುದಕ್ಕೆ ಒಪ್ಪಿದರು. ಅವರು ಮನೆಗೆ ಬಂದಾಗ ಅವನು ಹುಳಿಯಿಲ್ಲದ ರೊಟ್ಟಿಗಳನ್ನು ಮಾಡಿ ಔತಣವನ್ನು ಮಾಡಿಸಲು ಅವರು ಊಟಮಾಡಿದರು.
[4] ಅವರು ಮಲಗುವುದಕ್ಕಿಂತ ಮುಂಚೆ ಹುಡುಗರು ಮುದುಕರು ಸಹಿತವಾಗಿ ಸೊದೋಮಿನ ಪಟ್ಟಣದವರೆಲ್ಲರೂ ಒಗ್ಗಟ್ಟಾಗಿ ಮನೆಯನ್ನು ಮುತ್ತಿಗೆ ಹಾಕಿ,
[5] ಲೋಟನಿಗೆ, “ಈ ರಾತ್ರಿ ನಿನ್ನ ಬಳಿಗೆ ಬಂದ ಮನುಷ್ಯರು ಎಲ್ಲಿ? ಅವರನ್ನು ಹೊರಕ್ಕೆ ಕರೆದುಕೊಂಡು ಬಾ; ಅವರೊಡನೆ ನಮಗೆ ಸಂಗಮವಾಗಬೇಕೆಂದು” ಕೂಗಿ ಹೇಳಿದರು.
[6] ಲೋಟನು ಅವರ ಬಳಿಗೆ ಹೊರಕ್ಕೆ ಬಂದು ತನ್ನ ಹಿಂದೆ ಕದಹಾಕಿ,
[7] “ಅಣ್ಣಂದಿರೇ, ಈ ದುಷ್ಟತನವನ್ನು ಮಾಡಬೇಡಿರಿ.
[8] ಕೇಳಿರಿ, ನನಗೆ ಪುರುಷನನ್ನು ಅರಿಯದ ಇಬ್ಬರು ಹೆಣ್ಣುಮಕ್ಕಳು ಇದ್ದಾರೆ; ಅವರನ್ನಾದರೂ ನಿಮಗೆ ತಂದು ಒಪ್ಪಿಸುತ್ತೇನೆ; ಅವರನ್ನು ಮನಸ್ಸು ಬಂದಂತೆ ಮಾಡಬಹುದು; ಆದರೆ ಆ ಮನುಷ್ಯರು ನನ್ನ ಆಶ್ರಯಕ್ಕೆ ಬಂದವರು; ಅವರಿಗೆ ಏನೂ ಮಾಡಕೂಡದು” ಎಂದು ಹೇಳಿದನು.
[9] ಅವರು ದಾರಿ ಬಿಡು ಎಂದು ಹೇಳಿ, “ಇವನು ಯಾರೋ ಒಬ್ಬ ಪರದೇಶಿಯಾಗಿ ಬಂದು ಈಗ ನ್ಯಾಯಾಧಿಪತಿಯಾಗಬೇಕೆಂದಿದ್ದಾನೆ; ಆ ಮನುಷ್ಯರಿಗೆ ಕೇಡು ಮಾಡುವುದಕ್ಕಿಂತ ಹೆಚ್ಚಾಗಿ ನಿನಗೇ ಕೇಡು ಮಾಡುತ್ತೇವೆ” ಎಂದು ಹೇಳಿ ಲೋಟನ ಮೇಲೆ ಬಿದ್ದು ಬಹಳವಾಗಿ ತುಳಿದು ಬಾಗಿಲನ್ನು ಮುರಿಯಲು ಸಮೀಪಕ್ಕೆ ಬಂದರು.
[10] ಆದರೆ ಒಳಗಿದ್ದ ಆ ಮನುಷ್ಯರು ಕೈಚಾಚಿ ಲೋಟನನ್ನು ತಮ್ಮ ಕಡೆಗೆ ಎಳೆದುಕೊಂಡು ಮನೆಯೊಳಗೆ ಸೇರಿಸಿ ಕದ ಮುಚ್ಚಿದರು.
[11] ಇದಲ್ಲದೆ ಅವರು ಮನೆಯ ಹೊರಗಿದ್ದ ಮನುಷ್ಯರಿಗೆ ಚಿಕ್ಕವರಿಗೂ ದೊಡ್ಡವರಿಗೂ ಕೂಡ ಕಣ್ಣು ಮೊಬ್ಬಾಗುವಂತೆ ಮಾಡಿದ್ದರಿಂದ ಅವರು ಬಾಗಿಲು ಯಾವುದೆಂದು ತಿಳಿಯದೆ ಬೇಸರಗೊಂಡರು.
[12] ಆಗ ಆ ದೂತರು ಲೋಟನಿಗೆ, “ಇಲ್ಲಿ ನಿನಗೆ ಇನ್ನಾರಿದ್ದಾರೆ? ಅಳಿಯಂದಿರನ್ನೂ ಗಂಡು ಮತ್ತು ಹೆಣ್ಣು ಮಕ್ಕಳನ್ನೂ ಪಟ್ಟಣದಲ್ಲಿ ನಿನಗಿರುವ ಎಲ್ಲರನ್ನೂ ಊರ ಹೊರಕ್ಕೆ ಕರೆದುಕೊಂಡು ಬಾ.
[13] ನಾವು ಈ ಸ್ಥಳವನ್ನು ನಾಶಮಾಡುವುದಕ್ಕೆ ಬಂದವರು. ಇಲ್ಲಿಯವರ ವಿಷಯವಾಗಿ ಬಲು ದೊಡ್ಡ ಮೊರೆಯು ಯೆಹೋವನಿಗೆ ಮುಟ್ಟಿದ್ದರಿಂದ ಇವರನ್ನು ನಾಶಮಾಡುವುದಕ್ಕಾಗಿ ಆತನು ನಮ್ಮನ್ನು ಕಳುಹಿಸಿದ್ದಾನೆ” ಎಂದು ಹೇಳಿದರು.
[14] ಆಗ ಲೋಟನು ಹೊರಕ್ಕೆ ಹೋಗಿ ತನ್ನ ಹೆಣ್ಣುಮಕ್ಕಳನ್ನು ಗೊತ್ತುಮಾಡಿಕೊಂಡಿದ್ದ ಅಳಿಯಂದಿರಿಗೆ ಈ ಸಂಗತಿಯನ್ನು ತಿಳಿಸಿ, “ನೀವೆದ್ದು, ಈ ಸ್ಥಳವನ್ನು ಬಿಟ್ಟು ಹೋಗಿರಿ ಯೆಹೋವನು ಈ ಊರನ್ನು ನಾಶಮಾಡುತ್ತಾನೆ” ಎಂದು ಹೇಳಿದನು. ಆದರೆ ಅವರು ಲೋಟನು ಅಪಹಾಸ್ಯ ಮಾಡುತ್ತಿದ್ದಾನೆ ಎಂದುಕೊಂಡರು.
[15] ಹೊತ್ತು ಮೂಡುವುದಕ್ಕೆ ಮುಂಚೆ ಆ ದೂತರು ಲೋಟನಿಗೆ, “ನೀನೆದ್ದು ಇಲ್ಲಿರುವ ನಿನ್ನ ಹೆಂಡತಿಯನ್ನೂ ನಿನ್ನ ಇಬ್ಬರು ಹೆಣ್ಣುಮಕ್ಕಳನ್ನೂ ಬೇಗ ಕರೆದುಕೊಂಡು ಹೋಗು; ಊರಿಗೆ ಉಂಟಾಗುವ ದಂಡನೆಯಿಂದ ನಿನಗೂ ನಾಶವುಂಟಾದೀತು” ಎಂದು ಹೇಳಿ ತ್ವರೆಪಡಿಸಿದರು.
[16] ಅವನು ತಡಮಾಡಲು ಯೆಹೋವನು ಅವನನ್ನು ಕನಿಕರಿಸಿದ್ದರಿಂದ ಆ ಮನುಷ್ಯರು ಅವನನ್ನೂ ಅವನ ಹೆಂಡತಿ ಮಕ್ಕಳನ್ನೂ ಕೈಹಿಡಿದು ಹೊರಗೆ ತಂದು ಪಟ್ಟಣದ ಆಚೆಗೆ ಬಿಟ್ಟರು.
[17] ಅವರನ್ನು ಹೊರಗೆ ತಂದ ಮೇಲೆ ಅವರಲ್ಲಿ ಒಬ್ಬನು, “ಓಡಿಹೋಗು, ಪ್ರಾಣವನ್ನು ಉಳಿಸಿಕೋ; ಹಿಂದಕ್ಕೆ ತಿರುಗಿ ನೋಡಬೇಡ; ಈ ಪ್ರದೇಶದೊಳಗೆ ಎಲ್ಲಿಯೂ ನಿಲ್ಲದೆ ಬೆಟ್ಟದ ಸೀಮೆಗೆ ಓಡಿಹೋಗು; ನಿನಗೂ ನಾಶವುಂಟಾದೀತು” ಎಂದನು.
[18] ಅದಕ್ಕೆ ಲೋಟನು, “ಕರ್ತನೇ, ಅದು ನನ್ನಿಂದಾಗದು;
[19] ನೀನು ನಿನ್ನ ದಾಸನ ಮೇಲೆ ದಯೆ ಇಟ್ಟು ನನ್ನ ಪ್ರಾಣವನ್ನು ಉಳಿಸಿದ್ದು ಬಹು ವಿಶೇಷವಾದ ಉಪಕಾರವೇ; ಆದರೆ ಬೆಟ್ಟಕ್ಕೆ ಓಡಿ ಹೋಗಲಾರೆನು; ನಾನು ಹೋಗುತ್ತಿರುವಾಗ ಆ ವಿಪತ್ತು ನನಗೂ ಉಂಟಾಗಿ ಸತ್ತೇನು.
[20] ಆಗೋ, ಅಲ್ಲಿ ಒಂದು ಪಟ್ಟಣ ಹತ್ತಿರವಾಗಿದೆ; ಅದು ಸಣ್ಣದು; ಅಲ್ಲಿಗಾದರೂ ಹೋಗುವುದಕ್ಕೆ ಅಪ್ಪಣೆಯಾದರೆ ನನ್ನ ಪ್ರಾಣ ಉಳಿಯುವುದು; ಆ ಊರು ಸಣ್ಣದಲ್ಲವೇ?” ಎಂದನು.
[21] ಅದಕ್ಕಾತನು, “ಈ ವಿಷಯದಲ್ಲಿಯೂ ನಿನ್ನ ಬೇಡಿಕೆಯನ್ನು ಅನುಗ್ರಹಿಸಿದ್ದೇನೆ, ನೋಡು; ನೀನು ಹೇಳಿದ ಊರನ್ನು ನಾನು ಕೆಡವಿ ಹಾಕುವುದಿಲ್ಲ.
[22] ಬೇಗ ಅಲ್ಲಿಗೆ ಹೋಗಿ ತಪ್ಪಿಸಿಕೋ; ನೀನು ಆ ಪಟ್ಟಣವನ್ನು ಮುಟ್ಟುವ ತನಕ ನಾನೇನೂ ಮಾಡುವುದಕ್ಕಾಗುವುದಿಲ್ಲ” ಎಂದನು. ಇದರಿಂದ ಆ ಊರಿಗೆ ಚೋಗರ್ ಎಂದು ಹೆಸರಾಯಿತು.
[23] ಲೋಟನು ಚೋಗರ್ ಮುಟ್ಟುವಷ್ಟರಲ್ಲಿ ಸೂರ್ಯನು ಉದಯಿಸಿದನು.
[24] ಆಗ ಯೆಹೋವನು ಸೊದೋಮ್ ಗೊಮೋರಗಳ ಮೇಲೆ ಆಕಾಶದಿಂದ ಅಗ್ನಿಗಂಧಕಗಳನ್ನು ಸುರಿಸಿ
[25] ಆ ಪಟ್ಟಣಗಳನ್ನೂ ಸುತ್ತಲಿರುವ ಸೀಮೆಯೆಲ್ಲವನ್ನೂ ಊರುಗಳಲ್ಲಿದ್ದ ಜನರೆಲ್ಲರನ್ನೂ ಭೂಮಿಯ ಮೇಲಣ ಎಲ್ಲಾ ಬೆಳೆಯನ್ನೂ ಹಾಳುಮಾಡಿದನು.
[26] ಲೋಟನ ಹೆಂಡತಿ ಅವನ ಹಿಂದೆ ಬರುತ್ತಿರುವಾಗ ಹಿಂತಿರುಗಿ ನೋಡಿದ್ದರಿಂದ ಉಪ್ಪಿನ ಕಂಬವಾದಳು.
[27] ಇತ್ತಲಾಗಿ ಅಬ್ರಹಾಮನು ಬೆಳಿಗ್ಗೆ ಎದ್ದು ತಾನು ಯೆಹೋವನ ಸನ್ನಿಧಿಯಲ್ಲಿ ನಿಂತಿದ್ದ ಸ್ಥಳಕ್ಕೆ ತಿರುಗಿ ಬಂದು ಸೊದೋಮ್ ಗೊಮೋರಗಳ ಕಡೆಗೂ
[28] ಸೊದೋಮ್ ಗೊಮೋರದ ಸುತ್ತಲಿನ ಎಲ್ಲಾ ದಿಕ್ಕುಗಳ ಕಡೆಗೂ ನೋಡಿದಾಗ, ಅಯ್ಯೋ, ಆ ಪ್ರದೇಶದಿಂದ ಹೊಗೆಯು ಆವಿಗೆಯ ಹೊಗೆಯಂತೆ ಮೇಲಕ್ಕೇರುತ್ತಿತ್ತು.
[29] ದೇವರು ಆ ಪ್ರದೇಶದ ಪಟ್ಟಣಗಳನ್ನು ನಾಶಮಾಡಿದಾಗ, ಅಬ್ರಹಾಮನನ್ನು ನೆನಪುಮಾಡಿಕೊಂಡನು. ಲೋಟನು ವಾಸವಾಗಿದ್ದ ಪಟ್ಟಣಗಳನ್ನು ಹಾಳುಮಾಡಿ ಆ ಸ್ಥಳದೊಳಗಿಂದ ಲೋಟನನ್ನು ಹೊರಗೆ ಕಳುಹಿಸಿ ಪಾರುಮಾಡಿದನು.
[30] ಲೋಟನು ಚೋಗರಿನಲ್ಲಿರುವುದಕ್ಕೆ ಹೆದರಿ ತನ್ನ ಇಬ್ಬರು ಹೆಣ್ಣುಮಕ್ಕಳನ್ನು ಕರೆದುಕೊಂಡು ಬೆಟ್ಟವನ್ನು ಹತ್ತಿ ಅಲ್ಲಿ ವಾಸಮಾಡಿದನು. ಅವನೂ ಅವನ ಇಬ್ಬರು ಹೆಣ್ಣುಮಕ್ಕಳೂ ಒಂದು ಗವಿಯಲ್ಲಿ ವಾಸಮಾಡಿದರು.
[31] ಹೀಗಿರುವಲ್ಲಿ ಹಿರೀಮಗಳು ತನ್ನ ತಂಗಿಗೆ, “ನಮ್ಮ ತಂದೆ ಮುದುಕನಷ್ಟೆ; ಸರ್ವಲೋಕದ ಪದ್ಧತಿಯ ಮೇರೆಗೆ ನಮ್ಮನ್ನು ಮದುವೆ ಮಾಡಿಕೊಳ್ಳುವ ಪುರುಷರು ಎಲ್ಲಿಯೂ ಇಲ್ಲ;
[32] ನಾವು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿ, ಅವನ ಸಂಗಡ ಮಲಗಿಕೊಂಡು ತಂದೆಯಿಂದ ಸಂತಾನವನ್ನು ಪಡೆದುಕೊಳ್ಳೋಣ” ಎಂದು ಹೇಳಿದಳು.
[33] ಆ ರಾತ್ರಿ ಅವರು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದಾಗ ಹಿರೀ ಮಗಳು ಅವನ ಸಂಗಡ ಮಲಗಿಕೊಂಡಳು; ಯಾವಾಗ ಮಲಗಿಕೊಂಡಳೋ ಯಾವಾಗ ಎದ್ದು ಹೋದಳೋ ಅವನಿಗೇನೂ ತಿಳಿಯಲಿಲ್ಲ.
[34] ಮಾರನೆಯ ದಿನ ಹಿರಿಯವಳು ಕಿರಿಯವಳಿಗೆ, “ನಿನ್ನೆಯ ರಾತ್ರಿ ನಾನೇ ಅಪ್ಪನ ಸಂಗಡ ಮಲಗಿಕೊಂಡೆನು; ಈ ರಾತ್ರಿಯೂ ಅವನಿಗೆ ದ್ರಾಕ್ಷಾರಸವನ್ನು ಕುಡಿಸೋಣ; ಆ ಮೇಲೆ ನೀನು ಅವನ ಸಂಗಡ ಮಲಗಿಕೋ; ಹೀಗೆ ನಮ್ಮ ತಂದೆಯಿಂದ ಸಂತಾನವನ್ನು ಪಡೆದುಕೊಳ್ಳೋಣ” ಎಂದು ಹೇಳಿದಳು.
[35] ಆ ರಾತ್ರಿಯೂ ಅವರು ತಂದೆಗೆ ದ್ರಾಕ್ಷಾರಸವನ್ನು ಕುಡಿಸಿದ ಮೇಲೆ ಕಿರಿಯ ಮಗಳು ಅವನ ಸಂಗಡ ಮಲಗಿಕೊಂಡಳು; ಅವಳು ಯಾವಾಗ ಮಲಗಿದಳೋ ಯಾವಾಗ ಎದ್ದು ಹೋದಳೋ ಅವನಿಗೇನೂ ತಿಳಿಯಲಿಲ್ಲ.
[36] ಹೀಗೆ ಲೋಟನ ಇಬ್ಬರು ಹೆಣ್ಣುಮಕ್ಕಳು ತಂದೆಯಿಂದ ಬಸುರಾದರು.
[37] ಹಿರಿಯವಳು ಗಂಡು ಮಗುವನ್ನು ಹೆತ್ತು ಅದಕ್ಕೆ “ಮೋವಾಬ್” (ತಂದೆಯಿಂದ ಹುಟ್ಟಿದವನು) ಎಂದು ಹೆಸರಿಟ್ಟಳು. ಇಂದಿನ ವರೆಗೂ ಇರುವ ಮೋವಾಬ್ಯರಿಗೆ ಅವನೇ ಮೂಲಪುರುಷನು.
[38] ಕಿರಿಯ ಮಗಳು ಗಂಡು ಮಗುವನ್ನು ಹೆತ್ತು ಅದಕ್ಕೆ “ಬೆನಮ್ಮಿ” (ರಕ್ತ ಸಂಬಂಧಿಕನ ಮಗ) ಎಂದು ಹೆಸರಿಟ್ಟಳು. ಇಂದಿನವರೆಗೂ ಇರುವ ಅಮ್ಮೋನಿಯರಿಗೆ ಇವನೇ ಮೂಲಪುರುಷನು.