Skip to content
Opens in a new window
Listen to this chapter • 3:39

[1] ಅಬ್ರಹಾಮನು ಅಲ್ಲಿಂದ ಕಾನಾನ್ ದೇಶದ ದಕ್ಷಿಣ ಸೀಮೆಗೆ ಪ್ರಯಾಣ ಮಾಡುತ್ತಾ ಕಾದೇಶಿಗೂ ಶೂರಿಗೂ ನಡುವೆ ವಾಸ ಮಾಡಿ ಕೆಲವು ಕಾಲ ಗೆರಾರಿನಲ್ಲೂ ವಾಸಮಾಡಿದನು.

[2] ಅವನು ತನ್ನ ಹೆಂಡತಿಯಾದ ಸಾರಳನ್ನು ತಂಗಿಯೆಂದು ಹೇಳಿಕೊಂಡದ್ದರಿಂದ, ಗೆರಾರಿನ ಅರಸನಾದ ಅಬೀಮೆಲೆಕನು ಆಕೆಯನ್ನು ಕರೆಸಿ ತನ್ನ ಮನೆಯಲ್ಲಿ ಇರಿಸಿಕೊಂಡನು.

[3] ಆದರೆ ಆ ರಾತ್ರಿ ದೇವರು ಅಬೀಮೆಲೆಕನ ಕನಸಿನಲ್ಲಿ ಬಂದು, “ನೀನು ಆ ಸ್ತ್ರೀಯನ್ನು ಸೇರಿಸಿಕೊಂಡಿರುವುದರಿಂದ ಮರಣಕ್ಕೆ ಯೋಗ್ಯನಾಗಿದ್ದಿ; ಆಕೆ ಮತ್ತೊಬ್ಬ ಪುರುಷನ ಹೆಂಡತಿ” ಎಂದನು.

[4] ಅಬೀಮೆಲೆಕನು ಆಕೆಯನ್ನು ಸಂಗಮಿಸಿರಲಿಲ್ಲ. ಅವನು, “ಕರ್ತನೇ, ನೀತಿವಂತರಾದ ಜನರನ್ನೂ ನಾಶಮಾಡುವಿಯಾ?

[5] ಆ ಮನುಷ್ಯನು ಈಕೆ ತನಗೆ ತಂಗಿಯಾಗಬೇಕೆಂದು ಹೇಳಿದನು. ಈಕೆಯೂ ಅವನು ತನಗೆ ಅಣ್ಣನಾಗಬೇಕೆಂದು ಹೇಳಿದಳು. ನಾನು ಯಥಾರ್ಥ ಮನಸ್ಸಿನಿಂದಲೂ, ಶುದ್ಧ ಹಸ್ತದಿಂದಲೂ ಇದನ್ನು ಮಾಡಿದೆನು” ಎಂದನು.

[6] ಅದಕ್ಕೆ ದೇವರು, “ನೀನು, ಇದನ್ನು ಯಥಾರ್ಥ ಮನಸ್ಸಿನಿಂದ ಮಾಡಿದೆ ಎಂಬುದನ್ನು ನಾನು ಬಲ್ಲೆ; ಆದಕಾರಣ ನೀನು ನನಗೆ ವಿರುದ್ಧವಾಗಿ ಪಾಪಮಾಡದಂತೆ ನಾನು ನಿನ್ನನ್ನು ತಡೆದು ಆಕೆಯನ್ನು ಮುಟ್ಟಗೊಡಿಸಲಿಲ್ಲ.

[7] ಹೀಗಿರುವಲ್ಲಿ ಆ ಮನುಷ್ಯನ ಹೆಂಡತಿಯನ್ನು ಅವನಿಗೆ ಒಪ್ಪಿಸಿಬಿಡು. ಅವನು ಪ್ರವಾದಿ, ನಿನಗೋಸ್ಕರ ಅವನು ನನಗೆ ವಿಜ್ಞಾಪಿಸುವನು ಮತ್ತು ನೀನು ಬದುಕುವಿ. ಆಕೆಯನ್ನು ಒಪ್ಪಿಸದಿದ್ದರೆ ನೀನೂ ನಿನ್ನವರೆಲ್ಲರೂ ಮರಣಹೊಂದುವಿರಿ ಇದು ಖಂಡಿತ ಎಂದು ತಿಳಿದುಕೋ” ಎಂದು ಕನಸಿನಲ್ಲಿ ಹೇಳಿದನು.

[8] ಬೆಳಿಗ್ಗೆ ಅಬೀಮೆಲೆಕನು ತನ್ನ ಸೇವಕರೆಲ್ಲರನ್ನು ಕೂಡಿಸಿ ಈ ಸಂಗತಿಗಳನ್ನೆಲ್ಲಾ ತಿಳಿಸಲು ಅವರು ಬಹಳ ಭಯಪಟ್ಟರು.

[9] ಅಬೀಮೆಲೆಕನು ಅಬ್ರಹಾಮನನ್ನು ಕರೆದು, “ನೀನು ನಮಗೆ ಮಾಡಿದ್ದೇನು? ನಾನು ಯಾವ ಪಾಪ ಮಾಡಿದ್ದರಿಂದ ನೀನು ನನ್ನನ್ನೂ ನನ್ನ ರಾಜ್ಯವನ್ನೂ ಮಹಾಪಾತಕಕ್ಕೆ ಒಳಪಡಿಸಿದಿ? ನೀನು ಮಾಡಬಾರದ ಕಾರ್ಯಗಳನ್ನು ಮಾಡಲು ನಾನು ನಿನಗೇನು ಮಾಡಿದೆ” ಎಂದು ಹೇಳಿ,

[10] “ನೀನು ಯಾವ ಉದ್ದೇಶದಿಂದ ಈ ಕಾರ್ಯವನ್ನು ಮಾಡಿದೆ” ಎಂದು ಅಬೀಮೆಲೆಕನು ಅಬ್ರಹಾಮನನ್ನು ಕೇಳಿದನು.

[11] ಅದಕ್ಕೆ ಅಬ್ರಹಾಮನು, “ಈ ಸ್ಥಳದವರು ದೇವರ ಭಯಭಕ್ತಿ ಇಲ್ಲದವರಾಗಿ ನನ್ನ ಹೆಂಡತಿಯ ನಿಮಿತ್ತ ನನ್ನನ್ನು ಕೊಂದಾರೆಂದು ಭಾವಿಸಿದೆನು.

[12] ಅದಲ್ಲದೆ ಆಕೆ ನಿಜವಾಗಿ ನನ್ನ ತಂಗಿ, ನನ್ನ ತಂದೆಯ ಮಗಳೇ; ಆದರೆ ನನ್ನ ತಾಯಿಯ ಮಗಳಲ್ಲವಾದುದರಿಂದ ನನಗೆ ಹೆಂಡತಿಯಾದಳು.

[13] ನಾನು ದೇವರ ಸಂಕಲ್ಪದಿಂದ ತಂದೆಯ ಮನೆಯನ್ನು ಬಿಟ್ಟು ದೇಶಾಂತರ ಹೋಗುವುದಕ್ಕೆ ಹೊರಟಾಗ ನಾನು ಆಕೆಗೆ, ‘ನಾವು ಹೋಗುವ ಎಲ್ಲಾ ಸ್ಥಳಗಳಲ್ಲಿಯೂ ನನಗೆ ನಿನ್ನಿಂದ ಒಂದು ದಯೆ ಆಗಬೇಕು. ಅದು, ಏನೆಂದರೆ ನೀನು ನನ್ನನ್ನು ಅಣ್ಣನೆಂಬುದಾಗಿ ಹೇಳಬೇಕು’ ಎಂದು ತಿಳಿಸಿದೆನು” ಎಂದನು.

[14] ಆಗ ಅಬೀಮೆಲೆಕನು ಅಬ್ರಹಾಮನಿಗೆ ಕುರಿದನಗಳನ್ನೂ ದಾಸದಾಸಿಯರನ್ನೂ ಕೊಟ್ಟು, ಅವನ ಹೆಂಡತಿಯಾದ ಸಾರಳನ್ನು ಅವನಿಗೆ ಒಪ್ಪಿಸಿ,

[15] “ಇಗೋ, ಇದು ನನ್ನ ದೇಶ; ಇದರೊಳಗೆ ನಿನಗೆ ಇಷ್ಟವಿದ್ದ ಕಡೆಯಲ್ಲಿ ನೀನು ವಾಸ ಮಾಡಬಹುದು” ಎಂದು ಅಬೀಮೆಲೆಕನು ಹೇಳಿದನು.

[16] ಇದಲ್ಲದೆ ಅವನು ಸಾರಳಿಗೆ, “ನಿನ್ನ ಅಣ್ಣನಿಗೆ ಸಾವಿರ ರೂಪಾಯಿ ಕೊಟ್ಟಿದ್ದೇನೆ; ನಡೆದದ್ದನ್ನು ನಿನ್ನ ಕಡೆಯವರು ಗಮನಕ್ಕೆ ತೆಗೆದುಕೊಳ್ಳದಂತೆ ಇರಲು ಇದು ಪ್ರಾಯಶ್ಚಿವಾಗಿರಲಿ; ನೀನು ಮಾನಸ್ಥಳೆಂದು ಇದರಿಂದ ಎಲ್ಲರೂ ತಿಳಿದುಕೊಳ್ಳುವರು” ಎಂದು ಹೇಳಿದನು.

[17] ತರುವಾಯ ಅಬ್ರಹಾಮನು ದೇವರನ್ನು ಬೇಡಿಕೊಳ್ಳಲು ದೇವರು ಅಬೀಮೆಲೆಕನನ್ನೂ, ಅವನ ಪತ್ನಿಯನ್ನೂ ಮತ್ತು ದಾಸಿಯರನ್ನೂ ವಾಸಿಮಾಡಿದ್ದರಿಂದ ಅವರಿಗೆ ಮಕ್ಕಳಾದರು.

[18] ಅಬ್ರಹಾಮನ ಹೆಂಡತಿಯಾದ ಸಾರಳ ನಿಮಿತ್ತ ಮೊದಲು ಯೆಹೋವನು ಅಬೀಮೆಲೆಕನ ಮನೆಯಲ್ಲಿದ್ದ ಸ್ತ್ರೀಯರೆಲ್ಲರನ್ನು ಬಂಜೆಯರನ್ನಾಗಿ ಮಾಡಿದ್ದನು.

ಆದಿಕಾಂಡ — Chapters