[1] ಭೂಮಿಯ ಮೇಲೆ ಮನುಷ್ಯರ ಸಂಖ್ಯೆ ಹೆಚ್ಚಾಯಿತು. ಇವರಿಗೆ ಹುಟ್ಟಿದ ಹೆಣ್ಣುಮಕ್ಕಳು
[2] ಸೌಂದರ್ಯವುಳ್ಳವರಾಗಿರುವುದನ್ನು ನೋಡಿ ದೇವಪುತ್ರರು ತಮಗೆ ಇಷ್ಟವಾದವರನ್ನು ಹೆಂಡತಿಯರನ್ನಾಗಿ ಮಾಡಿಕೊಂಡರು.
[3] ಆಗ ಯೆಹೋವನು, “ನನ್ನ ಆತ್ಮವು ಮನುಷ್ಯರಲ್ಲಿ ಶಾಶ್ವತವಾಗಿ ಹೆಣಗಲು ಸಾಧ್ಯವಿಲ್ಲ; ಏಕೆಂದರೆ ಅವರು ರಕ್ತಮಾಂಸ ಹೊಂದಿರುವ ಮರ್ತ್ಯರೇ. ಅವರು ನೂರ ಇಪ್ಪತ್ತು ವರ್ಷ ಬದುಕುವರು” ಅಂದನು.
[4] ಅನಂತರ ದೇವಪುತ್ರರು ಮನುಷ್ಯ ಪುತ್ರಿಯರೊಂದಿಗೆ ಸಂಗಮಿಸಿದಾಗ ಮಕ್ಕಳು ಹುಟ್ಟಿದರು. ಆ ಕಾಲದಿಂದಲೂ ಅದಾದ ನಂತರವೂ ಜಗದಲ್ಲಿ ನೆಫೀಲಿಯರು ಇದ್ದರು. ಇವರೇ ಪೂರ್ವಕಾಲದಲ್ಲಿ ಪ್ರಸಿದ್ಧರಾಗಿದ್ದ ಪರಾಕ್ರಮಶಾಲಿಗಳು ಎಂದು ಹೆಸರಾದವರು.
[5] ಮನುಷ್ಯರ ಕೆಟ್ಟತನವು ಭೂಮಿಯ ಮೇಲೆ ಹೆಚ್ಚಾಗಿರುವುದನ್ನೂ, ಅವರು ತಮ್ಮ ಹೃದಯದಲ್ಲಿ ಯೋಚಿಸುವುದೆಲ್ಲವು ಯಾವಾಗಲೂ ಕೆಟ್ಟ ಆಲೋಚನೆಗಳನ್ನೇ ಮಾಡುತ್ತಿರುವುದನ್ನು ಯೆಹೋವನು ನೋಡಿದನು.
[6] ಯೆಹೋವನು ಭೂಮಿಯ ಮೇಲೆ ಮನುಷ್ಯರನ್ನು ಉಂಟುಮಾಡಿದ್ದಕ್ಕೆ ವ್ಯಥೆಪಟ್ಟು, ತನ್ನ ಹೃದಯದಲ್ಲಿ ನೊಂದುಕೊಂಡನು.
[7] ಇದಲ್ಲದೆ ಯೆಹೋವನು, “ನಾನು ಸೃಷ್ಟಿಸಿದ ಮನುಷ್ಯ ಜಾತಿಯನ್ನು ಭೂಮಿಯ ಮೇಲಿನಿಂದ ಅಳಿಸಿಬಿಡುವೆನು; ಮನುಷ್ಯರೊಂದಿಗೆ ಸಕಲ ಕಾಡುಮೃಗ, ಕ್ರಿಮಿ, ಕೀಟ, ಪಕ್ಷಿಗಳನ್ನೂ ನಾಶ ಮಾಡುವೆನು. ನಾನು ಅವರನ್ನು ಸೃಷ್ಟಿಮಾಡಿದ್ದಕ್ಕೆ ದುಃಖವಾಗುತ್ತಿದೆ” ಎಂದು ದುಃಖಿಸಿದನು.
[8] ಆದರೆ ನೋಹನ ನಡವಳಿಕೆ ಯೆಹೋವನಿಗೆ ಮೆಚ್ಚುಗೆಯಾದುದರಿಂದ ನೋಹನಿಗೆ ಯೆಹೋವನ ದಯೆ ದೊರಕಿತು.
[9] ನೋಹನ ಚರಿತ್ರೆ: ನೋಹನು ಸತ್ಯವಂತನೂ ಎಲ್ಲಾ ಜನರಲ್ಲಿ ನೀತಿವಂತನು ಆಗಿದ್ದನು; ಅವನು ದೇವರೊಂದಿಗೆ ಅನ್ಯೋನ್ಯವಾಗಿ ನಡೆದುಕೊಂಡನು.
[10] ನೋಹನು ಶೇಮ್, ಹಾಮ್, ಯೆಫೆತ್ ಎಂಬ ಮೂರು ಮಂದಿ ಮಕ್ಕಳನ್ನು ಪಡೆದನು.
[11] ಭೂಲೋಕದವರು ದೇವರ ದೃಷ್ಟಿಯಲ್ಲಿ ಕೆಟ್ಟ ನಡತೆಯಿಂದ ದೋಷಿಗಳಾಗಿದ್ದರು. ಹಿಂಸೆ ಮತ್ತು ಅನ್ಯಾಯ ಭೂಮಿಯನ್ನು ತುಂಬಿಕೊಂಡಿತ್ತು.
[12] ದೇವರು ಭೂಮಿಯನ್ನು ನೋಡಿದಾಗ ಅದು ಕೆಟ್ಟುಹೋಗಿ ಕಲುಷಿತಗೊಂಡಿತ್ತು. ಭೂನಿವಾಸಿಗಳೆಲ್ಲರೂ ತಮ್ಮ ನಡವಳಿಕೆಯನ್ನು ಕೆಡಿಸಿಕೊಂಡಿದ್ದರು.
[13] ಆಗ ದೇವರು ನೋಹನಿಗೆ, “ಎಲ್ಲಾ ಮನುಷ್ಯರಿಗೆ ಅಂತ್ಯವನ್ನು ತೀರ್ಮಾನಿಸಿದ್ದೇನೆ; ಭೂಲೋಕವು ಅನ್ಯಾಯದಿಂದಲೂ ಹಿಂಸೆಯಿಂದಲೂ ತುಂಬಿದೆ; ನಾನು ಭೂಮಿಯೊಂದಿಗೆ ಅವರನ್ನೂ ಅಳಿಸಿ ಬಿಡುತ್ತೇನೆ.
[14] ನೀನು ನಿನಗೋಸ್ಕರ ತುರಾಯಿ ಮರದಿಂದ ನಾವೆಯನ್ನು ಮಾಡಿಕೋ; ಅದರಲ್ಲಿ ತುಂಬ ಕೋಣೆಗಳು ಇರಬೇಕು; ಒಳಕ್ಕೂ ಹೊರಕ್ಕೂ ರಾಳವನ್ನು ಹಚ್ಚು.
[15] ನೀನು ಅದನ್ನು ಮಾಡಬೇಕಾದ ವಿಧಾನ ಹೇಗೆಂದರೆ, ಅದು ಮುನ್ನೂರು ಮೊಳ ಉದ್ದವೂ, ಐವತ್ತು ಮೊಳ ಅಗಲವೂ, ಮೂವತ್ತು ಮೊಳ ಎತ್ತರವೂ ಉಳ್ಳದ್ದಾಗಿರಬೇಕು.
[16] ಅದರ ಚಾವಣಿಯ ಕೆಳಗೆ ಸುತ್ತಲೂ ಒಂದು ಮೊಳ ಎತ್ತರದ ಕಿಟಕಿಯನ್ನು ಮಾಡಬೇಕು; ಪಕ್ಕದಲ್ಲಿ ಬಾಗಿಲನ್ನಿಡಬೇಕು. ನಾವೆಯಲ್ಲಿ ಒಂದರ ಮೇಲೆ ಒಂದಾಗಿ ಮೂರು ಅಂತಸ್ತುಗಳನ್ನು ಮಾಡಬೇಕು.
[17] ನಾನಂತೂ ಭೂಮಿಯ ಮೇಲೆ ಜಲಪ್ರಳಯವನ್ನು ಬರಮಾಡಿ ಆಕಾಶದ ಕೆಳಗಿರುವ ಸಕಲಪ್ರಾಣಿಗಳನ್ನೂ ನಾಶಮಾಡುವೆನು; ಭೂಮಿಯಲ್ಲಿರುವ ಸಮಸ್ತವೂ ಲಯವಾಗುವುದು.
[18] “ಆದರೆ ನಿನ್ನೊಂದಿಗೆ ನಾನು ಒಂದು ಒಡಂಬಡಿಕೆಯನ್ನು ಮಾಡುತ್ತೇನೆ. ನೀನೂ ನಿನ್ನ ಹೆಂಡತಿ, ಮಕ್ಕಳು, ಸೊಸೆಯರು ಸಹಿತವಾಗಿ ನಾವೆಯಲ್ಲಿ ಸೇರಬೇಕು.
[19] ಇದಲ್ಲದೆ ಜೀವಿಗಳ ಪ್ರತಿ ಜಾತಿಯಲ್ಲಿಯೂ ಒಂದು ಗಂಡು ಒಂದು ಹೆಣ್ಣು ಹೀಗೆ ಎರಡೆರಡನ್ನು ನಾವೆಯಲ್ಲಿ ಸೇರಿಸಿ, ನಿನ್ನೊಂದಿಗೆ ಉಳಿಸಿ ಕಾಪಾಡಿಕೊಳ್ಳಬೇಕು.
[20] ಪಶು, ಪಕ್ಷಿ, ಕಾಡುಮೃಗ, ಕ್ರಿಮಿ, ಕೀಟ ಇವುಗಳ ಸಕಲ ಜಾತಿಗಳಲ್ಲಿಯೂ ಎರಡೆರಡು ಬದುಕುವುದಕ್ಕಾಗಿ ನಿನ್ನ ಬಳಿಗೆ ಬರುವವು.
[21] ನಿನಗೂ ಅವುಗಳಿಗೂ ಪೋಷಣೆಯಾಗುವಂತೆ ಸಕಲ ವಿಧವಾದ ಆಹಾರ ಪದಾರ್ಥಗಳನ್ನು ನಿನ್ನ ಬಳಿಯಲ್ಲಿ ಕೂಡಿಸಿಟ್ಟುಕೊಳ್ಳಬೇಕು” ಎಂದು ಹೇಳಿದನು.
[22] ದೇವರು ಅಪ್ಪಣೆಕೊಟ್ಟ ಪ್ರಕಾರವೇ ನೋಹನು ಮಾಡಿದನು.