Skip to content
Opens in a new window
Listen to this chapter • 3:47

[1] ಸಾರಳು ನೂರಿಪ್ಪತ್ತೇಳು ವರ್ಷ ಬದುಕಿದಳು. ಇದು ಅವಳ ಒಟ್ಟು ಜೀವಮಾನ ಕಾಲದ ವರ್ಷಗಳು.

[2] ಸಾರಳು ಕಾನಾನ್ ದೇಶದಲ್ಲಿರುವ ಹೆಬ್ರೋನೆಂಬ ಕಿರ್ಯತರ್ಬದಲ್ಲಿ ಸತ್ತಳು. ಅಬ್ರಹಾಮನು ಬಂದು ಆಕೆಗಾಗಿ ಗೋಳಾಡಿ ಕಣ್ಣೀರು ಸುರಿಸಿದನು.

[3] ಆಮೇಲೆ ಆಕೆಯ ಶವದ ಬಳಿಯಿಂದ ಅಬ್ರಹಾಮನು ಎದ್ದು ಹಿತ್ತಿಯರ ಬಳಿಗೆ ಹೋಗಿ ಅವರಿಗೆ,

[4] “ನಾನು ನಿಮ್ಮಲ್ಲಿ ಪರದೇಶದವನೂ, ಪ್ರವಾಸಿಯೂ ಆಗಿದ್ದೇನೆ. ಈಗ ಮರಣಹೊಂದಿರುವ ನನ್ನ ಪತ್ನಿಯ ಸಮಾಧಿಗೋಸ್ಕರ ಸ್ವಲ್ಪ ಭೂಮಿಯನ್ನು ನನ್ನ ಸ್ವಂತಕ್ಕೆ ಕೊಡಿ” ಎಂದು ಕೇಳಿಕೊಂಡನು.

[5] ಹಿತ್ತಿಯರು ಅಬ್ರಹಾಮನಿಗೆ,

[6] “ಸ್ವಾಮಿ, ನಮ್ಮ ಮಾತನ್ನು ಕೇಳು. ನೀನು ನಮಗೆ ಮಹಾ ಪ್ರಭುವಾಗಿದ್ದೀಯಷ್ಟೆ. ಮರಣಹೊಂದಿರುವ ನಿನ್ನ ಪತ್ನಿಯ ದೇಹವನ್ನು ನಮಗಿರುವ ಸಮಾಧಿಯೊಳಗೆ ಶೇಷ್ಠವಾದದ್ದರಲ್ಲಿ ಇಡಬಹುದು. ನಿನ್ನ ಹೆಂಡತಿಯ ಶವವನ್ನು ಇಡುವುದಕ್ಕೆ ನಮ್ಮೊಳಗೆ ಯಾರೂ ಸ್ಮಶಾನ ಭೂಮಿಯನ್ನು ಕೊಡುವುದಕ್ಕೆ ಹಿಂದೆಗೆಯುವುದಿಲ್ಲ” ಎಂದು ಉತ್ತರ ಕೊಡಲು

[7] ಅಬ್ರಹಾಮನು ಎದ್ದು, ಹಿತ್ತಿಯರಾಗಿದ್ದ ಆ ದೇಶದವರಿಗೆ ತಲೆಬಾಗಿ ನಮಸ್ಕರಿಸಿದನು.

[8] ಅವನು ಅವರ ಸಂಗಡ ಪುನಃ ಮಾತನಾಡಿ, “ನಾನು ನಿಮ್ಮಲ್ಲಿ ನನ್ನ ಪತ್ನಿಯ ಶವವನ್ನು ಸಮಾಧಿಮಾಡುವುದು ನಿಮಗೆ ಒಪ್ಪಿಗೆಯಾಗಿದ್ದರೆ ನನಗೆ ನಿಮ್ಮಲ್ಲಿ ಒಂದು ವಿಜ್ಞಾಪನೆ ಇದೆ. ನೀವು ಚೋಹರನ ಮಗನಾದ ಎಫ್ರೋನನ ಸಂಗಡ ನನಗೋಸ್ಕರ ಮಾತನಾಡಿ,

[9] ಅವನ ಭೂಮಿಯ ಅಂಚಿನಲ್ಲಿರುವ ಮಕ್ಪೇಲ ಗವಿಯನ್ನು ನನಗೆ ಕೊಡಿಸಿ ಎಂದು ಕೇಳಿದನು. ಅವನು ನನ್ನ ಸ್ವಂತಕ್ಕೆ ಈ ಸಮಾಧಿಯ ಸ್ಥಳ ನಿಮ್ಮೆದುರಿನಲ್ಲಿ ನನಗೆ ಕೊಟ್ಟರೆ ಪೂರ್ಣ ಕ್ರಯವನ್ನು ಕೊಡುತ್ತೇನೆ” ಎಂದನು.

[10] ಎಫ್ರೋನನು ಅಲ್ಲಿ ಹಿತ್ತಿಯರ ನಡುವೆ ಕುಳಿತಿದ್ದನು. ಹೀಗಿರಲಾಗಿ ಹಿತ್ತಿಯನಾದ ಎಫ್ರೋನನು ಹಿತ್ತಿಯರಾಗಿದ್ದ ಆ ಊರಿನವರೆಲ್ಲರ ಎದುರಿನಲ್ಲಿ ಅಬ್ರಹಾಮನಿಗೆ,

[11] “ಹಾಗಲ್ಲ ಸ್ವಾಮಿ, ನನ್ನ ಮಾತನ್ನು ಲಾಲಿಸು. ಆ ಭೂಮಿಯನ್ನೂ ಅದರಲ್ಲಿರುವ ಗವಿಯನ್ನೂ ನಿನಗೆ ದಾನವಾಗಿ ಕೊಡುತ್ತೇನೆ; ನನ್ನ ಜನರ ಮುಂದೆಯೇ ಕೊಡುತ್ತೇನೆ; ಮರಣಹೊಂದಿದ ನಿನ್ನ ಪತ್ನಿಯನ್ನು ಅದರಲ್ಲಿ ಸಮಾಧಿ ಮಾಡಬಹುದು”

[12] ಎಂದು ಹೇಳಲು ಅಬ್ರಹಾಮನು ಆ ದೇಶದ ಜನರಿಗೆ ನಮಸ್ಕರಿಸಿ ಅವರೆಲ್ಲರ ಮುಂದೆ

[13] ಎಫ್ರೋನನಿಗೆ, “ಕೊಡಲಿಕ್ಕೆ ಮನಸ್ಸಿದ್ದರೆ ದಯವಿಟ್ಟು ನಾನು ಅರಿಕೆಮಾಡುವುದನ್ನು ಕೇಳು; ಆ ಭೂಮಿಗೆ ಕ್ರಯವನ್ನು ಕೊಡುತ್ತೇನೆ. ನನ್ನಿಂದ ಕ್ರಯ ತೆಗೆದುಕೊಂಡರೆ ಅದರಲ್ಲಿ ನನ್ನ ಪತ್ನಿಗೆ ಸಮಾಧಿ ಮಾಡುವೆನು” ಎಂದು ಹೇಳಿದನು.

[14] ಅದಕ್ಕೆ ಎಫ್ರೋನನು ಅಬ್ರಹಾಮನಿಗೆ,

[15] “ಸ್ವಾಮಿ, ನನ್ನ ಮಾತನ್ನು ಲಾಲಿಸು; ನಾನೂರು ಬೆಳ್ಳಿ ನಾಣ್ಯಗಳ ಬೆಲೆಬಾಳುವ ಭೂಮಿಯ ವಿಷಯದಲ್ಲಿ ನಿನಗೂ ನನಗೂ ವಾದವೇತಕ್ಕೆ? ಸಮಾಧಿಮಾಡಬಹುದು” ಎಂದನು.

[16] ಅಬ್ರಹಾಮನು ಎಫ್ರೋನನ ಮಾತಿಗೆ ಒಪ್ಪಿದನು. ಎಫ್ರೋನನು ಹಿತ್ತಿಯರ ಎದುರಿನಲ್ಲಿ ಹೇಳಿದ ನಾನೂರು ನಾಣ್ಯಗಳನ್ನು ಅಬ್ರಹಾಮನು ವರ್ತಕರಲ್ಲಿ ಸಲ್ಲುವ ಬೆಳ್ಳಿಯಿಂದ ತೂಕ ಮಾಡಿಕೊಟ್ಟನು.

[17] ಹೀಗೆ ಮಮ್ರೆಗೆ ಎದುರಾಗಿರುವ ಮಕ್ಪೇಲಕ್ಕೆ ಸೇರಿದ ಎಫ್ರೋನನ ಭೂಮಿಯು, ಅದಕ್ಕೆ ಸೇರಿದ ಗವಿಯು ಅದರಲ್ಲಿ ಮತ್ತು ಅದರ ಸುತ್ತಣ ಅಂಚಿನಲ್ಲಿ ಇದ್ದ ಮರಗಳ ಸಹಿತವಾಗಿ,

[18] ಅಬ್ರಹಾಮನ ಸ್ವಂತ ಭೂಮಿಯೆಂದು ಹಿತ್ತಿಯರಾಗಿದ್ದ ಆ ಊರಿನವರೆಲ್ಲರ ಮುಂದೆ ತೀರ್ಮಾನವಾಯಿತು.

[19] ಇದಾದ ಮೇಲೆ ಅಬ್ರಹಾಮನು ತನ್ನ ಹೆಂಡತಿಯಾದ ಸಾರಳ ಶವವನ್ನು ಕಾನಾನ್ ದೇಶದಲ್ಲಿ ಹೆಬ್ರೋನೆಂಬ ಮಮ್ರೆಗೆ ಎದುರಾಗಿರುವ ಮಕ್ಪೇಲದ ಭೂಮಿಯಲ್ಲಿರುವ ಗವಿಯೊಳಗೆ ಹೂಣಿಟ್ಟನು.

[20] ಹಿತ್ತಿಯರು ಆ ಭೂಮಿಯನ್ನೂ ಅದರಲ್ಲಿರುವ ಗವಿಯನ್ನೂ ಸ್ವಂತವಾದ ಸ್ಮಶಾನ ಭೂಮಿಯನ್ನಾಗಿ ಅಬ್ರಹಾಮನಿಗೆ ಕೊಟ್ಟು ದೃಢಪಡಿಸಿದರು.

ಆದಿಕಾಂಡ — Chapters