[1] ಇಸ್ರಾಯೇಲನು ತನಗಿದ್ದ ಸರ್ವಸ್ವವನ್ನು ತೆಗೆದುಕೊಂಡು, ಪ್ರಯಾಣ ಮಾಡಿ ಬೇರ್ಷೆಬಕ್ಕೆ ಬಂದು ತನ್ನ ತಂದೆಯಾದ ಇಸಾಕನ ದೇವರಿಗೆ ಯಜ್ಞಗಳನ್ನು ಅರ್ಪಿಸಿದನು.
[2] ಅಲ್ಲಿ ದೇವರು ರಾತ್ರಿಯ ದರ್ಶನದಲ್ಲಿ ಇಸ್ರಾಯೇಲನಿಗೆ, “ಯಾಕೋಬನೇ, ಯಾಕೋಬನೇ” ಎಂದು ಕರೆಯಲು, ಅವನು, “ಇಗೋ ಇದ್ದೇನೆ” ಎಂದನು.
[3] ಆತನು ಅವನಿಗೆ, “ನಾನೇ ದೇವರು, ನಿನ್ನ ತಂದೆಯ ದೇವರು ನಾನೇ; ನೀನು ಗಟ್ಟಾ ಇಳಿದು ಹೆದರದೆ ಐಗುಪ್ತ ದೇಶಕ್ಕೆ ಹೋಗು; ಅಲ್ಲಿ ನಿನ್ನಿಂದ ಮಹಾ ಜನಾಂಗವುಂಟಾಗುವಂತೆ ಮಾಡುವೆನು.
[4] ನಾನೇ ನಿನ್ನೊಂದಿಗೆ ಐಗುಪ್ತಕ್ಕೆ ಬರುವೆನು; ಅಲ್ಲಿಂದ ನಿಶ್ಚಯವಾಗಿ ನಿನ್ನನ್ನು ಪುನಃ ಕರೆದುಕೊಂಡು ಬರುವೆನು; (ನಿನ್ನ ಅವಸಾನಕಾಲದಲ್ಲಿ) ನಿನ್ನ ಮರಣದ ಸಮಯದಲ್ಲಿ ಯೋಸೇಫನು ನಿನ್ನೊಂದಿಗೆ ಇದ್ದು ಸಂತೈಸುವನು” ಎಂದು ಹೇಳಿದನು.
[5] ಬಳಿಕ ಯಾಕೋಬನು ಬೇರ್ಷೆಬದಿಂದ ಹೊರಟನು. ಫರೋಹನು ಅವನನ್ನು ಕರೆದುಕೊಂಡು ಬರುವುದಕ್ಕೆ ಕಳುಹಿಸಿದ್ದ ರಥಗಳಲ್ಲಿ ಇಸ್ರಾಯೇಲನ ಮಕ್ಕಳು, ತಮ್ಮ ತಂದೆಯಾದ ಯಾಕೋಬನನ್ನೂ, ಹೆಂಡತಿ ಮಕ್ಕಳನ್ನೂ ಕುಳ್ಳಿರಿಸಿಕೊಂಡು ಹೊರಟರು.
[6] ಯಾಕೋಬನೂ, ಅವನ ಮನೆಯವರೆಲ್ಲರೂ ತಮ್ಮ ದನಕುರಿಗಳನ್ನೂ ತಾವು ಕಾನಾನ್ ದೇಶದಲ್ಲಿ ಸಂಪಾದಿಸಿಕೊಂಡಿದ್ದ ಸಂಪತ್ತುಗಳನ್ನೂ ತೆಗೆದುಕೊಂಡು ಐಗುಪ್ತ ದೇಶವನ್ನು ತಲುಪಿದರು.
[7] ಹೀಗೆ ಯಾಕೋಬನು ತನ್ನ ಗಂಡು ಹೆಣ್ಣು ಮಕ್ಕಳನ್ನೂ, ಮೊಮ್ಮಕ್ಕಳನ್ನೂ, ತನ್ನ ಮನೆಯವರೆಲ್ಲರನ್ನೂ ತನ್ನ ಸಂಗಡಲೇ ಐಗುಪ್ತ ದೇಶಕ್ಕೆ ಕರೆದುಕೊಂಡು ಹೋದನು.
[8] ಐಗುಪ್ತ ದೇಶಕ್ಕೆ ಬಂದು ಸೇರಿದ ಇಸ್ರಾಯೇಲನ ಮಕ್ಕಳ ಹೆಸರುಗಳು: ಯಾಕೋಬನು ಮತ್ತು ಅವನ ಚೊಚ್ಚಲ ಮಗನಾದ ರೂಬೇನನು.
[9] ರೂಬೇನನ ಮಕ್ಕಳು: ಹನೋಕ್, ಫಲ್ಲೂ, ಹೆಚ್ರೋನ್, ಕರ್ಮೀ.
[10] ಸಿಮೆಯೋನನ ಮಕ್ಕಳು: ಯೆಮೂವೇಲ್, ಯಾಮೀನ್, ಓಹದ್, ಯಾಕೀನ್, ಚೋಹರ್ ಮತ್ತು ಕಾನಾನ್ಯ ಸ್ತ್ರೀಯಲ್ಲಿ ಹುಟ್ಟಿದ ಸೌಲ.
[11] ಲೇವಿಯ ಮಕ್ಕಳು: ಗೇರ್ಷೋನ್, ಕೆಹಾತ್, ಮೆರಾರೀ.
[12] ಯೆಹೂದನ ಮಕ್ಕಳು: ಏರ್, ಓನಾನ್, ಶೇಲಾಹ, ಪೆರೆಚ್, ಜೆರಹ. ಇವರಲ್ಲಿ ಏರ್, ಓನಾನ್ ಎಂಬವರು ಕಾನಾನ್ ದೇಶದಲ್ಲೇ ಸತ್ತು ಹೋಗಿದ್ದರು. ಪೆರೆಚನ ಮಕ್ಕಳು: ಹೆಚ್ರೋನ್, ಹಾಮೂಲ್.
[13] ಇಸ್ಸಾಕಾರನ ಮಕ್ಕಳು: ತೋಲಾ, ಪುವ್ವಾ, ಯೋಬ್, ಶಿಮ್ರೋನ್.
[14] ಜೆಬುಲೂನನ ಮಕ್ಕಳು: ಸೆರೆದ್, ಏಲೋನ್, ಯಹ್ಲೇಲ್
[15] ಇವರೆಲ್ಲರು ಲೇಯಳ ಸಂತತಿಯವರು. ಆಕೆಯು ಯಾಕೋಬನಿಗೆ ಇವರನ್ನೂ, ದೀನಳೆಂಬ ಹೆಣ್ಣು ಮಗಳನ್ನೂ ಪದ್ದನ್ ಅರಾಮಿನಲ್ಲಿ ಪಡೆದಳು. ಆಕೆಯಿಂದ ಹುಟ್ಟಿದ ಗಂಡು ಹೆಣ್ಣು ಮಕ್ಕಳು ಮೂವತ್ತು ಮೂರು ಮಂದಿ.
[16] ಗಾದನ ಮಕ್ಕಳು: ಚಿಪ್ಯೋನ್, ಹಗ್ಗೀ, ಶೂನೀ, ಎಚ್ಬೋನ್, ಏರೀ, ಅರೋದೀ, ಅರೇಲೀ;
[17] ಆಶೇರನ ಮಕ್ಕಳು: ಇಮ್ನಾ, ಇಷ್ವಾ, ಇಷ್ವೀ, ಬೆರೀಗಾ, ಇವರ ತಂಗಿಯಾದ ಸೆರಹ; ಬೆರೀಗನ ಮಕ್ಕಳಾದ ಹೆಬೆರ್, ಮಲ್ಕೀಯೇಲ್.
[18] ಇವರೆಲ್ಲರು ಲಾಬಾನನು ತನ್ನ ಮಗಳಾದ ಲೇಯಳಿಗೆ ಕೊಟ್ಟ ಜಿಲ್ಪಳ ಸಂತತಿಯವರು. ಈಕೆಯಿಂದ ಯಾಕೋಬನಿಗಾದ ಮಕ್ಕಳೂ ಮೊಮ್ಮಕ್ಕಳೂ ಹದಿನಾರು ಮಂದಿ.
[19] ಯಾಕೋಬನ ಹೆಂಡತಿಯಾದ ರಾಹೇಲಳ ಮಕ್ಕಳು ಯೋಸೇಫ್, ಬೆನ್ಯಾಮೀನ್.
[20] ಐಗುಪ್ತ ದೇಶದಲ್ಲಿ ಯೋಸೇಫನಿಗೆ ಓನ್ ಪಟ್ಟಣದ ಪುರೋಹಿತನಾದ ಪೋಟೀಫೆರನ ಮಗಳಾದ ಆಸನತ್ ಎಂಬಾಕೆಯಲ್ಲಿ ಹುಟ್ಟಿದವರು ಮನಸ್ಸೆ ಮತ್ತು ಎಫ್ರಾಯೀಮ್.
[21] ಬೆನ್ಯಾಮೀನನ ಮಕ್ಕಳು: ಬಿಳಾ, ಬೆಕೆರ್, ಅಶ್ಬೇಲ್, ಗೇರಾ, ನಾಮಾನ್, ಏಹೀ, ರೋಷ್, ಮುಪ್ಪೀಮ್, ಹುಪ್ಪೀಮ್, ಆರ್ದ್.
[22] ಈ ಹದಿನಾಲ್ಕು ಮಂದಿಯು ರಾಹೇಲಳ ಮೂಲಕ ಯಾಕೋಬನಿಂದಾದ ಸಂತತಿಯವರು.
[23] ದಾನನ ಮಗನು: ಹುಶೀಮ್.
[24] ನಫ್ತಾಲಿಯ ಮಕ್ಕಳು: ಯಹೇಲ್, ಗೂನೀ, ಯೇಚೆರ್, ಶಿಲ್ಲೇಮ್.
[25] ಇವರು ಲಾಬಾನನು ತನ್ನ ಮಗಳಾದ ರಾಹೇಲಳಿಗೆ ಕೊಟ್ಟ ಬಿಲ್ಹಳ ಸಂತತಿಯವರು. ಈಕೆಯಿಂದ ಯಾಕೋಬನಿಗಾದ ಮಕ್ಕಳೂ ಮೊಮ್ಮಕ್ಕಳೂ ಏಳು ಮಂದಿ.
[26] ಯಾಕೋಬನ ಸೊಸೆಯರಲ್ಲದೆ ಯಾಕೋಬನಿಂದಲೇ ಹುಟ್ಟಿ ಅವನೊಂದಿಗೆ ಐಗುಪ್ತ ದೇಶಕ್ಕೆ ಹೋದವರು ಒಟ್ಟು ಅರವತ್ತಾರು ಮಂದಿ.
[27] ಅವರಲ್ಲದೆ ಐಗುಪ್ತ ದೇಶದಲ್ಲಿ ಯೋಸೇಫನಿಗೆ ಹುಟ್ಟಿದವರು ಇಬ್ಬರು. ಐಗುಪ್ತ ದೇಶಕ್ಕೆ ಹೋದ ಯಾಕೋಬನ ಕುಟುಂಬದವರೆಲ್ಲರು ಒಟ್ಟು ಎಪ್ಪತ್ತು ಮಂದಿ.
[28] ಯಾಕೋಬನು ಗೋಷೆನ್ ಸೀಮೆಯ ದಾರಿಯನ್ನು ವಿಚಾರಿಸುವುದಕ್ಕೆ ಯೆಹೂದನನ್ನು ಮುಂದಾಗಿ ಯೋಸೇಫನ ಬಳಿಗೆ ಕಳುಹಿಸಿದನು. ಅವರು ಗೋಷೆನ್ ಸೀಮೆಗೆ ಬಂದಾಗ,
[29] ಯೋಸೇಫನು ತನ್ನ ರಥವನ್ನು ಸಿದ್ಧಪಡಿಸಿಕೊಂಡು ತನ್ನ ತಂದೆಯಾದ ಇಸ್ರಾಯೇಲನನ್ನು ಎದುರುಗೊಳ್ಳುವುದಕ್ಕೋಸ್ಕರ ಗೋಷೆನಿಗೆ ಹೋಗಿ ಅವನನ್ನು ಸಂಧಿಸಿ, ತಂದೆಯನ್ನು ಬಹಳ ಹೊತ್ತಿನ ವರೆಗೆ ಅಪ್ಪಿಕೊಂಡು ಅತ್ತನು.
[30] ಇಸ್ರಾಯೇಲನು ಯೋಸೇಫನಿಗೆ, “ನಾನು ನಿನ್ನ ಮುಖವನ್ನು ನೋಡಿ, ನೀನು ಇನ್ನೂ ಜೀವದಿಂದಿರುವುದನ್ನು ಕಂಡು ಸಂತೃಪ್ತನಾಗಿ ಸಾಯುವೆನು” ಎಂದು ಹೇಳಿದನು.
[31] ಯೋಸೇಫನು ತನ್ನ ಅಣ್ಣತಮ್ಮಂದಿರನ್ನೂ, ತಂದೆಯ ಮನೆಯವರೆಲ್ಲರನ್ನು ಕುರಿತು “ನಾನು ಹೋಗಿ ಫರೋಹನ ಸನ್ನಿಧಾನದಲ್ಲಿ ನೀವು ಬಂದ ವರ್ತಮಾನವನ್ನು ತಿಳಿಸಿ, ಕಾನಾನ್ ದೇಶದಲ್ಲಿದ್ದ ನನ್ನ ಅಣ್ಣತಮ್ಮಂದಿರೂ, ತನ್ನ ತಂದೆಯ ಮನೆಯವರೂ ನನ್ನ ಬಳಿಗೆ ಬಂದಿದ್ದಾರೆ;
[32] ಅವರು ಕುರಿಕಾಯುವವರು, ಪಶುಪಾಲನೆ ಮಾಡುವುದು ಅವರ ಕಸುಬು; ಅವರು ತಮ್ಮ ಕುರಿದನಗಳನ್ನೂ ತಮಗಿರುವ ಸರ್ವಸ್ವವನ್ನೂ ತಂದಿದ್ದಾರೆ” ಎಂದು ಹೇಳುತ್ತೇನೆ.
[33] ಫರೋಹನು ನಿಮ್ಮನ್ನು ಕರೆಯಿಸಿ, “ನಿಮ್ಮ ಕಸುಬು ಏನು?” ಎಂದು ಕೇಳಿದರೆ,
[34] “ನೀವು ಚಿಕ್ಕಂದಿನಿಂದ ಇದುವರೆಗೂ ನಿನ್ನ ಸೇವಕರಾದ ನಾವು ನಮ್ಮ ಪೂರ್ವಿಕರ ಪದ್ಧತಿಯ ಮೇರೆಗೆ ಪಶುಪಾಲಕರು ಎಂದು ಹೇಳಿರಿ. ಪಶುಪಾಲಕರು ಐಗುಪ್ತರಿಗೆ ಅಸಹ್ಯವಾಗಿರುವುದರಿಂದ, ಗೋಷೆನ್ ಸೀಮೆಯನ್ನು ನಿಮ್ಮ ನಿವಾಸಕ್ಕಾಗಿ ನೇಮಿಸುವನು” ಎಂದನು.