[1] ಇಸಾಕನು ಮುಪ್ಪಿನಿಂದ ಕಣ್ಣು ಕಾಣಲಾರದಷ್ಟು ಮೊಬ್ಬಾಗಿರಲು ಅವನು ತನ್ನ ಹಿರೀಮಗನಾದ ಏಸಾವನನ್ನು ಕರೆದು, “ಮಗನೇ” ಎನ್ನಲು ಏಸಾವನು, “ಇಗೋ ಇದ್ದೇನೆ” ಅಂದನು.
[2] ಇಸಾಕನು ಅವನಿಗೆ, “ನಾನು ಮುದುಕನಾಗಿದ್ದೇನೆ; ಯಾವಾಗ ಸಾಯುವೆನೋ ಗೊತ್ತಿಲ್ಲ.
[3] ಆದುದರಿಂದ ನೀನು ಬಿಲ್ಲು ಬತ್ತಳಿಕೆ ಮುಂತಾದ ಆಯುಧಗಳನ್ನು ತೆಗೆದುಕೊಂಡು
[4] ಕಾಡಿಗೆ ಹೋಗಿ ಬೇಟೆಯಾಡಿ ಬೇಟೆ ಮಾಂಸದಿಂದ ನನಗೆ ಇಷ್ಟವಾಗಿರುವ ರುಚಿಪದಾರ್ಥವನ್ನು ನನ್ನ ಊಟಕ್ಕೆ ಸಿದ್ಧಪಡಿಸು, ಸಾವು ಬರುವುದಕ್ಕಿಂತ ಮೊದಲು ನಾನು ಅದನ್ನು ತಿಂದು ನಿನ್ನನ್ನು ಆಶೀರ್ವದಿಸುತ್ತೇನೆ” ಎಂದು ಹೇಳಿದನು.
[5] ಇಸಾಕನು ತನ್ನ ಮಗನಾದ ಏಸಾವನಿಗೆ ಹೇಳಿದ ಮಾತು ರೆಬೆಕ್ಕಳ ಕಿವಿಗೆ ಬಿತ್ತು.
[6] ಏಸಾವನು ಬೇಟೆಯಾಡುವುದಕ್ಕೆ ಕಾಡಿಗೆ ಹೋಗಿದ್ದಾಗ ರೆಬೆಕ್ಕಳು ತನ್ನ ಮಗನಾದ ಯಾಕೋಬನಿಗೆ, “ನಿನ್ನ ತಂದೆಯು ನಿನ್ನ ಅಣ್ಣನಾದ ಏಸಾವನಿಗೆ,
[7] ‘ನೀನು ಹೋಗಿ ಬೇಟೆಯಾಡಿ ಬೇಟೆಯ ಮಾಂಸದಿಂದ ನನ್ನ ಊಟಕ್ಕೆ ರುಚಿಪದಾರ್ಥವನ್ನು ಸಿದ್ಧಮಾಡು; ಸಾವು ಬರುವುದಕ್ಕಿಂತ ಮೊದಲು ನಾನು ನಿನ್ನನ್ನು ಯೆಹೋವನ ಸನ್ನಿಧಿಯಲ್ಲಿ ಆಶೀರ್ವದಿಸುತ್ತೇನೆ’ ಎಂದು ಹೇಳುವುದನ್ನು ಕೇಳಿದ್ದೇನೆ.
[8] ಆದುದರಿಂದ ಮಗನೇ, ನೀನು ನನ್ನ ಮಾತಿಗೆ ಕಿವಿಗೊಟ್ಟು ನನ್ನ ಅಪ್ಪಣೆಯಂತೆ ಮಾಡು.
[9] ಆಡಿನ ಹಿಂಡಿನೊಳಗೆ ಹೋಗಿ ಎರಡು ಒಳ್ಳೆ ಆಡಿನ ಮರಿಗಳನ್ನು ಬೇಗ ತೆಗೆದುಕೊಂಡು ಬಾ; ಅವುಗಳಿಂದ ನಿನ್ನ ತಂದೆಗೆ ಇಷ್ಟವಾಗಿರುವ ರುಚಿಪದಾರ್ಥವನ್ನು ನಾನೇ ಸಿದ್ಧಮಾಡುತ್ತೇನೆ.
[10] ನೀನು ಅದನ್ನು ಅವನ ಬಳಿಗೆ ತೆಗೆದುಕೊಂಡು ಹೋಗಿ ಬಡಿಸಬೇಕು; ಹೀಗೆ ಮಾಡಿದರೆ ಅವನು ಸಾಯುವುದಕ್ಕಿಂತ ಮೊದಲು ನಿನ್ನನ್ನೇ ಆಶೀರ್ವದಿಸುವನು” ಎಂದಳು.
[11] ಅದಕ್ಕೆ ಯಾಕೋಬನು ತನ್ನ ತಾಯಿ ರೆಬೆಕ್ಕಳಿಗೆ, “ನನ್ನ ಅಣ್ಣನಾದ ಏಸಾವನು ಮೈತುಂಬ ಅಧಿಕವಾಗಿ ರೋಮವುಳ್ಳವನಾಗಿದ್ದಾನೆ. ನಾನು ನುಣುಪಾದ ಚರ್ಮವುಳ್ಳವನು.
[12] ಒಂದು ವೇಳೆ ತಂದೆಯು ನನ್ನನ್ನು ಮುಟ್ಟಿ ನೋಡಿದರೆ ನಾನು ಅವನಿಗೆ ಮೋಸ ಮಾಡುವವನಾಗಿ ಕಂಡು ಬಂದರೆ, ಆಶೀರ್ವಾದಕ್ಕಿಂತ ಶಾಪವನ್ನೇ ಹೊಂದುವೆನು” ಎಂದನು.
[13] ಅವನ ತಾಯಿಯು ಅವನಿಗೆ, “ಮಗನೇ, ಅವನು ನಿನಗೆ ಶಾಪಕೊಟ್ಟರೆ ಆ ಶಾಪ ನನಗಿರಲಿ; ನೀನು ನನ್ನ ಮಾತನ್ನು ಕೇಳಿ ಆಡಿನ ಮರಿಗಳನ್ನು ತೆಗೆದುಕೊಂಡು ಬಾ” ಎಂದು ಹೇಳಿದಳು.
[14] ಅವನು ಹೋಗಿ ಅವುಗಳನ್ನು ತಂದು ತಾಯಿಗೆ ಕೊಟ್ಟನು. ರೆಬೆಕ್ಕಳು ಅವನ ತಂದೆಗೆ ಇಷ್ಟವಾಗಿದ್ದ ಸವಿಯೂಟವನ್ನು ಸಿದ್ಧಪಡಿಸಿದಳು.
[15] ಆಮೇಲೆ ರೆಬೆಕ್ಕಳು ಮನೆಯಲ್ಲಿ ತನ್ನ ವಶದಲ್ಲಿದ್ದ ಹಿರೀಮಗನಾದ ಏಸಾವನ ಶ್ರೇಷ್ಠ ವಸ್ತ್ರಗಳನ್ನು ತೆಗೆದು, ತನ್ನ ಕಿರಿಯ ಮಗನಾದ ಯಾಕೋಬನಿಗೆ ಹೊದಿಸಿದಳು.
[16] ಆ ಆಡಿನ ಮರಿಗಳ ಚರ್ಮಗಳನ್ನು ಅವನ ಕೈಗಳಿಗೂ, ನುಣುಪಾದ ಕೊರಳಿಗೂ ಸುತ್ತಿದಳು.
[17] ನಂತರ ತಾನು ಸಿದ್ಧಮಾಡಿದ್ದ ರುಚಿಪದಾರ್ಥವನ್ನೂ ರೊಟ್ಟಿಯನ್ನೂ ತನ್ನ ಮಗನಾದ ಯಾಕೋಬನ ಕೈಯಲ್ಲಿ ಕೊಟ್ಟಳು.
[18] ಅವನು ತಂದೆಯ ಬಳಿಗೆ ಹೋಗಿ, “ಅಪ್ಪಾ” ಎಂದು ಕರೆಯಲು, ತಂದೆಯು, “ಏನು ಮಗನೇ, ನೀನು ಯಾರು?” ಎಂದು ಕೇಳಿದನು.
[19] ಯಾಕೋಬನು ಅವನಿಗೆ, “ನಾನು ನಿನ್ನ ಹಿರೀಮಗನಾದ ಏಸಾವನು; ನಿನ್ನ ಅಪ್ಪಣೆಯಂತೆ ಊಟ ಸಿದ್ಧಪಡಿಸಿಕೊಂಡು ತಂದಿದ್ದೇನೆ. ಎದ್ದು, ಕುಳಿತುಕೊಂಡು ನಾನು ತಂದಿರುವ ಬೇಟೆ ಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸು” ಎಂದು ಹೇಳಲು,
[20] ಇಸಾಕನು, “ಏನು ಮಗನೇ, ಇಷ್ಟು ಬೇಗ ಬೇಟೆ ಹೇಗೆ ಸಿಕ್ಕಿತು” ಎಂದು ಕೇಳಿದ್ದಕ್ಕೆ ಅವನು, “ನಿನ್ನ ದೇವರಾದ ಯೆಹೋವನು ಅದನ್ನು ನನ್ನೆದುರಿಗೆ ಬರಮಾಡಿದನು” ಎಂದನು.
[21] ಇಸಾಕನು ಯಾಕೋಬನಿಗೆ, “ಕಂದಾ, ನನ್ನ ಬಳಿಗೆ ಬಾ; ನೀನು ನನ್ನ ಮಗನಾದ ಏಸಾವನೋ ಅಲ್ಲವೋ ನಿನ್ನನ್ನು ಮುಟ್ಟಿ ತಿಳಿದುಕೊಳ್ಳಬೇಕು” ಎಂದು ಹೇಳಿದನು.
[22] ಯಾಕೋಬನು ತನ್ನ ತಂದೆಯ ಹತ್ತಿರಕ್ಕೆ ಬಂದಾಗ ಇಸಾಕನು ಅವನನ್ನು ಮುಟ್ಟಿ ನೋಡಿ, “ಸ್ವರವೇನೋ ಯಾಕೋಬನ ಸ್ವರವಾಗಿದೆ, ಕೈಗಳು ಏಸಾವನ ಕೈಗಳು” ಎಂದು ಹೇಳಿದನು.
[23] ಯಾಕೋಬನ ಕೈಗಳು ಏಸಾವನ ಕೈಗಳಂತೆ ರೋಮವುಳ್ಳವುಗಳಾಗಿದ್ದರಿಂದ ಇಸಾಕನು ಅವನ ಗುರುತನ್ನು ಹಿಡಿಯಲಾರದೆ ಅವನನ್ನು ಆಶೀರ್ವದಿಸಿದನು.
[24] ಅವನು, “ನೀನು ನಿಜವಾದ ನನ್ನ ಮಗನಾದ ಏಸಾವನೋ” ಎಂದು ಕೇಳಿದ್ದಕ್ಕೆ ಯಾಕೋಬನು, “ಹೌದು” ಎನ್ನಲು,
[25] ಇಸಾಕನು, “ಆ ಪದಾರ್ಥವನ್ನು ಹತ್ತಿರಕ್ಕೆ ತೆಗೆದುಕೊಂಡು ಬಾ; ನೀನು ತಂದ ಬೇಟೆ ಮಾಂಸವನ್ನು ನಾನು ಊಟಮಾಡಿದ ಮೇಲೆ ನಿನ್ನನ್ನು ಆಶೀರ್ವದಿಸುವೆನು” ಎಂದು ಹೇಳಿದನು. ಯಾಕೋಬನು ಅದನ್ನು ಅವನ ಹತ್ತಿರಕ್ಕೆ ತೆಗೆದುಕೊಂಡು ಬರಲು ಅವನು ತಿಂದನು; ದ್ರಾಕ್ಷಾರಸವನ್ನು ಕುಡಿದನು.
[26] ಆಮೇಲೆ ಅವನ ತಂದೆಯಾದ ಇಸಾಕನು ಅವನಿಗೆ, “ಮಗನೇ, ನೀನು ಹತ್ತಿರ ಬಂದು ನನಗೆ ಮುದ್ದಿಡು” ಎಂದು ಹೇಳಲು ಅವನು ಹತ್ತಿರ ಬಂದು ತಂದೆಗೆ ಮುದ್ದಿಟ್ಟನು.
[27] ಇಸಾಕನು ಅವನ ವಸ್ತ್ರಗಳ ವಾಸನೆಯನ್ನು ಮೂಸಿ ನೋಡಿ ಅವನನ್ನು ಆಶೀರ್ವದಿಸಿ, “ಆಹಾ, ನನ್ನ ಮಗನ ಸುವಾಸನೆಯು, ಯೆಹೋವನು ಆಶೀರ್ವದಿಸಿದ ಹೊಲದ ಸುವಾಸನೆಯಂತಿರುವುದು.
[28] ದೇವರು ನಿನಗೆ ಆಕಾಶದ ಮಂಜನ್ನೂ, ಸಾರವುಳ್ಳ ಭೂಮಿಯನ್ನೂ ಕೊಟ್ಟು ದವಸಧಾನ್ಯಗಳನ್ನೂ, ದ್ರಾಕ್ಷಾರಸವನ್ನೂ ಹೇರಳವಾಗಿ ಅನುಗ್ರಹಿಸಲಿ.
[29] ಜನಗಳು ನಿನ್ನನ್ನು ಆರಾಧಿಸಲಿ, ಜನಾಂಗಗಳು ನಿನಗೆ ಅಧೀನವಾಗಲಿ. ನಿನ್ನ ಅಣ್ಣತಮ್ಮಂದಿರಿಗೆ ನೀನು ದೊರೆಯಾಗಿರು, ನಿನ್ನ ತಾಯಿಯ ಮಕ್ಕಳು ನಿನಗೆ ಅಡ್ಡಬೀಳಲಿ. ನಿನ್ನನ್ನು ಶಪಿಸುವವರಿಗೆ ಶಾಪವೂ, ನಿನ್ನನ್ನು ಆಶೀರ್ವದಿಸುವವರಿಗೆ ಆಶೀರ್ವಾದವೂ ಉಂಟಾಗಲಿ” ಎಂದನು.
[30] ಇಸಾಕನು ಅವನನ್ನು ಆಶೀರ್ವದಿಸಿದ ಮೇಲೆ ಯಾಕೋಬನು ತನ್ನ ತಂದೆಯ ಬಳಿಯಿಂದ ಹೊರಟುಹೋದ ಕ್ಷಣವೇ ಅವನ ಅಣ್ಣನಾದ ಏಸಾವನು ಬೇಟೆಯಿಂದ ಬಂದನು.
[31] ಅವನೂ ಸವಿಯೂಟವನ್ನು ಸಿದ್ಧಮಾಡಿ ತನ್ನ ತಂದೆಯ ಬಳಿಗೆ ತಂದು ಅವನಿಗೆ, “ಅಪ್ಪಾ, ನೀನು ಎದ್ದು ನಿನ್ನ ಮಗನಾದ ನಾನು ಬೇಟೆಯಿಂದ ತಂದಿರುವ ಮಾಂಸವನ್ನು ಊಟಮಾಡಿ ನನ್ನನ್ನು ಆಶೀರ್ವದಿಸು” ಎಂದು ಹೇಳಿದನು.
[32] ಅವನ ತಂದೆಯಾದ ಇಸಾಕನು, “ನೀನು ಯಾರು?” ಎಂದು ಅವನನ್ನು ಕೇಳಲು ಅವನು, “ನಾನು ನಿನ್ನ ಚೊಚ್ಚಲ ಮಗನಾದ ಏಸಾವನು” ಎಂದನು.
[33] ಅದಕ್ಕೆ ಇಸಾಕನು ಬಹಳವಾಗಿ ಗಡಗಡನೆ ನಡುಗುತ್ತಾ, “ಯಾರೋ ಬೇರೊಬ್ಬನು ಬೇಟೆ ಮಾಂಸವನ್ನು ತಂದು ನನಗೆ ಕೊಟ್ಟುಹೋದನಲ್ಲಾ. ನೀನು ಬರುವುದಕ್ಕಿಂತ ಮೊದಲೇ ಅವನು ತಂದಿದ್ದರಲ್ಲಿ ನಾನು ಊಟಮಾಡಿ ಅವನನ್ನೇ ಆಶೀರ್ವದಿಸಿದೆನು; ಅವನಿಗೆ ಮಾಡಿದ ಆಶೀರ್ವಾದ ತಪ್ಪಲಾರದು” ಎಂದನು.
[34] ಏಸಾವನು ತನ್ನ ತಂದೆಯ ಮಾತುಗಳನ್ನು ಕೇಳಿ ದುಃಖಾಕ್ರಾಂತನಾಗಿ ಬಹಳವಾಗಿ ಅಳುತ್ತಾ, “ಅಪ್ಪಾ, ತಂದೆಯೇ, ನನ್ನನ್ನು ಸಹ ಆಶೀರ್ವದಿಸು” ಎಂದು ಬೇಡಿಕೊಳ್ಳಲು ಇಸಾಕನು,
[35] “ನಿನ್ನ ತಮ್ಮನು ಮೋಸದಿಂದ ಬಂದು ನಿನಗಾಗಬೇಕಾಗಿದ್ದ ಆಶೀರ್ವಾದವನ್ನು ಪಡೆದುಕೊಂಡನು” ಎಂದನು.
[36] ಅದಕ್ಕೆ ಏಸಾವನು, “ಯಾಕೋಬನೆಂಬ ಹೆಸರು ಅವನಿಗೆ ಉಂಟಾದದ್ದು ನ್ಯಾಯವಲ್ಲವೋ? ಎರಡು ಸಾರಿ ನನ್ನನ್ನು ವಂಚಿಸಿದ್ದಾನೆ, ಹಿಂದೆ ನನ್ನ ಚೊಚ್ಚಲತನದ ಹಕ್ಕನ್ನು ಅಪಹರಿಸಿದನು; ಈಗ ಬಂದು ನನಗಾಗ ಬೇಕಾಗಿದ್ದ ಆಶೀರ್ವಾದವನ್ನೂ ತೆಗೆದುಕೊಂಡಿದ್ದಾನೆ” ಎಂದು ಹೇಳಿ ತನ್ನ ತಂದೆಯನ್ನು, “ನನಗೋಸ್ಕರವೂ ನಿನ್ನ ಬಳಿ ಆಶೀರ್ವಾದವಿಲ್ಲವೋ” ಎಂದು ಕೇಳಲು,
[37] ಇಸಾಕನು ಏಸಾವನಿಗೆ, “ನನ್ನ ಮಗನೇ, ಅವನನ್ನು ನಿನ್ನ ದೊರೆಯನ್ನಾಗಿ ನೇಮಿಸಿದ್ದೇನೆ; ಅವನ ಅಣ್ಣತಮ್ಮಂದಿರನ್ನು ಅವನಿಗೆ ಸೇವಕನನ್ನಾಗಿ ಕೊಟ್ಟಿದ್ದೇನೆ; ದವಸಧಾನ್ಯಗಳನ್ನೂ ದ್ರಾಕ್ಷಾರಸವನ್ನೂ ಅವನ ಪೋಷಣೆಗಾಗಿ ಕೊಟ್ಟಿದ್ದೇನೆ ನೋಡು. ಹೀಗಿರುವಲ್ಲಿ ನಾನು ನಿನಗೋಸ್ಕರ ಏನು ಮಾಡಲಿ” ಎಂದನು.
[38] ಏಸಾವನು ಅವನಿಗೆ, “ಅಪ್ಪಾ, ತಂದೆಯೇ, ನಿನ್ನಲ್ಲಿ ಒಂದೇ ಒಂದು ಆಶೀರ್ವಾದ ಮಾತ್ರ ಇರುವುದೋ? ಅಪ್ಪಾ, ನನ್ನನ್ನೂ ಆಶೀರ್ವದಿಸಬೇಕು” ಎಂದು ಹೇಳಿ ಗೋಳಾಡುತ್ತಾ ಅಳಲು,
[39] ಅವನ ತಂದೆಯಾದ ಇಸಾಕನು ಅವನಿಗೆ, “ಸಾರವುಳ್ಳ ಭೂಮಿಯೂ ಮೇಲಿನಿಂದ ಬೀಳುವ ಆಕಾಶದ ಮಂಜು ಇರುವ ಸ್ಥಳದಲ್ಲಿ ನಿನ್ನ ನಿವಾಸವಿರುವುದು.
[40] ನೀನು ಕತ್ತಿಯಿಂದಲೇ ಜೀವನ ಮಾಡುವಿ. ನಿನ್ನ ತಮ್ಮನಿಗೆ ಸೇವಕನಾಗಿರುವಿ. ಆದರೂ ನೀನು ತಾಳ್ಮೆ ಮೀರುವಾಗ, ಅವನು ನಿನ್ನ ಹೆಗಲಿನ ಮೇಲೆ ಹೊರಿಸಿರುವ ನೊಗವನ್ನು ಮುರಿದು ಹಾಕುವಿ” ಎಂದು ಹೇಳಿದನು.
[41] ತಂದೆಯು ಯಾಕೋಬನಿಗೆ ಮಾಡಿದ ಆಶೀರ್ವಾದದ ನಿಮಿತ್ತ ಏಸಾವನು ಯಾಕೋಬನನ್ನು ಹಗೆಮಾಡಿ ತನ್ನ ಮನಸ್ಸಿನೊಳಗೆ, “ತಂದೆಗೋಸ್ಕರ ದುಃಖಿಸುವ ಕಾಲ ಸಮೀಪಿಸಿತು. ತರುವಾಯ ನನ್ನ ತಮ್ಮನಾದ ಯಾಕೋಬನನ್ನು ಕೊಲ್ಲುವೆನು” ಎಂದುಕೊಂಡನು.
[42] ಹಿರಿಮಗನಾದ ಏಸಾವನು ಹೇಳಿದ ಮಾತು ರೆಬೆಕ್ಕಳಿಗೆ ತಿಳಿದುಬಂದಾಗ ಆಕೆಯು ತನ್ನ ಕಿರಿಯ ಮಗನಾದ ಯಾಕೋಬನನ್ನು ಕರೆದು ಅವನಿಗೆ, “ನೋಡು, ನಿನ್ನ ಅಣ್ಣನಾದ ಏಸಾವನು ನಿನ್ನನ್ನು ಕೊಂದು ಸಮಾಧಾನದಿಂದ ಇರಬೇಕೆಂದುಕೊಂಡಿದ್ದಾನೆ.
[43] ಆದುದರಿಂದ ಮಗನೇ, ನನ್ನ ಮಾತಿಗೆ ವಿಧೇಯನಾಗು; ನೀನು ಎದ್ದು ಹಾರಾನಿನಲ್ಲಿರುವ ನನ್ನ ಅಣ್ಣನಾದ ಲಾಬಾನನ ಬಳಿಗೆ ಹೊರಟುಹೋಗು.
[44] ಕೆಲವು ಕಾಲ, ನಿನ್ನ ಅಣ್ಣನ ಕೋಪವು ಶಮನವಾಗುವ ವರೆಗೂ ಅವನ ಬಳಿಯಲ್ಲೇ ಇರು.
[45] ನಿನ್ನ ಅಣ್ಣನು ನೀನು ಮಾಡಿರುವುದನ್ನು ಮರೆತು, ತನ್ನ ಕೋಪವನ್ನು ಮರೆತು ಬಿಟ್ಟಾಗ ನಾನು ನಿನ್ನನ್ನು ಅಲ್ಲಿಂದ ಕರೆಯಿಸುವೆನು. ನಾನು ಒಂದೇ ದಿನದಲ್ಲಿ ನಿಮ್ಮಿಬ್ಬರನ್ನೂ ಕಳೆದುಕೊಳ್ಳುವುದು ಏಕೆ?” ಎಂದು ಹೇಳಿದಳು.
[46] ರೆಬೆಕ್ಕಳು ಇಸಾಕನಿಗೆ, “ಹಿತ್ತಿಯರಾದ ಈ ಸ್ತ್ರೀಯರ ದೆಸೆಯಿಂದ ನನಗೆ ಬೇಸರವಾಗಿದೆ, ಯಾಕೋಬನೂ ಈ ದೇಶದಲ್ಲಿರುವ ಹಿತ್ತಿಯ ಸ್ತ್ರೀಯನ್ನು ಆರಿಸಿಕೊಂಡು ಮದುವೆ ಮಾಡಿಕೊಂಡರೆ, ನಾನು ಇನ್ನೂ ಬದುಕುವುದರಿಂದ ಪ್ರಯೋಜನವೇನು?” ಎಂದು ಹೇಳಿದಳು.