Skip to content
Opens in a new window
Listen to this chapter • 5:20

[1] ಆ ದಿನಗಳಲ್ಲಿ ಶಿನಾರಿನ ಅರಸನಾದ ಅಮ್ರಾಫೆಲನು, ಎಲ್ಲಜಾರಿನ ಅರಸನಾದ ಅರಿಯೋಕನು, ಏಲಾಮಿನ ಅರಸನಾದ ಕೆದೊರ್ಲಗೋಮರನು, ಗೋಯಿಮದ ಅರಸನಾದ ತಿದ್ಗಾಲನು ಈ ನಾಲ್ವರು ಈಗಿನ ಲವಣಸಮುದ್ರ ಎನ್ನಿಸಿಕೊಳ್ಳುವ ಸಿದ್ದೀಮ್,

[2] ತಗ್ಗು ಪ್ರದೇಶದಲ್ಲಿ ಒಟ್ಟಾಗಿ ಕೂಡಿದ್ದ ಸೊದೋಮಿನ ಅರಸನಾದ ಬೆರಗನು, ಗೊಮೋರದ ಅರಸನಾದ ಬಿರ್ಶಗನು, ಅದ್ಮಾಹದ ಅರಸನಾದ ಶಿನಾಬನು, ಚೆಬೋಯಿಮನ ಅರಸನಾದ ಶೆಮೇಬರನ, ಬೇಲಗ (ಅಂದರೆ ಚೋಗರದ) ಎಂಬ ಐದು ಅರಸರ ವಿರುದ್ಧವಾಗಿ ಯುದ್ಧ ಮಾಡಿದರು.

[3] ಈ ಐದು ಅರಸರು ಈಗಿನ ಲವಣಸಮುದ್ರ ಎನ್ನಿಸಿಕೊಳ್ಳುವ ಸಿದ್ದೀಮ್, ತಗ್ಗಿನ ಪ್ರದೇಶದಲ್ಲಿ ಒಟ್ಟಾಗಿ ಕೂಡಿದ್ದರು.

[4] ಬೆರಗ ಮೊದಲಾದ ಈ ಐದು ಅರಸರು ಹನ್ನೆರಡು ವರ್ಷ ಕೆದೊರ್ಲಗೋಮರನಿಗೆ ಅಧೀನರಾಗಿದ್ದು ಹದಿಮೂರನೆಯ ವರ್ಷದಲ್ಲಿ ತಿರುಗಿ ಬಿದ್ದರು.

[5] ಹದಿನಾಲ್ಕನೆಯ ವರ್ಷದಲ್ಲಿ ಕೆದೊರ್ಲಗೋಮರನೂ ಅವನಿಗೆ ಸೇರಿದ್ದ ರಾಜರೂ ಬಂದು ಅಷ್ಟರೋತ್ ಕರ್ನಯಿಮಿನಲ್ಲಿ ರೆಫಾಯರನ್ನೂ ಹಾಮಿನಲ್ಲಿ ಜೂಜ್ಯರನ್ನೂ ಶಾವೆಕಿರ್ಯಾತಯಿಮಿನಲ್ಲಿ ಏಮಿಯರನ್ನೂ ಸೋಲಿಸಿದರು.

[6] ಇದಲ್ಲದೆ ಸೇಯೀರೆಂಬ ಬೆಟ್ಟದ ಸೀಮೆಯಲ್ಲಿ ವಾಸವಾಗಿದ್ದ ಹೋರಿಯರನ್ನು, ಅಲ್ಲೇ ಸೋಲಿಸಿ ಮರಳುಗಾಡಿನ ಹತ್ತಿರವಿರುವ ಎಲ್ಪಾರಾನಿನ ವರೆಗೂ ಹಿಂದಟ್ಟಿದನು.

[7] ಆ ಮೇಲೆ ಅವರು ಹಿಂದಿರುಗಿಕೊಂಡು ಕಾದೇಶ್ ಎನ್ನುವ ಎನ್ಮಿಷ್ಟಾಟಿಗೆ ಬಂದು ಅಮಾಲೇಕ್ಯರ ಸಮಸ್ತ ನಾಡನ್ನೂ ಹಚಚೋನ್ ತಾಮರಿನಲ್ಲಿ ವಾಸವಾಗಿದ್ದ ಅಮೋರಿಯರನ್ನೂ ಗೆದ್ದರು.

[8] ಆಗ ಸೊದೋಮ್, ಗೊಮೋರ, ಅದ್ಮಾಹ, ಚೆಬೋಯಿಮ್ ಹಾಗೂ ಚೋಗರೆಂಬ ಬೇಲಗದ ರಾಜರು ಹೊರಟು ಅವರಿಗೆದುರಾಗಿ,

[9] ಅಂದರೆ ಏಲಾಮಿನ ರಾಜನಾದ ಕೆದೊರ್ಲಗೋಮರ್, ಗೋಯಿಮದ ರಾಜನಾದ ತಿದ್ಗಾಲ, ಶಿನಾರ್ ಅರಸನಾದ ಅಮ್ರಾಫೆಲ್, ಎಲ್ಲಸಾರಿನ ರಾಜನಾದ ಅರಿಯೋಕ ಇವರಿಗೆ ವಿರೋಧವಾಗಿ ಸಿದ್ದೀಮ್ ಎಂಬ ತಗ್ಗಿನಲ್ಲಿ ತಮ್ಮ ದಂಡನ್ನು ನಿಲ್ಲಿಸಿದರು. ಹೀಗೆ ನಾಲ್ಕು ಮಂದಿ ರಾಜರು ಐದು ಮಂದಿ ರಾಜರನ್ನು ಎದುರಿಸಿದರು.

[10] ಆದರೆ ಸಿದ್ದೀಮ್ ತಗ್ಗು ಪ್ರದೇಶ ಕಲ್ಲರಗಿನ ಕೆಸರುಗುಣಿಗಳಿಂದ ತುಂಬಿತ್ತು. ಸೊದೋಮ್ ಗೊಮೋರಗಳ ರಾಜರ ಕಡೆಯವರು ಓಡಿಹೋಗುವಾಗ ಆ ಗುಣಿಗಳಲ್ಲಿ ಬಿದ್ದು ಸತ್ತರು; ಉಳಿದವರು ಬೆಟ್ಟಗಳಿಗೆ ಓಡಿಹೋದರು.

[11] ಗೆದ್ದ ಆ ನಾಲ್ಕು ಅರಸರು ಸೊದೋಮ್ ಗೊಮೋರ ಪಟ್ಟಣಗಳನ್ನು ಸೂರೆಮಾಡಿ ಅವುಗಳಲ್ಲಿದ್ದ ಎಲ್ಲಾ ಸಂಪತ್ತನ್ನೂ ದವಸವನ್ನೂ ತೆಗೆದುಕೊಂಡು ಹೋದರು.

[12] ಸೊದೋಮಿನಲ್ಲಿ ವಾಸವಾಗಿದ್ದ ಅಬ್ರಾಮನ ತಮ್ಮನ ಮಗನಾದ ಲೋಟನನ್ನೂ ಅವನ ಆಸ್ತಿ ಸಹಿತ ಹಿಡಿದುಕೊಂಡು ಹೋದರು.

[13] ತಪ್ಪಿಸಿಕೊಂಡವನೊಬ್ಬನು, ಇಬ್ರಿಯನಾದ ಅಬ್ರಾಮನ ಬಳಿಗೆ ಬಂದು ಈ ಸಂಗತಿಯನ್ನು ತಿಳಿಸಿದನು. ಅಬ್ರಾಮನು ಅಮೋರಿಯನಾದ ಮಮ್ರೆಯನ ಮೋರೆ ತೋಪಿನ ಬಳಿಯಲ್ಲಿ ವಾಸವಾಗಿದ್ದನು. ಮಮ್ರೆಯನಿಗೆ ಎಷ್ಕೋಲ ಮತ್ತು ಆನೇರ ಎಂಬ ಸಹೋದರರಿದ್ದರು; ಇವರಿಬ್ಬರಿಗೂ ಅಬ್ರಾಮನಿಗೂ ಒಡಂಬಡಿಕೆಯಿತ್ತು.

[14] ಅಬ್ರಾಮನು ತನ್ನ ತಮ್ಮನ ಮಗನು ಸೆರೆಗೆ ಸಿಕ್ಕಿದ್ದನ್ನು ಕೇಳಿ ತನ್ನ ಮನೆಯಲ್ಲೇ ಹುಟ್ಟಿ ಬೆಳೆದ ಶಿಕ್ಷಿತರಾದ ಮುನ್ನೂರ ಹದಿನೆಂಟು ಮಂದಿ ಆಳುಗಳನ್ನು ಯುದ್ಧಕ್ಕೆ ಸಿದ್ಧಮಾಡಿಕೊಂಡು ಹೊರಟು ಆ ರಾಜರನ್ನು ದಾನೂರಿನವರೆಗೂ ಹಿಂದಟ್ಟಿದನು.

[15] ಅವನು ರಾತ್ರಿ ವೇಳೆಯಲ್ಲಿ ತನ್ನ ದಂಡನ್ನು ಎರಡು ಭಾಗಮಾಡಿ ತನ್ನ ಭಟರೊಡನೆ ಅವರ ಮೇಲೆ ಬಿದ್ದು, ಹೊಡೆದು, ದಮಸ್ಕ ಪಟ್ಟಣದ ಉತ್ತರಕಡೆಯಲ್ಲಿರುವ ಹೋಬಾ ಊರಿನ ತನಕ ಅವರನ್ನು ಹಿಂದಟ್ಟಿದ್ದನು.

[16] ರಾಜರು ಅಪಹರಿಸಿದ್ದ ಎಲ್ಲಾ ವಸ್ತುಗಳನ್ನು ಅವನು ತಿರುಗಿ ಪಡೆದುಕೊಂಡನು. ತನ್ನ ತಮ್ಮನ ಮಗನಾದ ಲೋಟನನ್ನೂ ಅವನ ಆಸ್ತಿಯನ್ನೂ ಬಿಡಿಸಿಕೊಂಡದ್ದಲ್ಲದೆ, ಸೆರೆಯಲ್ಲಿದ್ದ ಸ್ತ್ರೀಯರನ್ನೂ, ಉಳಿದಿದ್ದ ಜನರನ್ನು ಕರೆದುಕೊಂಡು ಬಂದನು.

[17] ಅವನು ಕೆದೊರ್ಲಗೋಮರನ್ನೂ ಅವನೊಂದಿಗೆ ಇದ್ದ ರಾಜರನ್ನೂ ಸೋಲಿಸಿ ಬಂದ ಮೇಲೆ ಸೊದೋಮಿನ ಅರಸನು ಅವನನ್ನು ಅರಸನ ತಗ್ಗು ಎನ್ನಿಸಿಕೊಳ್ಳುವ ಶಾವೆ ತಗ್ಗಿನಲ್ಲಿ ಅಬ್ರಾಮನನ್ನು ಎದುರುಗೊಂಡನು.

[18] ಸಾಲೇಮಿನ ಅರಸನಾದ ಮೆಲ್ಕೀಚೆದೆಕನು ಸಹ ಬಂದು ರೊಟ್ಟಿಯನ್ನೂ ದ್ರಾಕ್ಷಾರಸವನ್ನೂ ಕೊಟ್ಟನು. ಇವನು ಪರಾತ್ಪರನಾದ ದೇವರ ಯಾಜಕನಾಗಿದ್ದನು.

[19] ಇವನು ಅಬ್ರಾಮನನ್ನು ಆಶೀರ್ವದಿಸಿ, “ಭೂಮ್ಯಾಕಾಶವನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರ ಆಶೀರ್ವಾದವು ಅಬ್ರಾಮನಿಗೆ ದೊರೆಯಲಿ;

[20] ಪರಾತ್ಪರನಾದ ದೇವರು ನಿನ್ನ ಶತ್ರುಗಳನ್ನು ನಿನ್ನ ಕೈಗೆ ಒಪ್ಪಿಸಿದ್ದಕ್ಕಾಗಿ ಆತನಿಗೆ ಸ್ತೋತ್ರ” ಎಂದು ಹೇಳಿದನು. ಅಬ್ರಾಮನು ತಾನು ಗೆದ್ದು ತಂದಿದ್ದ ಎಲ್ಲಾ ವಸ್ತುಗಳಲ್ಲಿ ಹತ್ತನೆಯ ಒಂದು ಭಾಗವನ್ನು ಯಾಜಕನಿಗೆ ಕೊಟ್ಟನು.

[21] ಸೊದೋಮಿನ ಅರಸನು, ಅಬ್ರಾಮನಿಗೆ, “ನೀನು ಬಿಡಿಸಿ ತಂದ ಜನರನ್ನು ನನಗೆ ಒಪ್ಪಿಸು; ಆಸ್ತಿಯನ್ನು ನೀನೇ ತೆಗೆದುಕೋ” ಎಂದು ಹೇಳಿದನು.

[22] ಅಬ್ರಾಮನು, ಸೊದೋಮಿನ ಅರಸನಿಗೆ,

[23] “ಒಂದು ದಾರವನ್ನಾಗಲಿ, ಕೆರದ ಬಾರನ್ನಾಗಲಿ ನಿನ್ನದರಲ್ಲಿ ಯಾವುದನ್ನೂ ನಾನು ತೆಗೆದುಕೊಳ್ಳುವುದಿಲ್ಲವೆಂದು ಭೂಮ್ಯಾಕಾಶಗಳನ್ನು ನಿರ್ಮಾಣಮಾಡಿದ ಪರಾತ್ಪರನಾದ ದೇವರಾಗಿರುವ ಯೆಹೋವನ ಕಡೆಗೆ ಕೈ ಎತ್ತಿ ಪ್ರಮಾಣಮಾಡುತ್ತೇನೆ. ‘ನನ್ನಿಂದ ಅಬ್ರಾಮನು ಐಶ್ವರ್ಯವಂತನಾದನೆಂದು ಹೇಳಿಕೊಳ್ಳುವುದಕ್ಕೆ ನಿನಗೆ ಆಸ್ಪದವಾಗಬಾರದು, ನನಗೆ ಏನೂ ಬೇಡ.’

[24] ಆಳುಗಳು ತಿಂದದ್ದು ಹೊರತು ನನ್ನ ಜೊತೆಯವರಾದ ಆನೇರ ಎಷ್ಕೋಲ ಮಮ್ರೆಯರಿಗೆ ಬರತಕ್ಕ ಪಾಲು ಮಾತ್ರ ಅವರಿಗೆ ಇರಲಿ” ಎಂದು ಹೇಳಿದನು.

ಆದಿಕಾಂಡ — Chapters