[1] ಅಬ್ರಹಾಮನು ಕೆಟೂರಳೆಂಬ ಇನ್ನೊಬ್ಬ ಹೆಂಡತಿಯನ್ನು ಮದುವೆ ಮಾಡಿಕೊಂಡನು.
[2] ಆಕೆ ಅವನಿಗೆ ಜಿಮ್ರಾನ್, ಯೊಕ್ಷಾನ್, ಮೆದಾನ್, ಮಿದ್ಯಾನ್, ಇಷ್ಬಾಕ್, ಶೂಹ ಇವರನ್ನು ಹೆತ್ತಳು.
[3] ಯೊಕ್ಷಾನನು ಶೆಬಾ, ದೆದಾನ್ ಎಂಬಿವರನ್ನು ಪಡೆದನು. ಅಶ್ಮೂರ್ಯರೂ, ಲೆಟೂಶ್ಯರೂ, ಲೆಯುಮ್ಯರೂ ದೆದಾನನಿಂದ ಹುಟ್ಟಿದವರು.
[4] ಗೇಫಾ, ಗೇಫೆರ್, ಹನೋಕ್, ಅಬೀದಾ, ಎಲ್ದಾಯ ಎಂಬುವವರು ಮಿದ್ಯಾನನಿಂದ ಹುಟ್ಟಿದರು. ಇವರೆಲ್ಲರೂ ಕೆಟೂರಳ ಸಂತತಿಯವರು.
[5] ಅಬ್ರಹಾಮನು ತನಗಿದ್ದ ಆಸ್ತಿಯನ್ನೆಲ್ಲಾ ಇಸಾಕನಿಗೆ ಕೊಟ್ಟನು.
[6] ಅಬ್ರಹಾಮನು ತನ್ನ ಉಪಪತ್ನಿಯರ ಮಕ್ಕಳಿಗೆ ಕೆಲವು ಸೊತ್ತುಗಳನ್ನು ದಾನಮಾಡಿ ತಾನು ಇನ್ನೂ ಜೀವದಿಂದಿರುವಾಗಲೇ ಅವರನ್ನು ತನ್ನ ಮಗನಾದ ಇಸಾಕನ ಬಳಿಯಿಂದ ಪೂರ್ವ ದಿಕ್ಕಿನಲ್ಲಿರುವ ಕೆದೆಮ್ ದೇಶಕ್ಕೆ ಕಳುಹಿಸಿ ಬಿಟ್ಟನು.
[7] ಅಬ್ರಹಾಮನು ನೂರ ಎಪ್ಪತ್ತೈದು ವರ್ಷ ಬದುಕಿದನು.
[8] ಅಬ್ರಹಾಮನು ಪೂರ್ಣಾಯುಷ್ಯದಿಂದ ದಿನತುಂಬಿದ ಮುದುಕನಾಗಿ ಪ್ರಾಣ ಬಿಟ್ಟು ತನ್ನ ಪೂರ್ವಿಕರ ಬಳಿಗೆ ಸೇರಿದನು.
[9] ಅವನ ಮಕ್ಕಳಾದ ಇಸಾಕ್, ಇಷ್ಮಾಯೇಲರು ಹಿತ್ತಿಯನಾದ ಚೋಹರನ ಮಗ ಎಫ್ರೋನನ ಭೂಮಿಯಲ್ಲಿರುವ ಮಕ್ಪೇಲದ ಗವಿಯಲ್ಲಿ ಅವನನ್ನು ಸಮಾಧಿಮಾಡಿದರು. ಅದು ಮಮ್ರೆಯ ತೋಪಿನ ಪೂರ್ವದಿಕ್ಕಿನಲ್ಲಿದೆ.
[10] ಅಬ್ರಹಾಮನು ಅದನ್ನು ಹಿತ್ತಿಯರಿಂದ ಕೊಂಡುಕೊಂಡಿದ್ದನು. ಅದರಲ್ಲಿ ಅಬ್ರಹಾಮನಿಗೂ, ಅವನ ಹೆಂಡತಿಯಾದ ಸಾರಳಿಗೂ ಸಮಾಧಿ ಆಯಿತು.
[11] ಅಬ್ರಹಾಮನು ತೀರಿಹೋದ ನಂತರ ದೇವರ ಅನುಗ್ರಹವು ಅವನ ಮಗನಾದ ಇಸಾಕನ ಮೇಲೂ ಉಂಟಾಯಿತು. ಇಸಾಕನು ಬೆರ್ ಲಹೈರೋಯಿಯ ಹತ್ತಿರ ವಾಸವಾಗಿದ್ದನು.
[12] ಅಬ್ರಹಾಮನಿಗೆ ಸಾರಳ ಐಗುಪ್ತ ದಾಸಿಯಾದ ಹಾಗರಳಲ್ಲಿ ಹುಟ್ಟಿದ ಇಷ್ಮಾಯೇಲನ ವಂಶದ ಚರಿತ್ರೆ.
[13] ಇಷ್ಮಾಯೇಲನ ಮಕ್ಕಳಿಗೂ ಇವರಿಂದ ಹುಟ್ಟಿದ ಕುಲಗಳಿಗೂ ಇರುವ ಹೆಸರುಗಳು ಯಾವುದೆಂದರೆ: ಮೊದಲು ಹುಟ್ಟಿದವನು ನೆಬಾಯೋತ್, ಆ ಮೇಲೆ ಹುಟ್ಟಿದವರು ಕೇದಾರ್, ಅದ್ಬಯೇಲ್, ಮಿಬ್ಸಾಮ್,
[14] ಮಿಷ್ಮಾ, ದೂಮಾ, ಮಸ್ಸಾ,
[15] ಹದದ್, ತೇಮಾ, ಯಟೂರ್, ನಾಫೀಷ್, ಕೇದ್ಮಾ ಎಂಬುವವರೇ.
[16] ವಂಶ ಪಾರಂಪರೆಯಾಗಿ ಊರುಗಳಲ್ಲಿಯೂ, ಪಾಳೆಯಗಳಲ್ಲಿಯೂ ವಾಸಿಸುವ ಇಷ್ಮಾಯೇಲನ ಸಂತಾನದವರೂ ಇವರೇ ಆಗಿದ್ದಾರೆ. ಇವರ ಕುಲಗಳ ಸಂಖ್ಯೆಗಳಿಗನುಸಾರವಾಗಿ ಹನ್ನೆರಡು ಮಂದಿ ಅರಸರಿರುತ್ತಾರೆ.
[17] ಇಷ್ಮಾಯೇಲನು ನೂರಮೂವತ್ತೇಳು ವರ್ಷ ಬದುಕಿದನು. ನಂತರ ಅವನು ಪ್ರಾಣ ಬಿಟ್ಟು ತನ್ನ ಪೂರ್ವಿಕರ ಬಳಿಗೆ ಸೇರಿದನು.
[18] ಇಷ್ಮಾಯೇಲ್ಯರು ಹವೀಲದಿಂದ ಐಗುಪ್ತ ದೇಶದ ಮೂಡಲಲ್ಲಿರುವ ಅಶ್ಶೂರಿನ ದಾರಿಯಲ್ಲಿರುವ ಶೂರಿನ ತನಕ ವಾಸಮಾಡಿದರು. ಹೀಗೆ ಅವರು ತಮ್ಮ ಸಂಬಂಧಿಕರ ಎದುರಾಗಿ ವಾಸಿಸಿದರು.
[19] ಅಬ್ರಹಾಮನ ಮಗನಾದ ಇಸಾಕನ ಚರಿತ್ರೆ.
[20] ಅಬ್ರಹಾಮನು ಇಸಾಕನನ್ನು ಪಡೆದನು. ಇಸಾಕನು ನಲವತ್ತು ವರ್ಷದವನಾದಾಗ ಅರಾಮ್ಯನಾದ ಬೆತೂವೇಲನ ಮಗಳೂ ಅರಾಮ್ಯನಾದ ಲಾಬಾನನ ತಂಗಿಯೂ ಆಗಿದ್ದ ರೆಬೆಕ್ಕಳನ್ನು ಪದ್ದನ್ ಅರಾಮಿನಿಂದ ಕರೆದುತಂದು ಹೆಂಡತಿಯನ್ನಾಗಿ ಮಾಡಿಕೊಂಡನು.
[21] ಆಕೆ ಬಂಜೆಯಾಗಿರಲಾಗಿ ಇಸಾಕನು ಆಕೆಗೊಸ್ಕರ ಯೆಹೋವನನ್ನು ಬೇಡಿಕೊಂಡನು. ಯೆಹೋವನು ಅವನ ವಿಜ್ಞಾಪನೆಯನ್ನು ಲಾಲಿಸಿದ್ದರಿಂದ ರೆಬೆಕ್ಕಳು ಬಸುರಾದಳು.
[22] ಆಕೆಯ ಗರ್ಭದಲ್ಲಿ ಶಿಶುಗಳು ಒಂದನ್ನೊಂದು ನೂಕಾಡುತ್ತಿದ್ದಾಗ ಆಕೆಯು, “ಹೀಗಾದರೆ ನಾನು ಹೇಗೆ ಬದುಕಬೇಕು” ಎಂದು ಹೇಳಿ ಇದರ ವಿಷಯದಲ್ಲಿ ಯೆಹೋವನ ಸನ್ನಿಧಿಯಲ್ಲಿ ವಿಚಾರಿಸುವುದಕ್ಕೆ ಹೋದಳು.
[23] ಯೆಹೋವನು ಆಕೆಗೆ, “ನಿನ್ನ ಗರ್ಭದಲ್ಲಿ ಎರಡು ಜನಾಂಗಗಳು ಇವೆ; ಆ ಎರಡು ಜನಾಂಗಗಳು ಹುಟ್ಟಿನಿಂದಲೇ ಭಿನ್ನವಾಗಿರುವವು; ಅವುಗಳಲ್ಲಿ ಒಂದು ಮತ್ತೊಂದಕ್ಕಿಂತ ಬಲಿಷ್ಠವಾಗುವುದು; ಹಿರಿಯವನು ಕಿರಿಯವನಿಗೆ ಸೇವೆ ಮಾಡುವನು” ಎಂದು ಹೇಳಿದನು.
[24] ಆಕೆ ದಿನತುಂಬಿದಾಗ ಅವಳಿ ಮಕ್ಕಳನ್ನು ಹೆತ್ತಳು.
[25] ಮೊದಲು ಹುಟ್ಟಿದ್ದು ಕೆಂಪಾಗಿಯೂ ಮೈಮೇಲೆಲ್ಲಾ ಕೂದಲಿನ ವಸ್ತ್ರದಂತೆ ರೋಮವುಳ್ಳದ್ದಾಗಿಯೂ ಇತ್ತು. ಅದಕ್ಕೆ “ಏಸಾವ” ಎಂದು ಹೆಸರಿಟ್ಟರು.
[26] ಎರಡನೆಯ ಶಿಶುವು ಏಸಾವನ ಹಿಮ್ಮಡಿಯನ್ನು ಕೈಯಿಂದ ಹಿಡಿದುಕೊಂಡು ಹುಟ್ಟಿದ್ದರಿಂದ ಅದಕ್ಕೆ “ಯಾಕೋಬ” ಎಂದು ಹೆಸರಿಟ್ಟರು. ಇವರಿಬ್ಬರು ಹುಟ್ಟಿದಾಗ ಇಸಾಕನು ಅರುವತ್ತು ವರ್ಷದವನಾಗಿದ್ದನು.
[27] ಆ ಹುಡುಗರಿಬ್ಬರೂ ಬೆಳೆದಾಗ ಅವರಲ್ಲಿ ಏಸಾವನು ಬೇಟೆಯಾಡುವುದರಲ್ಲಿ ನಿಪುಣನಾಗಿದ್ದನು; ಅವನು ಅರಣ್ಯವಾಸಿ. ಯಾಕೋಬನು ಸಾಧು ಮನುಷ್ಯನಾಗಿ ಗುಡಾರಗಳಲ್ಲೇ ವಾಸಿಸುತ್ತಿದ್ದನು.
[28] ಬೇಟೆಯ ಮಾಂಸವು ಇಸಾಕನಿಗೆ ಇಷ್ಟವಾದುದರಿಂದ ಅವನು ಏಸಾವನನ್ನು ಪ್ರೀತಿಸಿದನು; ರೆಬೆಕ್ಕಳು ಯಾಕೋಬನನ್ನು ಪ್ರೀತಿಸಿದಳು.
[29] ಒಂದು ದಿನ ಯಾಕೋಬನು ಅಡಿಗೆ ಮಾಡುತ್ತಿರುವಾಗ ಏಸಾವನು ಕಾಡಿನಿಂದ ದಣಿದು ಬಂದು ಅವನಿಗೆ, “ನಾನು ಬಹಳ ದಣಿದು ಬಂದಿದ್ದೇನೆ;
[30] ಆ ಕೆಂಪಾದ ರುಚಿ ಪದಾರ್ಥವನ್ನು ಈಗಲೇ ತಿನ್ನುವುದಕ್ಕೆ ಕೊಡು” ಎಂದು ಕೇಳಿದನು. ಈ ಸಂಗತಿಯಿಂದ ಏಸಾವನಿಗೆ “ಎದೋಮ್” ಎಂದು ಹೆಸರಾಯಿತು.
[31] ಯಾಕೋಬನು ಅವನಿಗೆ, “ನೀನು ಮೊದಲು ನಿನ್ನ ಚೊಚ್ಚಲತನದ ಹಕ್ಕನ್ನು ನನಗೆ ಮಾರಿ ಬಿಡು” ಅನ್ನಲು.
[32] ಏಸಾವನು, “ಆಗಲಿ” ನನ್ನಂಥ ಸಾಯುವವನಿಗೆ ಚೊಚ್ಚಲತನದಿಂದ ಪ್ರಯೋಜನವೇನು ಅಂದನು.
[33] ಆಗ ಯಾಕೋಬನು ಮೊದಲು ಪ್ರಮಾಣಮಾಡು ಅಂದಾಗ ಏಸಾವನು ಪ್ರಮಾಣಮಾಡಿ ಅವನಿಗೆ ತನ್ನ ಚೊಚ್ಚಲತನದ ಹಕ್ಕನ್ನು ಕೊಟ್ಟುಬಿಟ್ಟನು.
[34] ಆಗ ಯಾಕೋಬನು ಏಸಾವನಿಗೆ ರೊಟ್ಟಿಯನ್ನೂ ಅಲಸಂದಿ ಗುಗ್ಗರಿಯ ಪಲ್ಯವನ್ನು ಕೊಟ್ಟನು. ಏಸಾವನು ತಿಂದು ಕುಡಿದು ಎದ್ದು ಹೋದನು. ಹೀಗೆ ಅವನು ತನ್ನ ಚೊಚ್ಚಲತನದ ಹಕ್ಕನ್ನು ತಾತ್ಸಾರ ಮಾಡಿ ಬಿಟ್ಟನು.