Skip to content
Opens in a new window
Listen to this chapter • 7:18

[1] ಆಗ ಯೋಸೇಫನು ಫರೋಹನ ಬಳಿಗೆ ಹೋಗಿ, “ನನ್ನ ತಂದೆಯೂ, ಅಣ್ಣತಮ್ಮಂದಿರೂ, ಕುರಿದನಗಳನ್ನೂ, ಸಮಸ್ತ ಆಸ್ತಿಯನ್ನೂ ತೆಗೆದುಕೊಂಡು ಕಾನಾನ್‌ ದೇಶದಿಂದ ಬಂದು ಗೋಷೆನ್ ಸೀಮೆಯಲ್ಲಿ ಉಳಿದುಕೊಂಡಿದ್ದಾರೆ” ಎಂದನು.

[2] ಅಲ್ಲದೆ ತನ್ನ ಅಣ್ಣತಮ್ಮಂದಿರಲ್ಲಿ ಐದು ಮಂದಿಯನ್ನು ಕರೆದುಕೊಂಡು ಬಂದು ಫರೋಹನ ಸನ್ನಿಧಿಯಲ್ಲಿ ನಿಲ್ಲಿಸಿದನು.

[3] ಫರೋಹನು ಯೋಸೇಫನ ಅಣ್ಣತಮ್ಮಂದಿರಿಗೆ, “ನಿಮ್ಮ ಕಸುಬು ಏನು?” ಎಂದು ಅವರನ್ನು ಕೇಳಲು ಅವರು, “ನಿನ್ನ ಸೇವಕರಾದ ನಾವು ನಮ್ಮ ಪೂರ್ವಿಕರ ಹಾಗೆ ಕುರಿಕಾಯುವವರು” ಎಂದು ಹೇಳಿದರು.

[4] ಅದಲ್ಲದೆ ಅವರು ಫರೋಹನಿಗೆ, “ಕಾನಾನ್‌ ದೇಶದಲ್ಲಿ ಬರಗಾಲವು ಘೋರವಾಗಿರುವುದರಿಂದ ನಿನ್ನ ಸೇವಕರ ಕುರಿದನಗಳಿಗೆ ಮೇವು ಸಿಕ್ಕಲಿಲ್ಲ; ಆದುದರಿಂದ ಈ ದೇಶದಲ್ಲಿ ಸ್ವಲ್ಪಕಾಲ ಇರಬೇಕೆಂದು ಬಂದಿದ್ದೇವೆ. ನಾವು ಗೋಷೆನ್ ಸೀಮೆಯಲ್ಲಿ ವಾಸಮಾಡುವಂತೆ ಅಪ್ಪಣೆಯಾಗಬೇಕು” ಎಂದು ಬೇಡಿಕೊಂಡರು.

[5] ಆಗ ಫರೋಹನು ಯೋಸೇಫನಿಗೆ, “ನಿನ್ನ ತಂದೆಯೂ, ಅಣ್ಣತಮ್ಮಂದಿರೂ ನಿನ್ನ ಬಳಿಗೆ ಬಂದಿದ್ದಾರೆ;

[6] ಐಗುಪ್ತ ದೇಶವು ನಿನ್ನ ಮುಂದೆ ಇದೆ, ಅದರೊಳಗೆ ಉತ್ತಮ ಭಾಗದಲ್ಲಿ ನಿನ್ನ ತಂದೆ, ನಿನ್ನ ಅಣ್ಣತಮ್ಮಂದಿರು ವಾಸಮಾಡುವಂತೆ ಮಾಡು. ಅವರು ಗೋಷೆನ್ ಸೀಮೆಯಲ್ಲಿ ವಾಸಮಾಡಲಿ; ಅವರಲ್ಲಿ ಯಾರಾದರೂ ಸಮರ್ಥರೆಂದು ತಿಳಿದರೆ ಅವರನ್ನು ನನ್ನ ಕುರಿದನ ಮಂದೆಗಳ ಮೇಲ್ವಿಚಾರಣೆಗಾಗಿ ನೇಮಿಸು” ಎಂದು ಹೇಳಿದನು.

[7] ಯೋಸೇಫನು ತನ್ನ ತಂದೆಯಾದ ಯಾಕೋಬನನ್ನು ಕರೆದುಕೊಂಡು ಫರೋಹನ ಸನ್ನಿಧಿಯಲ್ಲಿ ನಿಲ್ಲಿಸಲು, ಯಾಕೋಬನು ಫರೋಹನನ್ನು ಆಶೀರ್ವದಿಸಿದನು.

[8] ಫರೋಹನು, “ನಿನಗೆ ಈಗ ಎಷ್ಟು ವರ್ಷ?” ಎಂದು ಕೇಳಿದನು.

[9] ಯಾಕೋಬನು ಫರೋಹನಿಗೆ, “ನನ್ನ ಇಹಲೋಕ ಪ್ರಯಾಣದ ಕಾಲವು ನೂರಮೂವತ್ತು ವರ್ಷಗಳು. ನಾನು ಜೀವಿಸಿರುವ ಕಾಲವು ಸ್ವಲ್ಪವಾಗಿಯೂ ಹಾಗೂ ದುಃಖಕರವಾಗಿಯೂ ಇತ್ತು; ಆದರೂ ನನ್ನ ಪೂರ್ವಿಕರು ಜೀವಿಸಿದಷ್ಟು ವರ್ಷಗಳು ನನಗಾಗಿಲ್ಲ” ಎಂದು ಹೇಳಿದನು.

[10] ಪುನಃ ಯಾಕೋಬನು ಫರೋಹನನ್ನು ಆಶೀರ್ವದಿಸಿ ಅವನ ಸನ್ನಿಧಿಯಿಂದ ಹೊರಟುಹೋದನು.

[11] ಫರೋಹನ ಅಪ್ಪಣೆಯ ಮೇರೆಗೆ ಯೋಸೇಫನು ತನ್ನ ತಂದೆಗೂ ಅಣ್ಣತಮ್ಮಂದಿರಿಗೂ ಐಗುಪ್ತ ದೇಶದಲ್ಲಿ ವಾಸಮಾಡಲು ಉತ್ತಮವಾಗಿದ್ದ ರಮ್ಸೇಸ್ ಪ್ರದೇಶದಲ್ಲಿ ಸ್ವತ್ತು ಕೊಟ್ಟನು.

[12] ಯೋಸೇಫನು ತನ್ನ ತಂದೆಗೂ, ಅಣ್ಣತಮ್ಮಂದಿರಿಗೂ, ತಂದೆಯ ಮನೆಯವರೆಲ್ಲರಿಗೂ ಅವರವರ ಕುಟುಂಬಗಳಿಗೆ ಸೇರಿದವರ ಲೆಕ್ಕದ ಪ್ರಕಾರ ಆಹಾರವನ್ನು ಕೊಟ್ಟು ಅವರನ್ನು ಸಂರಕ್ಷಿಸಿದನು.

[13] ಬರವು ಬಹು ಘೋರವಾಗಿದ್ದುದರಿಂದ ದೇಶದ ಯಾವ ಭಾಗದಲ್ಲಿಯೂ ಆಹಾರ ಸಿಕ್ಕುತ್ತಿರಲಿಲ್ಲ. ಆ ಬರದ ನಿಮಿತ್ತ ಐಗುಪ್ತ ದೇಶವು ಹಾಗೂ ಕಾನಾನ್‌ ದೇಶವು ಕ್ಷಾಮದಿಂದ ಬರಡಾದವು.

[14] ಯೋಸೇಫನು ಜನರಿಗೆ ಧಾನ್ಯವನ್ನು ಮಾರುತ್ತಾ ಐಗುಪ್ತ ದೇಶದಲ್ಲಿಯೂ, ಕಾನಾನ್‌ ದೇಶದಲ್ಲಿಯೂ ಇದ್ದ ಎಲ್ಲಾ ಹಣವನ್ನು ಕೂಡಿಸಿಕೊಂಡು ಫರೋಹನ ಬೊಕ್ಕಸದೊಳಗೆ ತುಂಬಿದನು.

[15] ಐಗುಪ್ತ ದೇಶದಲ್ಲಿಯೂ, ಕಾನಾನ್‌ ದೇಶದಲ್ಲಿಯೂ ಇದ್ದ ಹಣವೆಲ್ಲಾ ಮುಗಿದುಹೋದ ನಂತರ ಐಗುಪ್ತರೆಲ್ಲರೂ ಯೋಸೇಫನ ಬಳಿಗೆ ಬಂದು, “ನಮ್ಮ ಹಣವೆಲ್ಲಾ ಮುಗಿದುಹೋಯಿತು; ನೀನು ನಮಗೆ ಆಹಾರವನ್ನು ಕೊಡಬೇಕು; ನಾವು ನಿನ್ನ ಮುಂದೆ ಸತ್ತರೆ ಪ್ರಯೋಜನವೇನು?” ಎಂದು ಹೇಳಿದರು.

[16] ಅದಕ್ಕೆ ಯೋಸೇಫನು, “ನಿಮ್ಮ ಕುರಿದನಗಳನ್ನು ತೆಗೆದುಕೊಂಡು ಬನ್ನಿರಿ; ಹಣವಿಲ್ಲದಿದ್ದರೆ ಕುರಿದನಗಳನ್ನು ತೆಗೆದುಕೊಂಡು, ಧಾನ್ಯವನ್ನು ನಿಮಗೆ ಕೊಡುತ್ತೇನೆ” ಎಂದನು.

[17] ಅವರು ತಮ್ಮ ಕುರಿದನಗಳನ್ನು ಯೋಸೇಫನ ಬಳಿಗೆ ತೆಗೆದುಕೊಂಡು ಬರಲು, ಅವನು ಅವರ ಕುದುರೆಗಳನ್ನೂ, ಕುರಿದನಗಳನ್ನೂ, ಕತ್ತೆಗಳನ್ನೂ ತೆಗೆದುಕೊಂಡು ಅವರಿಗೆ ಧಾನ್ಯವನ್ನು ಕೊಟ್ಟನು. ಆ ವರ್ಷದಲ್ಲಿ ಅವರ ಕುರಿದನಗಳನ್ನೆಲ್ಲಾ ತೆಗೆದುಕೊಂಡು ಧಾನ್ಯವನ್ನು ಕೊಟ್ಟು ಅವರನ್ನು ಸಂರಕ್ಷಿಸಿದನು.

[18] ಆ ವರ್ಷ ಕಳೆದ ನಂತರ ಅವರು ಎರಡನೆಯ ವರ್ಷದಲ್ಲಿ ಅವನ ಬಳಿಗೆ ಬಂದು, “ನಮ್ಮ ಹಣವೆಲ್ಲಾ ಮುಗಿದು ಹೋಗಿದೆ; ನಮ್ಮ ಕುರಿದನಗಳು ಸ್ವಾಮಿಯ ವಶವಾದವು; ಹೀಗಿರುವುದರಿಂದ ನಮ್ಮ ಭೂಮಿಯೂ, ನಮ್ಮ ದೇಹಗಳೂ ಹೊರತು ಬೇರೆ ಇನ್ನೇನೂ ಉಳಿದಿಲ್ಲವೆಂದು ನಮ್ಮ ಸ್ವಾಮಿಗೆ ಮರೆಮಾಡದೆ ತಿಳಿಸುತ್ತೇವೆ” ಎಂದರು.

[19] “ನಿನ್ನ ಕಣ್ಣೆದುರಿಗೆ ನಾವು ಏಕೆ ಸಾಯಬೇಕು; ನಮ್ಮ ಭೂಮಿಯು ಏಕೆ ಹಾಳಾಗಬೇಕು; ನಮ್ಮನ್ನೂ ನಮ್ಮ ಭೂಮಿಯನ್ನೂ ತೆಗೆದುಕೊಂಡು ಧಾನ್ಯವನ್ನು ಕೊಡು; ನಾವು ನಮ್ಮ ಭೂಮಿಯನ್ನು ಫರೋಹನಿಗೆ ಕೊಟ್ಟುಬಿಟ್ಟು ಅವನಿಗೆ ಗುಲಾಮರಾಗುವೆವು. ನಾವು ಸಾಯದೆ ಬದುಕಬೇಕಾದರೆ ಮತ್ತು ಭೂಮಿಯು ಹಾಳಾಗದ ಹಾಗೆ ನೀನು ನಮಗೆ ಬಿತ್ತನೆ ಬೀಜವನ್ನು ಕೊಡಬೇಕು” ಎಂದು ಹೇಳಿದರು.

[20] ಹೀಗೆ ಯೋಸೇಫನು ಐಗುಪ್ತರಿಂದ ಎಲ್ಲಾ ಸಾಗುವಳಿಯ ಭೂಮಿಯನ್ನು ಫರೋಹನಿಗಾಗಿ ಕೊಂಡುಕೊಂಡನು. ಪ್ರತಿಯೊಬ್ಬ ಐಗುಪ್ತನ್ನು ತನ್ನ ಹೊಲಗದ್ದೆಗಳನ್ನು ಮಾರಿಬಿಟ್ಟನು. ಬರವು ಐಗುಪ್ತದಲ್ಲಿ ಘೋರವಾಗಿದ್ದದರಿಂದ ಅವರೆಲ್ಲರ ಭೂಮಿಯು ಫರೋಹನ ವಶವಾಯಿತು.

[21] ಯೋಸೇಫನು ಐಗುಪ್ತ ದೇಶದ ಒಂದು ಮೇರೆಯಿಂದ ಮತ್ತೊಂದು ಮೇರೆಯವರೆಗೂ ಪ್ರಜೆಗಳನ್ನು ದಾಸರನ್ನಾಗಿ ಮಾಡಿದನು.

[22] ಪುರೋಹಿತರ ಭೂಮಿಯನ್ನು ಮಾತ್ರ ಅವನು ಕೊಂಡುಕೊಳ್ಳಲಿಲ್ಲ. ಪುರೋಹಿತರು ಫರೋಹನ ಕಡೆಯಿಂದ ಭತ್ಯೆ ಸಿಕ್ಕಿದ್ದರಿಂದ ಅವರು ಫರೋಹನು ಕೊಟ್ಟ ಭತ್ಯೆದಿಂದಲೇ ಜೀವನ ಮಾಡುತ್ತಿದ್ದರು; ಆದುದರಿಂದ ತಮ್ಮ ಭೂಮಿಯನ್ನು ಮಾರಲಿಲ್ಲ.

[23] ಯೋಸೇಫನು ಪ್ರಜೆಗಳಿಗೆ, “ನಾನು ಈ ಹೊತ್ತು ನಿಮ್ಮನ್ನೂ ನಿಮ್ಮ ಭೂಮಿಯನ್ನೂ ಫರೋಹನಿಗೋಸ್ಕರ ಕೊಂಡುಕೊಂಡಿದ್ದೇನೆ ಎಂದು ತಿಳಿದುಕೊಳ್ಳಿರಿ. ಇಗೋ, ಬಿತ್ತನೆಗಾಗಿ ನಿಮಗೆ ಬೀಜವನ್ನು ಕೊಟ್ಟಿದ್ದೇನೆ; ಭೂಮಿಯನ್ನು ಬಿತ್ತಿರಿ.

[24] ಪೈರು ಕೊಯ್ಯುವ ಕಾಲದಲ್ಲಿ ಐದರಲ್ಲೊಂದು ಪಾಲು ಫರೋಹನಿಗೆ ಸಲ್ಲಬೇಕು; ಮಿಕ್ಕ ನಾಲ್ಕು ಪಾಲು ನಿಮ್ಮದು; ಅದು ಬೀಜಕ್ಕೆ ಆಗುತ್ತದೆ ಮತ್ತು ನಿಮಗೂ ನಿಮ್ಮ ಮನೆಯವರಿಗೂ ನಿಮ್ಮ ಕುಟುಂಬಕ್ಕೆ ಸೇರಿದವರೆಲ್ಲರಿಗೂ ಆಹಾರಕ್ಕಾಗುತ್ತದೆ” ಎಂದು ಹೇಳಿದನು.

[25] ಅದಕ್ಕೆ ಅವರು, “ನಮ್ಮ ಪ್ರಾಣಗಳನ್ನು ಉಳಿಸಿದ್ದೀ; ನಮ್ಮ ಸ್ವಾಮಿಯ ದಯೆ ನಿಮ್ಮ ಮೇಲಿರಲಿ; ನಾವು ಫರೋಹನಿಗೆ ಗುಲಾಮರಾಗಿದ್ದೇವೆ” ಎಂದರು.

[26] ಬೆಳೆಯಲ್ಲಿ ಐದನೆಯ ಒಂದು ಪಾಲು ಫರೋಹನಿಗೆ ಸಲ್ಲಬೇಕೆಂಬುದನ್ನು ಯೋಸೇಫನು ಐಗುಪ್ತ ದೇಶದಲ್ಲಿ ಕಟ್ಟಳೆಯಾಗಿ ಮಾಡಿದನು. ಈ ದಿನದ ವರೆಗೂ ಅದು ಹಾಗೆಯೇ ಇದೆ. ಪುರೋಹಿತರ ಭೂಮಿ ಮಾತ್ರ ಫರೋಹನಿಗೆ ಸ್ವಾಧೀನವಾಗಲಿಲ್ಲ.

[27] ಇಸ್ರಾಯೇಲರು ಐಗುಪ್ತ ದೇಶಕ್ಕೆ ಸೇರಿರುವ ಗೋಷೆನ್ ಸೀಮೆಯಲ್ಲಿ ವಾಸಮಾಡಿದರು. ಅದರಲ್ಲಿ ಅವರು ಆಸ್ತಿಯನ್ನು ಸಂಪಾದಿಸಿ ಬಹುಸಂತಾನವಾಗಿ ಬಹಳವಾಗಿ ಹೆಚ್ಚಿದರು.

[28] ಯಾಕೋಬನು ಐಗುಪ್ತ ದೇಶದಲ್ಲಿ ಹದಿನೇಳು ವರ್ಷ ಬದುಕಿದನು. ಅವನ ಜೀವಿತ ಕಾಲದ ದಿನಗಳು ನೂರ ನಲ್ವತ್ತೇಳು ವರ್ಷಗಳು.

[29] ಇಸ್ರಾಯೇಲನಿಗೆ ಮರಣಕಾಲ ಸಮೀಪಿಸಿದಾಗ ಅವನು ತನ್ನ ಮಗನಾದ ಯೋಸೇಫನನ್ನು ಕರೆಯಿಸಿ, “ಈಗ ನಿನ್ನ ದೃಷ್ಟಿಯಲ್ಲಿ ನಾನು ದಯೆ ಹೊಂದ್ದಿದೆಯಾದ್ದರೆ ಪದ್ದತಿಯ ಪ್ರಕಾರ ನಿನ್ನ ಕೈಯನ್ನು ನನ್ನ ತೊಡೆಯ ಕೆಳಗೆ ಇಟ್ಟು ನನಗೆ ಉಪಕಾರವನ್ನು ನಂಬಿಗಸ್ತಿಕೆಯಿಂದ ತೋರಿಸು. ನನ್ನನ್ನು ಐಗುಪ್ತದೇಶದಲ್ಲಿ ಸಮಾಧಿ ಮಾಡಬೇಡ.

[30] ನಾನು ಮರಣ ಹೊಂದಿ ನನ್ನ ಪೂರ್ವಿಕರ ಬಳಿಗೆ ಸೇರಿದಾಗ ನನ್ನ ಮೃತ ದೇಹವನ್ನು ಐಗುಪ್ತ ದೇಶದಿಂದ ತೆಗೆದುಕೊಂಡು ಹೋಗಿ ಆ ಪೂರ್ವಿಕರ ಸ್ಮಶಾನ ಭೂಮಿಯಲ್ಲಿಯೇ ಸಮಾಧಿ ಮಾಡಬೇಕು. ಹಾಗೆ ಮಾಡುತ್ತೇನೆಂಬುದಾಗಿ ನನಗೆ ಪ್ರಮಾಣ ಮಾಡಬೇಕು” ಎಂದು ಹೇಳಲು, ಅವನು, “ನೀನು ಹೇಳಿದಂತೆಯೇ ಮಾಡುತ್ತೇನೆ” ಎಂದನು.

[31] ಇಸ್ರಾಯೇಲನು, “ಪ್ರಮಾಣಮಾಡು” ಎನ್ನಲು ಅವನು ಪ್ರಮಾಣ ಮಾಡಿದನು. ಆಗ ಇಸ್ರಾಯೇಲನು ತನ್ನ ಊರುಕೋಲಿನ ಮೇಲೆ ಬಾಗಿ ದೇವರಿಗೆ ನಮಸ್ಕಾರ ಮಾಡಿದನು.

ಆದಿಕಾಂಡ — Chapters