Skip to content
Opens in a new window
Listen to this chapter • 4:20

[1] ಈ ಸಂಗತಿಗಳಾದ ಮೇಲೆ ಐಗುಪ್ತ ದೇಶದ ಅರಸನಾದ ಫರೋಹನಿಗೆ ಪಾನಗಳನ್ನು ಕೊಡುವವನೂ, ಆಹಾರಗಳನ್ನು ಮಾಡಿ ಕೊಡುವವನೂ ತಮ್ಮ ಅರಸನಿಗೆ ವಿರೋಧವಾಗಿ ಅಪರಾಧ ಮಾಡಿದರು.

[2] ಫರೋಹನು ಆ ಇಬ್ಬರು ಉದ್ಯೋಗಸ್ಥರ ಮೇಲೆ, ಅಂದರೆ ಪಾನದಾಯಕರಲ್ಲಿ ಮುಖ್ಯಸ್ಥನ ಮೇಲೆಯೂ ಅಡಿಗೆ ಭಟ್ಟರಲ್ಲಿ ಮುಖ್ಯಸ್ಥನ ಮೇಲೆಯೂ ಕೋಪಿಸಿಕೊಂಡು,

[3] ಅವರನ್ನು ಮೈಗಾವಲಿನವರ ಅಧಿಪತಿಯ ಮನೆಯೊಳಗೆ ಕಾವಲಲ್ಲಿರಿಸಿದನು. ಅದು ಯೋಸೇಫನು ಬಂಧಿಯಾಗಿದ್ದ ಸೆರೆಮನೆಯಾಗಿತ್ತು

[4] ಸೆರೆಮನೆಯ ಅಧಿಪತಿಯು ಯೋಸೇಫನನ್ನು ಅವರ ಉಪಚಾರಕ್ಕೆ ನೇಮಿಸಿದ್ದರಿಂದ ಯೋಸೇಫನು ಅವರಿಗೆ ಸೇವೆ ಮಾಡುವವನಾದನು. ಹೀಗೆ ಅವರು ಕೆಲವು ಕಾಲ ಸೆರೆಯಲ್ಲಿದ್ದರು.

[5] ಐಗುಪ್ತ ಅರಸನು ಸೆರೆಯಲ್ಲಿ ಹಾಕಿಸಿದ್ದ ಪಾನದಾಯಕನಿಗೂ, ಅಡಿಗೆ ಭಟ್ಟನಿಗೂ, ಒಂದೇ ರಾತ್ರಿ ಕನಸುಬಿತ್ತು. ಅವರವರ ಕನಸಿಗೆ ಬೇರೆ ಬೇರೆ ಅರ್ಥವಿತ್ತು.

[6] ಬೆಳಿಗ್ಗೆ ಯೋಸೇಫನು ಅವರ ಬಳಿಗೆ ಬಂದಾಗ ಅವರು ಬಹು ಚಿಂತೆಯುಳ್ಳವರಾಗಿ ಕಾಣಿಸಿದರು.

[7] ಅದನ್ನು ಅವನು ನೋಡಿ, “ನಿಮ್ಮ ಮುಖವು ಈ ಹೊತ್ತು ಏಕೆ ಕಳೆಗುಂದಿದೆ?” ಎಂದು ತನ್ನ ದಣಿಯ ಮನೆಯೊಳಗೆ ತನ್ನೊಂದಿಗೆ ಕಾವಲಲ್ಲಿದ್ದ ಫರೋಹನ ಉದ್ಯೋಗಸ್ಥರನ್ನು ಕೇಳಿದನು.

[8] ಅವರು ಅವನಿಗೆ, “ನಮಗೆ ಕನಸುಬಿತ್ತು. ಅದರ ಅರ್ಥವನ್ನು ಹೇಳುವವರು ಯಾರೂ ಇಲ್ಲ” ಎಂದು ಹೇಳಲು ಯೋಸೇಫನು ಅವರಿಗೆ, “ಕನಸುಗಳ ಅರ್ಥವು ದೇವರಿಂದ ದೊರಕಬಹುದಲ್ಲವೇ? ದಯಮಾಡಿ ನಿಮ್ಮ ಕನಸನ್ನು ನನಗೆ ತಿಳಿಸಿರಿ” ಎಂದು ಹೇಳಿದನು.

[9] ಆಗ ಪಾನದಾಯಕರಲ್ಲಿ ಮುಖ್ಯಸ್ಥನು ಯೋಸೇಫನಿಗೆ, “ನನ್ನ ಕನಸಿನಲ್ಲಿ ಒಂದು ದ್ರಾಕ್ಷಾಲತೆಯನ್ನು ನನ್ನ ಮುಂದೆ ಕಂಡೆನು.

[10] ಅದಕ್ಕೆ ಮೂರು ದ್ರಾಕ್ಷಾಲತೆಯ ಕೊಂಬೆಗಳಿದ್ದವು. ಅದು ಚಿಗುರುತ್ತಲೇ ಹೂವುಗಳನ್ನು ಬಿಟ್ಟಿತು; ಆ ಹೂವುಗಳು ಗೊಂಚಲುಗಳಾಗಿ ಹಣ್ಣಾದವು.

[11] ಫರೋಹನ ಪಾನಪಾತ್ರೆಯು ನನ್ನ ಕೈಯಲ್ಲಿದ್ದದರಿಂದ ನಾನು ಆ ದ್ರಾಕ್ಷಿಯ ಗೊಂಚಲುಗಳನ್ನು ಕೊಯ್ದು ಪಾತ್ರೆಯಲ್ಲಿ ಹಿಂಡಿ ಪಾತ್ರೆಯನ್ನು ಫರೋಹನ ಕೈಗೆ ಒಪ್ಪಿಸಿದೆನು” ಎಂದು ಹೇಳಿದನು.

[12] ಅದಕ್ಕೆ ಯೋಸೇಫನು, “ಆ ಕನಸಿನ ಅರ್ಥವೇನೆಂದರೆ, ಆ ಮೂರು ದ್ರಾಕ್ಷಾಲತೆಯ ಕೊಂಬೆಗಳೇ ಮೂರು ದಿನಗಳು.

[13] ಈ ಹೊತ್ತಿಗೆ ಇನ್ನು ಮೂರು ದಿನಗಳಾದ ಮೇಲೆ ಫರೋಹನು ನಿನ್ನನ್ನು ಮೇಲಕ್ಕೆ ಎತ್ತಿ, ನಿನ್ನ ಉದ್ಯೋಗಕ್ಕೆ ಪುನಃ ನಿನ್ನನ್ನು ನೇಮಿಸುವನು. ನೀನು ಮೊದಲು ಫರೋಹನ ಪಾನದಾಯಕನಾಗಿದ್ದು ಅವನ ಕೈಗೆ ಪಾನಪಾತ್ರೆಯನ್ನು ಒಪ್ಪಿಸುತ್ತಿದ್ದಂತೆಯೇ ಮುಂದೆಯೂ ಒಪ್ಪಿಸುವಿ.

[14] ಆದರೆ ನೀನು ಸುಖದಿಂದಿರುವಾಗ ನನ್ನನ್ನು ಜ್ಞಾಪಕಮಾಡಿಕೊಂಡು ನನಗೆ ದಯೆ ತೋರಿಸಿ ಫರೋಹನಿಗೆ ನನ್ನ ಸಂಗತಿಯನ್ನು ತಿಳಿಸಿ ನನ್ನನ್ನು ಈ ಸೆರೆಯಿಂದ ಬಿಡಿಸಬೇಕು.

[15] ಏಕೆಂದರೆ ನಾನು ಇಬ್ರಿಯ ದೇಶದವನು. ಕೆಲವರು ನನ್ನನ್ನು ಕದ್ದು ಈ ದೇಶಕ್ಕೆ ತಂದರು. ಇಲ್ಲಿಯೂ ನಾನು ಯಾವ ತಪ್ಪು ಮಾಡದೆ ಸೆರೆಯಲ್ಲಿ ಬಿದ್ದಿರುವೆನು” ಅಂದನು.

[16] ಅವನು ಹೇಳಿದ ಅರ್ಥವು ಶುಭಕರವಾದದ್ದೆಂದು ಅಡಿಗೆಭಟ್ಟರಲ್ಲಿ ಮುಖ್ಯಸ್ಥನು ತಿಳಿದು ಯೋಸೇಫನಿಗೆ, ನಾನೂ ಕಂಡ ಕನಸನ್ನು ಹೇಳುತ್ತೇನೆ ಕೇಳು, “ನನಗೆ ಬಿದ್ದ ಕನಸಿನಲ್ಲಿ ಸೊಗಸಾದ ರೊಟ್ಟಿ ಪದಾರ್ಥಗಳು ತುಂಬಿದ್ದ ಮೂರು ಪುಟ್ಟಿಗಳು ನನ್ನ ತಲೆಯ ಮೇಲಿದ್ದವು.

[17] ಮೇಲಿನ ಪುಟ್ಟಿಯಲ್ಲಿ ಫರೋಹನಿಗೋಸ್ಕರ ಎಲ್ಲಾ ವಿಧವಾದ ರೊಟ್ಟಿ ಪದಾರ್ಥಗಳು ಇದ್ದವು. ಪಕ್ಷಿಗಳು ಬಂದು ಅವುಗಳನ್ನು ನನ್ನ ತಲೆಯ ಮೇಲಿದ್ದ ಪುಟ್ಟಿಯೊಳಗಿಂದಲೇ ತಿಂದುಹಾಕಿದವು” ಎಂದು ಹೇಳಿದನು.

[18] ಅದಕ್ಕೆ ಯೋಸೇಫನು, “ನಿನ್ನ ಕನಸಿನ ಅರ್ಥವೇನೆಂದರೆ, ಆ ಮೂರು ಪುಟ್ಟಿಗಳೇ ಮೂರು ದಿನಗಳು.

[19] ಈ ಹೊತ್ತಿಗೆ ಮೂರು ದಿನಗಳೊಳಗೆ ಫರೋಹನು ನಿನ್ನ ತಲೆಯನ್ನು ತೆಗೆಸುವನು, ನಿನ್ನನ್ನು ಮರಕ್ಕೆ ತೂಗು ಹಾಕಿಸುವನು, ಪಕ್ಷಿಗಳು ಬಂದು ನಿನ್ನ ಮಾಂಸವನ್ನು ತಿಂದುಬಿಡುವವು” ಎಂದನು.

[20] ಮೂರನೆಯ ದಿನದಲ್ಲಿ ಫರೋಹನ ಜನ್ಮ ದಿನವಾದುದರಿಂದ ಅವನು ತನ್ನ ಸೇವಕರೆಲ್ಲರಿಗೆ ಔತಣವನ್ನು ಮಾಡಿಸಿ ಮುಖ್ಯಪಾನದಾಯಕನನ್ನೂ ಮತ್ತು ಮುಖ್ಯ ಅಡಿಗೆಭಟ್ಟನನ್ನು ಬಿಡಿಸಿ ಸೇವಕರ ಮಧ್ಯದಲ್ಲಿ ನಿಲ್ಲಿಸಿದನು.

[21] ಪಾನದಾಯಕರ ಮುಖ್ಯಸ್ಥನನ್ನು ಪುನಃ ಅವನ ಉದ್ಯೋಗಕ್ಕೆ ನೇಮಿಸಿದನು. ಅವನು ಪಾನ ಪಾತ್ರೆಯನ್ನು ಫರೋಹನ ಕೈಗೆ ಕೊಡುವವನಾದನು.

[22] ಆದರೆ ಮುಖ್ಯ ಅಡಿಗೆಭಟ್ಟನನ್ನು ಫರೋಹನು ಗಲ್ಲಿಗೆ ಹಾಕಿಸಿದನು. ಹೀಗೆ ಯೋಸೇಫನು ಹೇಳಿದಂತೆಯೇ ಆಯಿತು.

[23] ಆದಾಗ್ಯೂ ಮುಖ್ಯಪಾನದಾಯಕನು ಯೋಸೇಫನನ್ನು ನೆನಪುಮಾಡಿಕೊಳ್ಳದೆ ಅವನನ್ನು ಮರೆತುಬಿಟ್ಟನು.

ಆದಿಕಾಂಡ — Chapters