[1] ತರುವಾಯ ದೇವರು ನೋಹನನ್ನೂ ಅವನ ಸಂಗಡ ನಾವೆಯಲ್ಲಿದ್ದ ಎಲ್ಲಾ ಮೃಗಪಶುಗಳನ್ನೂ ನೆನಪಿಗೆ ತಂದುಕೊಂಡು ಭೂಲೋಕದ ಮೇಲೆ ಗಾಳಿ ಬೀಸುವಂತೆ ಮಾಡಲಾಗಿ ನೀರು ತಗ್ಗಿತು.
[2] ಭೂಮಿಯ ಅಡಿಯಲ್ಲಿದ್ದ ಸಾಗರದ ಸೆಲೆಗಳೂ ಆಕಾಶದ ತೂಬುಗಳೂ ಮುಚ್ಚಿಕೊಂಡವು. ಆಕಾಶದಿಂದ ಸುರಿಯುತ್ತಿದ್ದ ಮಳೆ ನಿಂತು ಹೋಯಿತು. ಭೂಮಿಯ ಮೇಲಿದ್ದ ನೀರು ಕ್ರಮೇಣವಾಗಿ ತಗ್ಗುತ್ತಾ ಬಂತು.
[3] ಹೀಗೆ ನೂರೈವತ್ತು ದಿನಗಳಾದ ಮೇಲೆ ನೀರು ಕಡಿಮೆಯಾಯಿತು.
[4] ಏಳನೆಯ ತಿಂಗಳಿನ ಹದಿನೇಳನೆಯ ದಿನದಲ್ಲಿ ನಾವೆಯು ಅರಾರಾಟ್ ಬೆಟ್ಟದಲ್ಲಿ ನಿಂತಿತು.
[5] ಹತ್ತನೆಯ ತಿಂಗಳಿನವರೆಗೂ ನೀರು ಕಡಿಮೆಯಾಗುತ್ತಾ ಬಂದಿತು. ಹತ್ತನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಬೆಟ್ಟಗಳ ಶಿಖರಗಳು ಕಾಣಿಸಲಾರಂಭಿಸಿದವು.
[6] ನಲ್ವತ್ತು ದಿನಗಳಾದ ಮೇಲೆ ನೋಹನು ತಾನು ಮಾಡಿದ ನಾವೆಯ ಕಿಟಕಿಯನ್ನು ತೆರೆದು ಕಾಗೆಯೊಂದನ್ನು ಹೊರಕ್ಕೆ ಬಿಟ್ಟನು.
[7] ಭೂಮಿಯ ಮೇಲಿದ್ದ ನೀರು ಒಣಗುವ ತನಕ ಆ ಕಾಗೆ ಹೋಗುತ್ತಾ ಬರುತ್ತಾ ಇತ್ತು.
[8] ಹೀಗಿರಲಾಗಿ ನೀರು ಕಡಿಮೆ ಆಯಿತೋ ಇಲ್ಲವೋ ಎಂದು ತಿಳಿದುಕೊಳ್ಳುವುದಕ್ಕೆ ನೋಹನು ಪಾರಿವಾಳವೊಂದನ್ನು ಹೊರಕ್ಕೆ ಬಿಟ್ಟನು.
[9] ಆದರೆ ನೀರು ಭೂಮಿಯ ಮೇಲೆಲ್ಲಾ ಇದ್ದುದರಿಂದ ಪಾರಿವಾಳವು ಕಾಲಿಡುವುದಕ್ಕೆ ಸ್ಥಳ ಕಾಣದೆ ತಿರುಗಿ ನಾವೆಗೆ ಬಂದಿತು. ನೋಹನು ಕೈಚಾಚಿ ಅದನ್ನು ಹಿಡಿದು ನಾವೆಯಲ್ಲಿ ತನ್ನ ಬಳಿಗೆ ತೆಗೆದುಕೊಂಡನು.
[10] ಅವನು ಇನ್ನೂ ಏಳು ದಿನಗಳ ನಂತರ ಪಾರಿವಾಳವನ್ನು ತಿರುಗಿ ಹೊರಕ್ಕೆ ಬಿಟ್ಟನು.
[11] ಸಂಜೆಯಲ್ಲಿ ಆ ಪಾರಿವಾಳವು ಅವನ ಬಳಿಗೆ ಹಿಂತಿರುಗಿ ಬರಲು, ಆಹಾ, ಅದರ ಬಾಯಲ್ಲಿ ಎಣ್ಣೆ ಮರದ ಹೊಸ ಚಿಗುರು ಇತ್ತು. ನೋಹನು ಅದನ್ನು ನೋಡಿ ನೀರು ಭೂಮಿಯ ಮೇಲಿಂದ ಇಳಿದು ಹೋಯಿತೆಂದು ತಿಳಿದುಕೊಂಡನು.
[12] ಮತ್ತೆ ಏಳು ದಿನದ ಮೇಲೆ ಪಾರಿವಾಳವನ್ನು ಬಿಡಲು ಅದು ಅವನ ಬಳಿಗೆ ಹಿಂತಿರುಗಿ ಬರಲೇ ಇಲ್ಲ.
[13] ಆರುನೂರ ಒಂದನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿನದಲ್ಲಿ ಭೂಮಿಯ ಮೇಲಿದ್ದ ನೀರು ಇಳಿದಿತ್ತು. ನೋಹನು ನಾವೆಯ ಗವಾಕ್ಷಿಯನ್ನು ತೆಗೆದು ನೋಡಲಾಗಿ, ಆಹಾ, ಭೂಮಿಯು ಪೂರ್ಣವಾಗಿ ಒಣಗಿತ್ತು.
[14] ಎರಡನೆಯ ತಿಂಗಳಿನ ಇಪ್ಪತ್ತೇಳನೆಯ ದಿನದಲ್ಲಿ ಭೂಮಿ ಒಣಗಿತ್ತು.
[15] ಆಗ ದೇವರು ನೋಹನಿಗೆ,
[16] “ನೀನು, ನಿನ್ನ ಹೆಂಡತಿ, ಮಕ್ಕಳು, ಸೊಸೆಯರ ಸಹಿತವಾಗಿ ನಾವೆಯನ್ನು ಬಿಟ್ಟು ಹೊರಗೆ ಬಾ;
[17] ನಿನ್ನ ಬಳಿಯಲ್ಲಿರುವ ಪಶು, ಪಕ್ಷಿ, ಕ್ರಿಮಿಕೀಟ ಮುಂತಾದ ಎಲ್ಲಾ ಜೀವಿಗಳೂ ಹೊರಗೆ ಬರಲಿ; ಅವುಗಳಿಗೆ ಭೂಮಿಯ ಮೇಲೆ ಬಹು ಸಂತಾನವಾಗಲಿ; ಅವು ಅಭಿವೃದ್ಧಿಯಾಗಿ ಹೆಚ್ಚಲಿ” ಎಂದು ಹೇಳಿದನು.
[18] ನೋಹನು ಹೆಂಡತಿ ಮಕ್ಕಳು ಸೊಸೆಯರು ಸಹಿತವಾಗಿ ಹೊರಗೆ ಬಂದನು.
[19] ಎಲ್ಲಾ ಮೃಗಗಳು, ಪಶು ಪಕ್ಷಿಗಳು, ಕ್ರಿಮಿಕೀಟಗಳ ಸಹಿತವಾಗಿ ತಮ್ಮತಮ್ಮ ಜಾತಿಗನುಸಾರವಾಗಿ ನಾವೆಯಿಂದ ಹೊರಗೆ ಬಂದವು.
[20] ಆಗ ನೋಹನು ಯೆಹೋವನಿಗೋಸ್ಕರ ಯಜ್ಞವೇದಿಯನ್ನು ಕಟ್ಟಿ, ಅದರ ಮೇಲೆ ಶುದ್ಧವಾದ ಪ್ರತಿ ಪಶು ಪಕ್ಷಿಗಳಿಂದ ಆಯ್ದುಕೊಂಡು ಸರ್ವಾಂಗಹೋಮ ಮಾಡಿದನು.
[21] ಅದರ ಸುವಾಸನೆಯು ಯೆಹೋವನಿಗೆ ಗಮಗಮಿಸಲು ಆತನು ಹೃದಯದೊಳಗೆ, “ಮನುಷ್ಯರ ಹೃದಯದ ಆಲೋಚನೆ ಚಿಕ್ಕಂದಿನಿಂದಲೇ ಕೆಟ್ಟದ್ದು, ಆದರೂ ನಾನು ಇನ್ನು ಮೇಲೆ ಅವರ ನಿಮಿತ್ತವಾಗಿ ಭೂಮಿಯನ್ನು ಶಪಿಸುವುದಿಲ್ಲ. ನಾನು ಎಲ್ಲಾ ಜೀವಿಗಳನ್ನೂ ಈಗ ನಾಶಮಾಡಿದಂತೆ ಇನ್ನು ಮೇಲೆ ನಾಶ ಮಾಡುವುದಿಲ್ಲ.
[22] ಭೂಮಿಯು ಇರುವವರೆಗೆ ಬಿತ್ತುವ ಕಾಲವೂ ಕೊಯ್ಯುವ ಕಾಲವೂ ಚಳಿಯೂ, ಮಳೆಯೂ, ಬೇಸಿಗೆ ಕಾಲವೂ, ಹಿಮಕಾಲವೂ, ಹಗಲೂ, ಇರುಳೂ ಇವುಗಳ ಕ್ರಮ ನಿಂತುಹೋಗುವುದಿಲ್ಲ” ಎಂದನು.