Skip to content
Opens in a new window
Listen to this chapter • 4:20

[1] ಹೀಗೆ ಭೂಮಿಯು ಆಕಾಶಗಳು ಅವುಗಳಲ್ಲಿರುವ ಸಮಸ್ತವೂ ನಿರ್ಮಿತವಾದವು.

[2] ದೇವರು ತನ್ನ ಸೃಷ್ಟಿಕಾರ್ಯವನ್ನು ಮುಗಿಸಿಬಿಟ್ಟು ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡನು.

[3] ದೇವರು ತನ್ನ ಸೃಷ್ಟಿ ಕಾರ್ಯವನ್ನು ಮುಗಿಸಿದ ನಂತರ ಏಳನೆಯ ದಿನದಲ್ಲಿ ವಿಶ್ರಮಿಸಿಕೊಂಡಿದ್ದರಿಂದ ಆ ದಿನವನ್ನು ಪರಿಶುದ್ಧ ದಿನವಾಗಿರಲಿ ಎಂದು ಆಶೀರ್ವದಿಸಿದನು.

[4] ಯೆಹೋವನಾದ ದೇವರು ಭೂಮಿಯು ಆಕಾಶಗಳನ್ನು ನಿರ್ಮಾಣ ಮಾಡಿದ ಚರಿತ್ರೆ ಇದೇ.

[5] ಯೆಹೋವನಾದ ದೇವರು ಭೂಮ್ಯಾಕಾಶಗಳನ್ನು ಉಂಟುಮಾಡಿದಾಗ ಯಾವ ವಿಧವಾದ ಗಿಡವೂ ಭೂಮಿಯಲ್ಲಿ ಇರಲಿಲ್ಲ. ಯಾವ ಸಸ್ಯವೂ ಮೊಳೆತಿರಲಿಲ್ಲ. ಏಕೆಂದರೆ ಯೆಹೋವನಾದ ದೇವರು ಭೂಮಿಯ ಮೇಲೆ ಮಳೆಯನ್ನು ಸುರಿಸಿರಲಿಲ್ಲ. ಭೂಮಿಯನ್ನು ವ್ಯವಸಾಯ ಮಾಡುವುದಕ್ಕೆ ಮನುಷ್ಯನೂ ಇರಲಿಲ್ಲ.

[6] ಆದರೂ ಭೂಮಿಯಿಂದ ನೀರಿನ ಬುಗ್ಗೆ ಉಕ್ಕಿ ಮೇಲೆ ಬಂದು ನೆಲವನ್ನೆಲ್ಲಾ ತೋಯಿಸುತ್ತಿದವು.

[7] ಹೀಗಿರಲು ಯೆಹೋವನಾದ ದೇವರು ನೆಲದ ಮಣ್ಣಿನಿಂದ ಮನುಷ್ಯನನ್ನು ಸೃಷ್ಟಿಸಿ ಅವನ ಮೂಗಿನಲ್ಲಿ ಜೀವಶ್ವಾಸವನ್ನು ಊದಿದನು. ಆಗ ಮನುಷ್ಯನು ಬದುಕುವ ಪ್ರಾಣಿಯಾದನು.

[8] ಇದಲ್ಲದೆ ಯೆಹೋವನಾದ ದೇವರು ಮೂಡಣ ದಿಕ್ಕಿನಲ್ಲಿರುವ ಏದೆನ್ ಸೀಮೆಯಲ್ಲಿ ಒಂದು ಉದ್ಯಾನವನವನ್ನು ಸೃಷ್ಟಿಸಿ ತಾನು ಉಂಟುಮಾಡಿದ ಮನುಷ್ಯನನ್ನು ಅದರಲ್ಲಿ ತಂಗುವಂತೆ ಮಾಡಿದನು.

[9] ಆನಂತರ ಯೆಹೋವನಾದ ದೇವರು ನೋಡುವುದಕ್ಕೆ ರಮ್ಯವಾಗಿಯೂ, ತಿನ್ನುವುದಕ್ಕೆ ಉತ್ತಮವಾಗಿಯೂ ಇರುವ ಎಲ್ಲಾ ತರಹದ ಮರಗಳನ್ನು ಆ ಭೂಮಿಯಲ್ಲಿ ಬೆಳೆಯುವಂತೆ ಮಾಡಿದನು. ಅದಲ್ಲದೆ ಆ ವನದ ಮಧ್ಯದಲ್ಲಿ ಜೀವದಾಯಕ ವೃಕ್ಷವನ್ನೂ ಒಳ್ಳೇದರ ಕೆಟ್ಟದ್ದರ ಅರಿವನ್ನು ಹುಟ್ಟಿಸುವ ವೃಕ್ಷವನ್ನು ಬೆಳೆಯಿಸಿದನು.

[10] ಏದೆನ್ ಸೀಮೆಯಲ್ಲಿ ಒಂದು ನದಿ ಹುಟ್ಟಿ ಆ ವನವನ್ನು ತೋಯಿಸುತ್ತಿತು. ಅದು ಅಲ್ಲಿಂದ ನಾಲ್ಕು ಉಪನದಿಗಳಾಗಿ ಕವಲೊಡೆದಿತ್ತು.

[11] ಮೊದಲನೆಯದರ ಹೆಸರು ಪೀಶೋನ್, ಅದು ಬಂಗಾರ ದೊರೆಯುವ ಹವೀಲ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ.

[12] ಆ ಪ್ರದೇಶದ ಬಂಗಾರವು ಅಮೂಲ್ಯವಾದದ್ದು. ಅಲ್ಲಿ ಬದೋಲಖ ಧೂಪವೂ, ಗೋಮೇಧಿಕದ ಅಮೂಲ್ಯ ರತ್ನವು ಸಿಕ್ಕುತ್ತದೆ.

[13] ಎರಡನೆಯ ನದಿಯ ಹೆಸರು ಗೀಹೋನ್, ಅದು ಕೂಷ್ ದೇಶವನ್ನೆಲ್ಲಾ ಸುತ್ತಿ ಹರಿಯುತ್ತದೆ.

[14] ಮೂರನೆಯ ನದಿಯ ಹೆಸರು ಟೈಗ್ರೀಸ್; ಅದು ಅಶ್ಶೂರ್ ದೇಶದ ಪೂರ್ವಕ್ಕೆ ಹರಿಯುವುದು. ನಾಲ್ಕನೆಯದು ಯೂಫ್ರೆಟಿಸ್ ನದಿ.

[15] ಯೆಹೋವನಾದ ದೇವರು ಆ ಮನುಷ್ಯನನ್ನು ಕರೆದುಕೊಂಡು ಹೋಗಿ ಏದೆನ್ ತೋಟವನ್ನು ವ್ಯವಸಾಯ ಮಾಡುವುದಕ್ಕೂ ಕಾಯುವುದಕ್ಕೂ ಅದರಲ್ಲಿ ಇರಿಸಿದನು.

[16] ಇದಲ್ಲದೆ ಯೆಹೋವನಾದ ದೇವರು ಆ ಮನುಷ್ಯನಿಗೆ, “ನೀನು ತೋಟದಲ್ಲಿರುವ ಎಲ್ಲಾ ಮರಗಳ ಹಣ್ಣುಗಳನ್ನು ಯಥೇಚ್ಛವಾಗಿ ತಿನ್ನಬಹುದು.

[17] ಒಳ್ಳೇದರ ಕೆಟ್ಟದ್ದರ ಅರಿವನ್ನು ಹುಟ್ಟಿಸುವ ಈ ಮರದ ಹಣ್ಣನ್ನು ಮಾತ್ರ ತಿನ್ನಬಾರದು. ತಿಂದ ದಿನವೇ ಸತ್ತು ಹೋಗುವೆ” ಎಂದು ಆಜ್ಞಾಪಿಸಿದನು.

[18] ಅನಂತರ ಯೆಹೋವನಾದ ದೇವರು, “ಮನುಷ್ಯನು ಒಂಟಿಯಾಗಿರುವುದು ಒಳ್ಳೆಯದಲ್ಲ. ಅವನಿಗೆ ಸರಿಯಾದ ಸಹಕಾರಿಯನ್ನು ಉಂಟುಮಾಡುವೆನು” ಅಂದನು.

[19] ಯೆಹೋವನು ಎಲ್ಲಾ ಭೂಜಂತುಗಳನ್ನೂ ಆಕಾಶದ ಪಕ್ಷಿಗಳನ್ನೂ, ನೆಲದ ಮಣ್ಣಿನಿಂದ ಸೃಷ್ಟಿಸಿ ಇವುಗಳಿಗೆ ಮನುಷ್ಯನು ಏನೇನು ಹೆಸರಿಡುವನೋ ನೋಡೋಣ ಎಂದು ಅವನ ಬಳಿಗೆ ಬರಮಾಡಿದನು. ಮನುಷ್ಯನು ಒಂದೊಂದು ಪ್ರಾಣಿಗೆ ಯಾವ ಯಾವ ಹೆಸರಿಟ್ಟನೋ ಅದೇ ಅವುಗಳ ಹೆಸರಾಯಿತು.

[20] ಹೀಗೆ ಆದಾಮನು ಎಲ್ಲಾ ಪಶುಗಳಿಗೂ, ಆಕಾಶದ ಪಕ್ಷಿಗಳಿಗೂ, ಕಾಡುಮೃಗಗಳಿಗೂ ಹೆಸರಿಟ್ಟನು. ಆದರೆ ಆ ಮನುಷ್ಯನಿಗೆ ಸರಿಯಾದ ಸಹಕಾರಿ ಸಿಗಲಿಲ್ಲ.

[21] ಹೀಗಿರುವಲ್ಲಿ ಯೆಹೋವನಾದ ದೇವರು ಆ ಮನುಷ್ಯನಿಗೆ ಗಾಢನಿದ್ರೆಯನ್ನು ಬರಮಾಡಿ ಅವನ ಪಕ್ಕೆಯ ಎಲುಬುಗಳಲ್ಲಿ ಒಂದನ್ನು ತೆಗೆದುಕೊಂಡು ಅದರ ಸ್ಥಳವನ್ನು ಮಾಂಸದಿಂದ ತುಂಬಿದನು.

[22] ಯೆಹೋವನು ಮನುಷ್ಯನಿಂದ ತೆಗೆದ ಎಲುಬನ್ನು, ಸ್ತ್ರೀಯನ್ನಾಗಿ ಮಾಡಿ ಆಕೆಯನ್ನು ಅವನ ಬಳಿಗೆ ಕರೆದುಕೊಂಡು ಬಂದನು. ಅವನು ಆಕೆಯನ್ನು ನೋಡಿ,

[23] “ಈಗ ಸರಿ, ಈಕೆಯು ನನ್ನ ಎಲುಬುಗಳಿಂದ ಬಂದ ಎಲುಬು, ನನ್ನ ಮಾಂಸದಿಂದ ಬಂದ ಮಾಂಸವೂ ಆಗಿದ್ದಾಳೆ. ಈಕೆಯು ಮನುಷ್ಯನಿಂದ ಉತ್ಪತ್ತಿಯಾದ ಕಾರಣ ನಾರೀ ಎನ್ನಿಸಿಕೊಳ್ಳುವಳು” ಅಂದನು.

[24] ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು. ಅವರಿಬ್ಬರು ಒಂದೇ ಶರೀರವಾಗಿರುವರು.

[25] ಆ ಮನುಷ್ಯನು ಮತ್ತು ಅವನ ಹೆಂಡತಿ ಬೆತ್ತಲೆಯಾಗಿದ್ದರೂ ನಾಚಿಕೊಳ್ಳಲಿಲ್ಲ.

ಆದಿಕಾಂಡ — Chapters