Skip to content
Opens in a new window
Listen to this chapter • 3:09

[1] ಹೀಗೆ ಅಬ್ರಾಮನು ತನ್ನದನ್ನೆಲ್ಲಾ ತೆಗೆದುಕೊಂಡು ಹೆಂಡತಿಯನ್ನೂ, ಲೋಟನನ್ನೂ ಸಂಗಡ ಕರೆದುಕೊಂಡು ಐಗುಪ್ತದೇಶವನ್ನು ಬಿಟ್ಟು ಕಾನಾನ್ ದೇಶದ ದಕ್ಷಿಣ ಪ್ರಾಂತ್ಯಕ್ಕೆ ಬಂದನು.

[2] ಅಬ್ರಾಮನು ಬಹು ಐಶ್ವರ್ಯವಂತನಾಗಿದ್ದನು; ಅವನಿಗೆ ಪಶುಗಳೂ ಬೆಳ್ಳಿಬಂಗಾರವೂ ಇದ್ದವು.

[3] ಅವನು ದಕ್ಷಿಣ ದೇಶವನ್ನು ಬಿಟ್ಟು ಮುಂದೆ ಪ್ರಯಾಣ ಮಾಡುತ್ತಾ ಬೇತೇಲಿನವರೆಗೆ ಅಂದರೆ ಬೇತೇಲಿಗೂ ಆಯಿ ಎಂಬ ಊರಿಗೂ

[4] ನಡುವೆ ಪೂರ್ವದಲ್ಲಿ ಗುಡಾರ ಹಾಕಿಸಿ ಯಜ್ಞವೇದಿಯನ್ನು ಕಟ್ಟಿದ್ದ ಸ್ಥಳಕ್ಕೆ ಅಬ್ರಾಮನು ಹಿಂತಿರುಗಿ ಬಂದು ಅಲ್ಲಿ ಯೆಹೋವನ ಹೆಸರಿನಲ್ಲಿ ಆರಾಧಿಸಿದನು.

[5] ಅಬ್ರಾಮನ ಜೊತೆಯಲ್ಲಿದ್ದ ಲೋಟನಿಗೂ ಕುರಿ, ಎತ್ತು, ಕುಟುಂಬಗಳು ಇದ್ದವು.

[6] ಆ ಸ್ಥಳವು ಅವರಿಬ್ಬರ ಜೀವನಕ್ಕೆ ಸಾಲದೆ ಹೋಯಿತು.

[7] ಅವರಿಬ್ಬರ ಆಸ್ತಿ ಬಹಳವಾಗಿದ್ದುದರಿಂದ ಅವರು ಒಟ್ಟಿಗೆ ವಾಸವಾಗಿರುವುದು ಅಸಾಧ್ಯವಾಯಿತು. ಇದರಿಂದ ಅಬ್ರಾಮನ ದನ ಕಾಯುವವರಿಗೂ ಲೋಟನ ದನ ಕಾಯುವವರಿಗೂ ಜಗಳವಾಗುತ್ತಿತ್ತು. ಇದಲ್ಲದೆ ಕಾನಾನ್ಯರೂ ಪೆರಿಜೀಯರೂ ಆ ಕಾಲದಲ್ಲಿ ದೇಶದೊಳಗೆ ವಾಸವಾಗಿದ್ದರು.

[8] ಹೀಗಿರಲು ಅಬ್ರಾಮನು ಲೋಟನಿಗೆ, “ನನಗೂ ನಿನಗೂ, ನನ್ನ ದನ ಕಾಯುವವರಿಗೂ ನಿನ್ನ ದನ ಕಾಯುವವರಿಗೂ ಜಗಳವಾಗಬಾರದು; ನಾವು ಸಹೋದರರಲ್ಲವೇ.

[9] ದೇಶವೆಲ್ಲಾ ನಿನ್ನ ಎದುರಿಗೆ ಇದೆ; ದಯವಿಟ್ಟು ನನ್ನನ್ನು ಬಿಟ್ಟು ಪ್ರತ್ಯೇಕವಾಗಿ ಹೋಗು. ನೀನು ಎಡಗಡೆಗೆ ಹೋದರೆ ನಾನು ಬಲಗಡೆಗೆ ಹೋಗುವೆನು; ನೀನು ಬಲಗಡೆಗೆ ಹೋದರೆ ನಾನು ಎಡಗಡೆಗೆ ಹೋಗುವೆನು” ಎಂದು ಹೇಳಿದನು.

[10] ಲೋಟನು ಕಣ್ಣೆತ್ತಿ ನೋಡಲಾಗಿ, ಯೊರ್ದನ್ ಹೊಳೆಯ ಸುತ್ತಲಿನ ಪ್ರದೇಶವು ಚೋಗರಿನವರೆಗೆ ನೀರಾವರಿಯ ಪ್ರದೇಶವೆಂದು ತಿಳಿದುಕೊಂಡನು. ಯೆಹೋವನು ಸೊದೋಮ್ ಗೊಮೋರ ಪಟ್ಟಣಗಳನ್ನು ನಾಶಮಾಡುವುದಕ್ಕಿಂತ ಮೊದಲು ಆ ಸೀಮೆಯು ಯೆಹೋವನ ವನದಂತೆಯೂ, ಐಗುಪ್ತ ದೇಶದಂತೆಯೂ ನೀರಾವರಿಯ ಪ್ರದೇಶವಾಗಿತ್ತು.

[11] ಆದುದರಿಂದ ಲೋಟನು ಯೊರ್ದನ್ ಹೊಳೆಯ ಸುತ್ತಣ ಪ್ರದೇಶವನ್ನು ಆರಿಸಿಕೊಂಡು ಮೂಡಣ ಕಡೆಗೆ ಹೊರಟನು.

[12] ಹೀಗೆ ಅವರಿಬ್ಬರೂ ಪ್ರತ್ಯೇಕವಾದರು. ಅಬ್ರಾಮನು ಕಾನಾನ್ ದೇಶದಲ್ಲಿ ವಾಸಮಾಡಿದನು. ಲೋಟನು ಯೊರ್ದನ್ ಹೊಳೆಯ ಸುತ್ತಣ ಊರುಗಳಲ್ಲಿ ವಾಸ ಮಾಡುತ್ತಾ ಸೊದೋಮಿನ ಸಮೀಪದಲ್ಲಿ ಗುಡಾರ ಹಾಕಿದನು.

[13] ಆದರೆ ಸೊದೋಮ್ ಪಟ್ಟಣದ ಜನರು ಯೆಹೋವನ ದೃಷ್ಟಿಯಲ್ಲಿ ಬಹು ದುಷ್ಟರೂ ಪಾಪಿಷ್ಠರು ಆಗಿದ್ದರು.

[14] ಲೋಟನು ಅಬ್ರಾಮನನ್ನು ಬಿಟ್ಟು ಬೇರೆಯಾದ ನಂತರ ಯೆಹೋವನು ಅಬ್ರಾಮನಿಗೆ, “ನೀನಿರುವ ಸ್ಥಳದಿಂದ ದಕ್ಷಿಣಕ್ಕೂ, ಉತ್ತರಕ್ಕೂ, ಪೂರ್ವಕ್ಕೂ, ಪಶ್ಚಿಮಕ್ಕೂ, ಕಣ್ಣೆತ್ತಿ ನೋಡು.

[15] ನೀನು ನೋಡುವ ಈ ದೇಶವನ್ನೆಲ್ಲಾ ನಿನಗೂ ನಿನ್ನ ಸಂತತಿಗೂ ಶಾಶ್ವತವಾಗಿ ಕೊಡುವೆನು.

[16] ನಿನ್ನ ಸಂತಾನದವರನ್ನು ಭೂಮಿಯ ಧೂಳಿನಷ್ಟು ಅಸಂಖ್ಯವಾಗಿ ಮಾಡುವೆನು. ಭೂಮಿಯಲ್ಲಿರುವ ಧೂಳನ್ನು ಲೆಕ್ಕಮಾಡುವುದಾದರೆ ನಿನ್ನ ಸಂತಾನವನ್ನೂ ಲೆಕ್ಕಿಸಬಹುದು.

[17] ನೀನೆದ್ದು, ಈ ದೇಶದ ಎಲ್ಲಾ ಕಡೆಯಲ್ಲಿಯೂ ತಿರುಗಾಡು; ಇದನ್ನು ನಿನಗೆ ಕೊಡುವೆನು” ಎಂದು ಹೇಳಿದನು.

[18] ತರುವಾಯ ಅಬ್ರಾಮನು ಗುಡಾರವನ್ನು ತೆಗೆದುಕೊಂಡು ಹೆಬ್ರೋನಿನಲ್ಲಿರುವ ಮಮ್ರೆ ಮೋರೆ ಎಂಬ ತೋಪಿಗೆ ಬಂದು ಅಲ್ಲೇ ವಾಸಮಾಡಿಕೊಂಡು, ಯೆಹೋವನಿಗೆ ಯಜ್ಞವೇದಿಯನ್ನು ಕಟ್ಟಿಸಿದನು.

ಆದಿಕಾಂಡ — Chapters