Skip to content
Opens in a new window
Listen to this chapter • 6:05

[1] ಯಾಕೋಬನಿಗೆ ಲೇಯಳಲ್ಲಿ ಹುಟ್ಟಿದ ಮಗಳಾದ ದೀನಳು ಒಂದು ದಿನ ಆ ದೇಶದ ಸ್ತ್ರೀಯರನ್ನು ನೋಡುವುದಕ್ಕೆ ಹೊರಗೆ ಬಂದಳು.

[2] ದೇಶಾಧಿಪತಿಯಾಗಿರುವ ಹಿವ್ವಿಯನಾದ ಹಮೋರನ ಮಗ ಶೆಕೆಮನು ಆಕೆಯನ್ನು ನೋಡಿ ತೆಗೆದುಕೊಂಡು ಹೋಗಿ ಮಾನಭಂಗಪಡಿಸಿದನು.

[3] ಅವನ ಮನಸ್ಸು ಯಾಕೋಬನ ಮಗಳಾದ ದೀನಳ ಮೇಲೆಯೇ ಇತ್ತು. ಆ ಹುಡುಗಿಯನ್ನು ಪ್ರೀತಿಸಿ ಆಕೆಯ ಸಂಗಡ ಮನವೊಲಿಸುವ ಮಾತುಗಳನ್ನಾಡಿದನು.

[4] ಶೆಕೆಮನು ತನ್ನ ತಂದೆಯಾದ ಹಮೋರನಿಗೆ, “ನೀನು ಈ ಹುಡುಗಿಯನ್ನು ನನಗೆ ಮದುವೆಮಾಡಿಸಬೇಕು” ಎಂದು ಕೇಳಿಕೊಂಡನು.

[5] ಯಾಕೋಬನು ತನ್ನ ಮಗಳಾದ ದೀನಳಿಗೆ ಶೆಕೆಮನಿಂದ ಮಾನಭಂಗವಾದ ವರ್ತಮಾನವನ್ನು ಕೇಳಿದಾಗ ಅವನ ಗಂಡುಮಕ್ಕಳು ಅಡವಿಯಲ್ಲಿ ದನಗಳನ್ನು ಕಾಯುತ್ತಿದ್ದರು. ಅವರು ಬರುವ ತನಕ ಅವನು ಸುಮ್ಮನೇ ಇದ್ದನು.

[6] ಅಷ್ಟರಲ್ಲಿ ಶೆಕೆಮನ ತಂದೆಯಾದ ಹಮೋರನು ಯಾಕೋಬನ ಸಂಗಡ ಮಾತನಾಡುವುದಕ್ಕೆ ಬಂದನು.

[7] ಯಾಕೋಬನ ಗಂಡುಮಕ್ಕಳು ತಂಗಿಯ ಸಂಗತಿಯನ್ನು ಕೇಳಿ ಅಡವಿಯಿಂದ ಬಂದಾಗ ವ್ಯಸನಪಟ್ಟು ಬಹಳ ಕೋಪಗೊಂಡರು. ಶೆಕೆಮನು ಯಾಕೋಬನ ಮಗಳ ಮಾನಭಂಗ ಮಾಡಿ ಇಸ್ರಾಯೇಲರೊಳಗೆ ಬಹಳ ಅವಮಾನಕರವಾದ ಕೆಲಸವನ್ನು ಮಾಡಿದನು.

[8] ಹಮೋರನು ಅವರಿಗೆ, “ನನ್ನ ಮಗನಾದ ಶೆಕೆಮನು ನಿಮ್ಮ ಹುಡುಗಿಯನ್ನು ಬಹಳ ಆಶೆಯಿಂದ ಮೋಹಿಸಿದ್ದಾನೆ, ಆಕೆಯನ್ನು ಅವನಿಗೆ ಮದುವೆ ಮಾಡಿಕೊಡಬೇಕು ಎಂದು ನಿಮ್ಮನ್ನು ಕೇಳಿಕೊಳ್ಳುತ್ತೇನೆ.

[9] ಇದಲ್ಲದೆ ನೀವು ನಮ್ಮಲ್ಲೇ ವಾಸವಾಗಿದ್ದು ನಿಮ್ಮ ಹೆಣ್ಣು ಮಕ್ಕಳನ್ನು ನಮಗೆ ಕೊಡುತ್ತಾ ನಮ್ಮ ಹೆಣ್ಣುಮಕ್ಕಳನ್ನು ನೀವು ತೆಗೆದುಕೊಳ್ಳುತ್ತಾ ನಮ್ಮೊಂದಿಗೆ ಬೀಗರಾಗಿರಿ.

[10] ದೇಶವೆಲ್ಲಾ ನಿಮ್ಮ ಮುಂದೆ ಇದೆ ಅಲ್ಲಿ ವಾಸಮಾಡಿಕೊಂಡು ವ್ಯಾಪಾರ ಮಾಡಿ, ಆಸ್ತಿಯನ್ನು ಸಂಪಾದಿಸಿಕೊಳ್ಳಬಹುದು” ಎಂದು ಹೇಳಿದನು.

[11] ಬಳಿಕ ಶೆಕೆಮನು ಆ ಹುಡುಗಿಯ ತಂದೆಗೂ ಅಣ್ಣಂದಿರಿಗೂ, “ನಿಮ್ಮ ದಯೆ ನನ್ನ ಮೇಲೆ ಇರಲಿ, ನೀವು ಹೇಳುವಷ್ಟು ಕೊಡುತ್ತೇನೆ.

[12] ನೀವು ಹೇಳುವ ಮೇರೆಗೆ ಎಷ್ಟಾದರೂ ತೆರವನ್ನೂ ಕಾಣಿಕೆಯನ್ನೂ ಹೆಣ್ಣಿಗಾಗಿ ಕೊಡುತ್ತೇನೆ. ಆದರೆ ಆ ಹುಡುಗಿಯನ್ನು ನನಗೆ ಹೆಂಡತಿಯಾಗಿ ಕೊಡಿರಿ” ಎಂದನು.

[13] ಶೆಕೆಮನು ತಮ್ಮ ತಂಗಿಯಾದ ದೀನಳನ್ನು ಮಾನಭಂಗ ಮಾಡಿದ್ದರಿಂದ ಯಾಕೋಬನ ಮಕ್ಕಳು ಅವನಿಗೂ ಅವನ ತಂದೆಯಾದ ಹಮೋರನಿಗೂ ವಂಚನೆಯ ಉತ್ತರಕೊಟ್ಟರು.

[14] ಯಾಕೋಬನ ಮಕ್ಕಳು ಅವರಿಗೆ, “ನಾವು ಈ ಕಾರ್ಯವನ್ನು ಮಾಡಲಾರೆವು. ಸುನ್ನತಿಯಿಲ್ಲದವನಿಗೆ ನಮ್ಮ ತಂಗಿಯನ್ನು ಕೊಡುವುದಕ್ಕಾಗುವುದಿಲ್ಲ, ಹಾಗೆ ಕೊಡುವುದು ನಮಗೆ ಅವಮಾನ.

[15] ನಿಮ್ಮಲ್ಲಿನ ಪುರುಷರೆಲ್ಲರೂ ಸುನ್ನತಿಮಾಡಿಸಿಕೊಂಡು ನಮ್ಮ ಹಾಗೆ ಆಗಬೇಕು. ಹೀಗಾಗುವ ಪಕ್ಷದಲ್ಲಿ ಮಾತ್ರ ನಾವು ನಿಮ್ಮ ಮಾತಿಗೆ ಒಪ್ಪುವೆವು.

[16] ನಮ್ಮ ಹೆಣ್ಣುಮಕ್ಕಳನ್ನು ನಿಮಗೆ ಕೊಡುತ್ತಾ ನಿಮ್ಮ ಹೆಣ್ಣುಮಕ್ಕಳನ್ನು ನಾವು ತೆಗೆದುಕೊಳ್ಳುತ್ತಾ ನಿಮ್ಮಲ್ಲಿ ವಾಸಮಾಡಿ ನಿಮ್ಮೊಂದಿಗೆ ಒಂದೇ ಕುಲವಾಗಿರುವೆವು.

[17] ಆದರೆ ನೀವು ನಮ್ಮ ಮಾತಿಗೆ ಒಪ್ಪದೆ ಸುನ್ನತಿ ಮಾಡಿಸಿಕೊಳ್ಳದೆ ಹೋದರೆ ನಾವು ನಮ್ಮ ಹುಡುಗಿಯನ್ನು ಕರೆದುಕೊಂಡು ಹೊರಟು ಹೋಗುತ್ತೇವೆ” ಎಂದನು.

[18] ಅವರ ಮಾತುಗಳು ಹಮೋರನಿಗೂ, ಅವನ ಮಗನಾದ ಶೆಕೆಮನಿಗೂ ಒಳ್ಳೆಯದೆಂದು ತೋಚಿತು.

[19] ಆ ಯೌವನಸ್ಥನು ಯಾಕೋಬನ ಮಗಳನ್ನು ಮೆಚ್ಚಿಕೊಂಡಿದ್ದರಿಂದ ಅವರು ಹೇಳಿದಂತೆ ಮಾಡುವುದಕ್ಕೆ ತಡಮಾಡಲಿಲ್ಲ. ಅವನು ತನ್ನ ತಂದೆಯ ಮನೆಯವರೆಲ್ಲರಿಗಿಂತ ಗೌರವವುಳ್ಳವನಾಗಿದ್ದನು.

[20] ಆಗ ಹಮೋರನೂ ಅವನ ಮಗನಾದ ಶೆಕೆಮನೂ ಊರ ಬಾಗಿಲಿಗೆ ಬಂದು ಊರಿನವರೆಲ್ಲರ ಸಂಗಡ ಮಾತನಾಡಿ ಅವರಿಗೆ,

[21] “ಈ ಜನರು ನಮ್ಮ ಸಂಗಡ ಸಮಾಧಾನವಾಗಿದ್ದಾರೆ, ಆದ್ದರಿಂದ ಅವರು ನಮ್ಮ ದೇಶದಲ್ಲೇ ವಾಸ ಮಾಡಿಕೊಂಡು ವ್ಯಾಪಾರ ಮಾಡಲಿ. ಈ ದೇಶವು ಅವರಿಗೂ ನಮಗೂ ಸಾಕಾಗುವಷ್ಟು ವಿಸ್ತಾರವಾಗಿದೆ. ನಾವು ಅವರ ಹೆಣ್ಣುಮಕ್ಕಳನ್ನು ಮದುವೆಮಾಡಿಕೊಳ್ಳೋಣ ನಮ್ಮ ಹೆಣ್ಣುಮಕ್ಕಳನ್ನು ಅವರಿಗೆ ಕೊಡೋಣ.

[22] “ಆದರೆ ಅವರು ಸುನ್ನತಿ ಮಾಡಿಸಿಕೊಂಡವರಾದ್ದರಿಂದ ನಮ್ಮಲ್ಲಿಯೂ ಪುರುಷರೆಲ್ಲರು ಸುನ್ನತಿ ಮಾಡಿಸಿಕೊಳ್ಳಬೇಕನ್ನುತ್ತಾರೆ. ಹೀಗಾದರೆ ಮಾತ್ರ ಅವರು ನಮ್ಮಲ್ಲಿ ವಾಸ ಮಾಡುವುದಕ್ಕೂ ನಮ್ಮ ಸಂಗಡ ಒಂದೇ ಕುಲವಾಗುವುದಕ್ಕೂ ಒಪ್ಪುವರು.

[23] ಅವರ ಕುರಿದನಗಳೂ, ಅವರ ಆಸ್ತಿಯೂ ಅವರ ಎಲ್ಲಾ ಪಶುಪ್ರಾಣಿಗಳೂ ನಮ್ಮದಾಗುವುದಲ್ಲವೇ? ಆದುದರಿಂದ ಅವರು ನಮ್ಮಲ್ಲಿ ವಾಸಮಾಡುವ ಹಾಗೆ ನಾವು ಅವರ ಮಾತಿಗೆ ಒಪ್ಪಿಕೊಳ್ಳೋಣ” ಎಂದು ಹೇಳಿದನು.

[24] ಆಗ ಪಟ್ಟಣದ ದ್ವಾರದಲ್ಲಿ ಹೋಗುವವರೆಲ್ಲಾ, ಹಮೋರನ ಮಗನಾದ ಶೆಕೆಮನೂ ಹೇಳಿದ ಮಾತಿಗೆ ಊರಿನವರೆಲ್ಲರೂ ಸಮ್ಮತಿಸಿದ್ದರಿಂದ ಅವರಲ್ಲಿದ್ದ ಪುರುಷರೆಲ್ಲರೂ ಸುನ್ನತಿಮಾಡಿಸಿಕೊಂಡರು.

[25] ಮೂರನೆಯ ದಿನದಲ್ಲಿ ಅವರು ಗಾಯದಿಂದ ಬಹು ಬಾಧೆಪಡುತ್ತಿರುವಾಗ ಯಾಕೋಬನ ಮಕ್ಕಳೂ, ದೀನಳ ಅಣ್ಣಂದಿರಾದ ಸಿಮೆಯೋನ್, ಲೇವಿ ಎಂಬ ಇಬ್ಬರು ಕೈಯಲ್ಲಿ ಕತ್ತಿಯನ್ನು ತೆಗೆದುಕೊಂಡು ಧೈರ್ಯವಾಗಿ ಪಟ್ಟಣಕ್ಕೆ ಬಂದು ಗಂಡಸರನ್ನೆಲ್ಲಾ ಕೊಂದು ಹಾಕಿದನು.

[26] ಊರಿನವರ ಮೇಲೆ ಬಿದ್ದು ಹಮೋರ ಮತ್ತು ಅವನ ಮಗನಾದ ಶೆಕೆಮ್ ಸಹಿತವಾಗಿ ಪುರುಷರೆಲ್ಲರನ್ನೂ ದಾಕ್ಷಿಣ್ಯವಿಲ್ಲದೆ ಕತ್ತಿಯಿಂದ ಕೊಂದು ಶೆಕೆಮನ ಮನೆಯಿಂದ ದೀನಳನ್ನು ಕರೆದುಕೊಂಡು ಹೊರಟುಹೋದರು.

[27] ಅವರು ಹತವಾದ ನಂತರ ಯಾಕೋಬನ ಮಕ್ಕಳು ಬಂದು, ಇವರು ನಮ್ಮ ತಂಗಿಯನ್ನು ಮಾನಭಂಗಪಡಿಸಿದ್ದಾರೆ ಎಂದು ಹೇಳಿ ಊರನ್ನು ಸೂರೆಮಾಡಿಬಿಟ್ಟರು.

[28] ಅವರ ಕುರಿಗಳನ್ನು, ದನಗಳನ್ನು ಹಾಗೂ ಕತ್ತೆಗಳನ್ನು ಊರಿನಲ್ಲಿಯೂ ಅಡವಿಯಲ್ಲಿಯೂ ಇದ್ದ ಅವರ ಆಸ್ತಿಯೆಲ್ಲವನ್ನೂ ತೆಗೆದುಕೊಂಡರು.

[29] ಅವರ ಮಕ್ಕಳನ್ನೂ ಹೆಂಡತಿಯರನ್ನೂ ಸೆರೆಹಿಡಿದು ಮನೆಯಲ್ಲಿದ್ದುದ್ದೆಲ್ಲವನ್ನು ಕೊಳ್ಳೆ ಹೊಡೆದರು.

[30] ಆಗ ಯಾಕೋಬನು ಸಿಮೆಯೋನನಿಗೂ ಲೇವಿಗೂ, “ನೀವು ಈ ದೇಶದ ನಿವಾಸಿಗಳಾದ ಕಾನಾನ್ಯರಲ್ಲಿಯೂ ಪೆರಿಜೀಯರಲ್ಲಿಯೂ ನನ್ನ ಹೆಸರನ್ನು ಕೆಡಿಸಿದ್ದರಿಂದ ನನ್ನನ್ನು ಅಪಾಯಕ್ಕೆ ಗುರಿಮಾಡಿದ್ದೀರಿ. ನನಗಿರುವ ಜನರು ಸ್ವಲ್ಪವೇ. ಈ ದೇಶದವರು ಒಟ್ಟಾಗಿ ನನ್ನ ವಿರುದ್ಧ ಯುದ್ಧಕ್ಕೆ ಬಂದು ನನ್ನನ್ನು ಹೊಡೆದರೆ ನಾನೂ ನನ್ನ ಮನೆಯವರೆಲ್ಲರೂ ನಾಶವಾಗುವೆವು” ಎಂದನು.

[31] ಅದಕ್ಕೆ ಅವರು, “ನಮ್ಮ ತಂಗಿಯನ್ನು ವೇಶ್ಯೆಯಂತೆ ಉಪಯೋಗಿಸಿಕೊಂಡಿದ್ದು ಸರಿಯೇ” ಎಂದು ಕೇಳಿದರು.

ಆದಿಕಾಂಡ — Chapters