[1] ಯೇಸು ದೋಣಿ ಹತ್ತಿ, ಸರೋವರವನ್ನು ದಾಟಿ ತಮ್ಮ ಸ್ವಂತ ಪಟ್ಟಣಕ್ಕೆ ಬಂದರು.
[2] ಆಗ ಹಾಸಿಗೆಯ ಮೇಲೆ ಮಲಗಿದ್ದ, ಒಬ್ಬ ಪಾರ್ಶ್ವವಾಯು ರೋಗಿಯನ್ನು ಜನರು ಯೇಸುವಿನ ಬಳಿಗೆ ತಂದರು. ಯೇಸು ಅವರ ನಂಬಿಕೆಯನ್ನು ಕಂಡು, ಆ ಪಾರ್ಶ್ವವಾಯು ರೋಗಿಗೆ, “ಮಗನೇ, ಧೈರ್ಯವಾಗಿರು. ನಿನ್ನ ಪಾಪಗಳು ಕ್ಷಮಿಸಲಾಗಿವೆ,” ಎಂದರು.
[3] ಆಗ ನಿಯಮ ಬೋಧಕರಲ್ಲಿ ಕೆಲವರು, “ಈತನು ದೇವದೂಷಣೆ ಮಾಡುತ್ತಿದ್ದಾನೆ,” ಎಂದು ತಮ್ಮತಮ್ಮೊಳಗೆ ಮಾತನಾಡಿಕೊಂಡರು.
[4] ಯೇಸು ಅವರ ಆಲೋಚನೆಗಳನ್ನು ತಿಳಿದುಕೊಂಡು, “ನೀವು ನಿಮ್ಮ ಮನಸ್ಸಿನಲ್ಲಿ ಕೆಟ್ಟದ್ದನ್ನು ಯೋಚಿಸುವುದೇಕೆ?
[5] ಯಾವುದು ಸುಲಭ? ‘ನಿನ್ನ ಪಾಪಗಳು ಕ್ಷಮಿಸಲಾಗಿವೆ,’ ಎನ್ನುವುದೋ ಅಥವಾ ‘ಎದ್ದು ನಡೆ,’ ಎನ್ನುವುದೋ?
[6] ಆದರೆ ಮನುಷ್ಯಪುತ್ರನಾದ ನನಗೆ ಈ ಭೂಲೋಕದಲ್ಲಿ ಪಾಪಗಳನ್ನು ಕ್ಷಮಿಸುವುದಕ್ಕೆ ಅಧಿಕಾರವುಂಟೆಂದು ನೀವು ತಿಳಿಯಬೇಕು,” ಎಂದು ಹೇಳಿ ಆ ಪಾರ್ಶ್ವವಾಯು ರೋಗಿಗೆ, “ಎದ್ದು ನಿನ್ನ ಹಾಸಿಗೆಯನ್ನು ಎತ್ತಿಕೊಂಡು ಮನೆಗೆ ಹೋಗು ಎಂದು ನಾನು ನಿನಗೆ ಹೇಳುತ್ತೇನೆ,” ಎಂದರು.
[7] ಆಗ ಅವನು ಎದ್ದು ತನ್ನ ಮನೆಗೆ ಹೊರಟುಹೋದನು.
[8] ಜನರ ಗುಂಪು ಇದನ್ನು ಕಂಡು ಬೆರಗಾಗಿ, ಮನುಷ್ಯರಿಗೆ ಇಂಥ ಅಧಿಕಾರವನ್ನು ಕೊಟ್ಟ ದೇವರನ್ನು ಕೊಂಡಾಡಿದರು.
[9] ಯೇಸು ಅಲ್ಲಿಂದ ಹಾದುಹೋಗುತ್ತಿದ್ದಾಗ, ಮತ್ತಾಯನೆಂಬ ಹೆಸರುಳ್ಳ ಒಬ್ಬ ಮನುಷ್ಯನು ಸುಂಕದ ಕಟ್ಟೆಯಲ್ಲಿ ಕೂತಿರುವುದನ್ನು ಕಂಡು ಅವನಿಗೆ, “ನನ್ನನ್ನು ಹಿಂಬಾಲಿಸು,” ಎಂದು ಹೇಳಿದರು. ಅವನು ಎದ್ದು ಯೇಸುವನ್ನು ಹಿಂಬಾಲಿಸಿದನು.
[10] ಇದಾದ ಮೇಲೆ ಯೇಸು ಮತ್ತಾಯನ ಮನೆಯಲ್ಲಿ ಊಟಕ್ಕೆ ಕುಳಿತಿದ್ದಾಗ, ಬಹುಮಂದಿ ಸುಂಕದವರೂ ಅಪಖ್ಯಾತಿಯ ಪಾಪಿಗಳೂ ಬಂದು ಯೇಸುವಿನೊಂದಿಗೂ ಅವರ ಶಿಷ್ಯರೊಂದಿಗೂ ಕುಳಿತುಕೊಂಡರು.
[11] ಫರಿಸಾಯರು ಇದನ್ನು ಕಂಡು, “ನಿಮ್ಮ ಬೋಧಕನು ಸುಂಕದವರ ಮತ್ತು ಅಪಖ್ಯಾತಿಯ ಪಾಪಿಗಳ ಸಂಗಡ ಏಕೆ ಊಟಮಾಡುತ್ತಾನೆ?” ಎಂದು ಯೇಸುವಿನ ಶಿಷ್ಯರನ್ನು ಕೇಳಿದರು.
[12] ಆದರೆ ಯೇಸು ಇದನ್ನು ಕೇಳಿ ಅವರಿಗೆ, “ಆರೋಗ್ಯವಂತರಿಗೆ ವೈದ್ಯನು ಅವಶ್ಯವಿಲ್ಲ, ರೋಗಿಗಳಿಗೆ ವೈದ್ಯನು ಅವಶ್ಯ.
[13] ಆದರೆ ನೀವು ಹೋಗಿ, ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ,’ ಎಂಬುದರ ಅರ್ಥವನ್ನು ಕಲಿತುಕೊಳ್ಳಿರಿ. ಏಕೆಂದರೆ ನಾನು ನೀತಿವಂತರನ್ನಲ್ಲ, ಪಾಪಿಗಳನ್ನು ಕರೆಯಲು ಬಂದಿದ್ದೇನೆ,” ಎಂದು ಹೇಳಿದರು.
[14] ಬಳಿಕ ಯೋಹಾನನ ಶಿಷ್ಯರು ಯೇಸುವಿನ ಬಳಿಗೆ ಬಂದು, “ನಾವೂ, ಫರಿಸಾಯರೂ ಉಪವಾಸ ಮಾಡುತ್ತೇವೆ. ಆದರೆ ನಿಮ್ಮ ಶಿಷ್ಯರು ಏಕೆ ಉಪವಾಸಮಾಡುವುದಿಲ್ಲ?” ಎಂದು ಕೇಳಿದರು.
[15] ಅದಕ್ಕೆ ಯೇಸು ಅವರಿಗೆ, “ಮದುಮಗನು ತಮ್ಮ ಜೊತೆಯಲ್ಲಿ ಇರುವ ತನಕ ಮದುಮಗನ ಆಪ್ತರು ದುಃಖಪಡುವುದುಂಟೇ? ಆದರೆ ಮದುಮಗನು ಅಗಲಬೇಕಾಗುವ ದಿವಸಗಳು ಬರುತ್ತವೆ; ಆಗ ಅವರು ಉಪವಾಸ ಮಾಡುವರು.
[16] “ಯಾರೂ ಹಳೆಯ ವಸ್ತ್ರಕ್ಕೆ ಹೊಸ ಬಟ್ಟೆಯ ತೇಪೆಯನ್ನು ಹಾಕುವುದಿಲ್ಲ. ಏಕೆಂದರೆ ಅದು ಆ ವಸ್ತ್ರವನ್ನು ಹಿಂಜುವುದರಿಂದ ಹರಕು ಹೆಚ್ಚಾಗುವುದು.
[17] ಅಂತೆಯೇ ಜನರು ಹೊಸ ದ್ರಾಕ್ಷಾರಸವನ್ನು ಹಳೆಯ ಚರ್ಮದ ಚೀಲಗಳಲ್ಲಿ ತುಂಬಿಡುವುದಿಲ್ಲ. ಅವರು ಹಾಗೇನಾದರೂ ಮಾಡಿದರೆ ಚರ್ಮದ ಚೀಲಗಳು ಹರಿದು, ದ್ರಾಕ್ಷಾರಸವು ಚೆಲ್ಲಿಹೋಗಿ ಚರ್ಮದ ಚೀಲಗಳು ಹಾಳಾಗುತ್ತವೆ. ಹೊಸ ದ್ರಾಕ್ಷಾರಸವನ್ನು ಹೊಸ ಚರ್ಮದ ಚೀಲಗಳಲ್ಲಿ ತುಂಬಿಡುತ್ತಾರೆ. ಆಗ ಅವೆರಡೂ ಉಳಿಯುತ್ತವೆ,” ಎಂದರು.
[18] ಯೇಸು ಇದೆಲ್ಲವನ್ನು ಅವರೊಂದಿಗೆ ಮಾತನಾಡುತ್ತಿದ್ದಾಗ, ಸಭಾಮಂದಿರದ ಒಬ್ಬ ಅಧಿಕಾರಿಯು ಬಂದು ಯೇಸುವಿನ ಮುಂದೆ ಮೊಣಕಾಲೂರಿ, “ನನ್ನ ಮಗಳು ಈಗ ತಾನೆ ಸತ್ತುಹೋದಳು. ಆದರೂ ನೀವು ಬಂದು ಆಕೆಯ ಮೇಲೆ ನಿಮ್ಮ ಕೈಯನ್ನಿಡಿರಿ; ಆಗ ಅವಳು ಬದುಕುವಳು,” ಎಂದು ಹೇಳಿದನು.
[19] ಯೇಸು ಎದ್ದು ತಮ್ಮ ಶಿಷ್ಯರೊಂದಿಗೆ ಆ ಅಧಿಕಾರಿಯ ಹಿಂದೆ ಹೋದರು.
[20] ಆಗ ಅಲ್ಲಿ ಹನ್ನೆರಡು ವರ್ಷಗಳಿಂದ ರಕ್ತಸ್ರಾವ ರೋಗದಿಂದ ನರಳುತ್ತಿದ್ದ ಒಬ್ಬ ಸ್ತ್ರೀಯು ಹಿಂಬದಿಯಿಂದ ಬಂದು, ಯೇಸುವಿನ ನಿಲುವಂಗಿಯ ಅಂಚನ್ನು ಮುಟ್ಟಿ,
[21] “ನಾನು ಯೇಸುವಿನ ಉಡುಪನ್ನು ಮುಟ್ಟಿದರೆ ಸಾಕು, ನನಗೆ ಗುಣವಾಗುವುದು,” ಎಂದು ಆಕೆಯು ತನ್ನೊಳಗೆ ಹೇಳಿಕೊಂಡಳು.
[22] ಯೇಸು ಹಿಂತಿರುಗಿ ಆಕೆಯನ್ನು ನೋಡಿ, “ಮಗಳೇ, ಧೈರ್ಯವಾಗಿರು; ನಿನ್ನ ನಂಬಿಕೆಯೇ ನಿನ್ನನ್ನು ಗುಣಪಡಿಸಿದೆ,” ಎಂದರು. ಆ ಗಳಿಗೆಯಲ್ಲೇ ಆ ಸ್ತ್ರೀಯು ಸ್ವಸ್ಥಳಾದಳು.
[23] ತರುವಾಯ ಯೇಸು ಆ ಅಧಿಕಾರಿಯ ಮನೆಯೊಳಗೆ ಬಂದು ಕೊಳಲೂದುವವರನ್ನೂ ಜನರ ಗೊಂದಲವನ್ನೂ ಕಂಡು,
[24] ಅವರಿಗೆ, “ಹೊರಗೆ ಹೋಗಿರಿ, ಬಾಲಕಿಯು ಸತ್ತಿಲ್ಲ, ನಿದ್ರಿಸುತ್ತಿದ್ದಾಳೆ,” ಎಂದರು. ಅದಕ್ಕವರು ನಕ್ಕು ಯೇಸುವನ್ನು ಹಾಸ್ಯಮಾಡಿದರು.
[25] ಆದರೆ ಜನರನ್ನು ಹೊರಗೆ ಕಳುಹಿಸಿದ ಮೇಲೆ ಯೇಸು ಒಳಗೆ ಹೋಗಿ, ಬಾಲಕಿಯ ಕೈಯನ್ನು ಹಿಡಿದು ಎಬ್ಬಿಸಿದಾಗ ಬಾಲಕಿಯು ಎದ್ದಳು.
[26] ಈ ಸಮಾಚಾರವು ನಾಡಿನಲ್ಲೆಲ್ಲಾ ಹರಡಿತು.
[27] ಯೇಸು ಅಲ್ಲಿಂದ ಹೋಗುತ್ತಿರುವಾಗ ಇಬ್ಬರು ಕುರುಡರು, “ದಾವೀದನ ಪುತ್ರನೇ, ನಮ್ಮ ಮೇಲೆ ಕರುಣೆಯಿಡು,” ಎಂದು ಮೊರೆಯಿಡುತ್ತಾ ಯೇಸುವಿನ ಹಿಂದೆ ಹೋದರು.
[28] ಯೇಸು ಮನೆಗೆ ಬಂದಾಗ, ಆ ಕುರುಡರು ಅವರ ಬಳಿಗೆ ಬಂದರು. ಆಗ ಯೇಸು ಅವರಿಗೆ, “ನಾನು ಇದನ್ನು ಮಾಡಲು ಶಕ್ತನೆಂದು ನೀವು ನಂಬುತ್ತೀರೋ?” ಎಂದು ಕೇಳಿದರು. ಅದಕ್ಕವರು ಯೇಸುವಿಗೆ, “ಹೌದು ಕರ್ತನೆ,” ಎಂದರು.
[29] ಆಗ ಯೇಸು ಅವರ ಕಣ್ಣುಗಳನ್ನು ಮುಟ್ಟಿ, “ನಿಮ್ಮ ನಂಬಿಕೆಯಂತೆ ನಿಮಗಾಗಲಿ,” ಎಂದು ಹೇಳಿದರು.
[30] ಆಗ ಅವರಿಗೆ ದೃಷ್ಟಿ ಬಂದಿತು. ಯೇಸು ಅವರಿಗೆ, “ಇದು ಯಾರಿಗೂ ತಿಳಿಯಬಾರದು,” ಎಂದು ಅವರಿಗೆ ಖಂಡಿತವಾಗಿ ಎಚ್ಚರಿಸಿದರು.
[31] ಆದರೆ ಸ್ವಸ್ಥರಾದವರು ಹೊರಟುಹೋಗಿ, ಆ ನಾಡಿನಲ್ಲೆಲ್ಲಾ ಯೇಸುವಿನ ಕೀರ್ತಿಯನ್ನು ಹರಡಿದರು.
[32] ಯೇಸು ಮತ್ತು ಶಿಷ್ಯರು ಹೊರಟು ಹೋಗುತ್ತಿದ್ದಾಗ, ದೆವ್ವ ಹಿಡಿದಿದ್ದ ಒಬ್ಬ ಮೂಕನನ್ನು ಕೆಲವರು ಯೇಸುವಿನ ಬಳಿಗೆ ತಂದರು.
[33] ದೆವ್ವ ಬಿಡಿಸಿದ ಮೇಲೆ, ಆ ಮೂಕನು ಮಾತನಾಡಿದನು. ಜನರು ಆಶ್ಚರ್ಯಪಟ್ಟು, “ಇಂಥದ್ದನ್ನು ಎಂದೂ ಇಸ್ರಾಯೇಲಿನಲ್ಲಿ ಕಂಡಿಲ್ಲ,” ಎಂದು ಹೇಳಿದರು.
[34] ಆದರೆ ಫರಿಸಾಯರು, “ದೆವ್ವಗಳ ಅಧಿಪತಿಯಿಂದಲೇ ಈತನು ದೆವ್ವಗಳನ್ನು ಓಡಿಸುತ್ತಾನೆ,” ಎಂದರು.
[35] ಯೇಸು ಎಲ್ಲಾ ಹಳ್ಳಿಗಳಲ್ಲಿಯೂ ಪಟ್ಟಣಗಳಲ್ಲಿಯೂ ಇದ್ದ ಸಭಾಮಂದಿರಗಳಲ್ಲಿ ಬೋಧಿಸುತ್ತಾ, ರಾಜ್ಯದ ಸುವಾರ್ತೆಯನ್ನು ಸಾರುತ್ತಾ, ಜನರ ಪ್ರತಿಯೊಂದು ವ್ಯಾಧಿಯನ್ನೂ ರೋಗವನ್ನೂ ಗುಣಪಡಿಸುತ್ತಾ ಸಂಚರಿಸಿದರು.
[36] ಜನಸಮೂಹವೂ ಕುರುಬನಿಲ್ಲದ ಕುರಿಗಳಂತೆ ಅಲೆಯುವವರಾಗಿಯೂ ನಿಸ್ಸಹಾಯಕರಾಗಿಯೂ ಇರುವುದನ್ನು ಕಂಡು ಯೇಸು ಅವರ ಮೇಲೆ ಕನಿಕರಪಟ್ಟರು.
[37] ಆಗ ಯೇಸು ತಮ್ಮ ಶಿಷ್ಯರಿಗೆ, “ಬೆಳೆಯೇನೋ ಬಹಳವಾಗಿದೆ, ಕೆಲಸದವರೋ ಕೆಲವರು.
[38] ಆದ್ದರಿಂದ, ಬೆಳೆಯ ಯಜಮಾನನನ್ನು ತನ್ನ ಬೆಳೆಗೆ ತಕ್ಕಷ್ಟು ಕೆಲಸದವರನ್ನು ಕಳುಹಿಸುವಂತೆ, ನೀವು ಬೇಡಿಕೊಳ್ಳಿರಿ,” ಎಂದರು.