[1] ಯೇಸು ಪುನಃ ಸಾಮ್ಯಗಳ ಮೂಲಕ ಅವರ ಕೂಡ ಮಾತನಾಡುತ್ತಾ:
[2] “ಪರಲೋಕ ರಾಜ್ಯವು ಮಗನ ಮದುವೆ ಮಾಡಿದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ.
[3] ಅವನು ಮದುವೆಗೆ ಆಹ್ವಾನಿತರಾಗಿದ್ದವರನ್ನು ಕರೆಯುವುದಕ್ಕೆ ತನ್ನ ಸೇವಕರನ್ನು ಕಳುಹಿಸಿದನು. ಆದರೆ ಅವರು ಬರಲು ಒಪ್ಪಲಿಲ್ಲ.
[4] “ಅವನು ಪುನಃ ಬೇರೆ ಸೇವಕರನ್ನು ಕಳುಹಿಸಿ ಅವರಿಗೆ, ‘ಇಗೋ ಔತಣವು ಸಿದ್ಧವಾಗಿದೆ. ಶ್ರೇಷ್ಠ ಔತಣ ಮಾಡಿಸಿದ್ದೇನೆ: ಎಲ್ಲವೂ ಸಿದ್ಧವಾಗಿವೆ. ಮದುವೆಗೆ ಬನ್ನಿರಿ ಎಂದು ಆಹ್ವಾನಿತರಿಗೆ ಹೇಳಿರಿ,’ ಎಂದನು.
[5] “ಆದರೆ ಅವರು ಅದನ್ನು ಅಲಕ್ಷ್ಯಮಾಡಿ, ಒಬ್ಬನು ತನ್ನ ಹೊಲಕ್ಕೂ ಇನ್ನೊಬ್ಬನು ತನ್ನ ವ್ಯಾಪಾರಕ್ಕೂ ಹೊರಟು ಹೋದರು.
[6] ಉಳಿದವರು ಅವನ ಸೇವಕರನ್ನು ಹಿಡಿದು ಅವಮಾನಪಡಿಸಿ, ಅವರನ್ನು ಕೊಂದುಹಾಕಿದರು.
[7] ಆದರೆ ಅರಸನು ಅದನ್ನು ಕೇಳಿ ಬಹುಕೋಪಗೊಂಡು ತನ್ನ ಸೈನ್ಯಗಳನ್ನು ಕಳುಹಿಸಿ ಆ ಕೊಲೆಗಾರರನ್ನು ಸಂಹರಿಸಿ ಅವರ ಪಟ್ಟಣವನ್ನು ಸುಟ್ಟುಬಿಟ್ಟನು.
[8] “ತರುವಾಯ ಅವನು ತನ್ನ ಸೇವಕರಿಗೆ, ‘ಮದುವೆಯ ಔತಣ ಸಿದ್ಧವಾಗಿದೆ, ಆದರೆ ಆಹ್ವಾನಿತರು ಸಿದ್ಧರಾಗಿರಲಿಲ್ಲ.
[9] ಆದ್ದರಿಂದ ನೀವು ಮುಖ್ಯ ಬೀದಿಗಳಿಗೆ ಹೊರಟುಹೋಗಿ ಅಲ್ಲಿ ಕಂಡವರನ್ನೆಲ್ಲಾ ಮದುವೆಗೆ ಆಹ್ವಾನಿಸಿರಿ,’ ಎಂದನು.
[10] ಆಗ ಆ ಸೇವಕರು ಮುಖ್ಯ ಬೀದಿಗಳಿಗೆ ಹೋಗಿ ತಾವು ಕಂಡ ಕೆಟ್ಟವರನ್ನೂ ಒಳ್ಳೆಯವರನ್ನೂ ಕರೆತಂದರು. ಹೀಗೆ ಮದುವೆ ಮಂಟಪವು ಅತಿಥಿಗಳಿಂದ ತುಂಬಿಹೋಯಿತು.
[11] “ಅನಂತರ ಅರಸನು ಅತಿಥಿಗಳನ್ನು ನೋಡುವುದಕ್ಕಾಗಿ ಒಳಗೆ ಬಂದಾಗ, ಅಲ್ಲಿ ಮದುವೆಯ ವಸ್ತ್ರವಿಲ್ಲದೆ ಇದ್ದ ಒಬ್ಬ ಮನುಷ್ಯನನ್ನು ಕಂಡನು.
[12] ಅರಸನು ಆ ಮನುಷ್ಯನಿಗೆ, ‘ಸ್ನೇಹಿತನೇ, ಮದುವೆಯ ವಸ್ತ್ರವಿಲ್ಲದೆ ನೀನು ಒಳಗೆ ಹೇಗೆ ಬಂದೆ?’ ಎಂದು ಕೇಳಲು ಅವನು ಸುಮ್ಮನಿದ್ದನು.
[13] “ಆಗ ಅರಸನು ಸೇವಕರಿಗೆ, ‘ಅವನ ಕೈಕಾಲುಗಳನ್ನು ಕಟ್ಟಿ ತೆಗೆದುಕೊಂಡು ಹೊರಗೆ ಕತ್ತಲೆಯಲ್ಲಿ ಹಾಕಿರಿ. ಅಲ್ಲಿ ಹಲ್ಲು ಕಡಿಯುತ್ತಾ ಗೋಳಾಡುತ್ತಿರಲಿ,’ ಎಂದು ಹೇಳಿದನು.
[14] “ಹೀಗೆಯೇ ಆಹ್ವಾನಿತರಾದವರು ಅನೇಕರು, ಆದರೆ ಆಯ್ಕೆಯಾದವರು ಕೆಲವರು ಮಾತ್ರ,” ಎಂದನು.
[15] ಆಗ ಫರಿಸಾಯರು ಹೊರಟುಹೋಗಿ ಯೇಸುವನ್ನು ಮಾತಿನಲ್ಲಿ ಹೇಗೆ ಸಿಕ್ಕಿಸಬೇಕೆಂದು ಆಲೋಚನೆ ಮಾಡಿಕೊಂಡರು.
[16] ಅವರು ತಮ್ಮ ಶಿಷ್ಯರನ್ನು ಹೆರೋದ್ಯರೊಂದಿಗೆ ಯೇಸುವಿನ ಬಳಿಗೆ ಕಳುಹಿಸಿ, “ಬೋಧಕರೇ, ನೀವು ಸತ್ಯವಂತರು, ದೇವರ ಮಾರ್ಗವನ್ನು ಸತ್ಯದಿಂದಲೇ ಬೋಧಿಸುವವರು, ನೀವು ಯಾರನ್ನೂ ಲಕ್ಷ್ಯ ಮಾಡುವವರಲ್ಲ, ನೀವು ಮುಖದಾಕ್ಷಿಣ್ಯ ಮಾಡುವವರೂ ಅಲ್ಲ ಎಂದು ನಮಗೆ ಗೊತ್ತಿದೆ.
[17] ಆದ್ದರಿಂದ ಕೈಸರನಿಗೆ ತೆರಿಗೆ ಕೊಡುವುದು ಧರ್ಮಸಮ್ಮತವೋ ಅಲ್ಲವೋ? ನಿಮ್ಮ ಅಭಿಪ್ರಾಯವೇನು? ನಮಗೆ ಹೇಳು,” ಎಂದರು.
[18] ಯೇಸು ಅವರ ಕುಯುಕ್ತಿಯನ್ನು ತಿಳಿದುಕೊಂಡು, “ಕಪಟಿಗಳೇ, ನೀವು ನನ್ನನ್ನೇಕೆ ಪರೀಕ್ಷಿಸುತ್ತೀರಿ?
[19] ತೆರಿಗೆಯ ನಾಣ್ಯವನ್ನು ನನಗೆ ತೋರಿಸಿರಿ,” ಎಂದರು. ಆಗ ಅವರು ಒಂದು ನಾಣ್ಯವನ್ನು ತಂದು ಕೊಟ್ಟರು.
[20] ಯೇಸು ಅವರಿಗೆ, “ಇದರ ಮುಖ ಮುದ್ರೆಯು ಮತ್ತು ಇದರ ಮೇಲಿರುವ ಲಿಪಿ ಯಾರದು?” ಎಂದು ಕೇಳಿದರು.
[21] ಅದಕ್ಕೆ ಅವರು, “ಕೈಸರನದು,” ಎಂದರು. ಆಗ ಯೇಸು, “ಕೈಸರನಿಗೆ ಸಲ್ಲತಕ್ಕದ್ದನ್ನು ಕೈಸರನಿಗೂ ದೇವರಿಗೆ ಸಲ್ಲತಕ್ಕದ್ದನ್ನು ದೇವರಿಗೂ ಕೊಡಿರಿ,” ಎಂದರು.
[22] ಅವರು ಇದನ್ನು ಕೇಳಿ ಆಶ್ಚರ್ಯಪಟ್ಟು, ಯೇಸುವನ್ನು ಬಿಟ್ಟು ಹೊರಟು ಹೋದರು.
[23] ಪುನರುತ್ಥಾನವಿಲ್ಲವೆಂದು ಹೇಳುವ ಸದ್ದುಕಾಯರು ಅದೇ ದಿನದಲ್ಲಿ ಯೇಸುವಿನ ಬಳಿಗೆ ಬಂದು,
[24] “ಬೋಧಕರೇ, ಒಬ್ಬನು ಮಕ್ಕಳಿಲ್ಲದೆ ಸತ್ತರೆ, ಅವನ ತಮ್ಮನು ವಿಧವೆಯನ್ನು ಮದುವೆಯಾಗಿ ತನ್ನ ಅಣ್ಣನಿಗೆ ಸಂತಾನವನ್ನು ಪಡೆಯಬೇಕೆಂದು ಮೋಶೆಯು ಹೇಳಿದ್ದಾನೆ.
[25] ಹೀಗಿರಲಾಗಿ ನಮ್ಮಲ್ಲಿ ಏಳುಮಂದಿ ಸಹೋದರರಿದ್ದರು. ಮೊದಲನೆಯವನು ಮದುವೆಮಾಡಿಕೊಂಡು ಸತ್ತನು. ಸಂತಾನವಿಲ್ಲದ ಕಾರಣ ತನ್ನ ಹೆಂಡತಿಯನ್ನು ತನ್ನ ತಮ್ಮನಿಗೆ ಬಿಟ್ಟನು.
[26] ಅದರಂತೆಯೇ ಎರಡನೆಯವನು ಮತ್ತು ಮೂರನೆಯವನು ಹೀಗೆ ಏಳನೆಯವನವರೆಗೂ ಸಂಭವಿಸಿತು.
[27] ಕಡೆಯದಾಗಿ, ಆ ಸ್ತ್ರೀಯೂ ಸತ್ತಳು.
[28] ಆದ್ದರಿಂದ, ಪುನರುತ್ಥಾನದ ಜೀವನದಲ್ಲಿ, ಆ ಏಳುಮಂದಿಯಲ್ಲಿ ಆಕೆ ಯಾರಿಗೆ ಹೆಂಡತಿಯಾಗಿರುವಳು? ಏಕೆಂದರೆ ಅವರೆಲ್ಲರೂ ಆಕೆಯನ್ನು ಮದುವೆ ಮಾಡಿಕೊಂಡಿದ್ದರಲ್ಲಾ?” ಎಂದು ಕೇಳಿದರು.
[29] ಅದಕ್ಕೆ ಯೇಸು ಉತ್ತರವಾಗಿ, “ನೀವು ಪವಿತ್ರ ವೇದವನ್ನಾಗಲಿ ದೇವರ ಶಕ್ತಿಯನ್ನಾಗಲಿ ಅರ್ಥ ಮಾಡಿಕೊಳ್ಳದೆ ತಪ್ಪುತ್ತಿದ್ದೀರಿ.
[30] ಏಕೆಂದರೆ ಪುನರುತ್ಥಾನದ ಜೀವನದಲ್ಲಿ ಅವರು ಮದುವೆಮಾಡಿಕೊಳ್ಳುವುದೂ ಇಲ್ಲ, ಮದುವೆಮಾಡಿಕೊಡುವುದೂ ಇಲ್ಲ. ಆದರೆ ಅವರು ಪರಲೋಕದಲ್ಲಿರುವ ದೇವದೂತರಂತೆ ಇರುತ್ತಾರೆ.
[31] ಆದರೆ ಸತ್ತವರ ಪುನರುತ್ಥಾನದ ವಿಷಯವಾಗಿ,
[32] ‘ನಾನು ಅಬ್ರಹಾಮನ ದೇವರು, ಇಸಾಕನ ದೇವರು ಮತ್ತು ಯಾಕೋಬನ ದೇವರು ಆಗಿದ್ದೇನೆ,’ ಎಂದು ದೇವರು ನಿಮಗೆ ಹೇಳಿದ್ದನ್ನು ನೀವು ಓದಲಿಲ್ಲವೋ? ದೇವರು ಜೀವಿತರಿಗೆ ದೇವರಾಗಿದ್ದಾರೆ ಹೊರತು ಸತ್ತವರಿಗಲ್ಲ,” ಎಂದು ಹೇಳಿದರು.
[33] ಜನಸಮೂಹದವರು ಇದನ್ನು ಕೇಳಿದಾಗ, ಯೇಸುವಿನ ಬೋಧನೆಗೆ ವಿಸ್ಮಯಗೊಂಡರು.
[34] ಯೇಸು ಸದ್ದುಕಾಯರ ಬಾಯನ್ನು ಮುಚ್ಚಿದನೆಂದು ಫರಿಸಾಯರು ಕೇಳಿದಾಗ ಅವರು ಯೇಸುವಿನ ಬಳಿಗೆ ಬಂದರು.
[35] ಅವರಲ್ಲಿ ಮೋಶೆಯ ನಿಯಮ ಬೋಧಕನಾಗಿದ್ದ ಒಬ್ಬನು, ಯೇಸುವನ್ನು ಪರೀಕ್ಷಿಸುವುದಕ್ಕಾಗಿ,
[36] “ಬೋಧಕರೇ, ನಿಯಮದಲ್ಲಿ ಅತ್ಯಂತ ಮಹಾ ಆಜ್ಞೆ ಯಾವುದು?” ಎಂದು ಪ್ರಶ್ನಿಸಿದನು.
[37] ಯೇಸು ಅವನಿಗೆ, “ ‘ನೀನು ನಿನ್ನ ದೇವರಾದ ಕರ್ತನನ್ನು ನಿನ್ನ ಪೂರ್ಣಹೃದಯದಿಂದಲೂ ಪೂರ್ಣಪ್ರಾಣದಿಂದಲೂ ಪೂರ್ಣಮನಸ್ಸಿನಿಂದಲೂ ಪ್ರೀತಿಸಬೇಕು.’
[38] ಇದೇ ಅತ್ಯಂತ ಮಹಾ ಆಜ್ಞೆಯೂ ಮೊದಲನೆಯ ಆಜ್ಞೆಯೂ ಆಗಿದೆ.
[39] ಇದರಂತೆಯೇ ಇರುವ ಎರಡನೆಯ ಆಜ್ಞೆಯು: ‘ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು’ ಎಂಬುದೇ.
[40] ಇಡೀ ನಿಯಮವೂ ಪ್ರವಾದಿಗಳ ಗ್ರಂಥಗಳೂ ಈ ಎರಡು ಆಜ್ಞೆಗಳ ಮೇಲೆ ಆಧಾರಗೊಂಡಿವೆ,” ಎಂದರು.
[41] ಫರಿಸಾಯರು ಕೂಡಿಬಂದಿದ್ದಾಗ ಯೇಸು ಅವರಿಗೆ,
[42] “ಕ್ರಿಸ್ತನ ವಿಷಯವಾಗಿ ನಿಮ್ಮ ಅಭಿಪ್ರಾಯವೇನು? ಆತನು ಯಾರ ಪುತ್ರನು?” ಎಂದು ಕೇಳಿದ್ದಕ್ಕೆ ಅವರು ಯೇಸುವಿಗೆ, “ದಾವೀದನ ಪುತ್ರನು,” ಎಂದರು.
[43] “ಹಾಗಾದರೆ ದಾವೀದನು ಆತ್ಮದಲ್ಲಿ ಆತನಿಗೆ, ‘ಕರ್ತನು’ ಎಂದು ಕರೆದು,
[44] “ ‘ಕರ್ತದೇವರು ನನ್ನ ಕರ್ತದೇವರಿಗೆ: “ನಾನು ನಿನ್ನ ವಿರೋಧಿಗಳನ್ನು ನಿನ್ನ ಪಾದದಡಿಯಲ್ಲಿ ಹಾಕುವವರೆಗೆ ನನ್ನ ಬಲಗಡೆಯಲ್ಲಿ ಕುಳಿತುಕೊಂಡಿರು,” ’ ಎಂದು ಹೇಳಿದನಲ್ಲವೇ?
[45] ದಾವೀದನು ತಾನೇ ಅವರನ್ನು, ‘ನನ್ನ ಕರ್ತದೇವರೇ’ ಎಂದು ಕರೆಯುವುದಾದರೆ, ಆತನು ದಾವೀದನ ಪುತ್ರನಾಗುವುದು ಹೇಗೆ?” ಎಂದು ಕೇಳಿದನು.
[46] ಅದಕ್ಕೆ ಯಾರೂ ಒಂದು ಮಾತನ್ನು ಸಹ ಯೇಸುವಿಗೆ ಉತ್ತರ ಕೊಡಲಾರದೆ ಹೋದರು. ಇದಲ್ಲದೆ ಆ ದಿನದಿಂದ ಯೇಸುವನ್ನು ಪ್ರಶ್ನಿಸುವುದಕ್ಕೆ ಯಾರಿಗೂ ಧೈರ್ಯ ಬರಲಿಲ್ಲ.