Skip to content
Opens in a new window
Listen to this chapter • 3:26

[1] ಸಬ್ಬತ್ ಮುಗಿದ ಮೇಲೆ, ವಾರದ ಮೊದಲನೆಯ ದಿನ ಬೆಳಗಾಗುವಾಗ ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಸಮಾಧಿಯನ್ನು ನೋಡಲು ಬಂದರು.

[2] ಆಗ ಮಹಾ ಭೂಕಂಪವಾಯಿತು. ಕರ್ತನ ದೂತನು ಪರಲೋಕದಿಂದ ಇಳಿದುಬಂದು, ಬಾಗಿಲಿನಿಂದ ಬಂಡೆಯನ್ನು ಉರುಳಿಸಿ ಅದರ ಮೇಲೆ ಕುಳಿತುಕೊಂಡನು.

[3] ಅವನ ರೂಪವು ಮಿಂಚಿನಂತೆಯೂ ಅವನ ಉಡುಪು ಹಿಮದಂತೆಯೂ ಬಿಳುಪಾಗಿತ್ತು.

[4] ಕಾವಲುಗಾರರು ಅವನಿಗೆ ಭಯಪಟ್ಟು ನಡುಗುತ್ತಾ ಸತ್ತಂತಾದರು.

[5] ಆ ದೂತನು ಸ್ತ್ರೀಯರಿಗೆ, “ನೀವು ಭಯಪಡಬೇಡಿರಿ. ಶಿಲುಬೆಗೇರಿಸಿದ ಯೇಸುವನ್ನು ನೀವು ಹುಡುಕುತ್ತಿದ್ದೀರೆಂದು ನಾನು ಬಲ್ಲೆನು.

[6] ಅವರು ಇಲ್ಲಿ ಇಲ್ಲ. ಅವರು ಹೇಳಿದಂತೆಯೇ ಜೀವಂತರಾಗಿ ಎದ್ದಿದ್ದಾರೆ. ಕರ್ತನನ್ನು ಇಟ್ಟಿದ್ದ ಸ್ಥಳವನ್ನು ಬಂದು ನೋಡಿರಿ.

[7] ಬೇಗನೆ ಹೋಗಿ ಅವರ ಶಿಷ್ಯರಿಗೆ, ‘ಅವರು ಮರಣದಿಂದ ಎದ್ದಿದ್ದಾರೆ. ಅವರು ನಿಮಗಿಂತ ಮುಂಚಿತವಾಗಿ ಗಲಿಲಾಯಕ್ಕೆ ಹೋಗುತ್ತಾರೆ. ನೀವು ಅಲ್ಲಿಯೇ ಅವರನ್ನು ಕಾಣುವಿರಿ,’ ಎಂದು ತಿಳಿಸಿರಿ. ಇದೇ ನಾನು ನಿಮಗೆ ತಿಳಿಸಬೇಕಾದ ಸಂಗತಿ,” ಎಂದನು.

[8] ಅವರು ಭಯದಿಂದಲೂ ಮಹಾ ಸಂತೋಷದಿಂದಲೂ ಸಮಾಧಿಯಿಂದ ಬೇಗನೆ ಹೊರಟು, ಶಿಷ್ಯರಿಗೆ ತಿಳಿಸುವುದಕ್ಕಾಗಿ ಓಡಿಹೋದರು.

[9] ಅವರು ಶಿಷ್ಯರಿಗೆ ತಿಳಿಸುವುದಕ್ಕೆ ಹೋಗುತ್ತಿದ್ದಾಗ, ಯೇಸು ಅವರನ್ನು ಸಂಧಿಸಿ, “ಶುಭವಾಗಲಿ” ಎಂದರು. ಅವರು ಬಂದು ಯೇಸುವಿನ ಪಾದಗಳನ್ನು ಹಿಡಿದು ಅವರನ್ನು ಆರಾಧಿಸಿದರು.

[10] ಆಗ ಯೇಸು ಅವರಿಗೆ, “ಭಯಪಡಬೇಡಿರಿ, ನನ್ನ ಸಹೋದರರು ಗಲಿಲಾಯಕ್ಕೆ ಹೋಗಬೇಕೆಂದೂ ಅಲ್ಲಿ ಅವರು ನನ್ನನ್ನು ಕಾಣುವರೆಂದೂ ಹೋಗಿ ಅವರಿಗೆ ಹೇಳಿರಿ,” ಎಂದರು.

[11] ಅವರು ಹೋಗುತ್ತಿರುವಾಗ, ಕಾವಲುಗಾರರಲ್ಲಿ ಕೆಲವರು ಪಟ್ಟಣದೊಳಕ್ಕೆ ಬಂದು ಮುಖ್ಯಯಾಜಕರಿಗೆ ನಡೆದ ಸಂಗತಿಗಳನ್ನೆಲ್ಲಾ ಹೇಳಿದರು.

[12] ಇವರು ಹಿರಿಯರೊಂದಿಗೆ ಕೂಡಿಬಂದು ಆಲೋಚನೆ ಮಾಡಿ ಸೈನಿಕರಿಗೆ ಬಹಳ ಹಣಕೊಟ್ಟು,

[13] “ ‘ನಾವು ನಿದ್ರೆ ಮಾಡುತ್ತಿದ್ದಾಗ ಅವನ ಶಿಷ್ಯರು ರಾತ್ರಿಯಲ್ಲಿ ಬಂದು ಅವನನ್ನು ಕದ್ದುಕೊಂಡು ಹೋದರು,’ ಎಂದು ನೀವು ಹೇಳಿರಿ.

[14] ಇದು ರಾಜ್ಯಪಾಲನ ಕಿವಿಗೆ ಬಿದ್ದರೆ, ನೀವು ತಪ್ಪಿಸಿಕೊಳ್ಳುವ ಹಾಗೆ ನಾವು ಅವನನ್ನು ಸಮಾಧಾನಪಡಿಸುವೆವು,” ಎಂದರು.

[15] ಹೀಗೆ ಅವರು ಆ ಹಣವನ್ನು ತೆಗೆದುಕೊಂಡು ತಮಗೆ ಕಲಿಸಿದಂತೆ ವರದಿಮಾಡಿದರು. ಈ ಕಥೆಯು ಈ ದಿನದವರೆಗೂ ಯೆಹೂದ್ಯರಲ್ಲಿ ಹಬ್ಬಿದೆ.

[16] ಆಗ ಹನ್ನೊಂದು ಮಂದಿ ಶಿಷ್ಯರು ಯೇಸು ತಮಗೆ ನೇಮಿಸಿದ ಗಲಿಲಾಯದಲ್ಲಿರುವ ಬೆಟ್ಟಕ್ಕೆ ಹೋದರು.

[17] ಅವರು ಯೇಸುವನ್ನು ಕಂಡು ಆರಾಧಿಸಿದರು. ಆದರೆ ಕೆಲವರು ಸಂದೇಹ ಪಟ್ಟರು.

[18] ಯೇಸು ಬಂದು ಅವರೊಂದಿಗೆ ಮಾತನಾಡಿ, “ಪರಲೋಕದಲ್ಲಿಯೂ ಭೂಲೋಕದಲ್ಲಿಯೂ ಎಲ್ಲಾ ಅಧಿಕಾರ ನನಗೆ ಕೊಡಲಾಗಿದೆ.

[19] ಆದ್ದರಿಂದ ನೀವು ಹೋಗಿ ಎಲ್ಲಾ ದೇಶಗಳ ಜನರನ್ನು ಶಿಷ್ಯರನ್ನಾಗಿ ಮಾಡಿರಿ. ಅವರಿಗೆ ತಂದೆಯ, ಮಗನ ಮತ್ತು ಪವಿತ್ರಾತ್ಮನ ಹೆಸರಿನಲ್ಲಿ ದೀಕ್ಷಾಸ್ನಾನ ಮಾಡಿಸಿ,

[20] ನಾನು ನಿಮಗೆ ಆಜ್ಞಾಪಿಸಿದ್ದೆಲ್ಲವನ್ನು ಅನುಸರಿಸುವ ಹಾಗೆ ಅವರಿಗೆ ಬೋಧಿಸಿರಿ. ಇಗೋ, ಲೋಕಾಂತ್ಯದವರೆಗೂ ಎಲ್ಲಾ ದಿವಸ ನಾನು ನಿಮ್ಮ ಸಂಗಡ ಇರುತ್ತೇನೆ,” ಎಂದರು.

ಮತ್ತಾಯ — Chapters