Skip to content
Opens in a new window
Listen to this chapter • 5:43

[1] ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರಿಗೆ ಆದೇಶ ಕೊಟ್ಟಾದ ಮೇಲೆ, ಗಲಿಲಾಯ ಪ್ರದೇಶದ ಪಟ್ಟಣಗಳಲ್ಲಿ ಬೋಧಿಸುವುದಕ್ಕೂ ಶುಭವರ್ತಮಾನವನ್ನು ಸಾರುವುದಕ್ಕೂ ಅಲ್ಲಿಂದ ಹೊರಟು ಹೋದರು.

[2] ಆಗ ಸೆರೆಮನೆಯಲ್ಲಿ ಯೋಹಾನನು ಕ್ರಿಸ್ತನ ಕಾರ್ಯಗಳನ್ನು ಕೇಳಿ, ತನ್ನ ಶಿಷ್ಯರನ್ನು ಕಳುಹಿಸಿ ಯೇಸುವಿಗೆ,

[3] “ಬರಬೇಕಾದ ಮೆಸ್ಸೀಯ ನೀನೋ ಇಲ್ಲವೇ ನಾವು ಇನ್ನೊಬ್ಬನಿಗಾಗಿ ಎದುರು ನೋಡಬೇಕೋ?” ಎಂದು ವಿಚಾರಿಸಿದನು.

[4] ಯೇಸು, “ನೀವು ಕೇಳುವುದನ್ನೂ ಕಾಣುವುದನ್ನೂ ಯೋಹಾನನಿಗೆ ಹೋಗಿ ತಿಳಿಸಿರಿ;

[5] ಕುರುಡರು ನೋಡುತ್ತಾರೆ, ಕುಂಟರು ನಡೆಯುತ್ತಾರೆ, ಕುಷ್ಠರೋಗಿಗಳು ಶುದ್ಧರಾಗುತ್ತಾರೆ, ಕಿವುಡರು ಕೇಳುತ್ತಾರೆ, ಮರಣಹೊಂದಿದವರು ಜೀವ ಪಡೆಯುತ್ತಾರೆ ಮತ್ತು ಬಡವರಿಗೆ ಸುವಾರ್ತೆ ಸಾರಲಾಗುತ್ತದೆ.

[6] ನನ್ನ ವಿಷಯದಲ್ಲಿ ವಿಶ್ವಾಸ ಕಳೆದುಕೊಳ್ಳದವನೇ ಧನ್ಯನು,” ಎಂದರು.

[7] ಅವರು ಹೊರಟು ಹೋಗುತ್ತಿದ್ದಾಗ, ಯೇಸು ಯೋಹಾನನ ಕುರಿತಾಗಿ ಜನಸಮೂಹಕ್ಕೆ, “ನೀವು ಯಾವುದನ್ನು ಕಾಣುವುದಕ್ಕಾಗಿ ಅರಣ್ಯಕ್ಕೆ ಹೋದಿರಿ? ಗಾಳಿಗೆ ಓಲಾಡುವ ದಂಟನ್ನೋ?

[8] ಇಲ್ಲವಾದರೆ, ನೀವು ಏನನ್ನು ಕಾಣುವುದಕ್ಕಾಗಿ ಹೋದಿರಿ? ನಯವಾದ ಉಡುಪನ್ನು ಧರಿಸಿದ್ದ ಮನುಷ್ಯನನ್ನೋ? ನಯವಾದ ಉಡುಪನ್ನು ಧರಿಸುವವರು ರಾಜರ ಅರಮನೆಗಳಲ್ಲಿ ಇರುತ್ತಾರೆ.

[9] ಆದರೆ ಏನು ಕಾಣುವುದಕ್ಕಾಗಿ ಹೋದಿರಿ? ಒಬ್ಬ ಪ್ರವಾದಿಯನ್ನೋ? ಹೌದು, ಪ್ರವಾದಿಗಿಂತಲೂ ಹೆಚ್ಚಿನವನನ್ನು ನೋಡಿದಿರಿ, ಎಂದು ನಾನು ನಿಮಗೆ ಹೇಳುತ್ತೇನೆ.

[10] ಯೋಹಾನನ ಕುರಿತು ಪವಿತ್ರ ವೇದದಲ್ಲಿ ಹೀಗೆ ಬರೆದಿದೆ: “ ‘ಇಗೋ, ನಿನ್ನ ದಾರಿಯನ್ನು ನಿನ್ನ ಮುಂದೆ ಸಿದ್ಧಮಾಡುವಂತೆ ನನ್ನ ದೂತನನ್ನು ನಿನ್ನ ಮುಂದೆ ಕಳುಹಿಸುತ್ತೇನೆ.’

[11] ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಸ್ತ್ರೀಯರಲ್ಲಿ ಹುಟ್ಟಿದವರಲ್ಲಿ ಸ್ನಾನಿಕ ಯೋಹಾನನಿಗಿಂತ ದೊಡ್ಡವನು ಹುಟ್ಟಲಿಲ್ಲ; ಆದರೂ ಪರಲೋಕ ರಾಜ್ಯದಲ್ಲಿರುವ ಅತ್ಯಂತ ಚಿಕ್ಕವನು ಅವನಿಗಿಂತಲೂ ದೊಡ್ಡವನಾಗಿದ್ದಾನೆ.

[12] ಸ್ನಾನಿಕನಾದ ಯೋಹಾನನ ದಿನಗಳಿಂದ ಇದುವರೆಗೆ, ಪರಲೋಕ ರಾಜ್ಯವು ಬಲಾತ್ಕಾರಕ್ಕೆ ಒಳಗಾಗಿದೆ, ಬಲಾತ್ಕಾರಿಗಳು ಅದನ್ನು ಬಲವಂತವಾಗಿ ತೆಗೆದುಕೊಳ್ಳುತ್ತಾರೆ.

[13] ಯೋಹಾನನ ಕಾಲದ ತನಕ ಮೋಶೆಯ ನಿಯಮ ಹಾಗು ಎಲ್ಲ ಪ್ರವಾದಿಗಳು ದೇವರ ರಾಜ್ಯವನ್ನು ಕುರಿತು ಪ್ರವಾದನೆ ಮಾಡಿದರು.

[14] ನೀವು ಇದನ್ನು ಸ್ವೀಕರಿಸುವುದಕ್ಕೆ ಮನಸ್ಸಿದ್ದರೆ, ಬರತಕ್ಕ ಎಲೀಯನು ಈ ಯೋಹಾನನೇ.

[15] ಕೇಳುವುದಕ್ಕೆ ಕಿವಿಯುಳ್ಳವನು ಕೇಳಿಸಿಕೊಳ್ಳಲಿ.

[16] “ಆದರೆ ಈ ಸಂತತಿಯನ್ನು ನಾನು ಯಾವುದಕ್ಕೆ ಹೋಲಿಸಲಿ? ಮಕ್ಕಳು ಪೇಟೆಗಳಲ್ಲಿ ಕೂತುಕೊಂಡು ಇತರರನ್ನು ಕರೆಯುತ್ತಾ:

[17] “ ‘ನಾವು ನಿಮಗಾಗಿ ಕೊಳಲೂದಿದೆವು, ನೀವು ಕುಣಿಯಲಿಲ್ಲ; ನಾವು ಶೋಕಗೀತೆ ಹಾಡಿದೆವು, ನೀವು ಗೋಳಾಡಲಿಲ್ಲ,’ ಎಂದು ಹೇಳುವವರಿಗೆ ಇದು ಹೋಲಿಕೆಯಾಗಿದೆ.

[18] “ಏಕೆಂದರೆ ಯೋಹಾನನು ಅನ್ನಪಾನಗಳನ್ನು ತೆಗೆದುಕೊಳ್ಳಲಿಲ್ಲ. ಅದಕ್ಕೆ ಅವರು, ‘ಅವನಿಗೆ ದೆವ್ವ ಹಿಡಿದಿದೆ,’ ಎಂದರು.

[19] ಮನುಷ್ಯಪುತ್ರನಾದ ನಾನು ಅನ್ನಪಾನ ಸೇವಿಸುವವನಾಗಿ ಬಂದೆನು. ಅದಕ್ಕೆ ಅವರು, ‘ಇಗೋ, ಹೊಟ್ಟೆಬಾಕನು, ಕುಡುಕನು, ಸುಂಕದವರ ಮತ್ತು ಪಾಪಿಗಳ ಸ್ನೇಹಿತನು,’ ಎಂದು ಹೇಳುತ್ತಾರೆ. ಆದರೆ ಜ್ಞಾನವು ತನ್ನ ಕೃತ್ಯಗಳಿಂದಲೇ ಸಮರ್ಥಿಸಲಾಗುತ್ತದೆ,” ಎಂದು ಹೇಳಿದರು.

[20] ತರುವಾಯ ತಮ್ಮ ಹೆಚ್ಚಾದ ಮಹತ್ಕಾರ್ಯಗಳು ನಡೆದ ಪಟ್ಟಣಗಳು, ದೇವರ ಕಡೆಗೆ ತಿರುಗಿಕೊಳ್ಳದೆ ಇದ್ದುದರಿಂದ ಯೇಸು ಅವುಗಳನ್ನು ಗದರಿಸತೊಡಗಿ,

[21] “ಖೊರಾಜಿನೇ, ನಿನಗೆ ಕಷ್ಟ! ಬೇತ್ಸಾಯಿದವೇ, ನಿನಗೆ ಕಷ್ಟ! ಏಕೆಂದರೆ ನಿಮ್ಮಲ್ಲಿ ನಡೆದ ಮಹತ್ಕಾರ್ಯಗಳು ಟೈರ್ ಮತ್ತು ಸೀದೋನ್ ಪಟ್ಟಣಗಳಲ್ಲಿ ನಡೆದಿದ್ದರೆ, ಅಲ್ಲಿಯವರು ಬಹಳ ಕಾಲದ ಹಿಂದೆಯೇ, ಗೋಣಿತಟ್ಟನ್ನು ಸುತ್ತಿಕೊಂಡು ಬೂದಿಯಲ್ಲಿ ಕುಳಿತುಕೊಂಡು ದೇವರ ಕಡೆ ತಿರುಗಿಕೊಳ್ಳುತ್ತಿದ್ದರು.

[22] ಆದರೂ ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ಟೈರ್ ಮತ್ತು ಸೀದೋನ್ ಪಟ್ಟಣಗಳ ಗತಿಯು ಹೆಚ್ಚು ತಾಳಬಹುದಾಗಿರುವುದು.

[23] ಕಪೆರ್ನೌಮೇ, ನೀನು ಪರಲೋಕಕ್ಕೆ ಹೋಗುವೆ ಎಂದು ನೆನೆಸುತ್ತೀಯೋ? ಇಲ್ಲ, ನೀನು ಪಾತಾಳಕ್ಕೆ ಇಳಿಯುವೆ. ಏಕೆಂದರೆ ನಿನ್ನೊಳಗೆ ನಡೆದಿರುವ ಮಹತ್ಕಾರ್ಯಗಳು ಸೊದೋಮಿನಲ್ಲಿ ನಡೆದಿದ್ದರೆ, ಅದು ಇಂದಿನವರೆಗೂ ಉಳಿಯುತ್ತಿತ್ತು.

[24] ಆದರೆ ನ್ಯಾಯತೀರ್ಪಿನ ದಿನದಲ್ಲಿ ನಿಮಗಿಂತಲೂ ಸೊದೋಮ್ ಪಟ್ಟಣದ ಗತಿಯು ಹೆಚ್ಚು ತಾಳಬಹುದಾಗಿರುವುದು ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.

[25] ಆ ಸಮಯದಲ್ಲಿ ಯೇಸು, “ತಂದೆಯೇ, ಪರಲೋಕ ಭೂಲೋಕಗಳ ಒಡೆಯನೇ, ನೀವು ಈ ವಿಷಯಗಳನ್ನು ಜ್ಞಾನಿಗಳಿಂದಲೂ ಬುದ್ಧಿವಂತರಿಂದಲೂ ಮರೆಮಾಡಿ, ಶಿಶುಗಳಿಗೆ ಪ್ರಕಟ ಮಾಡಿರುವುದರಿಂದ ನಾನು ನಿಮ್ಮನ್ನು ಕೊಂಡಾಡುತ್ತೇನೆ.

[26] ಹೌದು ತಂದೆಯೇ, ಹೀಗೆ ಮಾಡುವುದು ನಿಮ್ಮ ದೃಷ್ಟಿಗೆ ಒಳ್ಳೆಯದಾಗಿ ತೋಚಿತು.

[27] “ನನ್ನ ತಂದೆ ಎಲ್ಲವನ್ನೂ ನನಗೆ ಒಪ್ಪಿಸಿದ್ದಾರೆ. ತಂದೆಯ ಹೊರತು ಬೇರೆ ಯಾರೂ ಪುತ್ರನನ್ನು ಅರಿಯರು ಮತ್ತು ಪುತ್ರನು ಯಾರಿಗೆ ತಂದೆಯನ್ನು ಪ್ರಕಟಪಡಿಸಲು ಇಷ್ಟಪಡುತ್ತಾನೋ ಅವರೇ ಹೊರತು ಯಾರೂ ತಂದೆಯನ್ನು ಅರಿಯರು.

[28] “ಕಷ್ಟಪಡುವವರೇ, ಹೊರೆಹೊತ್ತವರೇ, ನೀವೆಲ್ಲರೂ ನನ್ನ ಬಳಿಗೆ ಬನ್ನಿರಿ, ನಾನು ನಿಮಗೆ ವಿಶ್ರಾಂತಿಯನ್ನು ಕೊಡುವೆನು.

[29] ನಾನು ಸಾತ್ವಿಕನೂ ದೀನ ಹೃದಯದವನೂ ಆಗಿರುವುದರಿಂದ ನೀವು ನನ್ನ ನೊಗವನ್ನು ನಿಮ್ಮ ಮೇಲೆ ತೆಗೆದುಕೊಂಡು ನನ್ನಿಂದ ಕಲಿತುಕೊಳ್ಳಿರಿ. ಆಗ ನಿಮ್ಮ ಆತ್ಮಗಳಿಗೆ ವಿಶ್ರಾಂತಿಯನ್ನು ಕಂಡುಕೊಳ್ಳುವಿರಿ.

[30] ನನ್ನ ನೊಗವು ಮೃದುವಾದದ್ದೂ ನನ್ನ ಹೊರೆಯು ಹಗುರವಾದದ್ದೂ ಆಗಿದೆ,” ಎಂದು ಹೇಳಿದರು.

ಮತ್ತಾಯ — Chapters