Skip to content
Opens in a new window
Listen to this chapter • 10:15

[1] ಅವರು ಯೆರೂಸಲೇಮಿಗೆ ಸಮೀಪಿಸಿ ಓಲಿವ್ ಗುಡ್ಡದ ಬೇತ್ಫಗೆ ಬಂದಾಗ, ಯೇಸು ಇಬ್ಬರು ಶಿಷ್ಯರನ್ನು ಕಳುಹಿಸಿ,

[2] ಅವರಿಗೆ, “ನಿಮ್ಮ ಎದುರಿಗಿರುವ ಹಳ್ಳಿಗೆ ಹೋಗಿರಿ. ತಕ್ಷಣವೇ ಒಂದು ಕತ್ತೆಯು ತನ್ನ ಮರಿಯೊಂದಿಗೆ ಕಟ್ಟಿರುವುದನ್ನು ನೀವು ಕಾಣುವಿರಿ. ಅವುಗಳನ್ನು ಬಿಚ್ಚಿ ನನ್ನ ಬಳಿಗೆ ತೆಗೆದುಕೊಂಡು ಬನ್ನಿರಿ.

[3] ಯಾವನಾದರೂ ನಿಮಗೆ ಏನಾದರೂ ಕೇಳಿದರೆ, ನೀವು ಅವನಿಗೆ, ‘ಇವು ಕರ್ತದೇವರಿಗೆ ಅವಶ್ಯವಾಗಿವೆ’ ಎಂದು ಹೇಳಿರಿ. ಆಗ ಅವನು ಅವುಗಳನ್ನು ಕೂಡಲೇ ಕಳುಹಿಸುವನು,” ಎಂದು ಹೇಳಿದರು.

[4] ಇದೆಲ್ಲವೂ ಪವಿತ್ರ ವೇದದಲ್ಲಿ ಪ್ರವಾದಿಯ ಮುಖಾಂತರ ಹೇಳಿದ ಮಾತು ನೆರವೇರುವಂತೆ ಆಯಿತು. ಅದೇನೆಂದರೆ,

[5] “ಚೀಯೋನಿನ ಪುತ್ರಿಗೆ ಹೇಳಿರಿ, ‘ಇಗೋ, ನಿನ್ನ ಅರಸನು, ಸಾತ್ವಿಕನಾಗಿ, ಕತ್ತೆಯನ್ನೂ, ಕತ್ತೆಯಮರಿಯನ್ನೂ ಹತ್ತಿದವನಾಗಿ ನಿನ್ನ ಬಳಿಗೆ ಬರುತ್ತಾನೆ.’ ”

[6] ಆಗ ಶಿಷ್ಯರು ಹೊರಟುಹೋಗಿ ಯೇಸು ತಮಗೆ ಅಪ್ಪಣೆ ಕೊಟ್ಟಂತೆಯೇ ಮಾಡಿದರು.

[7] ಅವರು ಕತ್ತೆಯನ್ನೂ ಅದರ ಮರಿಯನ್ನೂ ತಂದು ಅವುಗಳ ಮೇಲೆ ತಮ್ಮ ಬಟ್ಟೆಗಳನ್ನು ಹಾಕಿದರು; ಯೇಸು ಅದರ ಮೇಲೆ ಕೂತುಕೊಂಡರು.

[8] ಆಗ ಜನರ ದೊಡ್ಡ ಸಮೂಹವು ತಮ್ಮ ಬಟ್ಟೆಗಳನ್ನು ದಾರಿಯಲ್ಲಿ ಹಾಸಿದರು. ಇತರರು ಮರಗಳಿಂದ ಕೊಂಬೆಗಳನ್ನು ಕೊಯ್ದು ದಾರಿಯಲ್ಲಿ ಹರಡಿದರು.

[9] ಯೇಸುವಿನ ಮುಂದೆಯೂ ಹಿಂದೆಯೂ ಹೋಗುತ್ತಿದ್ದ ಜನರ ಸಮೂಹಗಳು, “ದಾವೀದನ ಪುತ್ರನಿಗೆ ಹೊಸನ್ನ!” “ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ!” “ಮಹೋನ್ನತದಲ್ಲಿ ಜಯ!” ಎಂದು ಘೋಷಿಸಿದರು.

[10] ಯೆರೂಸಲೇಮಿಗೆ ಪ್ರವೇಶಿಸಿದಾಗ, ಪಟ್ಟಣದಲ್ಲಿ ಕೋಲಾಹಲವುಂಟಾಗಿ, “ಇವರು ಯಾರು?” ಎಂದು ಕೇಳಿದರು.

[11] ಅದಕ್ಕೆ ಜನಸಮೂಹವು, “ಇವರು ಯೇಸು, ಗಲಿಲಾಯದ ನಜರೇತಿನ ಪ್ರವಾದಿ,” ಎಂದು ಹೇಳಿತು.

[12] ಯೇಸು ದೇವಾಲಯದ ಅಂಗಳದೊಳಗೆ ಹೋಗಿ ಮಾರುತ್ತಿದ್ದವರನ್ನೂ ಕೊಂಡುಕೊಳ್ಳುತ್ತಿದ್ದವರನ್ನೂ ಹೊರಗಟ್ಟಿದರು. ಹಣ ವಿನಿಮಯ ಮಾಡುತ್ತಿದ್ದವರ ಮೇಜುಗಳನ್ನೂ ಪಾರಿವಾಳ ಮಾರುವವರ ಆಸನಗಳನ್ನೂ ಕೆಡವಿಹಾಕಿದರು.

[13] ಯೇಸು ಅವರಿಗೆ, “ ‘ನನ್ನ ಮನೆಯು ಪ್ರಾರ್ಥನೆಯ ಮನೆಯಾಗಿದೆ,’ ಎಂದು ಬರೆದದೆ. ಆದರೆ ನೀವಾದರೋ ಅದನ್ನು, ‘ಕಳ್ಳರ ಗವಿಯನ್ನಾಗಿ’ ಮಾಡಿದ್ದೀರಿ,” ಎಂದು ಹೇಳಿದರು.

[14] ಆಗ ಕುರುಡರು ಮತ್ತು ಕುಂಟರು ದೇವಾಲಯದಲ್ಲಿ ಅವರ ಬಳಿಗೆ ಬಂದರು. ಯೇಸು ಅವರನ್ನು ಸ್ವಸ್ಥಮಾಡಿದರು.

[15] ಯೇಸು ಮಾಡಿದ ಅದ್ಭುತಕಾರ್ಯಗಳನ್ನು ಮತ್ತು ಮಕ್ಕಳು ದೇವಾಲಯದಲ್ಲಿ, “ದಾವೀದನ ಪುತ್ರನಿಗೆ ಹೊಸನ್ನ,” ಎಂದು ಕೂಗುವುದನ್ನು ಮುಖ್ಯಯಾಜಕರೂ ನಿಯಮ ಬೋಧಕರೂ ಕಂಡು ಕೋಪಗೊಂಡರು.

[16] “ಮಕ್ಕಳು ಹೇಳುವುದೇನೆಂದು ನಿನಗೆ ಕೇಳಿಸುತ್ತಿದೆಯೋ?” ಎಂದು ಯೇಸುವನ್ನು ಕೇಳಿದರು. ಯೇಸು, “ಹೌದು,” ಎಂದು ಉತ್ತರಿಸಿ ಅವರಿಗೆ, “ ‘ಸಣ್ಣ ಮಕ್ಕಳ ಮತ್ತು ಹಾಲುಣ್ಣುವ ಕೂಸುಗಳ ಬಾಯಿಂದ ನೀನು ಸ್ತೋತ್ರವನ್ನು ಸಿದ್ಧಿಗೆ ತಂದಿದ್ದೀ,’ ಎಂಬುದನ್ನು ಓದಲಿಲ್ಲವೋ?” ಎಂದರು.

[17] ಯೇಸು ಅವರನ್ನು ಬಿಟ್ಟು ಪಟ್ಟಣದಿಂದ ಹೊರಟು ಬೇಥಾನ್ಯಕ್ಕೆ ಹೋಗಿ, ಅಲ್ಲಿ ರಾತ್ರಿ ಉಳಿದುಕೊಂಡರು.

[18] ಬೆಳಿಗ್ಗೆ ಪಟ್ಟಣಕ್ಕೆ ಹಿಂದಿರುಗಿ ಬರುತ್ತಿದ್ದಾಗ, ಯೇಸುವಿಗೆ ಹಸಿವಾಯಿತು.

[19] ಯೇಸು ದಾರಿಯಲ್ಲಿ ಒಂದು ಅಂಜೂರದ ಮರವನ್ನು ಕಂಡು, ಅದರ ಹತ್ತಿರಕ್ಕೆ ಬಂದಾಗ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ. ಆಗ ಯೇಸು, ಆ ಮರಕ್ಕೆ, “ಇನ್ನು ಮೇಲೆ ಎಂದೆಂದಿಗೂ ನಿನ್ನಲ್ಲಿ ಫಲವು ಬಾರದಿರಲಿ,” ಎಂದರು. ತಕ್ಷಣವೇ ಅಂಜೂರದ ಮರವು ಒಣಗಿ ಹೋಯಿತು.

[20] ಶಿಷ್ಯರು ಅದನ್ನು ಕಂಡು ಆಶ್ಚರ್ಯದಿಂದ, “ಇಷ್ಟು ಬೇಗನೆ ಈ ಅಂಜೂರದ ಮರವು ಒಣಗಿಹೋಯಿತಲ್ಲಾ?” ಎಂದು ಕೇಳಿದರು.

[21] ಯೇಸು ಉತ್ತರವಾಗಿ ಅವರಿಗೆ, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ಸಂದೇಹ ಪಡದೆ ನಂಬಿದರೆ, ನಾನು ಈ ಅಂಜೂರದ ಮರಕ್ಕೆ ಮಾಡಿದಂತೆಯೇ ನೀವೂ ಮಾಡುವಿರಿ. ಇದಲ್ಲದೆ ನೀವು ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು’ ಎಂದು ಹೇಳಿದರೂ ಅದು ಹಾಗೆಯೇ ಆಗುವುದು.

[22] ನೀವು ನಂಬಿಕೆಯಿಂದ ಪ್ರಾರ್ಥನೆಯಲ್ಲಿ ಏನೇನು ಬೇಡಿಕೊಳ್ಳುವಿರೋ ಅವುಗಳನ್ನೆಲ್ಲಾ ಪಡೆಯುವಿರಿ,” ಎಂದರು.

[23] ಅನಂತರ ಯೇಸು ದೇವಾಲಯಕ್ಕೆ ಬಂದು ಬೋಧಿಸುತ್ತಿದ್ದಾಗ, ಮುಖ್ಯಯಾಜಕರೂ ಜನರ ಹಿರಿಯರೂ ಯೇಸುವಿನ ಬಳಿಗೆ ಬಂದು, “ಯಾವ ಅಧಿಕಾರದಿಂದ ನೀನು ಇವುಗಳನ್ನು ಮಾಡುತ್ತೀ? ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?” ಎಂದು ಕೇಳಿದರು.

[24] ಅದಕ್ಕೆ ಯೇಸು, “ನಾನು ಸಹ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ; ಅದಕ್ಕೆ ನೀವು ನನಗೆ ಉತ್ತರ ಹೇಳಿದರೆ ನಾನು ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುತ್ತೇನೆ. ಎಂದು ಹೇಳಿ,

[25] ದೀಕ್ಷಾಸ್ನಾನ ಕೊಡುವ ಅಧಿಕಾರವು ಯೋಹಾನನಿಗೆ ಎಲ್ಲಿಂದ ಬಂತು? ಪರಲೋಕದಿಂದಲೋ ಇಲ್ಲವೆ ಮನುಷ್ಯರಿಂದಲೋ?” ಎಂದು ಕೇಳಿದ್ದಕ್ಕೆ, ಅವರು ತಮ್ಮತಮ್ಮೊಳಗೆ ತರ್ಕಿಸುತ್ತಾ, “ಪರಲೋಕದಿಂದ ಎಂದು ನಾವು ಹೇಳಿದರೆ, ‘ನೀವು ಏಕೆ ಅವನನ್ನು ನಂಬಲಿಲ್ಲ?’ ಎಂದು ಕೇಳುವರು.

[26] ‘ಮನುಷ್ಯರಿಂದ ಬಂತು,’ ಎಂದು ಹೇಳಿದರೆ ಜನರಿಗೆ ನಾವು ಭಯಪಡಬೇಕಾಗಿದೆ. ಏಕೆಂದರೆ ಯೋಹಾನನು ಪ್ರವಾದಿಯೆಂದು ಎಲ್ಲರೂ ಗೌರವಿಸುತ್ತಾರೆ,” ಎಂದುಕೊಂಡರು.

[27] ತರುವಾಯ ಅವರು ಯೇಸುವಿಗೆ, “ನಮಗೆ ಗೊತ್ತಿಲ್ಲ” ಎಂದರು. ಅದಕ್ಕೆ ಯೇಸು ಅವರಿಗೆ, “ನಾನು ಸಹ ಯಾವ ಅಧಿಕಾರದಿಂದ ಇವುಗಳನ್ನು ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ,” ಎಂದರು.

[28] ಅನಂತರ ಯೇಸು, “ನಿಮಗೇನು ಅನಿಸುತ್ತದೆ? ಒಬ್ಬ ಮನುಷ್ಯನಿಗೆ ಇಬ್ಬರು ಮಕ್ಕಳಿದ್ದರು. ಅವನು ಮೊದಲನೆಯವನ ಬಳಿಗೆ ಬಂದು, ‘ಮಗನೇ, ಹೋಗಿ ಈ ಹೊತ್ತು ನನ್ನ ದ್ರಾಕ್ಷಿಯ ತೋಟದಲ್ಲಿ ಕೆಲಸ ಮಾಡು,’ ಎಂದು ಹೇಳಿದನು.

[29] “ಮಗನು ಉತ್ತರವಾಗಿ, ‘ನಾನು ಹೋಗುವುದಿಲ್ಲ’ ಎಂದು ಹೇಳಿ, ಅನಂತರ ಪಶ್ಚಾತ್ತಾಪಪಟ್ಟು ತೋಟಕ್ಕೆ ಹೋದನು.

[30] “ಆಮೇಲೆ ತಂದೆ ಎರಡನೆಯವನ ಬಳಿಗೆ ಬಂದು ಅದೇ ಪ್ರಕಾರ ಅವನಿಗೆ ಹೇಳಿದನು. ಅದಕ್ಕವನು ಉತ್ತರವಾಗಿ, ‘ಅಪ್ಪಾ, ನಾನು ಹೋಗುತ್ತೇನೆ,’ ಎಂದು ಹೇಳಿದರೂ ಹೋಗಲಿಲ್ಲ.

[31] “ಈ ಇಬ್ಬರಲ್ಲಿ ಯಾವನು ತನ್ನ ತಂದೆಯ ಇಷ್ಟದಂತೆ ನಡೆದವನು?” ಎಂದು ಕೇಳಲು ಅವರು ಯೇಸುವಿಗೆ, “ಮೊದಲನೆಯವನೇ,” ಎಂದರು. ಆಗ ಯೇಸು ಅವರಿಗೆ, “ಸುಂಕದವರೂ ವೇಶ್ಯೆಯರೂ ನಿಮಗಿಂತ ಮೊದಲು ದೇವರ ರಾಜ್ಯದೊಳಗೆ ಸೇರುವರೆಂದು ನಿಮಗೆ ನಿಜವಾಗಿ ಹೇಳುತ್ತೇನೆ.

[32] ಏಕೆಂದರೆ ಯೋಹಾನನು ನೀತಿ ಮಾರ್ಗದೊಡನೆ ನಿಮ್ಮ ಬಳಿಗೆ ಬಂದನು. ನೀವು ಅವನನ್ನು ನಂಬಲಿಲ್ಲ. ಆದರೆ ಸುಂಕದವರೂ ವೇಶ್ಯೆಯರೂ ಅವನನ್ನು ನಂಬಿದರು. ನೀವು ಇದನ್ನು ಕಂಡ ಮೇಲೆಯೂ ಅವನನ್ನು ನಂಬುವಂತೆ ಪಶ್ಚಾತ್ತಾಪ ಪಡಲಿಲ್ಲ.”

[33] “ಮತ್ತೊಂದು ಸಾಮ್ಯವನ್ನು ಕೇಳಿರಿ: ಒಬ್ಬ ಯಜಮಾನನು ದ್ರಾಕ್ಷಿಯ ತೋಟವನ್ನು ಮಾಡಿ ಅದರ ಸುತ್ತಲೂ ಬೇಲಿ ಹಾಕಿದನು. ಅದರೊಳಗೆ ದ್ರಾಕ್ಷಾರಸವನ್ನು ತೆಗೆಯಲು ಆಲೆಯನ್ನು ಅಗೆದು ಕಾವಲುಗೋಪುರವನ್ನು ಕಟ್ಟಿ ರೈತರಿಗೆ ಗೇಣಿಗೆ ಕೊಟ್ಟು ದೂರದೇಶಕ್ಕೆ ಹೋದನು.

[34] ಫಲದ ಕಾಲ ಸಮೀಪಿಸಿದಾಗ, ತನ್ನ ಫಲಗಳನ್ನು ಪಡೆದುಕೊಳ್ಳುವುದಕ್ಕೆ ತನ್ನ ಸೇವಕರನ್ನು ಗೇಣಿಗೆದಾರರ ಬಳಿಗೆ ಕಳುಹಿಸಿದನು.

[35] “ಆಗ ಗೇಣಿಗೆದಾರರು ಅವನ ಸೇವಕರನ್ನು ಹಿಡಿದು ಒಬ್ಬನನ್ನು ಹೊಡೆದು, ಇನ್ನೊಬ್ಬನನ್ನು ಕೊಂದುಹಾಕಿದರು. ಮತ್ತೊಬ್ಬನ ಮೇಲೆ ಕಲ್ಲೆಸೆದರು.

[36] ಯಜಮಾನನು ಮೊದಲನೆಯವರಿಗಿಂತ ಹೆಚ್ಚು ಸೇವಕರನ್ನು ಕಳುಹಿಸಿಕೊಟ್ಟನು. ಗೇಣಿಗೆದಾರರು ಅವರಿಗೂ ಹಾಗೆಯೇ ಮಾಡಿದರು.

[37] ಕೊನೆಗೆ ಯಜಮಾನನು, ‘ಅವರು ನನ್ನ ಮಗನಿಗಾದರೂ ಮರ್ಯಾದೆ ಕೊಡುವರು’ ಎಂದುಕೊಂಡು ತನ್ನ ಮಗನನ್ನು ಅವರ ಬಳಿಗೆ ಕಳುಹಿಸಿದನು.

[38] “ಆದರೆ ಗೇಣಿಗೆದಾರರು ಆ ಮಗನನ್ನು ನೋಡಿ ತಮ್ಮತಮ್ಮೊಳಗೆ, ‘ಇವನೇ ಬಾಧ್ಯಸ್ಥನು. ಬನ್ನಿರಿ, ನಾವು ಇವನನ್ನು ಕೊಂದು ಇವನ ಆಸ್ತಿಯನ್ನು ಕಿತ್ತುಕೊಳ್ಳೋಣ,’ ಎಂದುಕೊಂಡು,

[39] ಅವನನ್ನು ಹಿಡಿದು ದ್ರಾಕ್ಷಿಯ ತೋಟದಿಂದ ಹೊರಗೆ ಹಾಕಿ ಅವನನ್ನು ಕೊಂದುಹಾಕಿದರು.

[40] “ಹೀಗಿರುವುದರಿಂದ ದ್ರಾಕ್ಷಿತೋಟದ ಯಜಮಾನನೇ ಬಂದಾಗ, ಆ ಗೇಣಿಗೆದಾರರಿಗೆ ಏನು ಮಾಡುವನು?” ಎಂದು ಯೇಸು ಕೇಳಲು,

[41] ಮುಖ್ಯಯಾಜಕರೂ ಜನರ ಹಿರಿಯರೂ ಯೇಸುವಿಗೆ, “ಅವನು ಆ ದುಷ್ಟ ಮನುಷ್ಯರನ್ನು ಕ್ರೂರವಾಗಿ ಸಂಹರಿಸುವನು. ತಕ್ಕ ಕಾಲದಲ್ಲಿ ತನಗೆ ಫಲಗಳನ್ನು ಸಲ್ಲಿಸುವ ಬೇರೆ ಗೇಣಿಗೆದಾರರಿಗೆ ತನ್ನ ದ್ರಾಕ್ಷಿತೋಟವನ್ನು ಗೇಣಿಗೆ ಕೊಡುವನು,” ಎಂದು ಹೇಳಿದರು.

[42] ಯೇಸು ಅವರಿಗೆ, “ ‘ಮನೆ ಕಟ್ಟುವವರು ತಿರಸ್ಕರಿಸಿದ ಕಲ್ಲೇ ಮುಖ್ಯವಾದ ಮೂಲೆಗಲ್ಲಾಯಿತು. ಇದು ಕರ್ತನಿಂದಲೇ ಆಯಿತು. ಇದು ನಮ್ಮ ದೃಷ್ಟಿಯಲ್ಲಿ ಆಶ್ಚರ್ಯವಾಗಿ ತೋರುತ್ತದೆ,’ ಎಂಬುದನ್ನು ನೀವು ಪವಿತ್ರ ವೇದದಲ್ಲಿ ಎಂದೂ ಓದಲಿಲ್ಲವೇ?

[43] “ಆದ್ದರಿಂದ, ದೇವರ ರಾಜ್ಯವು ನಿಮ್ಮಿಂದ ಕಿತ್ತುಕೊಂಡು ತಕ್ಕ ಫಲಕೊಡುವ ಜನರಿಗೆ ಕೊಡಲಾಗುವುದು ಎಂದು ನಾನು ನಿಮಗೆ ಹೇಳುತ್ತೇನೆ.

[44] ಈ ಕಲ್ಲಿನ ಮೇಲೆ ಬೀಳುವವನು ತುಂಡುತುಂಡಾಗುವನು, ಆದರೆ ಇದೇ ಕಲ್ಲು ಯಾವನ ಮೇಲೆ ಬೀಳುವುದೋ ಅವನನ್ನು ಅದು ಜಜ್ಜಿ ಹೋಗುವಂತೆ ಮಾಡುವುದು,” ಎಂದರು.

[45] ಮುಖ್ಯಯಾಜಕರೂ ಫರಿಸಾಯರೂ ಯೇಸುವಿನ ಸಾಮ್ಯಗಳನ್ನು ಕೇಳಿದಾಗ, ತಮ್ಮ ವಿಷಯದಲ್ಲಿಯೇ ಅದನ್ನು ಹೇಳಿದರೆಂದು ಅರ್ಥಮಾಡಿಕೊಂಡರು.

[46] ಅವರು ಯೇಸುವನ್ನು ಹಿಡಿಯುವುದಕ್ಕೆ ಪ್ರಯತ್ನಿಸಿದರು. ಆದರೂ ಜನಸಮೂಹಕ್ಕೆ ಭಯಪಟ್ಟರು. ಏಕೆಂದರೆ ಜನರು ಯೇಸುವನ್ನು ಪ್ರವಾದಿಯೆಂದು ನಂಬಿದ್ದರು.

ಮತ್ತಾಯ — Chapters