Skip to content
Opens in a new window
Listen to this chapter • 6:20

[1] ಯೇಸು ಪರ್ವತವನ್ನು ಇಳಿದು ಬಂದಾಗ, ಜನರು ದೊಡ್ಡ ಸಮೂಹವಾಗಿ ಅವರನ್ನು ಹಿಂಬಾಲಿಸಿದರು.

[2] ಅಲ್ಲಿಗೆ ಕುಷ್ಠರೋಗಿಯಾಗಿದ್ದ ಒಬ್ಬನು ಬಂದು, ಯೇಸುವಿನ ಮುಂದೆ ಮೊಣಕಾಲೂರಿ, “ಕರ್ತನೇ, ನೀವು ಮನಸ್ಸು ಮಾಡಿದರೆ, ನನ್ನನ್ನು ಶುದ್ಧಮಾಡಬಲ್ಲಿರಿ,” ಎಂದನು.

[3] ಆಗ ಯೇಸು ಕೈಚಾಚಿ ಅವನನ್ನು ಮುಟ್ಟಿ, “ನನಗೆ ಮನಸ್ಸಿದೆ, ನೀನು ಶುದ್ಧನಾಗು,” ಎಂದರು. ತಕ್ಷಣವೇ ಅವನ ಕುಷ್ಠವು ಹೋಗಿ ಅವನು ಶುದ್ಧನಾದನು.

[4] ಆಗ ಯೇಸು ಅವನಿಗೆ, “ನೋಡು ಇದನ್ನು ನೀನು ಯಾರಿಗೂ ಹೇಳಬೇಡ, ಹೋಗಿ ಯಾಜಕನಿಗೆ ನಿನ್ನನ್ನು ತೋರಿಸಿಕೊಂಡು ಜನರಿಗೆ ಸಾಕ್ಷಿಯಾಗಿರುವಂತೆ ಮೋಶೆಯು ಆಜ್ಞಾಪಿಸಿದ ಕಾಣಿಕೆಯನ್ನು ಅರ್ಪಿಸು,” ಎಂದು ಹೇಳಿದರು.

[5] ಯೇಸು ಕಪೆರ್ನೌಮಿಗೆ ಪ್ರವೇಶಿಸಿದಾಗ, ಒಬ್ಬ ಶತಾಧಿಪತಿಯು ಅವರ ಬಳಿಗೆ ಬಂದು,

[6] “ಸ್ವಾಮೀ, ನನ್ನ ಸೇವಕನು ಪಾರ್ಶ್ವವಾಯು ರೋಗದಿಂದ ಘೋರವಾಗಿ ನರಳುತ್ತಾ ಮನೆಯಲ್ಲಿ ಹಾಸಿಗೆ ಹಿಡಿದಿದ್ದಾನೆ,” ಎಂದು ಹೇಳಿಕೊಂಡನು.

[7] ಯೇಸು ಅವನಿಗೆ, “ನಾನು ಬಂದು ಅವನನ್ನು ಸ್ವಸ್ಥಮಾಡುತ್ತೇನೆ,” ಎಂದರು.

[8] ಅದಕ್ಕೆ ಶತಾಧಿಪತಿಯು, “ಸ್ವಾಮೀ, ನನ್ನ ಮನೆಯೊಳಗೆ ನೀವು ಬರುವಷ್ಟು ಯೋಗ್ಯತೆ ನನಗಿಲ್ಲ. ಆದರೆ, ನೀವು ಒಂದು ಮಾತು ಮಾತ್ರ ಹೇಳಿರಿ, ಆಗ ನನ್ನ ಸೇವಕ ಗುಣಹೊಂದುವನು.

[9] ಏಕೆಂದರೆ ನಾನು ಸಹ ಮತ್ತೊಬ್ಬ ಅಧಿಕಾರಿಯ ಕೈಕೆಳಗಿರುವವನು, ನನ್ನ ಅಧೀನದಲ್ಲಿಯೂ ಸೈನಿಕರಿದ್ದಾರೆ ಮತ್ತು ನಾನು ಒಬ್ಬನಿಗೆ, ‘ಹೋಗು’ ಎಂದರೆ ಅವನು ಹೋಗುತ್ತಾನೆ. ಮತ್ತೊಬ್ಬನಿಗೆ, ‘ಬಾ’ ಎಂದರೆ ಅವನು ಬರುತ್ತಾನೆ. ನನ್ನ ಸೇವಕನಿಗೆ, ‘ಇದನ್ನು ಮಾಡು,’ ಎಂದರೆ ಅವನು ಮಾಡುತ್ತಾನೆ,” ಎಂದು ಹೇಳಿದನು.

[10] ಯೇಸು ಇದನ್ನು ಕೇಳಿ, ಆಶ್ಚರ್ಯಪಟ್ಟು ತಮ್ಮ ಹಿಂದೆ ಬರುತ್ತಿದ್ದವರಿಗೆ, “ಇಂಥ ಮಹಾ ನಂಬಿಕೆಯನ್ನು ನಾನು ಇಸ್ರಾಯೇಲ್ ಜನರಲ್ಲಿಯೂ ಕಾಣಲಿಲ್ಲ ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.

[11] ಅನೇಕರು ಪೂರ್ವದಿಂದಲೂ ಪಶ್ಚಿಮದಿಂದಲೂ ಬಂದು, ಪರಲೋಕ ರಾಜ್ಯದಲ್ಲಿ ಅಬ್ರಹಾಮ್, ಇಸಾಕ್, ಯಾಕೋಬರೊಂದಿಗೆ ಹಬ್ಬದ ಔತಣಕ್ಕೆ ಕುಳಿತುಕೊಳ್ಳುವರು.

[12] ಆದರೆ ರಾಜ್ಯದ ಮಕ್ಕಳು ಹೊರಗೆ ಕತ್ತಲೆಗೆ ದಬ್ಬಲಾಗುವರು, ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು ಎಂದು ನಿಮಗೆ ಹೇಳುತ್ತೇನೆ,” ಎಂದರು.

[13] ಅನಂತರ ಯೇಸು ಆ ಶತಾಧಿಪತಿಗೆ, “ಹೋಗು, ನೀನು ನಂಬಿದಂತೆಯೇ ನಿನಗಾಗಲಿ,” ಎಂದು ಹೇಳಿದರು. ಅವನ ಸೇವಕನು ಅದೇ ಗಳಿಗೆಯಲ್ಲಿ ಸ್ವಸ್ಥನಾದನು.

[14] ತರುವಾಯ ಯೇಸು ಪೇತ್ರನ ಮನೆಗೆ ಬಂದು, ಅವನ ಅತ್ತೆ ಜ್ವರದಿಂದ ಮಲಗಿರುವುದನ್ನು ಕಂಡರು.

[15] ಯೇಸು ಆಕೆಯ ಕೈಯನ್ನು ಮುಟ್ಟಿದಾಗ ಜ್ವರವು ಆಕೆಯನ್ನು ಬಿಟ್ಟುಹೋಯಿತು. ಆಕೆಯು ಎದ್ದು ಅವರನ್ನು ಉಪಚರಿಸಿದಳು.

[16] ಸಂಜೆಯಾದಾಗ, ದೆವ್ವಹಿಡಿದ ಅನೇಕರನ್ನು ಜನರು ಯೇಸುವಿನ ಬಳಿಗೆ ಕರೆತಂದರು. ಯೇಸು ಮಾತಿನಿಂದಲೇ ದೆವ್ವಗಳನ್ನು ಬಿಡಿಸಿದ್ದಲ್ಲದೆ, ಎಲ್ಲಾ ರೋಗಪೀಡಿತರನ್ನೂ ಸ್ವಸ್ಥಪಡಿಸಿದರು.

[17] ಹೀಗೆ, “ಅವರು ತಾವೇ ನಮ್ಮ ಬಲಹೀನತೆಗಳನ್ನು ತೆಗೆದುಕೊಂಡು, ನಮ್ಮ ರೋಗಗಳನ್ನು ಹೊತ್ತುಕೊಂಡರು,” ಎಂದು ಯೆಶಾಯ ಪ್ರವಾದಿಯು ಹೇಳಿದ್ದು ನೆರವೇರಿತು.

[18] ಯೇಸು ತಮ್ಮ ಸುತ್ತಲಿದ್ದ ಜನರ ದೊಡ್ಡ ಸಮೂಹವನ್ನು ಕಂಡು, ಆಚೆದಡಕ್ಕೆ ಹೋಗಲು ಅಪ್ಪಣೆಕೊಟ್ಟರು.

[19] ಆಗ ಒಬ್ಬ ನಿಯಮ ಬೋಧಕ ಬಂದು ಯೇಸುವಿಗೆ, “ಬೋಧಕರೇ, ನೀವು ಎಲ್ಲಿಗೆ ಹೋದರೂ ನಾನು ನಿಮ್ಮನ್ನು ಹಿಂಬಾಲಿಸುವೆನು,” ಎಂದನು.

[20] ಅದಕ್ಕೆ ಯೇಸು ಅವನಿಗೆ, “ನರಿಗಳಿಗೆ ಗುಹೆಗಳಿವೆ, ಆಕಾಶದಲ್ಲಿ ಹಾರಾಡುವ ಪಕ್ಷಿಗಳಿಗೆ ಗೂಡುಗಳಿವೆ, ಆದರೆ ಮನುಷ್ಯಪುತ್ರನಾದ ನನಗೆ ತಲೆಯಿಡುವುದಕ್ಕೂ ಸ್ಥಳ ಇಲ್ಲ,” ಎಂದರು.

[21] ಮತ್ತೊಬ್ಬ ಶಿಷ್ಯನು ಅವರಿಗೆ, “ಕರ್ತದೇವರೇ, ಮೊದಲು ನಾನು ಹೋಗಿ ನನ್ನ ತಂದೆಯ ಶವಸಂಸ್ಕಾರ ಮಾಡಿಬರಲು ಅನುಮತಿಕೊಡಿರಿ,” ಎಂದನು.

[22] ಆದರೆ ಯೇಸು ಅವನಿಗೆ, “ನನ್ನನ್ನು ಹಿಂಬಾಲಿಸು, ಸತ್ತವರೇ ತಮ್ಮವರಲ್ಲಿ ಸತ್ತುಹೋದವರನ್ನು ಸಮಾಧಿ ಮಾಡಿಕೊಳ್ಳಲಿ,” ಎಂದು ಹೇಳಿದರು.

[23] ಯೇಸುವು ದೋಣಿಯನ್ನು ಹತ್ತಲು, ಶಿಷ್ಯರು ಸಹ ಅವರ ಸಂಗಡ ಹೋದರು.

[24] ಇದ್ದಕ್ಕಿದ್ದ ಹಾಗೆ, ಸರೋವರದಲ್ಲಿ ದೊಡ್ಡ ಬಿರುಗಾಳಿ ಎದ್ದ ಕಾರಣ ದೋಣಿಯು ಅಲೆಗಳಿಂದ ಮುಚ್ಚುತ್ತಿತ್ತು. ಆದರೆ ಯೇಸು ನಿದ್ರಿಸುತ್ತಿದ್ದರು.

[25] ಆಗ ಶಿಷ್ಯರು ಯೇಸುವಿನ ಬಳಿ ಬಂದು ಅವರನ್ನು ಎಬ್ಬಿಸಿ, “ಕರ್ತನೇ, ಕಾಪಾಡು! ನಾವು ಮುಳುಗುತ್ತಿದ್ದೇವೆ!” ಎಂದರು.

[26] ಆಗ ಯೇಸು ಅವರಿಗೆ, “ಅಲ್ಪವಿಶ್ವಾಸವುಳ್ಳವರೇ, ನೀವು ಏಕೆ ಭಯಪಡುತ್ತೀರಿ?” ಎಂದು ಹೇಳಿ, ಎದ್ದು ಬಿರುಗಾಳಿಯನ್ನೂ ಸರೋವರವನ್ನೂ ಗದರಿಸಿದರು. ಆಗ ಎಲ್ಲವೂ ಪ್ರಶಾಂತವಾಯಿತು.

[27] ಆದರೆ ಶಿಷ್ಯರು ಆಶ್ಚರ್ಯದಿಂದ, “ಇವರು ಎಂಥಾ ಮನುಷ್ಯನಾಗಿರಬಹುದು? ಗಾಳಿಯೂ ಸರೋವರವೂ ಸಹ ಇವರ ಮಾತುಗಳನ್ನು ಕೇಳುತ್ತವಲ್ಲಾ!” ಎಂದರು.

[28] ಯೇಸು ಆಚೆಯ ಕಡೆಯಲ್ಲಿದ್ದ ಗದರೇನರ ಪ್ರಾಂತಕ್ಕೆ ಬಂದಾಗ, ದೆವ್ವ ಹಿಡಿದಿದ್ದ ಇಬ್ಬರು ಸಮಾಧಿಯ ಗುಹೆಗಳಿಂದ ಬಂದು ಯೇಸುವಿಗೆ ಎದುರಾದರು. ಅವರು ಬಹು ಕ್ರೂರಿಗಳಾಗಿದ್ದುದರಿಂದ ಯಾರೂ ಆ ಮಾರ್ಗವಾಗಿ ಹೋಗಲಾಗುತ್ತಿರಲಿಲ್ಲ.

[29] ಆಗ ಅವರು, “ದೇವಪುತ್ರನೇ, ನಮ್ಮ ಗೊಡವೆ ನಿಮಗೆ ಏಕೆ? ಸಮಯಕ್ಕೆ ಮುಂಚೆಯೇ ನಮ್ಮನ್ನು ಪೀಡಿಸಲು ಇಲ್ಲಿಗೆ ಬಂದೆಯಾ?” ಎಂದು ಕೂಗಿ ಹೇಳಿದರು.

[30] ಆಗ ಅವರಿಂದ ಸ್ವಲ್ಪ ದೂರದಲ್ಲಿ ಹಂದಿಗಳ ದೊಡ್ಡ ಹಿಂಡು ಮೇಯುತ್ತಿತ್ತು.

[31] “ನೀನು ನಮ್ಮನ್ನು ಹೊರಗೆ ಹಾಕುವುದಾದರೆ ಆ ಹಂದಿಗಳ ಹಿಂಡಿಗೆ ನಮ್ಮನ್ನು ಕಳುಹಿಸಿಕೊಡಿ,” ಎಂದು ದೆವ್ವಗಳು ಯೇಸುವನ್ನು ಬೇಡಿಕೊಂಡವು.

[32] ಯೇಸು ಅವುಗಳಿಗೆ, “ಹೋಗಿರಿ,” ಎಂದರು. ಆಗ ಅವು ಹೊರಗೆ ಬಂದು ಹಂದಿಗಳ ಹಿಂಡನ್ನು ಹೊಕ್ಕವು. ಆಗ ಆ ಹಿಂಡೆಲ್ಲಾ ಕಡಿದಾದ ಬದಿಯಿಂದ ಓಡಿಹೋಗಿ ಸರೋವರದೊಳಗೆ ಬಿದ್ದು ಸತ್ತು ಹೋದವು.

[33] ಆ ಹಂದಿಗಳನ್ನು ಮೇಯಿಸುತ್ತಿದ್ದವರು ಓಡಿಹೋಗಿ, ಪಟ್ಟಣದೊಳಕ್ಕೆ ಹೋಗಿ ದೆವ್ವ ಹಿಡಿದಿದ್ದವರಿಗೆ ಸಂಭವಿಸಿದ್ದನ್ನು ವರದಿಮಾಡಿದರು.

[34] ಆಗ ಪಟ್ಟಣದವರೆಲ್ಲರೂ ಯೇಸುವನ್ನು ಕಾಣುವುದಕ್ಕೆ ಹೊರಗೆ ಬಂದರು. ಅವರು ಯೇಸುವನ್ನು ಕಂಡು, ತಮ್ಮ ಪ್ರಾಂತವನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು.

ಮತ್ತಾಯ — Chapters