[1] ಯೇಸು ತಮ್ಮ ಹನ್ನೆರಡು ಮಂದಿ ಶಿಷ್ಯರನ್ನು ತಮ್ಮ ಬಳಿಗೆ ಕರೆದು, ಅಶುದ್ಧಾತ್ಮಗಳನ್ನು ಓಡಿಸುವುದಕ್ಕೂ ಎಲ್ಲಾ ತರವಾದ ವ್ಯಾಧಿಯನ್ನೂ ರೋಗವನ್ನೂ ಸ್ವಸ್ಥಮಾಡುವುದಕ್ಕೂ ಅವರಿಗೆ ಅಧಿಕಾರವನ್ನು ಕೊಟ್ಟರು.
[2] ಆ ಹನ್ನೆರಡು ಮಂದಿ ಅಪೊಸ್ತಲರ ಹೆಸರುಗಳು ಹೀಗಿದ್ದವು: ಮೊದಲನೆಯವನು, ಪೇತ್ರ ಎಂದು ಎನಿಸಿಕೊಂಡ ಸೀಮೋನ, ಅವನ ಸಹೋದರ ಅಂದ್ರೆಯ; ಜೆಬೆದಾಯನ ಮಗ ಯಾಕೋಬ ಮತ್ತು ಅವನ ಸಹೋದರ ಯೋಹಾನ;
[3] ಫಿಲಿಪ್ಪ, ಬಾರ್ತೊಲೊಮಾಯ; ತೋಮ, ಸುಂಕದವನಾದ ಮತ್ತಾಯ; ಅಲ್ಫಾಯನ ಮಗ ಯಾಕೋಬ, ತದ್ದಾಯ;
[4] ಕಾನಾನ್ಯನಾದ ಸೀಮೋನ ಮತ್ತು ಯೇಸುವನ್ನು ಹಿಡಿದುಕೊಟ್ಟ ಇಸ್ಕರಿಯೋತ ಯೂದ.
[5] ಯೇಸು ಈ ಹನ್ನೆರಡು ಮಂದಿಯನ್ನು ಕಳುಹಿಸುವಾಗ ಅವರಿಗೆ ಅಪ್ಪಣೆ ಕೊಟ್ಟಿದ್ದೇನೆಂದರೆ: “ಯೆಹೂದ್ಯರಲ್ಲದವರ ಬಳಿಗೆ ಹೋಗಬೇಡಿರಿ, ಸಮಾರ್ಯರ ಊರನ್ನೂ ಪ್ರವೇಶಿಸಬೇಡಿರಿ.
[6] ಆದರೆ ತಪ್ಪಿಹೋದ ಕುರಿಗಳಾದ ಇಸ್ರಾಯೇಲಿನ ಮನೆತನದವರ ಬಳಿಗೆ ಹೋಗಿರಿ.
[7] ನೀವು ಹೋಗುತ್ತಾ, ‘ಪರಲೋಕ ರಾಜ್ಯವು ಸಮೀಪವಾಯಿತು,’ ಎಂದು ಸಾರಿ ಹೇಳಿರಿ.
[8] ರೋಗಿಗಳನ್ನು ಸ್ವಸ್ಥಮಾಡಿರಿ, ಮರಣಹೊಂದಿದವರನ್ನು ಎಬ್ಬಿಸಿರಿ, ಕುಷ್ಠರೋಗಿಗಳನ್ನು ಶುದ್ಧಮಾಡಿರಿ, ದೆವ್ವಗಳನ್ನು ಬಿಡಿಸಿರಿ. ನೀವು ಉಚಿತವಾಗಿ ಪಡೆದಿದ್ದೀರಿ; ಉಚಿತವಾಗಿ ಕೊಡಿರಿ.
[9] “ನಿಮ್ಮ ನಡುಕಟ್ಟುಗಳಲ್ಲಿ ಬಂಗಾರ, ಬೆಳ್ಳಿ ಮತ್ತು ತಾಮ್ರದ ನಾಣ್ಯಗಳನ್ನು ಇಟ್ಟುಕೊಳ್ಳಬೇಡಿರಿ.
[10] ಪ್ರಯಾಣಕ್ಕೆ ಚೀಲವನ್ನಾಗಲಿ, ಎರಡು ಅಂಗಿಗಳನ್ನಾಗಲಿ, ಪಾದರಕ್ಷೆಗಳನ್ನಾಗಲಿ, ಕೋಲುಗಳನ್ನಾಗಲಿ ತೆಗೆದುಕೊಳ್ಳಬೇಡಿರಿ. ಏಕೆಂದರೆ ಕೆಲಸದವನು ತನ್ನ ಜೀವನಾಧಾರಕ್ಕೆ ಅರ್ಹನು.
[11] ನೀವು ಯಾವುದಾದರೂ ಒಂದು ಪಟ್ಟಣವನ್ನು, ಇಲ್ಲವೆ ಹಳ್ಳಿಯನ್ನು ಪ್ರವೇಶಿಸುವಾಗ, ಅದರಲ್ಲಿ ಯೋಗ್ಯ ವ್ಯಕ್ತಿ ಯಾರೆಂದು ವಿಚಾರಿಸಿರಿ, ಅಲ್ಲಿಂದ ಹೊರಡುವವರೆಗೆ ಅಲ್ಲಿಯೇ ತಂಗಿರಿ.
[12] ನೀವು ಒಂದು ಮನೆಯೊಳಗೆ ಪ್ರವೇಶಿಸಿದಾಗ, ಆ ಮನೆಯವರನ್ನು ಹರಸಿರಿ.
[13] ಆ ಮನೆಯು ಅಯೋಗ್ಯವಾಗಿದ್ದರೆ, ನಿಮ್ಮ ಸಮಾಧಾನವು ನಿಮಗೆ ಹಿಂದಿರುಗಲಿ.
[14] ಯಾರಾದರೂ ನಿಮ್ಮನ್ನು ಸ್ವಾಗತಿಸದೆ ಹೋದರೆ ಇಲ್ಲವೆ ನಿಮ್ಮ ಮಾತುಗಳನ್ನು ಕೇಳದೆ ಹೋದರೆ, ನೀವು ಆ ಮನೆಯನ್ನು ಇಲ್ಲವೆ ಆ ಪಟ್ಟಣವನ್ನು ಬಿಟ್ಟು ಹೊರಡುವಾಗ ನಿಮ್ಮ ಪಾದಗಳಿಗೆ ಹತ್ತಿದ ಧೂಳನ್ನು ಝಾಡಿಸಿಬಿಡಿರಿ.
[15] ನ್ಯಾಯತೀರ್ಪಿನ ದಿನದಲ್ಲಿ ಸೊದೋಮ್ ಮತ್ತು ಗೊಮೋರ ಪಟ್ಟಣಗಳ ಗತಿಯು ಆ ಪಟ್ಟಣಕ್ಕಿಂತ ಹೆಚ್ಚು ತಾಳುವಂಥದ್ದಾಗಿರುವುದು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
[16] “ತೋಳಗಳ ಮಧ್ಯದಲ್ಲಿ ಕುರಿಗಳನ್ನು ಕಳುಹಿಸುವಂತೆ ನಾನು ನಿಮ್ಮನ್ನು ಕಳುಹಿಸುತ್ತೇನೆ. ಆದ್ದರಿಂದ ನೀವು ಸರ್ಪಗಳಂತೆ ಜಾಣರೂ ಪಾರಿವಾಳಗಳಂತೆ ನಿಷ್ಕಪಟಿಗಳೂ ಆಗಿರಿ.
[17] ಆದರೆ ಜನರ ವಿಷಯದಲ್ಲಿ ಎಚ್ಚರಿಕೆಯಾಗಿರಿ. ಏಕೆಂದರೆ ಅವರು ನಿಮ್ಮನ್ನು ನ್ಯಾಯಸ್ಥಾನಗಳಿಗೆ ಒಪ್ಪಿಸುವರು. ತಮ್ಮ ಸಭಾಮಂದಿರಗಳಲ್ಲಿ ನಿಮ್ಮನ್ನು ಕೊರಡೆಗಳಿಂದ ಹೊಡೆಯುವರು.
[18] ನನ್ನ ನಿಮಿತ್ತವಾಗಿ ನಿಮ್ಮನ್ನು ಅಧಿಕಾರಿಗಳ ಮತ್ತು ಅರಸರ ಮುಂದೆ ಒಯ್ಯುವರು. ಹೀಗೆ ಅವರಿಗೂ ಯೆಹೂದ್ಯರಲ್ಲದವರಿಗೂ ನೀವು ಸಾಕ್ಷಿಗಳಾಗುವಿರಿ.
[19] ಆದರೆ ಅವರು ನಿಮ್ಮನ್ನು ಬಂಧಿಸುವಾಗ, ನೀವು ಹೇಗೆ ಇಲ್ಲವೆ ಏನು ಮಾತನಾಡಬೇಕೆಂದು ಯೋಚಿಸಬೇಡಿರಿ. ನೀವು ಏನು ಮಾತನಾಡಬೇಕೆಂಬುದು ಆ ಗಳಿಗೆಯಲ್ಲೇ ನಿಮಗೆ ತಿಳಿಸಲಾಗುವುದು,
[20] ಏಕೆಂದರೆ ಮಾತನಾಡುವವರು ನೀವಲ್ಲ, ನಿಮ್ಮ ತಂದೆಯ ಆತ್ಮವೇ ನಿಮ್ಮೊಳಗಿಂದ ಮಾತನಾಡುವರು.
[21] “ಸಹೋದರನು ತನ್ನ ಸಹೋದರನನ್ನೂ, ತಂದೆಯು ಮಗನನ್ನೂ ಮರಣಕ್ಕೆ ಒಪ್ಪಿಸುವರು. ಮಕ್ಕಳು ತಮ್ಮ ತಂದೆತಾಯಿಗಳಿಗೆ ವಿರೋಧವಾಗಿ ಎದ್ದು ಅವರನ್ನು ಕೊಲ್ಲಿಸುವರು.
[22] ನನ್ನ ಹೆಸರಿನ ನಿಮಿತ್ತವಾಗಿ ಎಲ್ಲರೂ ನಿಮ್ಮನ್ನು ದ್ವೇಷಮಾಡುವರು. ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆಹೊಂದುವನು.
[23] ಒಂದು ಸ್ಥಳದಲ್ಲಿ ನಿಮಗೆ ಹಿಂಸೆಯಾದರೆ ಇನ್ನೊಂದು ಸ್ಥಳಕ್ಕೆ ಓಡಿಹೋಗಿರಿ. ಮನುಷ್ಯಪುತ್ರನು ಬರುವಷ್ಟರಲ್ಲಿ ಇಸ್ರಾಯೇಲಿನ ಪಟ್ಟಣಗಳ ಸಂಚಾರವನ್ನು ನೀವು ಮುಗಿಸುವುದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
[24] “ತನ್ನ ಗುರುವಿಗಿಂತ ಶಿಷ್ಯನು ಶ್ರೇಷ್ಠನಲ್ಲ; ದಾಸನು ತನ್ನ ಯಜಮಾನನಿಗಿಂತ ಶ್ರೇಷ್ಠನಲ್ಲ.
[25] ಶಿಷ್ಯನು ತನ್ನ ಗುರುವಿನಂತೆಯೂ ದಾಸನು ತನ್ನ ಯಜಮಾನನಂತೆಯೂ ಇದ್ದರೆ ಸಾಕು. ಮನೆಯ ಯಜಮಾನನನ್ನೇ ಅವರು, ‘ಬೆಲ್ಜೆಬೂಲನು’ ಎಂದು ಕರೆದರೆ, ಯಜಮಾನನ ಮನೆಯವರನ್ನು ಇನ್ನೂ ಎಷ್ಟೋ ಕೆಟ್ಟದ್ದಾಗಿ ಕರೆಯುವರಲ್ಲವೇ!
[26] “ಆದ್ದರಿಂದ ಅವರಿಗೆ ಹೆದರಬೇಡಿರಿ, ಪ್ರಕಟಗೊಳ್ಳದಂತೆ ಯಾವುದೂ ಮುಚ್ಚಿಡಲಾಗುವುದಿಲ್ಲ, ತಿಳಿಯಲಾಗದಂತೆ ಯಾವುದೂ ಗುಪ್ತವಾಗಿರುವುದಿಲ್ಲ.
[27] ನಾನು ನಿಮಗೆ ಕತ್ತಲಲ್ಲಿ ಹೇಳುವುದನ್ನು ನೀವು ಬೆಳಕಿನಲ್ಲಿ ಹೇಳಿರಿ. ನೀವು ಕಿವಿಯಲ್ಲಿ ಕೇಳುವುದನ್ನು ಮಾಳಿಗೆಯ ಮೇಲೆ ಸಾರಿರಿ.
[28] ದೇಹವನ್ನು ಕೊಂದು ಆತ್ಮವನ್ನು ಕೊಲ್ಲಲಾಗದವರಿಗೆ ಹೆದರಬೇಡಿರಿ. ಆದರೆ ಆತ್ಮ ಮತ್ತು ದೇಹ ಎರಡನ್ನೂ ನರಕದಲ್ಲಿ ನಾಶಮಾಡಬಲ್ಲ ದೇವರಿಗೆ ಭಯಪಡಿರಿ.
[29] ಒಂದು ರೂಪಾಯಿಗೆ ಎರಡು ಗುಬ್ಬಿಗಳನ್ನು ಮಾರುವುದಿಲ್ಲವೇ? ಆದರೂ ನಿಮ್ಮ ತಂದೆಯ ಚಿತ್ತವಿಲ್ಲದೆ ಅವುಗಳಲ್ಲಿ ಒಂದಾದರೂ ನೆಲಕ್ಕೆ ಬೀಳುವುದಿಲ್ಲ.
[30] ನಿಮ್ಮ ತಲೆಯ ಕೂದಲುಗಳು ಸಹ ಎಲ್ಲವೂ ಎಣಿಕೆಯಾಗಿವೆ.
[31] ಆದ್ದರಿಂದ ಭಯಪಡಬೇಡಿರಿ; ಅನೇಕ ಗುಬ್ಬಿಗಳಿಗಿಂತಲೂ ನೀವು ಎಷ್ಟೋ ಮೌಲ್ಯವುಳ್ಳವರು.
[32] “ಜನರ ಮುಂದೆ ನನ್ನನ್ನು ಒಪ್ಪಿಕೊಳ್ಳುವ ಪ್ರತಿಯೊಬ್ಬನನ್ನು, ನಾನು ಸಹ ಪರಲೋಕದಲ್ಲಿ ನನ್ನ ತಂದೆಯ ಮುಂದೆ ಒಪ್ಪಿಕೊಳ್ಳುವೆನು.
[33] ಯಾವನಾದರೂ ಜನರ ಮುಂದೆ ನನ್ನನ್ನು ನಿರಾಕರಿಸಿದರೆ, ನಾನು ಸಹ ಅವನನ್ನು ಪರಲೋಕದಲ್ಲಿರುವ ನನ್ನ ತಂದೆಯ ಮುಂದೆ ನಿರಾಕರಿಸುವೆನು.
[34] “ನಾನು ಭೂಮಿಯ ಮೇಲೆ ಸಮಾಧಾನವನ್ನು ತರಲು ಬಂದೆನೆಂದು ಭಾವಿಸಬೇಡಿರಿ. ಸಮಾಧಾನವನ್ನಲ್ಲ, ಖಡ್ಗವನ್ನು ತರಲು ಬಂದೆನು.
[35] ಹೇಗೆಂದರೆ, “ ‘ಮಗನಿಗೂ ಅವನ ತಂದೆಗೂ, ಮಗಳಿಗೂ ಆಕೆಯ ತಾಯಿಗೂ, ಸೊಸೆಗೂ ಆಕೆಯ ಅತ್ತೆಗೂ ವಿರೋಧವನ್ನು ಹುಟ್ಟಿಸುವುದಕ್ಕೆ ನಾನು ಬಂದೆನು.
[36] ಒಬ್ಬ ಮನುಷ್ಯನಿಗೆ ಅವನ ಮನೆಯವರೇ ವೈರಿಗಳಾಗುವರು.’
[37] “ನನಗಿಂತ ಮೇಲಾಗಿ ತಂದೆಯನ್ನಾಗಲಿ, ತಾಯಿಯನ್ನಾಗಲಿ ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ. ಮಗನನ್ನಾಗಲಿ, ಮಗಳನ್ನಾಗಲಿ ನನಗಿಂತ ಮೇಲಾಗಿ ಪ್ರೀತಿಸುವವನು ನನ್ನವನಾಗಲು ಯೋಗ್ಯನಲ್ಲ.
[38] ತನ್ನ ಶಿಲುಬೆಯನ್ನು ತೆಗೆದುಕೊಂಡು ನನ್ನನ್ನು ಹಿಂಬಾಲಿಸದವನು ನನ್ನವನಾಗಲು ಯೋಗ್ಯನಲ್ಲ.
[39] ತನ್ನ ಪ್ರಾಣವನ್ನು ಕಂಡುಕೊಳ್ಳುವವನು ಅದನ್ನು ಕಳೆದುಕೊಳ್ಳುವನು. ನನ್ನ ನಿಮಿತ್ತವಾಗಿ ತನ್ನ ಪ್ರಾಣವನ್ನು ಕಳೆದುಕೊಳ್ಳುವವನು ಅದನ್ನು ಕಂಡುಕೊಳ್ಳುವನು.
[40] “ನಿಮ್ಮನ್ನು ಸ್ವಾಗತಿಸುವವರು ನನ್ನನ್ನು ಸ್ವಾಗತಿಸುತ್ತಾರೆ. ನನ್ನನ್ನು ಸ್ವಾಗತಿಸಿದವರು, ನನ್ನನ್ನು ಕಳುಹಿಸಿದ ತಂದೆಯನ್ನು ಸ್ವಾಗತಿಸುತ್ತಾರೆ.
[41] ಪ್ರವಾದಿಯೆಂದು ಪ್ರವಾದಿಯನ್ನು ಸ್ವಾಗತಿಸುವವರು ಪ್ರವಾದಿಯ ಪ್ರತಿಫಲವನ್ನು ಪಡೆಯುವರು; ನೀತಿವಂತನೆಂದು ನೀತಿವಂತನನ್ನು ಸ್ವಾಗತಿಸುವವರು ನೀತಿವಂತನ ಪ್ರತಿಫಲವನ್ನು ಪಡೆಯುವರು.
[42] ಯಾವನಾದರೂ ಈ ಚಿಕ್ಕವರಲ್ಲಿ ಒಬ್ಬನಿಗೆ ನನ್ನ ಶಿಷ್ಯನೆಂದು ಕೇವಲ ಒಂದು ಲೋಟ ತಣ್ಣೀರನ್ನು ಕುಡಿಯುವುದಕ್ಕೆ ಕೊಡುವವನು ತನ್ನ ಪ್ರತಿಫಲವನ್ನು ಕಳೆದುಕೊಳ್ಳುವುದೇ ಇಲ್ಲವೆಂದು ಸತ್ಯವಾಗಿ ನಾನು ನಿಮಗೆ ಹೇಳುತ್ತೇನೆ.”