Skip to content
Opens in a new window
Listen to this chapter • 6:34

[1] ಸದ್ದುಕಾಯರೊಂದಿಗೆ ಫರಿಸಾಯರು ಸಹ ಬಂದು ಯೇಸುವನ್ನು ಪರೀಕ್ಷಿಸುವುದಕ್ಕಾಗಿ, ಪರಲೋಕದಿಂದ ತಮಗೆ ಒಂದು ಸೂಚಕಕಾರ್ಯವನ್ನು ತೋರಿಸಬೇಕೆಂದು ಕೇಳಿದರು.

[2] ಯೇಸು ಉತ್ತರವಾಗಿ ಅವರಿಗೆ, “ಸಂಜೆಯಾದಾಗ ಆಕಾಶವು ಕೆಂಪಾಗಿದ್ದರೆ, ‘ಒಳ್ಳೆಯ ಹವಾಮಾನ ಇರುವುದು’ ಎಂದೂ

[3] ಬೆಳಿಗ್ಗೆ ಆಕಾಶವು ಮೋಡ ಕವಿದು ಕೆಂಪಾಗಿದ್ದರೆ, ‘ಇಂದು ಬಿರುಗಾಳಿ ಇರುವುದು’ ಎಂದೂ ನೀವು ಹೇಳುತ್ತೀರಿ. ಆಕಾಶದಲ್ಲಾಗುವ ಸೂಚನೆಗಳನ್ನು ನೀವು ಗ್ರಹಿಸಬಲ್ಲಿರಿ, ಆದರೆ ಕಾಲದ ಸೂಚನೆಗಳನ್ನು ನೀವು ಗ್ರಹಿಸಲಾರಿರಿ.

[4] ವ್ಯಭಿಚಾರಿಯಾದ ಈ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತದೆ, ಆದರೆ ಪ್ರವಾದಿ ಯೋನನಲ್ಲಿ ಆದ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಇದಕ್ಕೆ ಸಿಕ್ಕುವುದಿಲ್ಲ,” ಎಂದು ಹೇಳಿ, ಯೇಸು ಅವರನ್ನು ಬಿಟ್ಟು ಹೊರಟು ಹೋದರು.

[5] ಶಿಷ್ಯರು ರೊಟ್ಟಿಬುತ್ತಿಯನ್ನು ಕಟ್ಟಿಕೊಳ್ಳುವುದನ್ನು ಮರೆತು ಆಚೆದಡಕ್ಕೆ ಬಂದಿದ್ದರು.

[6] ಆಗ ಯೇಸು ಅವರಿಗೆ, “ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ಬಗ್ಗೆ ಎಚ್ಚರಿಕೆ ವಹಿಸಿ ಜಾಗರೂಕರಾಗಿರಿ,” ಎಂದು ಹೇಳಿದರು.

[7] ಅದಕ್ಕೆ ಅವರು ತಮ್ಮತಮ್ಮಲ್ಲಿಯೇ, “ನಾವು ರೊಟ್ಟಿ ತಂದಿಲ್ಲವೆಂದು ಹೀಗೆ ಹೇಳುತ್ತಾರೆ,” ಎಂದು ಮಾತನಾಡಿಕೊಂಡರು.

[8] ಯೇಸು ಅವರು ಮಾತನಾಡಿದ್ದನ್ನು ತಿಳಿದುಕೊಂಡು ಅವರಿಗೆ, “ಅಲ್ಪ ವಿಶ್ವಾಸದವರೇ, ನೀವು ರೊಟ್ಟಿ ಇಲ್ಲವೆಂದು ನಿಮ್ಮಲ್ಲಿ ಏಕೆ ಮಾತನಾಡಿಕೊಳ್ಳುತ್ತೀರಿ?

[9] ಐದು ರೊಟ್ಟಿಗಳನ್ನು ಐದು ಸಾವಿರ ಜನರಿಗೆ ಹಂಚಿದಾಗ, ಎಷ್ಟು ಬುಟ್ಟಿಗಳನ್ನು ತುಂಬಿದಿರೆಂದು ನೀವು ಇನ್ನೂ ಗ್ರಹಿಸಲಿಲ್ಲವೇ? ನಿಮಗೆ ನೆನಪಿಲ್ಲವೇ?

[10] ಇದಲ್ಲದೆ ಏಳು ರೊಟ್ಟಿಗಳನ್ನು ನಾಲ್ಕು ಸಾವಿರ ಜನರಿಗೆ ಹಂಚಿದಾಗ ಎಷ್ಟು ಬುಟ್ಟಿಗಳನ್ನು ತುಂಬಿದಿರಿ?

[11] ನಾನು ರೊಟ್ಟಿಯ ವಿಷಯದಲ್ಲಿ ಅಲ್ಲ, ಫರಿಸಾಯರ ಮತ್ತು ಸದ್ದುಕಾಯರ ಹುಳಿಹಿಟ್ಟಿನ ವಿಷಯದಲ್ಲಿ ಎಚ್ಚರವಾಗಿರಬೇಕೆಂದು ಹೇಳಿದ್ದನ್ನು ನೀವು ಗ್ರಹಿಸದೆ ಇರುವುದು ಹೇಗೆ?” ಎಂದು ಕೇಳಿದರು.

[12] ಆಗ ಅವರು, ರೊಟ್ಟಿ ಹುಳಿಯ ವಿಷಯದಲ್ಲಿ ಅಲ್ಲ, ಆದರೆ ಫರಿಸಾಯರ ಮತ್ತು ಸದ್ದುಕಾಯರ ಬೋಧನೆಯ ವಿಷಯದಲ್ಲಿ ತಾವು ಎಚ್ಚರವಾಗಿರಬೇಕೆಂದು ಯೇಸು ಹೇಳಿದ್ದನ್ನು ಗ್ರಹಿಸಿಕೊಂಡರು.

[13] ಯೇಸು ಕೈಸರೈಯ ಫಿಲಿಪ್ಪಿ ಪ್ರಾಂತಗಳಿಗೆ ಬಂದಾಗ ತಮ್ಮ ಶಿಷ್ಯರಿಗೆ, “ಮನುಷ್ಯಪುತ್ರನಾದ ನನ್ನನ್ನು ಯಾರೆಂದು ಜನರು ಹೇಳುತ್ತಾರೆ?” ಎಂದು ಕೇಳಿದರು.

[14] ಅದಕ್ಕೆ ಅವರು, “ಕೆಲವರು ಸ್ನಾನಿಕನಾದ ಯೋಹಾನನು ಎಂದು ಹೇಳುತ್ತಾರೆ, ಇನ್ನು ಕೆಲವರು ಎಲೀಯನು ಎನ್ನುತ್ತಾರೆ, ಬೇರೆಯವರು ಯೆರೆಮೀಯನು, ಇಲ್ಲವೆ ಪ್ರವಾದಿಗಳಲ್ಲಿ ಒಬ್ಬನು ಎಂದು ಹೇಳುತ್ತಾರೆ” ಎಂದರು.

[15] ಯೇಸು ಅವರಿಗೆ, “ಆದರೆ ನೀವು ನನ್ನನ್ನು ಯಾರೆನ್ನುತ್ತೀರಿ?” ಎಂದು ಕೇಳಿದರು.

[16] ಅದಕ್ಕೆ ಸೀಮೋನ ಪೇತ್ರನು ಉತ್ತರವಾಗಿ, “ನೀವು ಕ್ರಿಸ್ತ ಮತ್ತು ಜೀವಂತ ದೇವರ ಪುತ್ರರಾಗಿದ್ದೀರಿ,” ಎಂದು ಉತ್ತರಕೊಟ್ಟನು.

[17] ಯೇಸು ಅವನಿಗೆ, “ಯೋನನ ಮಗ ಸೀಮೋನನೇ, ನೀನು ಧನ್ಯನು. ಏಕೆಂದರೆ ಇದನ್ನು ಪ್ರಕಟಿಸಿದ್ದು ಮಾನವರಲ್ಲ. ಪರಲೋಕದಲ್ಲಿರುವ ನನ್ನ ತಂದೆಯೇ ಇದನ್ನು ನಿನಗೆ ಪ್ರಕಟಿಸಿದರು.

[18] ನಾನು ಸಹ ನಿನಗೆ ಹೇಳುವುದೇನಂದರೆ, ನೀನು ಪೇತ್ರನು. ಈ ಬಂಡೆಯ ಮೇಲೆ ನಾನು ನನ್ನ ಸಭೆಯನ್ನು ಕಟ್ಟುವೆನು. ಪಾತಾಳದ ದ್ವಾರಗಳು ಅದನ್ನು ಜಯಿಸಲಾರವು.

[19] ನಾನು ನಿನಗೆ ಪರಲೋಕ ರಾಜ್ಯದ ಬೀಗದ ಕೈಗಳನ್ನು ಕೊಡುವೆನು; ನೀನು ಭೂಮಿಯಲ್ಲಿ ಯಾವುದನ್ನು ಬಂಧಿಸುತ್ತೀಯೋ ಅದು ಪರಲೋಕದಲ್ಲಿಯೂ ಬಂಧಿತವಾಗುವುದು. ನೀನು ಭೂಮಿಯಲ್ಲಿ ಏನನ್ನು ಬಿಚ್ಚುತ್ತೀಯೋ ಅದು ಪರಲೋಕದಲ್ಲಿಯೂ ಬಿಚ್ಚಲಾಗುವುದು,” ಎಂದರು.

[20] ತರುವಾಯ ಯೇಸು, ತಾನೇ ಕ್ರಿಸ್ತ ಎಂಬುದನ್ನು ಯಾರಿಗೂ ಹೇಳಬಾರದೆಂದು ತಮ್ಮ ಶಿಷ್ಯರಿಗೆ ಆಜ್ಞಾಪಿಸಿದರು.

[21] ತಾವು ಯೆರೂಸಲೇಮಿಗೆ ಹೋಗಿ ಹೇಗೆ ಹಿರಿಯರಿಂದಲೂ ಮುಖ್ಯಯಾಜಕರಿಂದಲೂ ನಿಯಮ ಬೋಧಕರಿಂದಲೂ ಬಹು ಕಷ್ಟಗಳನ್ನು ಅನುಭವಿಸಿ ಕೊಲೆಗೀಡಾಗಿ ಮೂರನೆಯ ದಿನದಲ್ಲಿ ಜೀವಂತವಾಗಿ ಎದ್ದು ಬರುವುದು ಅವಶ್ಯವಾಗಿದೆ ಎಂದು ಯೇಸು ಅಂದಿನಿಂದ ತಮ್ಮ ಶಿಷ್ಯರಿಗೆ ತಿಳಿಸಲಾರಂಭಿಸಿದರು.

[22] ಆಗ ಪೇತ್ರನು ಯೇಸುವಿನ ಕೈಹಿಡಿದು, “ಹಾಗೆ ಆಗಬಾರದು ಸ್ವಾಮೀ! ಅದು ನಿಮಗೆ ಎಂದಿಗೂ ಸಂಭವಿಸಬಾರದು!” ಎಂದು ಹೇಳಿ ಯೇಸುವನ್ನು ಗದರಿಸಲಾರಂಭಿಸಿದನು.

[23] ಆಗ ಯೇಸು ತಿರುಗಿಕೊಂಡು ಪೇತ್ರನಿಗೆ, “ಸೈತಾನನೇ, ನನ್ನಿಂದ ತೊಲಗಿಹೋಗು! ನೀನು ನನಗೆ ಅಡ್ಡಿಯಾಗಿದ್ದೀ; ನಿನ್ನ ಆಲೋಚನೆ ಮನುಷ್ಯರದೇ ಹೊರತು ದೇವರದಲ್ಲ,” ಎಂದರು.

[24] ತರುವಾಯ ಯೇಸು ತಮ್ಮ ಶಿಷ್ಯರಿಗೆ, “ಯಾರಾದರೂ ನನ್ನ ಶಿಷ್ಯರಾಗುವುದಕ್ಕೆ ಬಯಸಿದರೆ, ಅವರು ತಮ್ಮನ್ನು ತಾವೇ ನಿರಾಕರಿಸಿ ತಮ್ಮ ಶಿಲುಬೆಯನ್ನು ಹೊತ್ತುಕೊಂಡು ನನ್ನನ್ನು ಹಿಂಬಾಲಿಸಲಿ.

[25] ತಮ್ಮ ಪ್ರಾಣವನ್ನು ಉಳಿಸಿಕೊಳ್ಳುವವರು ಅದನ್ನು ಕಳೆದುಕೊಳ್ಳುವರು, ಆದರೆ ನನ್ನ ನಿಮಿತ್ತವಾಗಿ ಯಾರಾದರೂ ತಮ್ಮ ಪ್ರಾಣವನ್ನು ಕಳೆದುಕೊಳ್ಳುವವರು ಅದನ್ನು ಕಂಡುಕೊಳ್ಳುವರು.

[26] ಒಬ್ಬ ವ್ಯಕ್ತಿ ಲೋಕವನ್ನೆಲ್ಲಾ ಸಂಪಾದಿಸಿಕೊಂಡರೂ ತಮ್ಮ ಸ್ವಂತ ಆತ್ಮವನ್ನೇ ನಷ್ಟಪಡಿಸಿಕೊಂಡರೆ ಅವರಿಗೆ ಲಾಭವೇನು? ಇಲ್ಲವೆ ತಮ್ಮ ಆತ್ಮಕ್ಕೆ ಬದಲಾಗಿ ಏನು ಕೊಡುವರು?

[27] ಮನುಷ್ಯಪುತ್ರನಾದ ನಾನು ನನ್ನ ತಂದೆಯ ಮಹಿಮೆಯಲ್ಲಿ ನನ್ನ ದೂತರೊಡನೆ ಬಂದಾಗ, ನಾನು ಪ್ರತಿಯೊಬ್ಬರಿಗೂ ಅವರವರ ಕೆಲಸಗಳಿಗೆ ತಕ್ಕಂತೆ ಪ್ರತಿಫಲವನ್ನು ಕೊಡುವೆನು.

[28] “ನಿಮಗೆ ನಿಜವಾಗಿ ಹೇಳುತ್ತೇನೆ: ಇಲ್ಲಿ ನಿಂತವರಲ್ಲಿ ಕೆಲವರು ಮನುಷ್ಯಪುತ್ರನಾದ ನಾನು ನನ್ನ ರಾಜ್ಯದಲ್ಲಿ ಬರುವುದನ್ನು ಕಾಣುವವರೆಗೆ ಮರಣವನ್ನು ಹೊಂದುವುದೇ ಇಲ್ಲ,” ಎಂದರು.

ಮತ್ತಾಯ — Chapters