Skip to content
Opens in a new window
Listen to this chapter • 8:55

[1] “ಪರಲೋಕ ರಾಜ್ಯವು ತಮ್ಮ ದೀಪಗಳನ್ನು ತೆಗೆದುಕೊಂಡು ಮದುಮಗನನ್ನು ಎದುರುಗೊಳ್ಳುವುದಕ್ಕಾಗಿ ಹೊರಟುಹೋದ ಹತ್ತು ಮಂದಿ ಕನ್ಯೆಯರಿಗೆ ಹೋಲಿಕೆಯಾಗಿರುವುದು.

[2] ಅವರಲ್ಲಿ ಐದು ಮಂದಿ ಬುದ್ಧಿವಂತೆಯರೂ ಐದು ಮಂದಿ ಬುದ್ಧಿಹೀನರೂ ಇದ್ದರು.

[3] ಬುದ್ಧಿಹೀನರು, ತಮ್ಮ ದೀಪಗಳನ್ನು ತೆಗೆದುಕೊಂಡರು, ಆದರೆ ತಮ್ಮೊಂದಿಗೆ ಎಣ್ಣೆಯನ್ನು ತೆಗೆದುಕೊಳ್ಳಲಿಲ್ಲ.

[4] ಬುದ್ಧಿವಂತೆಯರೋ, ತಮ್ಮ ದೀಪಗಳೊಂದಿಗೆ ಪಾತ್ರೆಯಲ್ಲಿ ಎಣ್ಣೆಯನ್ನೂ ತೆಗೆದುಕೊಂಡರು.

[5] ಮದುಮಗನು ತಡಮಾಡಿದಾಗ ಅವರೆಲ್ಲರೂ ತೂಕಡಿಸುತ್ತಾ ನಿದ್ರೆ ಹೋದರು.

[6] “ಮಧ್ಯರಾತ್ರಿಯಲ್ಲಿ, ‘ನೋಡಿರಿ, ಮದುಮಗನು ಬರುತ್ತಿದ್ದಾನೆ, ಅವನನ್ನು ಎದುರುಗೊಳ್ಳುವುದಕ್ಕಾಗಿ ಹೊರಡಿರಿ,’ ಎಂಬ ಕೂಗಾಯಿತು.

[7] “ಆಗ ಆ ಕನ್ಯೆಯರೆಲ್ಲರೂ ಎದ್ದು ತಮ್ಮ ದೀಪಗಳನ್ನು ಸರಿಪಡಿಸಿಕೊಂಡರು.

[8] ಬುದ್ಧಿಹೀನರು ಬುದ್ಧಿವಂತೆಯರಿಗೆ, ‘ನಿಮ್ಮ ಎಣ್ಣೆಯಲ್ಲಿ ನಮಗೂ ಕೊಂಚ ಕೊಡಿರಿ, ಏಕೆಂದರೆ ನಮ್ಮ ದೀಪಗಳು ಆರಿಹೋಗುತ್ತವೆ,’ ಎಂದರು.

[9] “ಆದರೆ ಬುದ್ಧಿವಂತೆಯರು ಉತ್ತರವಾಗಿ, ‘ಹಾಗಲ್ಲ, ಅದು ನಮಗೂ ಸಾಲದೆ ಹೋದೀತು. ಆದ್ದರಿಂದ ನೀವು ಮಾರುವವರ ಬಳಿಗೆ ಹೋಗಿ ನಿಮಗೋಸ್ಕರ ಕೊಂಡುಕೊಳ್ಳಿರಿ,’ ಎಂದರು.

[10] “ಅವರು ಕೊಂಡುಕೊಳ್ಳುವುದಕ್ಕೆ ಹೋದಾಗ, ಮದುಮಗನು ಬಂದನು. ಆಗ ಸಿದ್ಧವಾಗಿದ್ದವರು ಆತನೊಂದಿಗೆ ಮದುವೆಯ ಔತಣಕ್ಕೆ ಒಳಗೆ ಹೋದರು. ತರುವಾಯ ಬಾಗಿಲು ಮುಚ್ಚಲಾಯಿತು.

[11] “ಇದಾದ ಮೇಲೆ ಆ ಬೇರೆ ಕನ್ಯೆಯರು ಸಹ ಬಂದು, ‘ಕರ್ತನೇ, ಕರ್ತನೇ, ನಮಗೆ ಬಾಗಿಲನ್ನು ತೆರೆಯಿರಿ,’ ಎಂದರು.

[12] “ಆದರೆ ಆತನು ಉತ್ತರವಾಗಿ, ‘ನಾನು ನಿಮ್ಮನ್ನು ಅರಿಯೆನು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ,’ ಎಂದನು.

[13] “ಆದ್ದರಿಂದ ಎಚ್ಚರವಾಗಿರಿ, ಏಕೆಂದರೆ ಮನುಷ್ಯಪುತ್ರನಾದ ನನ್ನ ಬರುವ ದಿನವನ್ನಾಗಲಿ ಗಳಿಗೆಯನ್ನಾಗಲಿ ನೀವು ಅರಿಯದವರಾಗಿದ್ದೀರಿ, ಎಂದರು.

[14] “ಪರಲೋಕ ರಾಜ್ಯವು ದೂರದೇಶಕ್ಕೆ ಪ್ರಯಾಣ ಮಾಡುವ ಒಬ್ಬ ಮನುಷ್ಯನು ತನ್ನ ಸೇವಕರನ್ನು ಕರೆದು ಅವರಿಗೆ ತನ್ನ ಆಸ್ತಿಯನ್ನು ಒಪ್ಪಿಸಿದಂತೆ ಇದೆ.

[15] ಅವನು ಒಬ್ಬನಿಗೆ ಐದು ಚಿನ್ನದ ನಾಣ್ಯಗಳನ್ನು, ಇನ್ನೊಬ್ಬನಿಗೆ ಎರಡು, ಮತ್ತೊಬ್ಬನಿಗೆ ಒಂದು; ಹೀಗೆ ಅವನವನ ಸಾಮರ್ಥ್ಯದ ಪ್ರಕಾರ ಕೊಟ್ಟು ಕೂಡಲೇ ಪ್ರಯಾಣಮಾಡಿದನು.

[16] ಐದು ಚಿನ್ನದ ನಾಣ್ಯಗಳನ್ನು ಹೊಂದಿದವನು ಹೋಗಿ ಅವುಗಳಿಂದ ವ್ಯಾಪಾರಮಾಡಿ ಬೇರೆ ಐದು ಚಿನ್ನದ ನಾಣ್ಯಗಳನ್ನು ಸಂಪಾದಿಸಿದನು.

[17] ಅದೇ ಪ್ರಕಾರ, ಎರಡು ಚಿನ್ನದ ನಾಣ್ಯಗಳನ್ನು ಹೊಂದಿದವನು ಸಹ ಇನ್ನು ಬೇರೆ ಎರಡು ಚಿನ್ನದ ನಾಣ್ಯಗಳನ್ನು ಸಂಪಾದಿಸಿದನು.

[18] ಆದರೆ ಒಂದು ಚಿನ್ನದ ನಾಣ್ಯವನ್ನು ಹೊಂದಿದವನು ಹೋಗಿ ಭೂಮಿಯನ್ನು ಅಗೆದು, ತನ್ನ ಯಜಮಾನನ ಹಣವನ್ನು ಬಚ್ಚಿಟ್ಟನು.

[19] “ಬಹುಕಾಲವಾದ ಮೇಲೆ ಆ ಸೇವಕರ ಯಜಮಾನನು ಬಂದು ಅವರಿಂದ ಲೆಕ್ಕ ಕೇಳಿದನು.

[20] ಆಗ ಐದು ಚಿನ್ನದ ನಾಣ್ಯಗಳನ್ನು ಹೊಂದಿದ್ದವನು ಬಂದು ಬೇರೆ ಐದು ಚಿನ್ನದ ನಾಣ್ಯಗಳನ್ನು ತಂದು, ‘ಒಡೆಯನೇ, ನೀನು ನನಗೆ ಐದು ಚಿನ್ನದ ನಾಣ್ಯಗಳನ್ನು ಒಪ್ಪಿಸಿದ್ದೆ. ನೋಡು, ಅವುಗಳಲ್ಲದೆ ಇನ್ನೂ ಬೇರೆ ಐದು ಚಿನ್ನದ ನಾಣ್ಯಗಳನ್ನು ನಾನು ಸಂಪಾದಿಸಿದ್ದೇನೆ,’ ಎಂದನು.

[21] “ಆಗ ಅವನ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ, ಒಳ್ಳೆಯದನ್ನು ಮಾಡಿದ್ದಿ. ಚಿಕ್ಕ ಕಾರ್ಯದಲ್ಲಿ ನೀನು ನಂಬಿಗಸ್ತನಾದದ್ದರಿಂದ ನಾನು ನಿನ್ನನ್ನು ದೊಡ್ಡ ಕಾರ್ಯಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು. ನೀನು ನಿನ್ನ ಯಜಮಾನನ ಸಂತೋಷದಲ್ಲಿ ಭಾಗಿಯಾಗು,’ ಎಂದನು.

[22] “ಎರಡು ಚಿನ್ನದ ನಾಣ್ಯಗಳನ್ನು ಹೊಂದಿದ್ದವನು ಸಹ ಬಂದು, ‘ಒಡೆಯನೇ, ನೀನು ನನಗೆ ಎರಡು ಚಿನ್ನದ ನಾಣ್ಯಗಳನ್ನು ಒಪ್ಪಿಸಿದ್ದೆ. ನೋಡು, ಇನ್ನೂ ಎರಡು ಚಿನ್ನದ ನಾಣ್ಯಗಳನ್ನು ನಾನು ಸಂಪಾದಿಸಿದ್ದೇನೆ,’ ಎಂದನು.

[23] “ಆಗ ಯಜಮಾನನು ಅವನಿಗೆ, ‘ಭಲಾ, ನಂಬಿಗಸ್ತನಾದ ಒಳ್ಳೆಯ ಸೇವಕನೇ, ಒಳ್ಳೆಯದನ್ನು ಮಾಡಿದ್ದಿ. ಚಿಕ್ಕ ಕಾರ್ಯದಲ್ಲಿ ನೀನು ನಂಬಿಗಸ್ತನಾದದ್ದರಿಂದ, ನಾನು ನಿನ್ನನ್ನು ದೊಡ್ಡ ಕಾರ್ಯಗಳ ಮೇಲೆ ಅಧಿಕಾರಿಯನ್ನಾಗಿ ನೇಮಿಸುವೆನು. ನೀನು ನಿನ್ನ ಯಜಮಾನನ ಸಂತೋಷದಲ್ಲಿ ಭಾಗಿಯಾಗು,’ ಎಂದನು.

[24] “ಆಗ ಒಂದು ಚಿನ್ನದ ನಾಣ್ಯ ಹೊಂದಿದ್ದವನು ಬಂದು, ‘ಒಡೆಯನೇ, ನೀನು ಬಿತ್ತದಿರುವಲ್ಲಿ ಕೊಯ್ಯುವವನೂ ತೂರದಿರುವಲ್ಲಿ ಕೂಡಿಸುವವನೂ ಆಗಿರುವ ಕಠಿಣ ಮನುಷ್ಯನೆಂದು ನಾನು ಬಲ್ಲೆನು.

[25] ಆದ್ದರಿಂದ ನಾನು ಭಯಪಟ್ಟು ಹೋಗಿ ನಿನ್ನ ಚಿನ್ನದ ನಾಣ್ಯವನ್ನು ಭೂಮಿಯಲ್ಲಿ ಬಚ್ಚಿಟ್ಟೆನು. ನೋಡು, ನೀನು ಕೊಟ್ಟಿದ್ದನ್ನು ನಿನಗೇ ಕೊಡುತ್ತೇನೆ,’ ಎಂದನು.

[26] “ಅದಕ್ಕೆ ಅವನ ಯಜಮಾನನು ಉತ್ತರವಾಗಿ, ‘ಮೈಗಳ್ಳನಾದ ದುಷ್ಟ ಸೇವಕನೇ, ನಾನು ಬಿತ್ತದಿರುವಲ್ಲಿ ಕೊಯ್ಯುವವನೆಂತಲೂ ತೂರದಿರುವಲ್ಲಿ ಕೂಡಿಸುವವನೆಂತಲೂ ನೀನು ತಿಳಿದಿದ್ದೀಯಲ್ಲಾ.

[27] ಹಾಗಿದ್ದರೆ, ನೀನು ನನ್ನ ಹಣವನ್ನು ಬಡ್ಡಿ ಅಂಗಡಿಯಲ್ಲಿ ಕೊಡಬೇಕಾಗಿತ್ತು; ನಾನು ಬಂದಾಗ ಹಣವನ್ನು ಬಡ್ಡಿ ಸಮೇತವಾಗಿ ಪಡೆದುಕೊಳ್ಳುತ್ತಿದ್ದೆನು,’ ಎಂದು ಹೇಳಿ,

[28] “ತನ್ನ ಸೇವಕರಿಗೆ, ‘ಅವನಿಂದ ಆ ಚಿನ್ನದ ನಾಣ್ಯವನ್ನು ತೆಗೆದುಕೊಂಡು ಹತ್ತು ಚಿನ್ನದ ನಾಣ್ಯಗಳು ಇದ್ದವನಿಗೆ ಕೊಡಿರಿ.

[29] ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು, ಅವರಿಗೆ ಹೆಚ್ಚು ಸಮೃದ್ಧಿಯಾಗುವುದು. ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ತೆಗೆದುಕೊಳ್ಳಲಾಗುವುದು.

[30] ನಿಷ್ಪ್ರಯೋಜಕನಾದ ಆ ಸೇವಕನನ್ನು ನೀವು ಹೊರಗೆ ಕತ್ತಲೆಯಲ್ಲಿ ಹಾಕಿರಿ. ಅಲ್ಲಿ ಗೋಳಾಟವೂ ಹಲ್ಲು ಕಡಿಯೋಣವೂ ಇರುವವು,’ ಎಂದನು.

[31] “ಮನುಷ್ಯಪುತ್ರನಾದ ನಾನು ಮಹಿಮೆಯಲ್ಲಿ ಎಲ್ಲಾ ಪರಿಶುದ್ಧ ದೂತರೊಂದಿಗೆ ಬರುವಾಗ, ನನ್ನ ಮಹಿಮೆಯ ಸಿಂಹಾಸನದ ಮೇಲೆ ಕುಳಿತುಕೊಳ್ಳುವೆನು.

[32] ನನ್ನ ಮುಂದೆ ಎಲ್ಲಾ ಜನಾಂಗದವರನ್ನು ಒಟ್ಟುಗೂಡಿಸಲಾಗುವುದು. ಆಗ ಕುರುಬನು ತನ್ನ ಕುರಿಗಳನ್ನು ಆಡುಗಳಿಂದ ಪ್ರತ್ಯೇಕಿಸುವಂತೆಯೇ ನಾನು ಅವರನ್ನು ಪ್ರತ್ಯೇಕಿಸುವೆನು.

[33] ನಾನು ಕುರಿಗಳನ್ನು ನನ್ನ ಬಲಗಡೆಯಲ್ಲಿಯೂ ಆಡುಗಳನ್ನು ಎಡಗಡೆಯಲ್ಲಿಯೂ ನಿಲ್ಲಿಸುವೆನು.

[34] “ಆಗ ನಾನು ನನ್ನ ಬಲಗಡೆಯಲ್ಲಿರುವವರಿಗೆ, ‘ನನ್ನ ತಂದೆಯಿಂದ ಆಶೀರ್ವಾದ ಹೊಂದಿದವರೇ, ಬನ್ನಿರಿ, ಭೂಲೋಕಕ್ಕೆ ಅಸ್ತಿವಾರ ಹಾಕಿದ ದಿನದಿಂದ ನಿಮಗೋಸ್ಕರ ಸಿದ್ಧಮಾಡಿದ ರಾಜ್ಯವನ್ನು ಆಸ್ತಿಯನ್ನಾಗಿ ಹೊಂದಿರಿ.

[35] ನಾನು ಹಸಿದಿದ್ದೆನು, ನೀವು ನನಗೆ ಊಟವನ್ನು ಕೊಟ್ಟಿರಿ. ನಾನು ಬಾಯಾರಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಟ್ಟಿರಿ. ನಾನು ಪರದೇಶಿಯಾಗಿದ್ದೆನು, ನೀವು ನನಗೆ ಆಶ್ರಯ ಕೊಟ್ಟಿರಿ.

[36] ನಾನು ಬಟ್ಟೆಯಿಲ್ಲದವನಾಗಿದ್ದೆನು, ನೀವು ನನಗೆ ಉಡಿಸಿದಿರಿ. ನಾನು ಅಸ್ವಸ್ಥನಾಗಿದ್ದೆನು, ನೀವು ನನ್ನನ್ನು ಉಪಚರಿಸಿದಿರಿ. ನಾನು ಸೆರೆಯಲ್ಲಿದ್ದೆನು, ನೀವು ನನ್ನ ಬಳಿಗೆ ಬಂದಿರಿ,’ ಎಂದು ಹೇಳುವೆನು.

[37] “ಆಗ ಆ ನೀತಿವಂತರು ಉತ್ತರವಾಗಿ ನನಗೆ, ‘ಕರ್ತನೇ, ನೀನು ಯಾವಾಗ ಹಸಿದದ್ದನ್ನು ನೋಡಿ ನಾವು ನಿನಗೆ ಉಣಿಸಿದೆವು? ಇಲ್ಲವೆ ಬಾಯಾರಿದ್ದಾಗ ನಿನಗೆ ಕುಡಿಯುವುದಕ್ಕೆ ಕೊಟ್ಟೆವು?

[38] ನೀನು ಪರದೇಶಿಯಾಗಿರುವುದನ್ನು ನಾವು ಯಾವಾಗ ಕಂಡು ನಿನಗೆ ಆಶ್ರಯ ಕೊಟ್ಟೆವು? ಇಲ್ಲವೆ ಬಟ್ಟೆಯಿಲ್ಲದಿರುವಾಗ ನಿನಗೆ ಉಡಿಸಿದೆವು?

[39] ಯಾವಾಗ ನೀನು ಅಸ್ವಸ್ಥನಾಗಿ ಇಲ್ಲವೆ ಸೆರೆಯಲ್ಲಿದ್ದಾಗ ನಾವು ನಿನ್ನ ಬಳಿಗೆ ಬಂದೆವು?’ ಎಂದು ಕೇಳುವರು.

[40] “ಅದಕ್ಕೆ ನಾನು ಉತ್ತರವಾಗಿ ಅವರಿಗೆ, ‘ನಾನು ನಿಮಗೆ ನಿಜವಾಗಿ ಹೇಳುತ್ತೇನೆ: ನೀವು ಈ ನನ್ನ ಸಹೋದರರಲ್ಲಿ ಅತ್ಯಲ್ಪನಾದವನೊಬ್ಬನಿಗೆ, ಮಾಡಿದ್ದು ನನಗೇ ಮಾಡಿದಂತಾಯಿತು,’ ಎನ್ನುವೆನು.

[41] “ನಾನು ಎಡಗಡೆಯಲ್ಲಿರುವವರಿಗೆ, ‘ಶಾಪಗ್ರಸ್ತರೇ, ನೀವು ನನ್ನಿಂದ ತೊಲಗಿ ಸೈತಾನನಿಗೂ ಅವನ ದೂತರಿಗೂ ಸಿದ್ಧಮಾಡಿರುವ ನಿತ್ಯ ಬೆಂಕಿಯೊಳಕ್ಕೆ ಹೋಗಿರಿ.

[42] ನಾನು ಹಸಿದಿದ್ದೆನು, ನೀವು ನನಗೆ ಊಟ ಕೊಡಲಿಲ್ಲ. ನಾನು ಬಾಯಾರಿದವನಾಗಿದ್ದೆನು, ನೀವು ನನಗೆ ಕುಡಿಯುವುದಕ್ಕೆ ಕೊಡಲಿಲ್ಲ.

[43] ನಾನು ಪರದೇಶಿಯಾಗಿದ್ದೆನು, ನೀವು ನನ್ನನ್ನು ಒಳಕ್ಕೆ ಸೇರಿಸಿಕೊಳ್ಳಲಿಲ್ಲ. ಬಟ್ಟೆಯಿಲ್ಲದವನಾಗಿದ್ದಾಗ ನೀವು ನನಗೆ ಉಡಿಸಲಿಲ್ಲ. ಅಸ್ವಸ್ಥನಾಗಿದ್ದೆನು, ಸೆರೆಮನೆಯಲ್ಲಿದ್ದೆನು, ನೀವು ನನ್ನನ್ನು ಸಂದರ್ಶಿಸಲಿಲ್ಲ,’ ಎಂದು ಹೇಳುವೆನು.

[44] “ಆಗ ಅವರು ಸಹ ಉತ್ತರವಾಗಿ ನನಗೆ, ‘ಕರ್ತನೇ, ನೀನು ಹಸಿದಿದ್ದನ್ನೂ ಬಾಯಾರಿದ್ದನ್ನೂ ಪರದೇಶಿಯಾದದ್ದನ್ನೂ ಬಟ್ಟೆಯಿಲ್ಲದವನಾಗಿದ್ದದ್ದನ್ನೂ ಅಸ್ವಸ್ಥನಾಗಿದ್ದದ್ದನ್ನೂ ಸೆರೆಯಲ್ಲಿದ್ದದ್ದನ್ನೂ ನಾವು ಯಾವಾಗ ನೋಡಿ ನಿನಗೆ ಉಪಚಾರಮಾಡಲಿಲ್ಲ?’ ಎಂದು ಕೇಳುವರು.

[45] “ಆಗ ನಾನು ಅವರಿಗೆ ಉತ್ತರವಾಗಿ, ‘ನಾನು ನಿಮಗೆ ಸತ್ಯವಾಗಿ ಹೇಳುವುದೇನೆಂದರೆ, ನೀವು ಇವರಲ್ಲಿ ಅತ್ಯಲ್ಪನಾದ ಒಬ್ಬನಿಗೆ ಏನೇನು ಮಾಡಲಿಲ್ಲವೋ ಅದನ್ನು ನನಗೂ ಮಾಡಲಿಲ್ಲ,’ ಎಂದು ಹೇಳುವೆನು.

[46] “ಹೀಗೆ ಇವರು ನಿತ್ಯವಾದ ಶಿಕ್ಷೆಗೆ ಒಳಗಾಗುವರು. ಆದರೆ ನೀತಿವಂತರು ನಿತ್ಯಜೀವಕ್ಕೆ ಹೋಗುವರು,” ಎಂದು ಹೇಳುವೆನು.

ಮತ್ತಾಯ — Chapters