[1] ಆಮೇಲೆ ಸೈತಾನನಿಂದ ಶೋಧಿತರಾಗಲೆಂದು ಪವಿತ್ರಾತ್ಮರು ಯೇಸುವನ್ನು ಅರಣ್ಯಕ್ಕೆ ನಡೆಸಿದರು.
[2] ನಲವತ್ತು ದಿನ ಹಗಲೂ ರಾತ್ರಿ ಉಪವಾಸವಿದ್ದ ಮೇಲೆ ಯೇಸುವಿಗೆ ಹಸಿವಾಯಿತು.
[3] ಆಗ ಶೋಧಕನು ಯೇಸುವಿನ ಬಳಿ ಬಂದು, “ನೀನು ದೇವರ ಪುತ್ರನಾಗಿದ್ದರೆ, ಈ ಕಲ್ಲುಗಳು ರೊಟ್ಟಿಗಳಾಗುವಂತೆ ಆಜ್ಞಾಪಿಸು,” ಎಂದನು.
[4] ಅದಕ್ಕೆ ಯೇಸು, “ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ, ‘ಮನುಷ್ಯನು ಜೀವಿಸುವುದು ರೊಟ್ಟಿಯಿಂದ ಮಾತ್ರವಲ್ಲ, ದೇವರ ಬಾಯಿಂದ ಹೊರಡುವ ಪ್ರತಿಯೊಂದು ಮಾತಿನಿಂದಲೂ ಜೀವಿಸುತ್ತಾನೆ,’” ಎಂದರು.
[5] ಆಮೇಲೆ ಸೈತಾನನು ಯೇಸುವನ್ನು ಪವಿತ್ರ ನಗರಕ್ಕೆ ಕರೆದುಕೊಂಡು ಹೋಗಿ ದೇವಾಲಯದ ಅತಿ ಎತ್ತರವಾದ ಶಿಖರದ ಮೇಲೆ ನಿಲ್ಲಿಸಿ,
[6] “ನೀನು ದೇವರ ಪುತ್ರನಾಗಿದ್ದರೆ, ಕೆಳಕ್ಕೆ ಧುಮುಕು. ಪವಿತ್ರ ವೇದದಲ್ಲಿ ಬರೆದಿರುವ ಪ್ರಕಾರ: “ ‘ದೇವರು ನಿನ್ನ ವಿಷಯವಾಗಿ ತಮ್ಮ ದೂತರಿಗೆ ಆಜ್ಞಾಪಿಸುವರು, ನಿನ್ನ ಪಾದಗಳು ಕಲ್ಲಿಗೆ ತಗಲದಂತೆ ದೂತರು ನಿನ್ನನ್ನು ತಮ್ಮ ಕೈಗಳಲ್ಲಿ ಎತ್ತಿಕೊಳ್ಳುವರು,’” ಎಂದನು.
[7] ಅದಕ್ಕೆ ಯೇಸು, “ ‘ನಿನ್ನ ದೇವರಾದ ಕರ್ತದೇವರನ್ನು ಪರೀಕ್ಷಿಸಬಾರದು’ ಎಂಬುದನ್ನು ಸಹ ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
[8] ಅನಂತರ ಸೈತಾನನು ಯೇಸುವನ್ನು ಬಹಳ ಎತ್ತರವಾದ ಪರ್ವತಕ್ಕೆ ಕರೆದುಕೊಂಡು ಹೋಗಿ, ಲೋಕದ ಎಲ್ಲಾ ರಾಜ್ಯಗಳನ್ನೂ ಅವುಗಳ ಮಹಿಮೆಯನ್ನೂ ಅವರಿಗೆ ತೋರಿಸಿ,
[9] “ನೀನು ಅಡ್ಡಬಿದ್ದು ನನ್ನನ್ನು ಆರಾಧಿಸಿದರೆ ಇವೆಲ್ಲವನ್ನು ನಿನಗೆ ಕೊಡುವೆನು,” ಎಂದನು.
[10] ಯೇಸು ಅವನಿಗೆ, “ಸೈತಾನನೇ, ತೊಲಗು. ಏಕೆಂದರೆ, ‘ನಿನ್ನ ಕರ್ತದೇವರನ್ನು ಆರಾಧಿಸಿ, ಅವರಿಗೆ ಮಾತ್ರವೇ ಸೇವೆ ಸಲ್ಲಿಸಬೇಕು,’ ಎಂದು ಪವಿತ್ರ ವೇದದಲ್ಲಿ ಬರೆದಿದೆ,” ಎಂದರು.
[11] ಆಗ ಸೈತಾನನು ಯೇಸುವನ್ನು ಬಿಟ್ಟುಹೋದನು. ದೇವದೂತರು ಬಂದು ಅವರಿಗೆ ಉಪಚಾರ ಮಾಡಿದರು.
[12] ಯೋಹಾನನು ಬಂಧಿತನಾದನೆಂದು ಕೇಳಿ, ಯೇಸು ಗಲಿಲಾಯಕ್ಕೆ ಹಿಂದಿರುಗಿದರು.
[13] ಬಳಿಕ ನಜರೇತನ್ನು ಬಿಟ್ಟು, ಜೆಬುಲೂನ್ ಮತ್ತು ನೆಫ್ತಲೀಮ್ ಪ್ರಾಂತಗಳಿಗೆ ಬಂದು ಸರೋವರದ ಬಳಿಯಲ್ಲಿದ್ದ ಕಪೆರ್ನೌಮ್ ಎಂಬ ಊರಿನಲ್ಲಿ ವಾಸಮಾಡಿದರು.
[14] ಹೀಗೆ ಪ್ರವಾದಿ ಯೆಶಾಯನ ಮುಖಾಂತರ ಹೇಳಿಸಿರುವ ಈ ಮಾತು ನೆರವೇರಿತು. ಅದೇನೆಂದರೆ:
[15] “ಜೆಬುಲೂನ್ ನಾಡು ಮತ್ತು ನೆಫ್ತಲೀಮ್ ನಾಡು, ಯೊರ್ದನ್ ನದಿಯ ಆಚೆ ಸರೋವರದ ಕಡೆ, ಯೆಹೂದ್ಯರಲ್ಲದವರಿರುವ ಗಲಿಲಾಯ ನಾಡು,
[16] ಕತ್ತಲಲ್ಲಿ ವಾಸಿಸಿದ ಈ ಸ್ಥಳಗಳ ಜನರಿಗೆ ಮಹಾ ಬೆಳಕು ಕಾಣಿಸಿತು; ಮರಣ ಛಾಯೆಯ ಈ ಪ್ರದೇಶದಲ್ಲಿ ವಾಸಿಸುವವರಿಗೆ ಬೆಳಕು ಉದಯಿಸಿತು.”
[17] ಅಂದಿನಿಂದ ಯೇಸು, “ದೇವರ ಕಡೆಗೆ ತಿರುಗಿಕೊಳ್ಳಿರಿ, ಪರಲೋಕ ರಾಜ್ಯವು ಸಮೀಪಿಸಿದೆ,” ಎಂದು ಬೋಧಿಸತೊಡಗಿದರು.
[18] ಯೇಸು ಗಲಿಲಾಯ ಸರೋವರದ ತೀರದಲ್ಲಿ ನಡೆದುಹೋಗುತ್ತಿರುವಾಗ, ಪೇತ್ರ ಎನಿಸಿಕೊಂಡ ಸೀಮೋನನನ್ನೂ ಅವನ ಸಹೋದರ ಅಂದ್ರೆಯನನ್ನೂ ಕಂಡರು. ಬೆಸ್ತರಾಗಿದ್ದ ಅವರು ಸರೋವರದಲ್ಲಿ ಬಲೆ ಬೀಸುತ್ತಿದ್ದರು.
[19] ಯೇಸು ಅವರಿಗೆ, “ನನ್ನನ್ನು ಹಿಂಬಾಲಿಸಿರಿ. ನಾನು ನಿಮ್ಮನ್ನು, ಮನುಷ್ಯರನ್ನು ದೇವರ ಮಾರ್ಗದಲ್ಲಿ ನಡೆಸುವವರನ್ನಾಗಿ ಮಾಡುವೆನು,” ಎಂದು ಹೇಳಿದರು.
[20] ತಕ್ಷಣವೇ, ಅವರು ತಮ್ಮ ಬಲೆಗಳನ್ನು ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
[21] ಯೇಸು ಅಲ್ಲಿಂದ ಮುಂದೆ ಹೋಗುತ್ತಿದ್ದಾಗ ಇನ್ನಿಬ್ಬರು ಅಣ್ಣತಮ್ಮಂದಿರನ್ನು ಅಂದರೆ, ಜೆಬೆದಾಯನ ಮಗ ಯಾಕೋಬ ಮತ್ತು ಅವನ ಸಹೋದರ ಯೋಹಾನನನ್ನು ಕಂಡರು. ಅವರು ತಮ್ಮ ತಂದೆ ಜೆಬೆದಾಯನೊಡನೆ ದೋಣಿಯೊಳಗೆ ತಮ್ಮ ಬಲೆಗಳನ್ನು ಸರಿಪಡಿಸುತ್ತಿದ್ದರು. ಯೇಸು ಅವರನ್ನೂ ಕರೆದರು.
[22] ಕೂಡಲೇ, ಅವರು ದೋಣಿಯನ್ನೂ ತಮ್ಮ ತಂದೆಯನ್ನೂ ಬಿಟ್ಟು ಯೇಸುವನ್ನು ಹಿಂಬಾಲಿಸಿದರು.
[23] ಯೇಸು ಗಲಿಲಾಯದಲ್ಲೆಲ್ಲಾ ಸಂಚರಿಸಿ, ಯೆಹೂದ್ಯರ ಸಭಾಮಂದಿರಗಳಲ್ಲಿ ಬೋಧಿಸುತ್ತಾ, ರಾಜ್ಯದ ಸುವಾರ್ತೆಯನ್ನು ಸಾರುತ್ತಾ, ಜನರಲ್ಲಿದ್ದ ಸಕಲ ವಿಧವಾದ ವ್ಯಾಧಿಗಳನ್ನೂ ಸಕಲ ವಿಧವಾದ ಬೇನೆಗಳನ್ನೂ ಗುಣಪಡಿಸುತ್ತಾ ಬಂದರು.
[24] ಯೇಸುವಿನ ಸುದ್ದಿ ಸಿರಿಯಾ ದೇಶದಲ್ಲೆಲ್ಲಾ ಹಬ್ಬಿದ್ದರಿಂದ, ಜನರು ವಿವಿಧ ವ್ಯಾಧಿಗಳಿಂದಲೂ ತೀವ್ರ ವೇದನೆಯಿಂದಲೂ ಅಸ್ವಸ್ಥರಾದವರನ್ನೂ ದೆವ್ವ ಹಿಡಿದವರನ್ನೂ ಮೂರ್ಛಾರೋಗಿಗಳನ್ನೂ ಪಾರ್ಶ್ವವಾಯು ಪೀಡಿತರನ್ನೂ ಅವರ ಬಳಿಗೆ ಕರೆದುಕೊಂಡು ಬಂದರು; ಯೇಸು ಅವರನ್ನೆಲ್ಲಾ ಗುಣಪಡಿಸಿದರು.
[25] ಗಲಿಲಾಯ, ದೆಕಪೊಲಿ, ಯೆರೂಸಲೇಮ್, ಯೂದಾಯ ಹಾಗೂ ಯೊರ್ದನ್ ನದಿಯ ಆಚೆಕಡೆಯಿಂದಲೂ ಜನರು ದೊಡ್ಡ ಗುಂಪಾಗಿ ಯೇಸುವನ್ನು ಹಿಂಬಾಲಿಸಿದರು.