[1] ಅದೇ ಸಮಯದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ಪರಲೋಕ ರಾಜ್ಯದಲ್ಲಿ ಅತಿ ದೊಡ್ಡವನು ಯಾರು?” ಎಂದು ಕೇಳಿದರು.
[2] ಆಗ ಯೇಸು ಒಂದು ಚಿಕ್ಕ ಮಗುವನ್ನು ತಮ್ಮ ಬಳಿಗೆ ಕರೆದು, ಅದನ್ನು ಅವರ ಮಧ್ಯದಲ್ಲಿ ನಿಲ್ಲಿಸಿ,
[3] “ನೀವು ಪರಿವರ್ತನೆ ಹೊಂದಿ ಚಿಕ್ಕಮಕ್ಕಳಂತೆ ಆಗದಿದ್ದರೆ, ಪರಲೋಕ ರಾಜ್ಯದೊಳಗೆ ಪ್ರವೇಶಿಸುವುದಿಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
[4] ಯಾರು ಈ ಚಿಕ್ಕಮಗುವಿನಂತೆ ತಮ್ಮನ್ನು ತಾವು ತಗ್ಗಿಸಿಕೊಳ್ಳುವರೋ ಅವರೇ ಪರಲೋಕ ರಾಜ್ಯದಲ್ಲಿ ಅತಿ ದೊಡ್ಡವರಾಗಿರುವರು.
[5] ಯಾರಾದರೂ ಇಂಥ ಚಿಕ್ಕ ಮಗುವನ್ನು ನನ್ನ ಹೆಸರಿನಲ್ಲಿ ಸ್ವೀಕರಿಸಿಕೊಂಡರೆ ನನ್ನನ್ನೇ ಸ್ವೀಕರಿಸಿಕೊಳ್ಳುತ್ತಾರೆ.
[6] “ಆದರೆ ನನ್ನಲ್ಲಿ ನಂಬಿಕೆಯಿಡುವ ಈ ಚಿಕ್ಕವರಲ್ಲಿ ಒಬ್ಬರಿಗೆ ಯಾರಾದರೂ ಪಾಪಕ್ಕೆ ಕಾರಣರಾದರೆ, ಅಂಥವರ ಕೊರಳಿಗೆ ಬೀಸುವ ಕಲ್ಲನ್ನು ನೇತುಹಾಕಿ ಅವರನ್ನು ಸಮುದ್ರದ ಆಳದಲ್ಲಿ ಮುಳುಗಿಸಿಡುವುದೇ ಲೇಸು, ಎಂದರು.
[7] ಪಾಪಕ್ಕೆ ಕಾರಣವಾಗಿರುವ ಜಗತ್ತಿಗೆ ಕಷ್ಟ! ಇಂಥ ವಿಷಯಗಳು ಅನಿವಾರ್ಯ. ಆದರೆ ಪಾಪಕ್ಕೆ ಕಾರಣವಾಗಿರುವವರ ಗತಿಯನ್ನು ಏನೆಂದು ಹೇಳಲಿ!
[8] ನಿಮ್ಮ ಕೈಯಾಗಲೀ ಕಾಲಾಗಲೀ ನಿಮ್ಮನ್ನು ಪಾಪಕ್ಕೆ ಕಾರಣವಾದರೆ ಅದನ್ನು ಕಡಿದುಹಾಕಿರಿ. ಎರಡು ಕೈಯುಳ್ಳವರಾಗಿ ಇಲ್ಲವೆ ಎರಡು ಕಾಲುಳ್ಳವರಾಗಿ ನಿತ್ಯ ಬೆಂಕಿಯಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಕುಂಟರಾಗಿ ಇಲ್ಲವೆ ಊನರಾಗಿ ಜೀವದಲ್ಲಿ ಪ್ರವೇಶಿಸುವುದು ನಿಮಗೆ ಲೇಸು.
[9] ನಿಮ್ಮ ಕಣ್ಣು ನಿಮ್ಮ ಪಾಪಕ್ಕೆ ಕಾರಣವಾದರೆ ಅದನ್ನು ಕಿತ್ತುಬಿಡಿರಿ. ನೀವು ಎರಡು ಕಣ್ಣುಳ್ಳವರಾಗಿ ನರಕದ ಬೆಂಕಿಯಲ್ಲಿ ಹಾಕಿಸಿಕೊಳ್ಳುವುದಕ್ಕಿಂತ ಒಂದು ಕಣ್ಣುಳ್ಳವರಾಗಿ ಜೀವದಲ್ಲಿ ಪ್ರವೇಶಿಸುವುದು ನಿಮಗೆ ಲೇಸು.
[10] “ಚಿಕ್ಕವರಲ್ಲಿ ಒಬ್ಬನನ್ನಾದರೂ ನೀವು ಹೀನೈಸದಂತೆ ನೋಡಿಕೊಳ್ಳಿರಿ. ಪರಲೋಕದಲ್ಲಿರುವ ಅವರ ದೂತರು ಪರಲೋಕದ ನನ್ನ ತಂದೆಯ ಮುಖವನ್ನು ಯಾವಾಗಲೂ ನೋಡುತ್ತಿದ್ದಾರೆ.
[11] ತಪ್ಪಿಹೋದದ್ದನ್ನು ಹುಡುಕಿ ರಕ್ಷಿಸುವುದಕ್ಕಲ್ಲವೇ ಮನುಷ್ಯಪುತ್ರನಾದ ನಾನು ಬಂದೆನು,” ಎಂದು ಹೇಳಿದರು.
[12] “ಆಗ ನಿಮಗೆ ಏನು ಅನಿಸುತ್ತದೆ? ಒಬ್ಬ ಮನುಷ್ಯನಿಗೆ ನೂರು ಕುರಿಗಳಿರಲಾಗಿ, ಅವುಗಳಲ್ಲಿ ಒಂದು ತಪ್ಪಿಸಿಕೊಂಡುಹೋದರೆ, ಅವನು ತೊಂಬತ್ತೊಂಬತ್ತು ಕುರಿಗಳನ್ನು ಬಿಟ್ಟು ಬೆಟ್ಟಗಳಿಗೆ ಹೋಗಿ, ತಪ್ಪಿಸಿಕೊಂಡದ್ದನ್ನು ಹುಡುಕುವುದಿಲ್ಲವೇ?
[13] ಅವನು ಅದನ್ನು ಕಂಡರೆ, ತಪ್ಪಿಸಿಕೊಳ್ಳದ ತೊಂಬತ್ತೊಂಬತ್ತು ಕುರಿಗಳಿಗಿಂತ ಈ ಒಂದು ಕುರಿಯ ವಿಷಯದಲ್ಲಿ ಹೆಚ್ಚು ಸಂತೋಷ ಪಡುತ್ತಾನೆಂದು ನಿಮಗೆ ನಿಜವಾಗಿ ಹೇಳುತ್ತೇನೆ.
[14] ಅದರಂತೆಯೇ ಈ ಚಿಕ್ಕವರಲ್ಲಿ ಒಬ್ಬರಾದರೂ ನಾಶವಾಗುವುದು ಪರಲೋಕದಲ್ಲಿರುವ ನಿಮ್ಮ ತಂದೆಯ ಚಿತ್ತವಲ್ಲ.
[15] “ನಿನ್ನ ಸಹೋದರ ಅಥವಾ ಸಹೋದರಿ ಪಾಪಮಾಡಿದರೆ, ನೀವಿಬ್ಬರೇ ಇರುವಾಗ ಹೋಗಿ ಅವರನ್ನು ಖಂಡಿಸು. ಅವರು ನಿನಗೆ ಕಿವಿಗೊಟ್ಟರೆ ನೀನು ನಿನ್ನ ಸಹೋದರ ಅಥವಾ ಸಹೋದರಿಯನ್ನು ಗೆದ್ದುಕೊಂಡಿರುವೆ.
[16] ಆದರೆ ಅವರು ನಿನಗೆ ಕಿವಿಗೊಡದೆ ಹೋದರೆ, ನಿನ್ನೊಂದಿಗೆ ಇಬ್ಬರನ್ನು ಕರೆದುಕೊಂಡು ಹೋಗು. ಹೀಗೆ, ‘ಇಬ್ಬರ ಇಲ್ಲವೆ ಮೂವರ ಸಾಕ್ಷಿಗಳ ಬಾಯಿಂದ ಪ್ರತಿಯೊಂದು ಮಾತು ಸ್ಥಾಪಿತವಾಗಲಿ.’
[17] ಅವರು ಅವರಿಗೂ ಕಿವಿಗೊಡದೆ ಹೋದರೆ ಅದನ್ನು ಸಭೆಗೆ ತಿಳಿಸು. ಅವರು ಸಭೆಗೂ ಕಿವಿಗೊಡದೆ ಹೋದರೆ, ಅವನು ನಿನಗೆ ಅನ್ಯನಂತೆಯೂ ಸುಂಕದವನಂತೆಯೂ ಇರಲಿ.
[18] “ನೀವು ಭೂಮಿಯಲ್ಲಿ ಯಾವುದನ್ನು ಬಂಧಿಸುತ್ತೀರೋ ಅದು ಪರಲೋಕದಲ್ಲಿಯೂ ಬಂಧಿತವಾಗುವುದು. ನೀವು ಭೂಮಿಯಲ್ಲಿ ಏನನ್ನು ಬಿಚ್ಚುತ್ತೀರೋ ಅದು ಪರಲೋಕದಲ್ಲಿಯೂ ಬಿಚ್ಚಲಾಗುವುದು ಎಂದು ನಿಮಗೆ ನಿಜವಾಗಿ ಹೇಳುತ್ತೇನೆ.
[19] “ಇನ್ನೂ ನಾನು ನಿಮಗೆ ನಿಜವಾಗಿ ಹೇಳುವುದೇನೆಂದರೆ: ನಿಮ್ಮಲ್ಲಿ ಇಬ್ಬರು ತಾವು ಬೇಡಿಕೊಳ್ಳುವ ಯಾವುದೇ ವಿಷಯಕ್ಕಾಗಿ ಭೂಮಿಯಲ್ಲಿ ಒಂದೇ ಮನಸ್ಸುಳ್ಳವರಾಗಿದ್ದರೆ, ಅದು ಪರಲೋಕದಲ್ಲಿರುವ ನನ್ನ ತಂದೆಯಿಂದ ಅವರಿಗೆ ಆಗುವುದು.
[20] ಏಕೆಂದರೆ ಇಬ್ಬರಾಗಲಿ ಮೂವರಾಗಲಿ ನನ್ನ ಹೆಸರಿನಲ್ಲಿ ಎಲ್ಲಿ ಸೇರಿ ಬರುತ್ತಾರೋ ಅವರ ಮಧ್ಯದಲ್ಲಿ ನಾನು ಇದ್ದೇನೆ,” ಎಂದರು.
[21] ತರುವಾಯ ಪೇತ್ರನು ಯೇಸುವಿನ ಬಳಿಗೆ ಬಂದು, “ಕರ್ತನೇ, ನನ್ನ ಸಹೋದರ ಅಥವಾ ಸಹೋದರಿ ನನಗೆ ವಿರೋಧವಾಗಿ ಪಾಪಮಾಡಿದರೆ ನಾನು ಎಷ್ಟು ಸಲ ಅವರನ್ನು ಕ್ಷಮಿಸಬೇಕು? ಏಳು ಸಲವೋ?” ಎಂದು ಕೇಳಿದನು.
[22] ಅದಕ್ಕೆ ಯೇಸು, “ಏಳು ಸಲವಲ್ಲ, ಏಳೆಪ್ಪತ್ತು ಸಲ ಎಂದು ನಾನು ನಿಮಗೆ ಹೇಳುತ್ತೇನೆ.
[23] “ಆದ್ದರಿಂದ ಪರಲೋಕ ರಾಜ್ಯವು ತನ್ನ ಸೇವಕರಿಂದ ಲೆಕ್ಕ ತೆಗೆದುಕೊಳ್ಳಬೇಕೆಂದಿದ್ದ ಒಬ್ಬ ಅರಸನಿಗೆ ಹೋಲಿಕೆಯಾಗಿದೆ.
[24] ಅವನು ಲೆಕ್ಕ ತೆಗೆದುಕೊಳ್ಳಲು ಪ್ರಾರಂಭಿಸಿದಾಗ, ಹತ್ತು ಕೋಟಿ ಚಿನ್ನದ ನಾಣ್ಯಗಳ ಸಾಲ ಕೊಡಬೇಕಾದವನನ್ನು ಅವನ ಬಳಿಗೆ ತಂದರು.
[25] ಆದರೆ ಕೊಡುವುದಕ್ಕೆ ಅವನಲ್ಲಿ ಏನೂ ಇಲ್ಲದ್ದರಿಂದ ಅವನನ್ನೂ ಅವನ ಹೆಂಡತಿಯನ್ನೂ ಮಕ್ಕಳನ್ನೂ ಅವನಿಗಿದ್ದದ್ದೆಲ್ಲವನ್ನೂ ಮಾರಿ ಸಾಲ ತೀರಿಸಬೇಕೆಂದು ಅರಸನು ಅಪ್ಪಣೆಕೊಟ್ಟನು.
[26] “ಆಗ ಆ ಸೇವಕನು ಮೊಣಕಾಲೂರಿ, ‘ನನ್ನನ್ನು ಸ್ವಲ್ಪ ಸಹಿಸಿಕೊಳ್ಳಿರಿ. ನಾನು ನಿನ್ನ ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಹೇಳಿದನು.
[27] ಆಗ ಅರಸನು ಸೇವಕನ ಮೇಲೆ ಕನಿಕರಪಟ್ಟು, ಅವನನ್ನು ಬಿಡುಗಡೆ ಮಾಡಿ ಅವನ ಸಾಲವನ್ನೆಲ್ಲಾ ಮನ್ನಿಸಿಬಿಟ್ಟನು.
[28] “ಆದರೆ ಅದೇ ಸೇವಕನು ಹೊರಗೆ ಹೋಗಿ, ತನಗೆ ಸುಮಾರು ನೂರು ಬೆಳ್ಳಿ ನಾಣ್ಯಗಳನ್ನು ಸಾಲ ಕೊಡಬೇಕಾಗಿದ್ದ ತನ್ನ ಜೊತೆಯ ಸೇವಕರಲ್ಲಿ ಒಬ್ಬನನ್ನು ಕಂಡು, ಅವನನ್ನು ಹಿಡಿದು ಕುತ್ತಿಗೆ ಹಿಸುಕಿ, ‘ನನ್ನ ಸಾಲವನ್ನು ತೀರಿಸು,’ ಎಂದನು.
[29] “ಆಗ ಅವನ ಜೊತೆಯ ಸೇವಕನು ಮೊಣಕಾಲೂರಿ ಅವನಿಗೆ, ‘ನನ್ನನ್ನು ಸ್ವಲ್ಪ ಸಹಿಸಿಕೊಳ್ಳಿರಿ. ನಾನು ಸಾಲವನ್ನೆಲ್ಲಾ ತೀರಿಸಿಬಿಡುತ್ತೇನೆ,’ ಎಂದು ಅವನನ್ನು ಬೇಡಿಕೊಂಡನು.
[30] “ಆದರೆ ಅವನು ಅದಕ್ಕೆ ಒಪ್ಪದೆ ಹೊರಟುಹೋಗಿ, ತನ್ನ ಸಾಲವನ್ನು ತೀರಿಸುವವರೆಗೆ ಅವನನ್ನು ಸೆರೆಮನೆಯಲ್ಲಿ ಹಾಕಿಸಿದನು.
[31] ಅವನ ಜೊತೆಯ ಸೇವಕರು ನಡೆದದ್ದನ್ನು ನೋಡಿ, ಬಹಳ ವ್ಯಥೆಪಟ್ಟು ಹೋಗಿ ತಮ್ಮ ಅರಸನಿಗೆ ನಡೆದದ್ದೆಲ್ಲವನ್ನು ವರದಿಮಾಡಿದರು.
[32] “ಆಗ ಅರಸನು ಅವನನ್ನು ತನ್ನ ಬಳಿಗೆ ಕರೆದು ಅವನಿಗೆ, ‘ದುಷ್ಟ ಸೇವಕನೇ, ನೀನು ನನ್ನನ್ನು ಬೇಡಿಕೊಂಡಿದ್ದರಿಂದ ನಾನು ನಿನ್ನ ಸಾಲವನ್ನೆಲ್ಲಾ ಮನ್ನಿಸಿದೆನು.
[33] ನಾನು ನಿನ್ನ ಮೇಲೆ ಕರುಣೆ ತೋರಿಸಿದಂತೆಯೇ ನೀನು ಸಹ ನಿನ್ನ ಜೊತೆ ಸೇವಕನ ಮೇಲೆ ಕರುಣೆ ತೋರಿಸಬೇಕಿತ್ತಲ್ಲವೇ?’ ಎಂದು ಹೇಳಿ,
[34] ಕೋಪಗೊಂಡು ತನಗೆ ಕೊಡಬೇಕಾದ ಸಾಲವನ್ನೆಲ್ಲಾ ತೀರಿಸುವ ತನಕ ಅರಸನು ಅವನನ್ನು ಕಠಿಣ ಶಿಕ್ಷೆಗೆ ಒಳಪಡಿಸಲು ಸೆರೆಮನೆಯ ಅಧಿಕಾರಿಯ ವಶಕ್ಕೆ ಒಪ್ಪಿಸಿದನು.
[35] “ಅದರಂತೆಯೇ ನಿಮ್ಮಲ್ಲಿ ಪ್ರತಿಯೊಬ್ಬರು ಹೃದಯಪೂರ್ವಕವಾಗಿ ತನ್ನ ಸಹೋದರನನ್ನು ಕ್ಷಮಿಸದೆ ಹೋದರೆ ಪರಲೋಕದಲ್ಲಿರುವ ನನ್ನ ತಂದೆಯು ಸಹ ನಿಮಗೆ ಹಾಗೆಯೇ ಮಾಡುವರು,” ಎಂದರು.