[1] ಯೆರೂಸಲೇಮಿನಿಂದ ಫರಿಸಾಯರು ಮತ್ತು ನಿಯಮ ಬೋಧಕರು ಯೇಸುವಿನ ಬಳಿಗೆ ಬಂದು,
[2] “ನಿನ್ನ ಶಿಷ್ಯರು ಪೂರ್ವಿಕರ ಸಂಪ್ರದಾಯವನ್ನು ಏಕೆ ಮೀರುತ್ತಾರೆ? ಅವರು ಊಟಕ್ಕೆ ಮುಂಚೆ ತಮ್ಮ ಕೈಗಳನ್ನು ಏಕೆ ತೊಳೆದುಕೊಳ್ಳುವುದಿಲ್ಲ?” ಎಂದರು.
[3] ಅದಕ್ಕೆ ಯೇಸು ಪ್ರತ್ಯುತ್ತರವಾಗಿ, “ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ನೀವು ದೇವರ ಆಜ್ಞೆಯನ್ನು ಏಕೆ ಮೀರುತ್ತೀರಿ?
[4] ‘ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಬೇಕು,’ ಎಂದೂ ‘ತಂದೆತಾಯಿಗಳನ್ನು ದೂಷಿಸುವವನಿಗೆ ಮರಣದಂಡನೆ ಆಗಬೇಕು,’ ಎಂದು ದೇವರು ಹೇಳಿದ್ದಾರೆ.
[5] ಆದರೆ ನೀವು, ಯಾರಾದರೂ ತನ್ನ ತಂದೆಗೆ ಇಲ್ಲವೆ ತಾಯಿಗೆ, ನಾನು ನಿಮ್ಮ ಸಹಾಯಕ್ಕಾಗಿ ಇಟ್ಟಿದ್ದನ್ನು, ‘ದೇವರಿಗೆ ಕೊಟ್ಟಿದ್ದೇನೆ’ ಎಂದು ಹೇಳುವುದಾದರೆ,
[6] ‘ಅವನು ತನ್ನ ತಂದೆಯನ್ನಾಗಲಿ ತಾಯಿಯನ್ನಾಗಲಿ ಗೌರವಿಸಬೇಕಾಗಿಲ್ಲ’ ಎಂದು ಹೇಳುತ್ತೀರಿ. ಹೀಗೆ ನಿಮ್ಮ ಸಂಪ್ರದಾಯದ ನಿಮಿತ್ತವಾಗಿ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ.
[7] ಕಪಟಿಗಳೇ, ನಿಮ್ಮ ವಿಷಯವಾಗಿ ಯೆಶಾಯನು ಸರಿಯಾಗಿ ಪ್ರವಾದಿಸಿದ್ದಾನೆ:
[8] “ ‘ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ, ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ.
[9] ಅವರು ಮನುಷ್ಯರ ಆಜ್ಞೆಗಳನ್ನು ಉಪದೇಶಗಳನ್ನಾಗಿ ಬೋಧಿಸುವುದರಿಂದ ನನ್ನನ್ನು ಆರಾಧಿಸುವುದು ವ್ಯರ್ಥ.’”
[10] ಯೇಸು ಜನಸಮೂಹವನ್ನು ಕರೆದು ಅವರಿಗೆ, “ಕೇಳಿ ತಿಳಿದುಕೊಳ್ಳಿರಿ.
[11] ಬಾಯೊಳಕ್ಕೆ ಹೋಗುವಂಥದ್ದು ಮನುಷ್ಯನನ್ನು ಅಶುದ್ಧ ಮಾಡುವುದಿಲ್ಲ, ಆದರೆ ಬಾಯೊಳಗಿಂದ ಹೊರಗೆ ಬರುವಂಥದ್ದೇ ಮನುಷ್ಯನನ್ನು ಅಶುದ್ಧ ಮಾಡುತ್ತದೆ,” ಎಂದು ಹೇಳಿದರು.
[12] ತರುವಾಯ ಯೇಸುವಿನ ಶಿಷ್ಯರು ಬಂದು, “ಫರಿಸಾಯರು ನಿಮ್ಮ ಈ ಮಾತನ್ನು ಕೇಳಿ ಬೇಸರಗೊಂಡರೆಂದು ನಿಮಗೆ ತಿಳಿಯಿತೇ?” ಎಂದು ಕೇಳಿದರು.
[13] ಅದಕ್ಕೆ ಯೇಸು ಉತ್ತರವಾಗಿ ಅವರಿಗೆ, “ಪರಲೋಕದ ನನ್ನ ತಂದೆಯು ನೆಡದೆ ಇರುವ ಪ್ರತಿಯೊಂದು ಗಿಡವು ಬೇರುಸಹಿತವಾಗಿ ಕಿತ್ತುಹಾಕಲಾಗುವುದು.
[14] ಅವರನ್ನು ಬಿಡಿರಿ, ಅವರು ಕುರುಡರಿಗೆ ದಾರಿತೋರಿಸುವ ಕುರುಡರು. ಕುರುಡನು ಕುರುಡನಿಗೆ ದಾರಿತೋರಿಸಿದರೆ ಅವರಿಬ್ಬರೂ ಹಳ್ಳಕ್ಕೆ ಬೀಳುವರು,” ಎಂದು ಹೇಳಿದರು.
[15] ಪೇತ್ರನು, “ಈ ಸಾಮ್ಯವನ್ನು ನಮಗೆ ವಿವರಿಸು,” ಎಂದನು.
[16] ಅದಕ್ಕೆ ಯೇಸು, “ನೀವು ಸಹ ಇನ್ನೂ ಬುದ್ಧಿಯಿಲ್ಲದವರಾಗಿದ್ದೀರಾ?” ಎಂದು ಕೇಳಿ,
[17] “ಬಾಯೊಳಕ್ಕೆ ಹೋಗಿ ಹೊಟ್ಟೆಯಲ್ಲಿ ಸೇರುವುದೆಲ್ಲವೂ ವಿಸರ್ಜಿತವಾಗುವುದೆಂದು ನೀವು ಇನ್ನೂ ಗ್ರಹಿಸಲಿಲ್ಲವೋ?
[18] ಆದರೆ ಬಾಯೊಳಗಿಂದ ಹೊರಗೆ ಹೊರಡುವಂಥವು ಹೃದಯದೊಳಗಿಂದ ಬಂದು ಮನುಷ್ಯನನ್ನು ಅಶುದ್ಧ ಮಾಡುತ್ತವೆ.
[19] ಏಕೆಂದರೆ ಹೃದಯದೊಳಗಿಂದ ದುರಾಲೋಚನೆಗಳು, ಕೊಲೆ, ವ್ಯಭಿಚಾರ, ಅನೈತಿಕತೆ, ಕಳ್ಳತನ, ಸುಳ್ಳುಸಾಕ್ಷಿ, ದೂರು ಇವು ಹೊರ ಬರುತ್ತವೆ.
[20] ಇವುಗಳೇ ಮನುಷ್ಯನನ್ನು ಅಶುದ್ಧ ಮಾಡುತ್ತವೆ; ಆದರೆ ಕೈತೊಳೆದುಕೊಳ್ಳದೆ ಊಟಮಾಡುವುದು ಮನುಷ್ಯನನ್ನು ಅಶುದ್ಧ ಮಾಡುವುದಿಲ್ಲ,” ಎಂದರು.
[21] ಯೇಸು ಅಲ್ಲಿಂದ ಹೊರಟು ಟೈರ್ ಸೀದೋನ್ ಪ್ರದೇಶಕ್ಕೆ ಬಂದರು.
[22] ಆಗ, ಕಾನಾನ್ಯ ಸ್ತ್ರೀಯೊಬ್ಬಳು ಬಂದು ಅವರಿಗೆ, “ಸ್ವಾಮೀ, ದಾವೀದನ ಪುತ್ರನೇ, ನನ್ನನ್ನು ಕರುಣಿಸು. ನನ್ನ ಮಗಳು ದೆವ್ವದ ಕಾಟದಿಂದ ಬಹಳವಾಗಿ ಸಂಕಟಪಡುತ್ತಿದ್ದಾಳೆ,” ಎಂದು ಕೂಗಿಕೊಂಡಳು.
[23] ಆದರೆ ಯೇಸು ಆಕೆಗೆ ಉತ್ತರ ಕೊಡಲಿಲ್ಲ. ಆಗ ಶಿಷ್ಯರು ಯೇಸುವಿನ ಬಳಿ ಬಂದು, “ಆಕೆಯನ್ನು ಕಳುಹಿಸಿಬಿಡು, ಆಕೆಯು ನಮ್ಮ ಹಿಂದೆ ಕೂಗಿಕೊಂಡು ಬರುತ್ತಾಳೆ” ಎಂದು ಕೇಳಿಕೊಂಡರು.
[24] ಯೇಸು ಉತ್ತರವಾಗಿ, “ತಪ್ಪಿಸಿಕೊಂಡ ಕುರಿಗಳಂತಿರುವ ಇಸ್ರಾಯೇಲಿನ ಮನೆತನದವರ ಬಳಿಗೆ ಮಾತ್ರ ನನ್ನನ್ನು ಕಳುಹಿಸಲಾಗಿದೆ,” ಎಂದರು.
[25] ಆಕೆಯು ಬಂದು ಯೇಸುವಿನ ಮುಂದೆ ಮೊಣಕಾಲೂರಿ, “ಸ್ವಾಮೀ, ನನಗೆ ಸಹಾಯಮಾಡು!” ಎಂದು ಕೇಳಿಕೊಂಡಳು.
[26] ಆಗ ಯೇಸು, “ಮಕ್ಕಳು ತಿನ್ನುವ ರೊಟ್ಟಿಯನ್ನು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ,” ಎಂದು ಹೇಳಿದರು.
[27] ಆಗ ಆಕೆಯು, “ಸ್ವಾಮೀ, ಅದು ನಿಜವೇ, ಆದರೂ ತಮ್ಮ ಯಜಮಾನರ ಮೇಜಿನಿಂದ ಬೀಳುವ ರೊಟ್ಟಿತುಂಡುಗಳನ್ನು ನಾಯಿಮರಿಗಳು ತಿನ್ನುತ್ತವಲ್ಲಾ,” ಎಂದಳು.
[28] ಯೇಸು ಉತ್ತರವಾಗಿ ಆಕೆಗೆ, “ಅಮ್ಮಾ ನಿನ್ನ ನಂಬಿಕೆಯು ದೊಡ್ಡದು! ನೀನು ಇಷ್ಟಪಟ್ಟಂತೆಯೇ ನಿನಗಾಗಲಿ,” ಎಂದು ಹೇಳಿದರು. ಆಕೆಯ ಮಗಳು ಅದೇ ಗಳಿಗೆಯಲ್ಲಿ ಗುಣಹೊಂದಿದಳು.
[29] ಯೇಸು ಅಲ್ಲಿಂದ ಹೊರಟು ಗಲಿಲಾಯ ಸರೋವರದ ಸಮೀಪಕ್ಕೆ ಬಂದು, ಬೆಟ್ಟವನ್ನು ಹತ್ತಿ ಅಲ್ಲಿ ಕುಳಿತುಕೊಂಡರು.
[30] ಆಗ ಜನರ ದೊಡ್ಡ ಸಮೂಹಗಳು ಕುಂಟರನ್ನು, ಕುರುಡರನ್ನು, ಮೂಕರನ್ನು, ಊನವಾದವರನ್ನು ಮತ್ತು ಬೇರೆ ಅನೇಕ ರೋಗಿಗಳನ್ನು ತಮ್ಮೊಂದಿಗೆ ಕರೆದುಕೊಂಡು ಬಂದು ಯೇಸುವಿನ ಪಾದದ ಬಳಿಯಲ್ಲಿ ಬಿಟ್ಟರು. ಯೇಸು ಅವರನ್ನೆಲ್ಲಾ ಸ್ವಸ್ಥಪಡಿಸಿದರು.
[31] ಮೂಕರು ಮಾತನಾಡುವುದನ್ನೂ ಊನವಾದವರು ಸ್ವಸ್ಥರಾಗಿರುವುದನ್ನೂ ಕುಂಟರು ನಡೆದಾಡುವುದನ್ನೂ ಕುರುಡರು ಕಾಣುವುದನ್ನೂ ಜನಸಮೂಹದವರು ಕಂಡು ಆಶ್ಚರ್ಯಪಟ್ಟರು. ಅವರು ಇಸ್ರಾಯೇಲಿನ ದೇವರನ್ನು ಕೊಂಡಾಡಿದರು.
[32] ಯೇಸು ತಮ್ಮ ಶಿಷ್ಯರನ್ನು ಕರೆದು, “ನಾನು ಈ ಜನಸಮೂಹವನ್ನು ನೋಡಿ ಕನಿಕರಪಡುತ್ತೇನೆ. ಮೂರು ದಿನಗಳಿಂದ ಇವರು ನನ್ನೊಂದಿಗಿದ್ದಾರೆ. ಇವರಿಗೆ ಊಟಕ್ಕೆ ಏನೂ ಇಲ್ಲ, ದಾರಿಯಲ್ಲಿ ಅವರು ಬಳಲಿ ಹೋಗುವರು. ಇವರನ್ನು ಉಪವಾಸವಾಗಿ ಕಳುಹಿಸುವುದಕ್ಕೆ ನನಗೆ ಮನಸ್ಸಿಲ್ಲ,” ಎಂದರು.
[33] ಅದಕ್ಕೆ ಶಿಷ್ಯರು, “ಇಂಥಾ ದೊಡ್ಡ ಸಮೂಹವನ್ನು ತೃಪ್ತಿಪಡಿಸುವಂತೆ ಈ ನಿರ್ಜನ ಪ್ರದೇಶದಲ್ಲಿ ನಮಗೆ ಎಲ್ಲಿಂದ ರೊಟ್ಟಿ ಸಿಕ್ಕೀತು?” ಎಂದರು.
[34] ಯೇಸು ಅವರಿಗೆ, “ನಿಮ್ಮ ಹತ್ತಿರ ಎಷ್ಟು ರೊಟ್ಟಿಗಳಿವೆ?” ಎಂದು ಕೇಳಿದರು. ಶಿಷ್ಯರು, “ಏಳು ರೊಟ್ಟಿಗಳು ಮತ್ತು ಕೆಲವು ಸಣ್ಣ ಮೀನುಗಳಿವೆ,” ಎಂದರು.
[35] ಯೇಸು ಜನಸಮೂಹವು ನೆಲದ ಮೇಲೆ ಕುಳಿತುಕೊಳ್ಳುವಂತೆ ಅಪ್ಪಣೆಕೊಟ್ಟರು.
[36] ಅನಂತರ ಯೇಸು ಆ ಏಳು ರೊಟ್ಟಿಗಳನ್ನು ಮತ್ತು ಮೀನುಗಳನ್ನು ತೆಗೆದುಕೊಂಡು ದೇವರಿಗೆ ಸ್ತೋತ್ರಮಾಡಿ, ಅವುಗಳನ್ನು ಮುರಿದು ತಮ್ಮ ಶಿಷ್ಯರಿಗೆ ಕೊಡಲು ಶಿಷ್ಯರು ಜನಸಮೂಹಕ್ಕೆ ಕೊಟ್ಟರು.
[37] ಅವರೆಲ್ಲರೂ ಊಟಮಾಡಿ ತೃಪ್ತರಾದರು. ಅನಂತರ ಶಿಷ್ಯರು ಮಿಕ್ಕ ತುಂಡುಗಳನ್ನು ಕೂಡಿಸಲಾಗಿ ಏಳು ಬುಟ್ಟಿಗಳು ತುಂಬಿದವು.
[38] ಊಟಮಾಡಿದವರು ಸ್ತ್ರೀಯರೂ ಮಕ್ಕಳೂ ಅಲ್ಲದೆ ನಾಲ್ಕು ಸಾವಿರ ಗಂಡಸರಿದ್ದರು.
[39] ತರುವಾಯ ಯೇಸು ಜನಸಮೂಹವನ್ನು ಕಳುಹಿಸಿಬಿಟ್ಟು ದೋಣಿಯನ್ನು ಹತ್ತಿ ಮಗದಾನ್ ಊರಿಗೆ ಬಂದರು.