Skip to content
Opens in a new window
Listen to this chapter • 11:42

[1] ಬೆಳಗಾದಾಗ, ಎಲ್ಲಾ ಮುಖ್ಯಯಾಜಕರೂ ಜನರ ಹಿರಿಯರೂ ಯೇಸುವನ್ನು ಕೊಲ್ಲಿಸುವುದಕ್ಕೆ ಆತನಿಗೆ ವಿರೋಧವಾಗಿ ಆಲೋಚನೆ ಮಾಡಿಕೊಂಡರು.

[2] ಅವರು ಯೇಸುವನ್ನು ಕಟ್ಟಿ, ಕರೆದುಕೊಂಡು ಹೋಗಿ ರಾಜ್ಯಪಾಲ ಪಿಲಾತನಿಗೆ ಒಪ್ಪಿಸಿದರು.

[3] ಯೇಸುವಿಗೆ ದ್ರೋಹಮಾಡಿದ ಯೂದನು ಗುರುವಿಗೆ ಮರಣ ದಂಡನೆಯ ತೀರ್ಪಾದದ್ದನ್ನು ಕಂಡು ವಿಷಾದಿಸಿ, ಆ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಮುಖ್ಯಯಾಜಕರ ಮತ್ತು ಹಿರಿಯರ ಬಳಿಗೆ ಮರಳಿ ತಂದನು.

[4] ಅವನು, “ನಾನು ನಿರಪರಾಧಿಯ ರಕ್ತಕ್ಕೆ ದ್ರೋಹ ಬಗೆದು ಪಾಪಮಾಡಿದ್ದೇನೆ,” ಎಂದನು. ಅದಕ್ಕೆ ಅವರು, “ನಮಗೇನು? ನೀನೇ ಅದನ್ನು ನೋಡಿಕೋ,” ಎಂದರು.

[5] ಅವನು ಆ ಬೆಳ್ಳಿಯ ನಾಣ್ಯಗಳನ್ನು ದೇವಾಲಯದಲ್ಲಿ ಬಿಸಾಡಿಬಿಟ್ಟು ಹೊರಟುಹೋಗಿ ನೇಣು ಹಾಕಿಕೊಂಡನು.

[6] ಆಗ ಮುಖ್ಯಯಾಜಕರು ಆ ಬೆಳ್ಳಿಯ ನಾಣ್ಯಗಳನ್ನು ತೆಗೆದುಕೊಂಡು, “ಇವುಗಳನ್ನು ಕಾಣಿಕೆ ಪೆಟ್ಟಿಗೆಯಲ್ಲಿ ಹಾಕುವುದು ನ್ಯಾಯವಲ್ಲ. ಅದು ರಕ್ತದ ಕ್ರಯವಾಗಿದೆ,” ಎಂದರು.

[7] ಅವರು ಆಲೋಚನೆ ಮಾಡಿ ಪರದೇಶಿಗಳನ್ನು ಹೂಳಿಡುವುದಕ್ಕೆ ಆ ಹಣದಿಂದ ಕುಂಬಾರನ ಹೊಲವನ್ನು ಕೊಂಡುಕೊಂಡರು.

[8] ಈ ಕಾರಣದಿಂದ ಆ ಹೊಲವನ್ನು “ರಕ್ತದ ಹೊಲ” ಎಂದು ಈ ದಿನದವರೆಗೆ ಕರೆಯಲಾಗುತ್ತಿದೆ.

[9] ಹೀಗೆ ಪ್ರವಾದಿ ಯೆರೆಮೀಯನು ಹೇಳಿದ ಮಾತು ನೆರವೇರಿತು. ಅದೇನೆಂದರೆ, “ಇಸ್ರಾಯೇಲಿನ ಮಕ್ಕಳಲ್ಲಿ ಅವರು ಬೆಲೆ ಕಟ್ಟಿದವನ ಬೆಲೆಯಾದ ಮೂವತ್ತು ಬೆಳ್ಳಿ ನಾಣ್ಯಗಳನ್ನು ತೆಗೆದುಕೊಂಡು,

[10] ಕರ್ತನು ನನಗೆ ಆಜ್ಞಾಪಿಸಿದಂತೆ ಅವುಗಳನ್ನು, ‘ಕುಂಬಾರನ ಹೊಲ’ ಕೊಳ್ಳಲು ಕೊಟ್ಟರು,” ಎಂಬುದು.

[11] ಯೇಸು ರಾಜ್ಯಪಾಲನ ಮುಂದೆ ನಿಂತಿದ್ದರು. ಆಗ ಅವನು ಯೇಸುವಿಗೆ, “ನೀನು ಯೆಹೂದ್ಯರ ಅರಸನೋ?” ಎಂದು ಕೇಳಿದನು. ಅದಕ್ಕೆ ಯೇಸು ಅವನಿಗೆ, “ನೀನೇ ಹೇಳುತ್ತಿದ್ದಿ,” ಎಂದರು.

[12] ಆಗ ಮುಖ್ಯಯಾಜಕರೂ ಹಿರಿಯರೂ ಯೇಸುವಿನ ಮೇಲೆ ದೂರು ಹೇಳುತ್ತಿದ್ದರೂ ಅವರು ಏನೂ ಉತ್ತರ ಕೊಡಲಿಲ್ಲ.

[13] ಆಗ ಪಿಲಾತನು ಯೇಸುವಿಗೆ, “ನಿನಗೆ ವಿರೋಧವಾಗಿ ಇವರು ಇಷ್ಟು ದೂರು ಹೇಳುತ್ತಿರುವುದು ನಿನಗೆ ಕೇಳಿಸುವುದಿಲ್ಲವೋ?” ಎಂದನು.

[14] ಒಂದು ಮಾತಿಗಾದರೂ ಯೇಸು ಅವನಿಗೆ ಉತ್ತರ ಕೊಡದೆ ಇದ್ದುದರಿಂದ ರಾಜ್ಯಪಾಲನು ಅತ್ಯಾಶ್ಚರ್ಯಪಟ್ಟನು.

[15] ಆ ಹಬ್ಬದಲ್ಲಿ ಜನರು ಇಷ್ಟಪಡುವ ಒಬ್ಬ ಸೆರೆಯಾಳನ್ನು ರಾಜ್ಯಪಾಲನು ಬಿಟ್ಟುಕೊಡುವ ಪದ್ಧತಿಯಿತ್ತು.

[16] ಆ ಸಮಯದಲ್ಲಿ ಬರಬ್ಬನೆಂಬ ಪ್ರಸಿದ್ಧ ಸೆರೆಯಾಳು ಅವರಲ್ಲಿ ಇದ್ದನು.

[17] ಜನಸಮೂಹ ಕೂಡಿಬಂದಿದ್ದಾಗ ಪಿಲಾತನು ಅವರಿಗೆ, “ನಿಮಗೆ ಯಾರನ್ನು ಬಿಡುಗಡೆ ಮಾಡಬೇಕೆನ್ನುತ್ತೀರಿ? ಬರಬ್ಬನನ್ನೋ? ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನೋ?” ಎಂದು ಕೇಳಿದನು.

[18] ಯೇಸುವನ್ನು ಅವರು ಹೊಟ್ಟೆಕಿಚ್ಚಿನಿಂದ ಒಪ್ಪಿಸಿಕೊಟ್ಟಿದ್ದರೆಂದು ಪಿಲಾತನಿಗೆ ತಿಳಿದಿತ್ತು.

[19] ಪಿಲಾತನು ನ್ಯಾಯಾಸನದ ಮೇಲೆ ಕೂತಿದ್ದಾಗ, ಅವನ ಹೆಂಡತಿಯು ಅವನಿಗೆ, “ನೀನು ಆ ನೀತಿವಂತನ ಗೊಡವೆಗೆ ಹೋಗಬೇಡ. ಈ ದಿವಸ ನಾನು ಸ್ವಪ್ನದಲ್ಲಿ ಆತನ ವಿಷಯವಾಗಿ ಬಹಳ ಕಷ್ಟಪಟ್ಟಿದ್ದೇನೆ,” ಎಂದು ಹೇಳಿ ಕಳುಹಿಸಿದಳು.

[20] ಆದರೆ ಮುಖ್ಯಯಾಜಕರು ಮತ್ತು ಹಿರಿಯರು ಬರಬ್ಬನನ್ನು ಬಿಟ್ಟುಕೊಟ್ಟು ಯೇಸುವನ್ನು ಕೊಲ್ಲುವಂತೆ ಬೇಡಿಕೊಳ್ಳುವ ಹಾಗೆ ಸಮೂಹವನ್ನು ಒಡಂಬಡಿಸಿದರು.

[21] ರಾಜ್ಯಪಾಲನು ಅವರಿಗೆ, “ಈ ಇಬ್ಬರಲ್ಲಿ ನಿಮಗೆ ಯಾರನ್ನು ಬಿಟ್ಟು ಕೊಡಬೇಕೆನ್ನುತ್ತೀರಿ?” ಎಂದು ಕೇಳಲು ಅವರು, “ಬರಬ್ಬನನ್ನು,” ಎಂದರು.

[22] ಪಿಲಾತನು ಅವರಿಗೆ, “ಹಾಗಾದರೆ ಕ್ರಿಸ್ತನೆನ್ನಿಸಿಕೊಳ್ಳುವ ಯೇಸುವನ್ನು ನಾನೇನು ಮಾಡಲಿ?” ಎಂದು ಕೇಳಲು ಅವರೆಲ್ಲರೂ, “ಆತನನ್ನು ಶಿಲುಬೆಗೆ ಹಾಕಿಸು,” ಎಂದು ಹೇಳಿದರು.

[23] ಆಗ ಪಿಲಾತನು ಅವರಿಗೆ, “ಏಕೆ? ಆತನು ಯಾವ ಅಪರಾಧ ಮಾಡಿದ್ದಾನೆ?” ಎಂದು ಕೇಳಲು ಅವರು, “ಆತನನ್ನು ಶಿಲುಬೆಗೆ ಹಾಕಿಸು,” ಎಂದು ಮತ್ತಷ್ಟು ಹೆಚ್ಚಾಗಿ ಕೂಗಿಕೊಂಡರು.

[24] ಪಿಲಾತನು ತನ್ನ ಯತ್ನ ನಡೆಯಲಿಲ್ಲವೆಂದೂ ಅದಕ್ಕೆ ಬದಲಾಗಿ ಗದ್ದಲವೇ ಹೆಚ್ಚಾಗುತ್ತದೆಂದೂ ನೋಡಿ, ನೀರನ್ನು ತೆಗೆದುಕೊಂಡು ಸಮೂಹದ ಮುಂದೆ ತನ್ನ ಕೈಗಳನ್ನು ತೊಳೆದು, “ಈ ನೀತಿವಂತನ ರಕ್ತದ ವಿಷಯದಲ್ಲಿ ನಾನು ನಿರಪರಾಧಿ, ಇದಕ್ಕೆ ನೀವೇ ಜವಾಬ್ದಾರಿ,” ಎಂದನು.

[25] ಅದಕ್ಕೆ ಜನರೆಲ್ಲರೂ ಉತ್ತರವಾಗಿ, “ಆತನ ರಕ್ತವು ನಮ್ಮ ಮೇಲೆಯೂ ನಮ್ಮ ಮಕ್ಕಳ ಮೇಲೆಯೂ ಇರಲಿ,” ಎಂದರು.

[26] ಆಗ ಪಿಲಾತನು ಬರಬ್ಬನನ್ನು ಅವರಿಗೆ ಬಿಟ್ಟುಕೊಟ್ಟು, ಯೇಸುವನ್ನು ಕೊರಡೆಗಳಿಂದ ಹೊಡೆಸಿ ಶಿಲುಬೆಗೆ ಹಾಕುವುದಕ್ಕೆ ಒಪ್ಪಿಸಿದನು.

[27] ತರುವಾಯ ರಾಜ್ಯಪಾಲನ ಸೈನಿಕರು ಯೇಸುವನ್ನು ರಾಜಭವನದೊಳಕ್ಕೆ ತೆಗೆದುಕೊಂಡುಹೋಗಿ ಸೈನ್ಯದ ಪೂರ್ಣತಂಡವನ್ನು ಯೇಸುವಿನ ಸುತ್ತಲೂ ಕೂಡಿಸಿದರು.

[28] ಅವರು ಯೇಸುವಿನ ಬಟ್ಟೆಗಳನ್ನು ತೆಗೆದುಹಾಕಿ ಕಡುಗೆಂಪು ನಿಲುವಂಗಿಯನ್ನು ಅವರಿಗೆ ತೊಡಿಸಿದರು.

[29] ಅವರು ಒಂದು ಮುಳ್ಳಿನ ಕಿರೀಟವನ್ನು ಹೆಣೆದು, ಯೇಸುವಿನ ತಲೆಯ ಮೇಲಿಟ್ಟು, ಬಲಗೈಯಲ್ಲಿ ಒಂದು ಬೆತ್ತವನ್ನು ಕೊಟ್ಟು ಅವರ ಮುಂದೆ ಮೊಣಕಾಲೂರಿ, “ಯೆಹೂದ್ಯರ ಅರಸನೇ, ನಮಸ್ಕಾರ!” ಎಂದು ಹೇಳಿ ಯೇಸುವನ್ನು ಹಾಸ್ಯಮಾಡಿದರು.

[30] ಅವರು ಯೇಸುವಿನ ಮೇಲೆ ಉಗುಳಿ, ಆ ಬೆತ್ತವನ್ನು ತೆಗೆದುಕೊಂಡು ಅವರ ತಲೆಯ ಮೇಲೆ ಮತ್ತೆ ಮತ್ತೆ ಹೊಡೆದರು.

[31] ಹೀಗೆ ಹಾಸ್ಯ ಮಾಡಿದ ಮೇಲೆ, ಆ ನಿಲುವಂಗಿಯನ್ನು ಯೇಸುವಿನಿಂದ ತೆಗೆದುಹಾಕಿ ಅವರ ವಸ್ತ್ರವನ್ನು ಹೊದಿಸಿ, ಯೇಸುವನ್ನು ಶಿಲುಬೆಗೆ ಹಾಕುವುದಕ್ಕಾಗಿ ನಡೆಸಿಕೊಂಡು ಹೋದರು.

[32] ಅವರು ಹೊರಗೆ ಹೋಗುತ್ತಿರುವಾಗ, ಕುರೇನೆ ಗ್ರಾಮದ ಸೀಮೋನನೆಂಬ ಮನುಷ್ಯನನ್ನು ಕಂಡು, ಯೇಸುವಿನ ಶಿಲುಬೆಯನ್ನು ಹೊರುವಂತೆ ಅವನನ್ನು ಬಲವಂತ ಮಾಡಿದರು.

[33] ಆಮೇಲೆ ಅವರು “ಗೊಲ್ಗೊಥಾ” ಎಂದು ಕರೆಯಲಾಗುತ್ತಿದ್ದ ಸ್ಥಳಕ್ಕೆ ಬಂದರು. ಅದರ ಅರ್ಥ “ತಲೆಬುರುಡೆಯ ಸ್ಥಳ” ಎಂಬುದು.

[34] ಆಗ ಅವರು ಯೇಸುವಿಗೆ ಕಹಿ ಬೆರೆಸಿದ ದ್ರಾಕ್ಷಾರಸವನ್ನು ಕುಡಿಯಲು ಕೊಟ್ಟರು. ಯೇಸು ಅದನ್ನು ರುಚಿ ನೋಡಿ ಕುಡಿಯಲು ಇಷ್ಟಪಡಲಿಲ್ಲ.

[35] ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ, ಅವರ ಬಟ್ಟೆಗಳಿಗಾಗಿ ಸೈನಿಕರು ಚೀಟುಹಾಕಿ ಹಂಚಿಕೊಂಡರು

[36] ಮತ್ತು ಅವರು ಅಲ್ಲಿ ಕೆಳಗೆ ಕುಳಿತು ಕಾವಲು ಕಾಯುತ್ತಿದ್ದರು.

[37] ಯೇಸುವಿನ ತಲೆಯ ಮೇಲ್ಭಾಗದಲ್ಲಿ ಅವರ ವಿರುದ್ಧ ದೋಷಾರೋಪಣೆಯನ್ನು ಬರೆದಿಟ್ಟರು. ಅದೇನೆಂದರೆ: ಈತನು ಯೆಹೂದ್ಯರ ಅರಸನಾದ ಯೇಸು.

[38] ಯೇಸುವಿನೊಂದಿಗೆ ಇಬ್ಬರು ಕಳ್ಳರನ್ನು ತಂದು ಒಬ್ಬನನ್ನು ಬಲಗಡೆಯಲ್ಲಿ ಇನ್ನೊಬ್ಬನನ್ನು ಎಡಗಡೆಯಲ್ಲಿ ಶಿಲುಬೆಗೆ ಹಾಕಿದರು.

[39] ಅಲ್ಲಿ ಹಾದು ಹೋಗುತ್ತಿದ್ದವರು ಯೇಸುವನ್ನು ದೂಷಿಸಿ, ತಮ್ಮ ತಲೆಗಳನ್ನು ಅಲ್ಲಾಡಿಸುತ್ತಾ,

[40] “ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟುವವನೇ, ನಿನ್ನನ್ನು ನೀನೇ ರಕ್ಷಿಸಿಕೋ, ನೀನು ದೇವಪುತ್ರನಾಗಿದ್ದರೆ ಶಿಲುಬೆಯಿಂದ ಕೆಳಗೆ ಇಳಿದು ಬಾ,” ಎಂದರು.

[41] ಅದೇ ಮೇರೆಗೆ ಮುಖ್ಯಯಾಜಕರೂ ನಿಯಮ ಬೋಧಕರೂ ಹಿರಿಯರೂ ಯೇಸುವನ್ನು ಹಾಸ್ಯಮಾಡಿ,

[42] “ಈತನು ಬೇರೆಯವರನ್ನು ರಕ್ಷಿಸಿದನು; ತನ್ನನ್ನು ತಾನೇ ರಕ್ಷಿಸಿಕೊಳ್ಳಲಾರನು! ಈತನು ಇಸ್ರಾಯೇಲಿನ ಅರಸನಾಗಿದ್ದರೆ ಈಗಲೇ ಶಿಲುಬೆಯಿಂದ ಕೆಳಗೆ ಇಳಿದು ಬರಲಿ. ಆಗ ನಾವು ಈತನನ್ನು ನಂಬುವೆವು.

[43] ಈತನು ದೇವರಲ್ಲಿ ಭರವಸೆ ಇಟ್ಟಿದ್ದಾನೆ. ದೇವರಿಗೆ ಈತನಲ್ಲಿ ಇಷ್ಟವಿದ್ದರೆ, ದೇವರೇ ಈತನನ್ನು ಈಗ ಬಿಡಿಸಲಿ, ಏಕೆಂದರೆ ಈತನು, ‘ನಾನು ದೇವಪುತ್ರನು’ ಎಂದು ಹೇಳಿದ್ದಾನೆ,” ಎಂದರು.

[44] ಯೇಸುವಿನ ಜೊತೆಗೆ ಶಿಲುಬೆಗೇರಿಸಲಾಗಿದ್ದ ಕಳ್ಳರು ಸಹ ಅದೇ ರೀತಿಯಾಗಿ ಅವರನ್ನು ನಿಂದಿಸಿದರು.

[45] ಆಗ ಮಧ್ಯಾಹ್ನದಿಂದ ಮೂರು ಗಂಟೆಯವರೆಗೆ ದೇಶದ ಮೇಲೆಲ್ಲಾ ಕತ್ತಲೆ ಕವಿಯಿತು.

[46] ಸುಮಾರು ಮೂರು ಗಂಟೆಗೆ ಯೇಸು, “ಏಲೀ, ಏಲೀ, ಲಮಾ ಸಬಕ್ತಾನೀ?” ಅಂದರೆ, “ನನ್ನ ದೇವರೇ, ನನ್ನ ದೇವರೇ ಏಕೆ ನನ್ನನ್ನು ಕೈಬಿಟ್ಟಿದ್ದೀ?” ಎಂದು ಮಹಾಧ್ವನಿಯಿಂದ ಕೂಗಿ ಹೇಳಿದರು.

[47] ಆಗ ಅಲ್ಲಿ ನಿಂತಿದ್ದವರಲ್ಲಿ ಕೆಲವರು, “ಈತನು ಎಲೀಯನನ್ನು ಕರೆಯುತ್ತಿದ್ದಾನೆ,” ಎಂದರು.

[48] ಕೂಡಲೇ ಅವರಲ್ಲಿ ಒಬ್ಬನು ಓಡಿಹೋಗಿ ಹೀರುವ ವಸ್ತುವಿನಿಂದ ಹುಳಿರಸದಲ್ಲಿ ಅದ್ದಿ ಒಂದು ಕೋಲಿಗೆ ಸಿಕ್ಕಿಸಿ ಯೇಸುವಿಗೆ ಕುಡಿಯುವುದಕ್ಕೆ ಕೊಟ್ಟನು.

[49] ಉಳಿದವರು, “ಇರಲಿ ಬಿಡು, ಎಲೀಯನು ಬಂದು ಈತನನ್ನು ರಕ್ಷಿಸುವನೇನೋ ನೋಡೋಣ,” ಎಂದರು.

[50] ಯೇಸು ತಿರುಗಿ ಗಟ್ಟಿಯಾಗಿ ಕೂಗಿ, ತಮ್ಮ ಆತ್ಮವನ್ನು ಒಪ್ಪಿಸಿಕೊಟ್ಟರು.

[51] ಅದೇ ಸಮಯದಲ್ಲಿ, ದೇವಾಲಯದ ತೆರೆಯು ಮೇಲಿನಿಂದ ಕೆಳಗಿನವರೆಗೆ ಹರಿದು ಎರಡು ಭಾಗವಾಯಿತು. ಭೂಮಿಯು ಕಂಪಿಸಿತು. ಬಂಡೆಗಳು ಸೀಳಿಹೋದವು.

[52] ಇದಲ್ಲದೆ ಸಮಾಧಿಗಳು ತೆರೆದುಕೊಂಡವು. ಮರಣ ಹೊಂದಿದ ಅನೇಕ ಭಕ್ತರ ದೇಹಗಳು ಎದ್ದವು.

[53] ಯೇಸು ಪುನರುತ್ಥಾನವಾದ ಮೇಲೆ ಅವರು ಸಮಾಧಿಗಳೊಳಗಿಂದ ಹೊರಗೆ ಬಂದು ಪವಿತ್ರ ಪಟ್ಟಣದೊಳಕ್ಕೆ ಹೋಗಿ ಅನೇಕರಿಗೆ ಕಾಣಿಸಿಕೊಂಡರು.

[54] ಆಗ ಶತಾಧಿಪತಿಯು ಮತ್ತು ಅವನ ಸಂಗಡ ಯೇಸುವನ್ನು ಕಾಯುತ್ತಿದ್ದವರು ಭೂಕಂಪವನ್ನೂ ಸಂಭವಿಸಿದ್ದೆಲ್ಲವನ್ನೂ ಕಂಡು ಬಹಳವಾಗಿ ಭಯಪಟ್ಟು, “ನಿಜವಾಗಿಯೂ ಈತನು ದೇವಪುತ್ರನಾಗಿದ್ದನು,” ಎಂದರು.

[55] ಯೇಸುವನ್ನು ಗಲಿಲಾಯದಿಂದ ಹಿಂಬಾಲಿಸಿ, ಅವರಿಗೆ ಸೇವೆಮಾಡಿದ ಅನೇಕ ಸ್ತ್ರೀಯರು ದೂರದಿಂದ ನೋಡುತ್ತಿದ್ದರು.

[56] ಅವರಲ್ಲಿ ಮಗ್ದಲದ ಮರಿಯಳು, ಯಾಕೋಬ ಮತ್ತು ಯೋಸೆಯ ತಾಯಿ ಮರಿಯಳು ಹಾಗೂ ಜೆಬೆದಾಯನ ಮಕ್ಕಳ ತಾಯಿ ಇದ್ದರು.

[57] ಸಂಜೆಯಾದಾಗ, ಅರಿಮಥಾಯ ಊರಿನ ಯೋಸೇಫನೆಂಬ ಹೆಸರುಳ್ಳ ಧನವಂತನಾದ ಒಬ್ಬ ಮನುಷ್ಯನು ಅಲ್ಲಿಗೆ ಬಂದನು. ಅವನು ಸಹ ಯೇಸುವಿನ ಶಿಷ್ಯನಾಗಿದ್ದನು.

[58] ಅವನು ಪಿಲಾತನ ಬಳಿಗೆ ಹೋಗಿ ಯೇಸುವಿನ ದೇಹವನ್ನು ಕೇಳಿಕೊಂಡನು. ಆಗ ಪಿಲಾತನು ದೇಹವನ್ನು ಅವನಿಗೆ ಒಪ್ಪಿಸುವಂತೆ ಅಪ್ಪಣೆಕೊಟ್ಟನು.

[59] ಯೋಸೇಫನು ಆ ದೇಹವನ್ನು ತೆಗೆದುಕೊಂಡ ಮೇಲೆ, ಅದನ್ನು ಶುದ್ಧವಾದ ನಾರುಮಡಿ ಬಟ್ಟೆಯಲ್ಲಿ ಸುತ್ತಿ,

[60] ಬಂಡೆಯಲ್ಲಿ ತಾನು ಕೊರೆದಿದ್ದ ತನ್ನ ಹೊಸ ಸಮಾಧಿಯಲ್ಲಿ ಅದನ್ನು ಇಟ್ಟು, ಆ ಸಮಾಧಿಯ ಬಾಗಿಲಿಗೆ ದೊಡ್ಡ ಬಂಡೆಯನ್ನು ಉರುಳಿಸಿ ಹೊರಟುಹೋದನು.

[61] ಅಲ್ಲಿ ಮಗ್ದಲದ ಮರಿಯಳು ಮತ್ತು ಇನ್ನೊಬ್ಬ ಮರಿಯಳು ಆ ಸಮಾಧಿಗೆ ಎದುರಾಗಿ ಕುಳಿತುಕೊಂಡಿದ್ದರು.

[62] ಮರುದಿನ, ಅಂದರೆ ಪಸ್ಕಹಬ್ಬದ ಸಿದ್ಧತೆಯ ದಿನ ಕಳೆದ ಮೇಲೆ ಮುಖ್ಯಯಾಜಕರು, ಫರಿಸಾಯರು ಒಟ್ಟಾಗಿ ಪಿಲಾತನ ಬಳಿಗೆ ಬಂದು,

[63] “ಅಯ್ಯಾ, ಆ ಮೋಸಗಾರನು ಇನ್ನೂ ಜೀವದಿಂದಿರುವಾಗ, ‘ಮೂರು ದಿನಗಳಾದ ಮೇಲೆ ನಾನು ತಿರುಗಿ ಏಳುವೆನು,’ ಎಂದು ಹೇಳಿದ್ದು ನಮಗೆ ನೆನಪಿದೆ.

[64] ಯೇಸುವಿನ ಶಿಷ್ಯರು ರಾತ್ರಿಯಲ್ಲಿ ಬಂದು ಆತನನ್ನು ಕದ್ದುಕೊಂಡು ಹೋಗಿ, ಯೇಸು ಸತ್ತವರೊಳಗಿಂದ ಎದ್ದಿದ್ದಾನೆ ಎಂದು ಜನರಿಗೆ ಹೇಳಿಯಾರು. ಆಗ ಮೊದಲನೆಯ ಮೋಸಕ್ಕಿಂತ ಕಡೆಯ ಮೋಸವು ಕೆಡುಕಾದೀತು. ಆದಕಾರಣ ಮೂರನೆಯ ದಿನದವರೆಗೆ ಸಮಾಧಿಯನ್ನು ಭದ್ರಪಡಿಸುವಂತೆ ಅಪ್ಪಣೆಕೊಡಬೇಕು,” ಎಂದರು.

[65] ಪಿಲಾತನು ಅವರಿಗೆ, “ಕಾವಲುಗಾರರು ಇದ್ದಾರಲ್ಲಾ, ಹೋಗಿ ನಿಮಗೆ ತಿಳಿದಮಟ್ಟಿಗೆ ಅದನ್ನು ಭದ್ರಪಡಿಸಿರಿ,” ಎಂದನು.

[66] ಅವರು ಹೋಗಿ ಸಮಾಧಿಯನ್ನು ಭದ್ರಪಡಿಸಿ ಕಲ್ಲಿಗೆ ಮುದ್ರೆಹಾಕಿ, ಕಾವಲನ್ನು ಇಟ್ಟರು.

ಮತ್ತಾಯ — Chapters