[1] ಆ ದಿನಗಳಲ್ಲಿ ಸ್ನಾನಿಕನಾದ ಯೋಹಾನನು ಯೂದಾಯ ಪ್ರಾಂತದ ಅರಣ್ಯಕ್ಕೆ ಬಂದು,
[2] “ದೇವರ ಕಡೆಗೆ ತಿರುಗಿಕೊಳ್ಳಿರಿ, ಪರಲೋಕ ರಾಜ್ಯವು ಸಮೀಪಿಸಿದೆ,” ಎಂದು ಸಾರುತ್ತಿದ್ದನು.
[3] “ ‘ಕರ್ತದೇವರ ಮಾರ್ಗವನ್ನು ಸಿದ್ಧಮಾಡಿರಿ, ಅವರ ದಾರಿಗಳನ್ನು ಸರಾಗಮಾಡಿರಿ,’ ಎಂದು ಅರಣ್ಯದಲ್ಲಿ ಕೂಗುವ ಸ್ವರವು,” ಎಂದು ಪ್ರವಾದಿಯಾದ ಯೆಶಾಯನ ಮೂಲಕ ಸೂಚಿತನಾದವನು ಇವನೇ.
[4] ಯೋಹಾನನ ಉಡುಪು ಒಂಟೆಯ ಕೂದಲಿನಿಂದ ಮಾಡಲಾಗಿತ್ತು. ಅವನು ಸೊಂಟಕ್ಕೆ ಚರ್ಮದ ನಡುಕಟ್ಟನ್ನು ಕಟ್ಟಿಕೊಳ್ಳುತ್ತಿದ್ದನು. ಮಿಡತೆಗಳು ಮತ್ತು ಕಾಡುಜೇನು ಅವನ ಆಹಾರವಾಗಿತ್ತು.
[5] ಯೆರೂಸಲೇಮಿನಿಂದಲೂ ಯೂದಾಯ ಪ್ರಾಂತದ ಎಲ್ಲಾ ಸ್ಥಳಗಳಿಂದಲೂ ಯೊರ್ದನ್ ನದಿ ಸುತ್ತಲಿರುವ ಪ್ರದೇಶದಿಂದಲೂ ಜನರು ಅವನ ಬಳಿಗೆ ಬರುತ್ತಿದ್ದರು.
[6] ಅವರು ತಮ್ಮ ತಮ್ಮ ಪಾಪಗಳನ್ನು ಅರಿಕೆಮಾಡುತ್ತಾ, ಅವನಿಂದ ಯೊರ್ದನ್ ನದಿಯಲ್ಲಿ ದೀಕ್ಷಾಸ್ನಾನ ಮಾಡಿಸಿಕೊಳ್ಳುತ್ತಿದ್ದರು.
[7] ಆದರೆ ಫರಿಸಾಯರು ಹಾಗೂ ಸದ್ದುಕಾಯರಲ್ಲಿ ಅನೇಕರು ದೀಕ್ಷಾಸ್ನಾನಕ್ಕಾಗಿ ಬರುವುದನ್ನು ಕಂಡು, ಯೋಹಾನನು ಅವರಿಗೆ: “ಎಲೈ ಸರ್ಪಸಂತತಿಯವರೇ! ಮುಂದೆ ಬರುವ ಕೋಪಾಗ್ನಿಯಿಂದ ತಪ್ಪಿಸಿಕೊಳ್ಳಲು ನಿಮ್ಮನ್ನು ಎಚ್ಚರಿಸಿದವರು ಯಾರು?
[8] ನಿಮ್ಮ ಮನಸ್ಸು ದೇವರ ಕಡೆಗೆ ತಿರುಗಿಕೊಂಡದ್ದಕ್ಕೆ ತಕ್ಕ ಫಲಗಳನ್ನು ತೋರಿಸಿರಿ.
[9] ‘ಅಬ್ರಹಾಮನು ನಮಗೆ ತಂದೆಯಾಗಿದ್ದಾನೆ,’ ಎಂದು ನಿಮ್ಮೊಳಗೆ ಕೊಚ್ಚಿಕೊಳ್ಳಬೇಡಿರಿ. ಈ ಕಲ್ಲುಗಳಿಂದಲೂ ದೇವರು ಅಬ್ರಹಾಮನಿಗೆ ಮಕ್ಕಳನ್ನು ಹುಟ್ಟಿಸಲು ಶಕ್ತರೆಂದು ನಾನು ನಿಮಗೆ ಹೇಳುತ್ತೇನೆ.
[10] ಮರಗಳ ಬೇರಿಗೆ ಈಗಾಗಲೇ ಕೊಡಲಿ ಬಿದ್ದಿದೆ, ಒಳ್ಳೆಯ ಫಲವನ್ನು ಕೊಡದ ಪ್ರತಿಯೊಂದು ಮರವನ್ನು ಕಡಿದು ಬೆಂಕಿಯಲ್ಲಿ ಹಾಕಲಾಗುವುದು.
[11] “ನಾನಂತೂ ದೇವರ ಕಡೆಗೆ ತಿರುಗಿಕೊಂಡಿದ್ದಕ್ಕಾಗಿ ನಿಮಗೆ ನೀರಿನಿಂದ ದೀಕ್ಷಾಸ್ನಾನ ಕೊಡುತ್ತಿದ್ದೇನೆ. ಆದರೆ ನನ್ನ ಬಳಿಕ ಬರುವವರು ನನಗಿಂತಲೂ ಶಕ್ತರು, ಅವರ ಪಾದರಕ್ಷೆಗಳನ್ನು ಹೊರಲಿಕ್ಕೂ ನಾನು ಯೋಗ್ಯನಲ್ಲ. ಅವರಾದರೋ ಪವಿತ್ರಾತ್ಮರಲ್ಲಿಯೂ ಅಗ್ನಿಯಲ್ಲಿಯೂ ನಿಮಗೆ ದೀಕ್ಷಾಸ್ನಾನ ಕೊಡುವರು.
[12] ಮೊರವು ಅವರ ಕೈಯಲ್ಲಿದೆ, ಅವರು ತಮ್ಮ ಕಣದಲ್ಲಿಯ ರಾಶಿಯನ್ನು ತೂರಿ ಶುದ್ಧಮಾಡಿ ಗೋಧಿಯನ್ನು ಕಣಜದಲ್ಲಿ ತುಂಬಿಕೊಂಡು, ಹೊಟ್ಟನ್ನು ಆರಿಸಲಾಗದ ಬೆಂಕಿಯಲ್ಲಿ ಸುಟ್ಟುಹಾಕುವರು,” ಎಂದು ಹೇಳಿದನು.
[13] ಆಮೇಲೆ ಯೇಸು ಯೋಹಾನನಿಂದ ದೀಕ್ಷಾಸ್ನಾನ ಪಡೆಯಲು ಗಲಿಲಾಯದಿಂದ ಯೊರ್ದನ್ ನದಿಗೆ ಬಂದರು.
[14] ಆದರೆ ಯೋಹಾನನು ಅದಕ್ಕೆ ಅಡ್ಡಿ ಮಾಡುತ್ತಾ, “ನಾನೇ ನಿಮ್ಮಿಂದ ದೀಕ್ಷಾಸ್ನಾನ ಪಡೆಯಬೇಕಾಗಿರುವಲ್ಲಿ, ನೀವು ನನ್ನ ಬಳಿಗೆ ಬರಬಹುದೇ?” ಎಂದು ಕೇಳಿದನು.
[15] ಯೇಸು ಉತ್ತರವಾಗಿ, “ಸದ್ಯಕ್ಕೆ ಒಪ್ಪಿಕೋ, ಹೀಗೆ ನಾವು ಸಕಲ ನೀತಿಯನ್ನೂ ನೆರವೇರಿಸಬೇಕಾಗಿದೆ,” ಎಂದು ಹೇಳಿದಾಗ, ಯೋಹಾನನು ಒಪ್ಪಿಕೊಂಡನು.
[16] ಯೇಸು ದೀಕ್ಷಾಸ್ನಾನ ಪಡೆದುಕೊಂಡು ನೀರಿನಿಂದ ಮೇಲಕ್ಕೆ ಬಂದ ಕೂಡಲೇ, ಸ್ವರ್ಗವು ತೆರೆಯಿತು, ದೇವರ ಆತ್ಮ ಪಾರಿವಾಳದ ಹಾಗೆ ತಮ್ಮ ಮೇಲೆ ಇಳಿದು ಬರುವುದನ್ನು ಯೇಸು ಕಂಡರು.
[17] ಸ್ವರ್ಗದೊಳಗಿಂದ, “ಈತನು ನನ್ನ ಪ್ರಿಯ ಮಗನು. ಈತನನ್ನು ನಾನು ಮೆಚ್ಚಿದ್ದೇನೆ,” ಎಂಬ ಧ್ವನಿ ಕೇಳಿಸಿತು.