[1] ಯೇಸು ಈ ಮಾತುಗಳನ್ನು ಹೇಳಿ ಮುಗಿಸಿದ ಮೇಲೆ, ಗಲಿಲಾಯದಿಂದ ಹೊರಟು ಯೊರ್ದನ್ ನದಿಯ ಆಚೆಯ ಯೂದಾಯ ಪ್ರಾಂತಕ್ಕೆ ಬಂದರು.
[2] ಜನರ ದೊಡ್ಡ ಸಮೂಹಗಳು ಅವರನ್ನು ಹಿಂಬಾಲಿಸಿದವು, ಯೇಸು ಅವರನ್ನು ಅಲ್ಲಿ ಸ್ವಸ್ಥಮಾಡಿದರು.
[3] ಫರಿಸಾಯರಲ್ಲಿ ಕೆಲವರು ಯೇಸುವನ್ನು ಪರೀಕ್ಷಿಸುವುದಕ್ಕಾಗಿ ಅವರ ಬಳಿಗೆ ಬಂದು, “ಒಬ್ಬ ಪುರುಷನು ಯಾವ ಕಾರಣದಿಂದಾದರೂ ತನ್ನ ಹೆಂಡತಿಯನ್ನು ಬಿಟ್ಟುಬಿಡುವುದು ಧರ್ಮಸಮ್ಮತವೋ?” ಎಂದು ಕೇಳಿದರು.
[4] ಯೇಸು ಉತ್ತರವಾಗಿ ಅವರಿಗೆ, “ಆದಿಯಿಂದಲೇ ಸೃಷ್ಟಿಕರ್ತ, ‘ಅವರನ್ನು ಗಂಡು ಹೆಣ್ಣಾಗಿ ಮಾಡಿದರು.
[5] ಈ ಕಾರಣದಿಂದ ಪುರುಷನು ತಂದೆತಾಯಿಗಳನ್ನು ಬಿಟ್ಟು ತನ್ನ ಹೆಂಡತಿಯನ್ನು ಸೇರಿಕೊಳ್ಳುವನು; ಅವರಿಬ್ಬರೂ ಒಂದೇ ಶರೀರವಾಗಿರುವರು,’ ಎಂದು ಹೇಳಿದ್ದನ್ನು ನೀವು ಓದಲಿಲ್ಲವೇ?
[6] ಆದ್ದರಿಂದ ಅವರು ಇನ್ನು ಇಬ್ಬರಲ್ಲ, ಒಂದೇ ಶರೀರವಾಗಿದ್ದಾರೆ. ಆದಕಾರಣ ದೇವರು ಕೂಡಿಸಿದ್ದನ್ನು, ಮನುಷ್ಯನು ಅಗಲಿಸಬಾರದು,” ಎಂದು ಹೇಳಿದರು.
[7] ಅದಕ್ಕೆ ಅವರು ಯೇಸುವಿಗೆ, “ಹಾಗಾದರೆ ವಿವಾಹ ವಿಚ್ಛೇದನ ಪತ್ರವನ್ನು ಕೊಟ್ಟು ಆಕೆಯನ್ನು ಬಿಟ್ಟು ಬಿಡಬಹುದೆಂದು ಮೋಶೆಯು ಏಕೆ ಅಪ್ಪಣೆಕೊಟ್ಟನು?” ಎಂದು ಕೇಳಿದರು.
[8] ಯೇಸು ಉತ್ತರವಾಗಿ ಅವರಿಗೆ, “ಮೋಶೆಯು ನಿಮ್ಮ ಹೃದಯ ಕಾಠಿಣ್ಯದ ದೆಸೆಯಿಂದ ಹೆಂಡತಿಯನ್ನು ಬಿಟ್ಟುಬಿಡುವುದಕ್ಕೆ ನಿಮಗೆ ಅನುಮತಿ ಕೊಟ್ಟನು. ಆದರೆ ಆದಿಯಿಂದ ಅದು ಹಾಗೆ ಇರಲಿಲ್ಲ.
[9] ನಾನು ನಿಮಗೆ ಹೇಳುವುದೇನೆಂದರೆ, ಹಾದರದ ಕಾರಣದಿಂದಲ್ಲದೆ, ಯಾವನಾದರೂ ತನ್ನ ಹೆಂಡತಿಯನ್ನು ಬಿಟ್ಟು, ಮತ್ತೊಬ್ಬಳನ್ನು ಮದುವೆಯಾಗುವವನು ವ್ಯಭಿಚಾರ ಮಾಡುವವನಾಗಿದ್ದಾನೆ,” ಎಂದರು.
[10] ಆಗ ಶಿಷ್ಯರು ಯೇಸುವಿಗೆ, “ಸತಿಪತಿಯರ ಸಂಬಂಧ ಹೀಗಿರುವುದಾದರೆ, ಮದುವೆ ಆಗದಿರುವುದೇ ಒಳ್ಳೆಯದು,” ಎಂದರು.
[11] ಆದರೆ ಯೇಸು ಅವರಿಗೆ, “ಯಾರಿಗೆ ಇದು ಅನುಮತಿಸಲಾಗಿದೆಯೋ ಅವರೇ ಹೊರತು ಎಲ್ಲರೂ ಈ ಮಾತನ್ನು ಸ್ವೀಕರಿಸಲಾರರು.
[12] ತಮ್ಮ ತಾಯಿಯ ಗರ್ಭದಿಂದ ಹುಟ್ಟಿದಾಗಲೇ ಕೆಲವರು ನಪುಂಸಕರಾದವರಿದ್ದಾರೆ, ಕೆಲವರು ಮನುಷ್ಯರಿಂದ ಮಾಡಲಾದ ನಪುಂಸಕರು ಇದ್ದಾರೆ. ಇನ್ನು ಕೆಲವರು ಪರಲೋಕ ರಾಜ್ಯದ ನಿಮಿತ್ತವಾಗಿ ತಮ್ಮನ್ನು ತಾವೇ ನಪುಂಸಕರಾಗಿ ಮಾಡಿಕೊಂಡವರೂ ಇದ್ದಾರೆ. ಇದನ್ನು ಸ್ವೀಕರಿಸಬಲ್ಲವನು ಸ್ವೀಕರಿಸಲಿ,” ಎಂದರು.
[13] ಯೇಸು ತಮ್ಮ ಕೈಗಳನ್ನಿಟ್ಟು ಪ್ರಾರ್ಥಿಸುವಂತೆ ಕೆಲವು ಜನರು ಚಿಕ್ಕಮಕ್ಕಳನ್ನು ಯೇಸುವಿನ ಬಳಿಗೆ ತಂದರು. ಆದರೆ ಶಿಷ್ಯರು ಅವರನ್ನು ಗದರಿಸಿದರು.
[14] ಆದರೆ ಯೇಸು, “ಚಿಕ್ಕಮಕ್ಕಳನ್ನು ನನ್ನ ಬಳಿಗೆ ಬರಲು ಬಿಡಿರಿ, ಅವುಗಳಿಗೆ ಅಡ್ಡಿಮಾಡಬೇಡಿರಿ, ಪರಲೋಕ ರಾಜ್ಯವು ಇಂಥವರದೇ,” ಎಂದರು.
[15] ತರುವಾಯ ಯೇಸು ಮಕ್ಕಳ ಮೇಲೆ ತಮ್ಮ ಕೈಯಿಟ್ಟು ಆಶೀರ್ವದಿಸಿ ಅಲ್ಲಿಂದ ಹೊರಟು ಹೋದರು.
[16] ಆಗ ಒಬ್ಬನು ಬಂದು ಯೇಸುವಿಗೆ, “ಒಳ್ಳೆಯ ಬೋಧಕರೇ, ನಾನು ನಿತ್ಯಜೀವವನ್ನು ಹೊಂದುವುದಕ್ಕೆ ಯಾವ ಒಳ್ಳೆಯ ಕಾರ್ಯವನ್ನು ಮಾಡಬೇಕು?” ಎಂದು ಕೇಳಿದನು.
[17] “ನೀನು ಒಳ್ಳೆಯದನ್ನು ಕುರಿತು ನನ್ನನ್ನು ಕೇಳುವುದೇಕೆ? ಒಬ್ಬಾತನೇ ಒಳ್ಳೆಯವನು. ಆದರೆ ನೀನು ಜೀವದಲ್ಲಿ ಪ್ರವೇಶಿಸಬೇಕಾದರೆ ದೇವರ ಆಜ್ಞೆಗಳನ್ನು ಅನುಸರಿಸಿ ನಡೆದುಕೋ,” ಎಂದು ಯೇಸು ಉತ್ತರಕೊಟ್ಟರು.
[18] ಅವನು ಯೇಸುವಿಗೆ, “ಅವು ಯಾವುವು?” ಎಂದು ಕೇಳಿದನು. ಅದಕ್ಕೆ ಯೇಸು, “ನರಹತ್ಯೆ ಮಾಡಬಾರದು, ವ್ಯಭಿಚಾರ ಮಾಡಬಾರದು, ಕದಿಯಬಾರದು, ಸುಳ್ಳುಸಾಕ್ಷಿ ಹೇಳಬಾರದು,
[19] ನಿನ್ನ ತಂದೆತಾಯಿಗಳನ್ನು ಗೌರವಿಸಬೇಕು. ನಿನ್ನ ನೆರೆಯವನನ್ನು ನಿನ್ನಂತೆಯೇ ಪ್ರೀತಿಸಬೇಕು,” ಎಂದು ಹೇಳಿದರು.
[20] ಆ ಯೌವನಸ್ಥನು ಯೇಸುವಿಗೆ, “ಇವೆಲ್ಲವನ್ನೂ ನಾನು ಕೈಗೊಂಡಿದ್ದೇನೆ, ಇನ್ನು ನನಗೇನು ಕಡಿಮೆಯಾಗಿದೆ?” ಎಂದು ಕೇಳಿದನು.
[21] ಯೇಸು ಅವನಿಗೆ, “ನೀನು ಸಂಪೂರ್ಣನಾಗಲು ಅಪೇಕ್ಷಿಸಿದರೆ, ಹೋಗಿ ನಿನ್ನ ಆಸ್ತಿಯನ್ನೆಲ್ಲಾ ಮಾರಿ ಬಡವರಿಗೆ ಕೊಡು; ನಿನಗೆ ಪರಲೋಕದಲ್ಲಿ ಸಂಪತ್ತಿರುವುದು. ನೀನು ಬಂದು ನನ್ನನ್ನು ಹಿಂಬಾಲಿಸು,” ಎಂದು ಹೇಳಿದರು.
[22] ಆದರೆ ಆ ಯುವಕನು ಯೇಸು ಹೇಳಿದ್ದನ್ನು ಕೇಳಿ, ದುಃಖದಿಂದ ಹೊರಟುಹೋದನು. ಏಕೆಂದರೆ ಅವನಿಗೆ ಬಹಳ ಆಸ್ತಿ ಇತ್ತು.
[23] ಆಗ ಯೇಸು ತಮ್ಮ ಶಿಷ್ಯರಿಗೆ, “ಐಶ್ವರ್ಯವಂತನು ಪರಲೋಕ ರಾಜ್ಯದಲ್ಲಿ ಸೇರುವುದು ಕಷ್ಟ ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.
[24] ಐಶ್ವರ್ಯವಂತನು ದೇವರ ರಾಜ್ಯದಲ್ಲಿ ಸೇರುವುದಕ್ಕಿಂತ ಒಂಟೆಯು ಸೂಜಿಯ ಕಣ್ಣಿನಲ್ಲಿ ನುಗ್ಗುವುದು ಸುಲಭ ಎಂದು ಪುನಃ ನಿಮಗೆ ಹೇಳುತ್ತೇನೆ,” ಎಂದರು.
[25] ಇದನ್ನು ಕೇಳಿದಾಗ ಯೇಸುವಿನ ಶಿಷ್ಯರು ಅತ್ಯಂತ ವಿಸ್ಮಯಗೊಂಡು, “ಹಾಗಾದರೆ ಯಾರು ರಕ್ಷಣೆಹೊಂದುವರು?” ಎಂದು ಕೇಳಿದರು.
[26] ಅದಕ್ಕೆ ಯೇಸು ಅವರನ್ನು ದೃಷ್ಟಿಸಿ ನೋಡಿ ಅವರಿಗೆ, “ಮನುಷ್ಯರಿಗೆ ಇದು ಅಸಾಧ್ಯ; ಆದರೆ ದೇವರಿಗೆ ಎಲ್ಲವೂ ಸಾಧ್ಯ,” ಎಂದು ಹೇಳಿದರು.
[27] ಪೇತ್ರನು ಯೇಸುವಿಗೆ, “ಇಗೋ, ನಾವು ಎಲ್ಲವನ್ನು ಬಿಟ್ಟು ನಿನ್ನನ್ನು ಹಿಂಬಾಲಿಸಿದ್ದೇವೆ! ನಮಗೆ ಏನು ದೊರೆಯುವುದು?” ಎಂದು ಕೇಳಿದನು.
[28] ಯೇಸು ಅವರಿಗೆ, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಸಮಸ್ತವೂ ನವೀಕರಣವಾಗುವಾಗ, ಮನುಷ್ಯಪುತ್ರನಾದ ನಾನು ನನ್ನ ಮಹಿಮೆಯ ಸಿಂಹಾಸನದಲ್ಲಿ ಕುಳಿತುಕೊಂಡಿರಲು, ನನ್ನನ್ನು ಹಿಂಬಾಲಿಸಿದವರಾದ ನೀವು ಸಹ ಹನ್ನೆರಡು ಸಿಂಹಾಸನಗಳ ಮೇಲೆ ಕುಳಿತುಕೊಂಡು, ಇಸ್ರಾಯೇಲಿನ ಹನ್ನೆರಡು ಗೋತ್ರಗಳಿಗೆ ನ್ಯಾಯತೀರಿಸುವಿರಿ.
[29] ತನ್ನ ಮನೆಗಳನ್ನಾಗಲಿ, ಸಹೋದರರನ್ನಾಗಲಿ, ಸಹೋದರಿಯರನ್ನಾಗಲಿ, ತಂದೆಯನ್ನಾಗಲಿ, ತಾಯಿಯನ್ನಾಗಲಿ, ಮಕ್ಕಳನ್ನಾಗಲಿ, ಹೊಲವನ್ನಾಗಲಿ, ನನ್ನ ಹೆಸರಿನ ನಿಮಿತ್ತವಾಗಿ ಬಿಟ್ಟುಬಿಡುವ ಪ್ರತಿಯೊಬ್ಬನು ನೂರರಷ್ಟು ಪಡೆದುಕೊಳ್ಳುವನು ಮತ್ತು ನಿತ್ಯಜೀವಕ್ಕೆ ಬಾಧ್ಯನಾಗುವನು.
[30] ಆದರೆ ಮೊದಲನೆಯವರಾದ ಅನೇಕರು ಕಡೆಯವರಾಗುವರು, ಕಡೆಯವರಾದವರು ಮೊದಲನೆಯವರಾಗುವರು.