[1] ಯೇಸು ಜನರ ಗುಂಪನ್ನು ಕಂಡು, ಒಂದು ಬೆಟ್ಟವನ್ನೇರಿ ಕುಳಿತುಕೊಂಡರು. ಶಿಷ್ಯರು ಅವರ ಬಳಿಗೆ ಬಂದರು.
[2] ಮತ್ತು ಯೇಸು ಅವರಿಗೆ ಉಪದೇಶಿಸಲು ಪ್ರಾರಂಭಿಸಿದರು. ಅವರು ಹೀಗೆ ಹೇಳಿದರು:
[3] “ಆತ್ಮದಲ್ಲಿ ಬಡವರಾಗಿರುವವರು ಧನ್ಯರು, ಪರಲೋಕ ರಾಜ್ಯವು ಅವರದು.
[4] ದುಃಖಿಸುವವರು ಧನ್ಯರು, ಅವರು ಆದರಣೆ ಹೊಂದುವರು.
[5] ಸಾತ್ವಿಕರು ಧನ್ಯರು, ಅವರು ಭೂಮಿಗೆ ಬಾಧ್ಯರಾಗುವರು.
[6] ನೀತಿಗೋಸ್ಕರ ಹಸಿದು ಬಾಯಾರುವವರು ಧನ್ಯರು, ಅವರು ತೃಪ್ತಿಹೊಂದುವರು.
[7] ಕರುಣೆಯುಳ್ಳವರು ಧನ್ಯರು, ಅವರು ಕರುಣೆ ಪಡೆಯುವರು.
[8] ಹೃದಯದಲ್ಲಿ ಶುದ್ಧರಾಗಿರುವವರು ಧನ್ಯರು, ಅವರು ದೇವರನ್ನು ಕಾಣುವರು.
[9] ಸಮಾಧಾನ ಪಡಿಸುವವರು ಧನ್ಯರು, ಅವರು ದೇವರ ಮಕ್ಕಳೆನಿಸಿಕೊಳ್ಳುವರು.
[10] ನೀತಿಯ ನಿಮಿತ್ತವಾಗಿ ಹಿಂಸೆಗೊಳಗಾಗುವವರು ಧನ್ಯರು, ಪರಲೋಕ ರಾಜ್ಯವು ಅವರದು.
[11] “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ, ಹಿಂಸಿಸಿ ನಿಮ್ಮ ಮೇಲೆ ಎಲ್ಲಾ ವಿಧವಾದ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು.
[12] ಸಂತೋಷಪಟ್ಟು ಆನಂದಿಸಿರಿ. ಏಕೆಂದರೆ ಪರಲೋಕದಲ್ಲಿ ನಿಮಗೆ ಮಹಾ ಪ್ರತಿಫಲ ಸಿಕ್ಕುವುದು. ಅವರು ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಸಹ ಇದೇ ರೀತಿಯಲ್ಲಿ ಹಿಂಸೆಪಡಿಸಿದರು.
[13] “ನೀವು ಭೂಮಿಗೆ ಉಪ್ಪಾಗಿದ್ದೀರಿ. ಉಪ್ಪು ಸಪ್ಪಗಾದರೆ, ಅದಕ್ಕೆ ಉಪ್ಪಿನ ರುಚಿ ಹೇಗೆ ಬಂದೀತು? ಅದು ಹೊರಗೆ ಹಾಕಿ ತುಳಿಯುವುದಕ್ಕೆ ಯೋಗ್ಯವೇ ಹೊರತು ಬೇರೆ ಯಾವ ಕೆಲಸಕ್ಕೂ ಬರುವುದಿಲ್ಲ.
[14] “ನೀವು ಲೋಕಕ್ಕೆ ಬೆಳಕಾಗಿದ್ದೀರಿ; ಬೆಟ್ಟದ ಮೇಲಿರುವ ಊರು ಮರೆಯಾಗಿರಲಾರದು.
[15] ದೀಪವನ್ನು ಹಚ್ಚಿ ಯಾರೂ ಅಳೆಯುವ ಪಾತ್ರೆಯೊಳಗೆ ಇಡುವುದಿಲ್ಲ, ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುತ್ತದೆ.
[16] ಅದೇ ರೀತಿಯಲ್ಲಿ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ; ಹೀಗಾದರೆ ಜನರು ನಿಮ್ಮ ಸತ್ಕ್ರಿಯೆಗಳನ್ನು ಕಂಡು ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವರು.
[17] “ಮೋಶೆಯ ನಿಯಮವನ್ನಾಗಲಿ, ಪ್ರವಾದನೆಗಳನ್ನಾಗಲಿ ರದ್ದು ಮಾಡುವುದಕ್ಕೆ ನಾನು ಬಂದೆನೆಂದು ಭಾವಿಸಬೇಡಿರಿ; ನಾನು ಅವುಗಳನ್ನು ರದ್ದುಗೊಳಿಸಲು ಬರಲಿಲ್ಲ, ನೆರವೇರಿಸಲು ಬಂದಿದ್ದೇನೆ.
[18] ಭೂಮಿ ಆಕಾಶಗಳು ಗತಿಸಿಹೋಗುವವು, ಆದರೆ ನಿಯಮವೆಲ್ಲಾ ನೆರವೇರುವ ತನಕ ಅದರಲ್ಲಿ ಒಂದು ಚಿಕ್ಕ ಅಕ್ಷರವಾದರೂ ಚಿಕ್ಕ ಚುಕ್ಕೆಯಾದರೂ ಅಳಿದುಹೋಗುವುದಿಲ್ಲ ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ.
[19] ಆದ್ದರಿಂದ ಈ ಆಜ್ಞೆಗಳಲ್ಲಿ ಅತ್ಯಂತ ಚಿಕ್ಕದಾದ ಒಂದನ್ನು ಮೀರಿ, ಹಾಗೆಯೇ ಮೀರಲು ಇತರರಿಗೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಅತಿ ಚಿಕ್ಕವನೆಂದು ಎನಿಸಿಕೊಳ್ಳುವನು. ಆದರೆ ಈ ಆಜ್ಞೆಗಳನ್ನು ಪಾಲಿಸಿ ಇತರರಿಗೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ದೊಡ್ಡವನೆಂದು ಎನಿಸಿಕೊಳ್ಳುವನು.
[20] ನಿಮ್ಮ ನೀತಿಯು ಫರಿಸಾಯರ ಮತ್ತು ನಿಯಮ ಬೋಧಕರ ನೀತಿಗಿಂತಲೂ ಹೆಚ್ಚಿನದಾಗದಿದ್ದರೆ, ನೀವು ಪರಲೋಕ ರಾಜ್ಯವನ್ನು ಸೇರಲಾರಿರಿ ಎಂದು ನಿಮಗೆ ಹೇಳುತ್ತೇನೆ.
[21] “ ‘ನರಹತ್ಯೆ ಮಾಡಬಾರದು, ಯಾವನಾದರೂ ನರಹತ್ಯೆ ಮಾಡಿದರೆ ಅವನು ನ್ಯಾಯತೀರ್ಪಿಗೆ ಗುರಿಯಾಗುವನು,’ ಎಂದು ನಿಮ್ಮ ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಷ್ಟೇ.
[22] ಆದರೆ ನಾನು ನಿಮಗೆ ಹೇಳುವುದೇನೆಂದರೆ: ತನ್ನ ಸಹೋದರನ ಮೇಲೆ ಕೋಪಿಸಿಕೊಳ್ಳುವ ಪ್ರತೀ ಮನುಷ್ಯನು ನ್ಯಾಯತೀರ್ಪಿಗೆ ಗುರಿಯಾಗುವನು. ಮಾತ್ರವಲ್ಲದೆ, ಯಾವನಾದರೂ ತನ್ನ ಸಹೋದರನನ್ನು ‘ಬುದ್ಧಿ ಇಲ್ಲದವನೇ’ ಎಂದರೂ ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು. ಯಾರನ್ನಾದರೂ, ‘ಮೂರ್ಖಾ,’ ಎನ್ನುವವನು ಅಗ್ನಿನರಕಕ್ಕೆ ಗುರಿಯಾಗುವನು.
[23] “ಆದ್ದರಿಂದ, ನೀನು ನಿನ್ನ ಕಾಣಿಕೆಯನ್ನು ಸಮರ್ಪಿಸಲು ಬಲಿಪೀಠದ ಬಳಿಗೆ ತಂದಾಗ, ನಿನ್ನ ಸಹೋದರನಿಗೆ ಅಥವಾ ನಿನ್ನ ಸಹೋದರಿಗೆ ನಿನ್ನ ಮೇಲೆ ಏನೋ ವಿರೋಧವಿದೆ ಎಂಬುದು ನಿನ್ನ ನೆನಪಿಗೆ ಬಂದರೆ,
[24] ನಿನ್ನ ಕಾಣಿಕೆಯನ್ನು ಬಲಿಪೀಠದ ಮುಂದೆಯೇ ಬಿಟ್ಟು ಹೋಗಿ ಮೊದಲು ಸಹೋದರನೊಡನೆ ಅಥವಾ ಸಹೋದರಿಯೊಡನೆ ಸಂಧಾನಮಾಡಿಕೋ; ಆಮೇಲೆ ಬಂದು ನಿನ್ನ ಕಾಣಿಕೆಯನ್ನು ಸಮರ್ಪಿಸು.
[25] “ನಿನ್ನ ಎದುರಾಳಿ ನಿನ್ನನ್ನು ನ್ಯಾಯಾಲಯಕ್ಕೂ, ನ್ಯಾಯಾಧಿಪತಿಯು ನಿನ್ನನ್ನು ಅಧಿಕಾರಿಗೆ ಒಪ್ಪಿಸಿ ಸೆರೆಮನೆಗೆ ಹಾಕದಿರುವುದಕ್ಕೂ, ಎದುರಾಳಿಯ ಸಂಗಡ ದಾರಿಯಲ್ಲಿರುವಾಗಲೇ ಬೇಗ ಸಮಾಧಾನ ಮಾಡಿಕೋ.
[26] ಇಲ್ಲದಿದ್ದರೆ, ನೀನು ಕೊನೆಯ ಪೈಸೆಯನ್ನಾದರೂ ಸಲ್ಲಿಸುವವರೆಗೂ ಅಲ್ಲಿಂದ ಹೊರಗೆ ಬರುವುದೇ ಇಲ್ಲವೆಂದು ನಿನಗೆ ಸತ್ಯವಾಗಿ ಹೇಳುತ್ತೇನೆ.
[27] “ ‘ವ್ಯಭಿಚಾರ ಮಾಡಬಾರದು,’ ಎಂದು ಹೇಳಿದ್ದನ್ನು ನೀವು ಕೇಳಿದ್ದೀರಷ್ಟೇ.
[28] ಆದರೆ ಒಬ್ಬ ಸ್ತ್ರೀಯನ್ನು ಕಾಮದೃಷ್ಟಿಯಿಂದ ನೋಡುವ ಪ್ರತಿಯೊಬ್ಬನೂ ಆಗಲೇ ತನ್ನ ಹೃದಯದಲ್ಲಿ ಆಕೆಯ ಸಂಗಡ ವ್ಯಭಿಚಾರ ಮಾಡಿದ್ದಾನೆ ಎಂದು ನಾನು ನಿಮಗೆ ಹೇಳುತ್ತೇನೆ.
[29] ಆದ್ದರಿಂದ ನಿನ್ನ ಬಲಗಣ್ಣು ನಿನ್ನ ಪಾಪಕ್ಕೆ ಕಾರಣವಾದರೆ, ಅದನ್ನು ನೀನು ಕಿತ್ತೆಸೆದುಬಿಡು. ಏಕೆಂದರೆ ನಿನ್ನ ಇಡೀ ದೇಹ ನರಕದಲ್ಲಿ ಎಸೆಯುವುದಕ್ಕಿಂತ ನಿನ್ನ ಒಂದು ಅಂಗವು ನಾಶವಾಗುವುದು ನಿನಗೆ ಒಳಿತು.
[30] ನಿನ್ನ ಬಲಗೈ ನಿನ್ನ ಪಾಪಕ್ಕೆ ಕಾರಣವಾದರೆ, ಅದನ್ನು ನೀನು ಕತ್ತರಿಸಿ ಬಿಸಾಡಿಬಿಡು; ಏಕೆಂದರೆ ನಿನ್ನ ಇಡೀ ದೇಹ ನರಕದಲ್ಲಿ ಎಸೆಯುವುದಕ್ಕಿಂತ ನಿನ್ನ ಒಂದು ಅಂಗವು ನಾಶವಾಗುವುದು ನಿನಗೆ ಒಳಿತು.
[31] “ಇದಲ್ಲದೆ, ‘ತನ್ನ ಹೆಂಡತಿಯನ್ನು ಬಿಡುವವನು ಆಕೆಗೆ ವಿವಾಹ ವಿಚ್ಛೇದನ ಪತ್ರವನ್ನು ಕೊಡಲಿ,’ ಎಂದು ಹೇಳಿದೆಯಷ್ಟೆ.
[32] ನಾನು ನಿಮಗೆ ಹೇಳುವುದೇನೆಂದರೆ, ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರ ಮಾಡುವುದಕ್ಕೆ ಕಾರಣನಾಗುತ್ತಾನೆ; ವಿವಾಹ ವಿಚ್ಛೇದನೆ ಹೊಂದಿದವಳನ್ನು ಮದುವೆ ಆಗುವವನು ವ್ಯಭಿಚಾರ ಮಾಡಿದವನಾಗುತ್ತಾನೆ.
[33] “ ‘ಇದಲ್ಲದೆ ನೀನು ಆಣೆಯಿಟ್ಟರೆ ಅದನ್ನು ಮೀರಬಾರದು, ಕರ್ತನಿಗೆ ಮಾಡಿದ ಆಣೆಗಳನ್ನು ನೆರವೇರಿಸಲೇಬೇಕು,’ ಎಂದು ನಿಮ್ಮ ಪೂರ್ವಿಕರಿಗೆ ಹೇಳಿರುವುದನ್ನು ಕೇಳಿದ್ದೀರಿ.
[34] ಆದರೆ ನಾನು ನಿಮಗೆ ಹೇಳುವುದೇನೆಂದರೆ, ಆಣೆಯಿಡಲೇ ಬೇಡಿರಿ. ಪರಲೋಕದ ಮೇಲೆ ಆಣೆ ಇಡಬೇಡಿರಿ, ಏಕೆಂದರೆ ಅದು ದೇವರ ಸಿಂಹಾಸನವು;
[35] ಭೂಮಿಯ ಮೇಲೆ ಆಣೆ ಇಡಬೇಡಿರಿ, ಏಕೆಂದರೆ ಅದು ದೇವರ ಪಾದಪೀಠವು. ಯೆರೂಸಲೇಮಿನ ಮೇಲೆ ಆಣೆ ಇಡಬೇಡಿರಿ, ಏಕೆಂದರೆ ಅದು ಮಹಾರಾಜನ ಪಟ್ಟಣವಾಗಿದೆ.
[36] ನಿನ್ನ ತಲೆಯ ಮೇಲೂ ಆಣೆಯಿಡುವುದು ಬೇಡ, ಏಕೆಂದರೆ ನೀನು ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲಾರೆ.
[37] ಆದ್ದರಿಂದ ನಿಮ್ಮ ಮಾತು ಹೌದಾದರೆ ‘ಹೌದು’ ಇಲ್ಲವಾದರೆ ‘ಇಲ್ಲ’ ಎಂದಿರಲಿ. ಇದಕ್ಕಿಂತ ಹೆಚ್ಚಿನದು ಕೆಡುಕನಿಂದ ಬಂದದ್ದು.
[38] “ ‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು,’ ಎಂದು ಹೇಳಿರುವುದನ್ನು ನೀವು ಕೇಳಿದ್ದೀರಿ.
[39] ಆದರೆ ನಾನು ನಿಮಗೆ ಹೇಳುವುದೇನೆಂದರೆ, ಕೆಡುಕನನ್ನು ಎದುರಿಸಬೇಡಿರಿ. ಯಾವನಾದರೂ ನಿನ್ನ ಬಲಗೆನ್ನೆಗೆ ಹೊಡೆದರೆ, ಅವನಿಗೆ ಮತ್ತೊಂದು ಕೆನ್ನೆಯನ್ನೂ ತಿರುಗಿಸಿಕೊಡು.
[40] ನಿನ್ನೊಡನೆ ವ್ಯಾಜ್ಯ ಮಾಡಿ ನಿನ್ನ ಅಂಗಿಯನ್ನು ನಿನ್ನಿಂದ ಕಿತ್ತುಕೊಳ್ಳುವವನಿಗೆ, ನಿನ್ನ ಮೇಲಂಗಿಯನ್ನೂ ಕೊಟ್ಟುಬಿಡು.
[41] ಯಾವನಾದರೂ ನಿನ್ನನ್ನು ಒಂದು ಕಿಲೋಮೀಟರು ದೂರ ಬಾ ಎಂದು ಒತ್ತಾಯ ಮಾಡಿದರೆ, ಅವನೊಡನೆ ಎರಡು ಕಿಲೋಮೀಟರು ದೂರ ಹೋಗು;
[42] ಕೇಳುವವನಿಗೆ ಕೊಡು, ನಿನ್ನಿಂದ ಸಾಲ ಕೇಳುವವನ ಕಡೆಯಿಂದ ಮುಖ ತಿರುಗಿಸಿಕೊಳ್ಳಬೇಡ.
[43] “ ‘ನಿನ್ನ ನೆರೆಯವನನ್ನು ಪ್ರೀತಿಸಿ, ನಿನ್ನ ವೈರಿಯನ್ನು ದ್ವೇಷಿಸು,’ ಎಂದು ಹೇಳಿರುವುದನ್ನು ಕೇಳಿದ್ದೀರಿ.
[44] ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಹಿಂಸಿಸುವವರಿಗೋಸ್ಕರ ಪ್ರಾರ್ಥಿಸಿರಿ.
[45] ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ಅವರು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ. ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆ ಸುರಿಸುತ್ತಾರೆ.
[46] ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೇನು ಫಲ? ಸುಂಕದವರೂ ಹಾಗೆ ಮಾಡುವುದಿಲ್ಲವೇ?
[47] ನಿಮ್ಮ ಸ್ವಂತದವರನ್ನು ಮಾತ್ರ ವಂದಿಸಿದರೆ ಹೆಚ್ಚೇನು ಮಾಡಿದ ಹಾಗಾಯಿತು? ಯೆಹೂದ್ಯರಲ್ಲದವರು ಸಹ ಹಾಗೆಯೇ ಮಾಡುತ್ತಾರಲ್ಲವೇ?
[48] ಆದ್ದರಿಂದ, ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ.