[1] ಹೆರೋದ ರಾಜನ ಕಾಲದಲ್ಲಿ, ಯೂದಾಯದ ಬೇತ್ಲೆಹೇಮಿನಲ್ಲಿ ಯೇಸು ಜನಿಸಿದಾಗ, ಪೂರ್ವ ದೇಶದಿಂದ ಜ್ಞಾನಿಗಳು ಯೆರೂಸಲೇಮಿಗೆ ಬಂದು,
[2] “ಯೆಹೂದ್ಯರ ಅರಸರಾಗಿ ಹುಟ್ಟಿದವರು ಎಲ್ಲಿ? ನಾವು ಅವರನ್ನು ಸೂಚಿಸುವ ನಕ್ಷತ್ರವನ್ನು ಪೂರ್ವದೇಶದಲ್ಲಿ ಕಂಡು ಅವರನ್ನು ಆರಾಧಿಸಲು ಬಂದಿದ್ದೇವೆ,” ಎಂದರು.
[3] ಇದನ್ನು ಕೇಳಿ ಹೆರೋದ ರಾಜನು ಮತ್ತು ಯೆರೂಸಲೇಮಿನ ಜನರೆಲ್ಲರು ಕಳವಳಗೊಂಡರು.
[4] ರಾಜನು ಯೆಹೂದ್ಯರ ಮುಖ್ಯಯಾಜಕರನ್ನೂ ನಿಯಮ ಬೋಧಕರನ್ನೂ ಕರೆದು, “ಕ್ರಿಸ್ತನು ಹುಟ್ಟಬೇಕಾದದ್ದು ಎಲ್ಲಿ?” ಎಂದು ಅವರನ್ನು ವಿಚಾರಿಸಿದನು.
[5] ಅದಕ್ಕೆ ಅವರು, “ಯೂದಾಯ ಪ್ರಾಂತದ ಬೇತ್ಲೆಹೇಮಿನಲ್ಲಿಯೇ,” ಏಕೆಂದರೆ, ಪ್ರವಾದಿಯು ಬರೆದಿರುವದು ಈ ರೀತಿಯಾಗಿದೆ:
[6] “ ‘ಯೆಹೂದ ಪ್ರಾಂತದಲ್ಲಿರುವ ಬೇತ್ಲೆಹೇಮೇ, ಯೆಹೂದದ ಅಧಿಪತಿಗಳಲ್ಲಿ ನೀನು ಎಷ್ಟು ಮಾತ್ರಕ್ಕೂ ಅಲ್ಪವಲ್ಲ. ಏಕೆಂದರೆ ನನ್ನ ಪ್ರಜೆಗಳಾದ ಇಸ್ರಾಯೇಲನ್ನು ಪರಿಪಾಲಿಸಲು ಒಬ್ಬ ಅಧಿಪತಿಯು ನಿನ್ನೊಳಗಿಂದಲೇ ಬರುವನು,’” ಎಂದು ಹೇಳಿದರು.
[7] ಆಗ ಹೆರೋದನು ಆ ಜ್ಞಾನಿಗಳನ್ನು ರಹಸ್ಯವಾಗಿ ಕರೆದು, ಆ ನಕ್ಷತ್ರ ಕಾಣಿಸಿಕೊಂಡ ಕಾಲವನ್ನು ಸೂಕ್ಷ್ಮವಾಗಿ ವಿಚಾರಿಸಿದನು.
[8] “ನೀವು ಹೋಗಿ ಆ ಮಗುವಿನ ವಿಷಯ ಜಾಗರೂಕತೆಯಿಂದ ವಿಚಾರಿಸಿ. ಆ ಮಗು ಸಿಕ್ಕಿದ ಮೇಲೆ ನನಗೆ ತಿಳಿಸಿರಿ, ಆಗ ನಾನೂ ಬಂದು ಅದನ್ನು ಆರಾಧಿಸುವೆನು,” ಎಂದು ಹೇಳಿ ಅವರನ್ನು ಬೇತ್ಲೆಹೇಮಿಗೆ ಕಳುಹಿಸಿದನು.
[9] ರಾಜನ ಮಾತನ್ನು ಕೇಳಿ ಅವರು ಹೊರಟಾಗ, ಪೂರ್ವದೇಶದಲ್ಲಿ ಅವರು ಕಂಡ ನಕ್ಷತ್ರವು ಪುನಃ ಕಾಣಿಸಿಕೊಂಡು, ಅವರ ಮುಂದೆ ಮುಂದೆ ಸಾಗುತ್ತಾ, ಆ ಮಗು ಇದ್ದ ಸ್ಥಳದ ಮೇಲೆ ಬಂದು ನಿಂತಿತು.
[10] ಅವರು ನಕ್ಷತ್ರವನ್ನು ಕಂಡು, ಬಹಳವಾಗಿ ಸಂತೋಷಪಟ್ಟರು.
[11] ಜ್ಞಾನಿಗಳು ಮನೆಯನ್ನು ಪ್ರವೇಶಿಸಿ, ಮಗುವನ್ನು ತಾಯಿ ಮರಿಯಳ ಬಳಿ ಕಂಡು, ಮಗುವಿಗೆ ಅಡ್ಡಬಿದ್ದು ಆರಾಧಿಸಿದರು. ತಮ್ಮ ಬೊಕ್ಕಸಗಳನ್ನು ತೆರೆದು ಮಗುವಿಗೆ ಚಿನ್ನ, ಧೂಪ ಮತ್ತು ರಕ್ತಬೋಳಗಳನ್ನು ಕಾಣಿಕೆಯಾಗಿ ಸಮರ್ಪಿಸಿದರು.
[12] ಅನಂತರ ಅವರು ಕನಸಿನಲ್ಲಿ ಹೆರೋದನ ಬಳಿಗೆ ಹಿಂತಿರುಗಬಾರದೆಂಬ ಎಚ್ಚರಿಕೆಯನ್ನು ಹೊಂದಿದ್ದರಿಂದ, ಬೇರೆ ದಾರಿಯಿಂದ ತಮ್ಮ ದೇಶಕ್ಕೆ ಹೊರಟು ಹೋದರು.
[13] ಆ ಜ್ಞಾನಿಗಳು ಹೊರಟುಹೋದ ಮೇಲೆ, ಕರ್ತನ ದೂತನು ಯೋಸೇಫನಿಗೆ ಕನಸಿನಲ್ಲಿ ಪ್ರತ್ಯಕ್ಷನಾಗಿ, “ಎದ್ದೇಳು, ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಈಜಿಪ್ಟಿಗೆ ಓಡಿಹೋಗು. ನಾನು ನಿನಗೆ ತಿಳಿಸುವವರೆಗೆ ಅಲ್ಲಿಯೇ ಇರು, ಏಕೆಂದರೆ ಹೆರೋದನು ಮಗುವನ್ನು ಹುಡುಕಿ ಕೊಲ್ಲಬೇಕೆಂದಿದ್ದಾನೆ,” ಎಂದನು.
[14] ಆಗ ಯೋಸೇಫನು ಎದ್ದು, ಆ ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಅದೇ ರಾತ್ರಿ ಈಜಿಪ್ಟಿಗೆ ಹೊರಟುಹೋದನು.
[15] ಹೀಗೆ ಹೆರೋದನು ಸಾಯುವವರೆಗೆ ಯೋಸೇಫನು ಅಲ್ಲೇ ಇದ್ದನು. ಕರ್ತನು ತನ್ನ ಪ್ರವಾದಿಯ ಮೂಲಕ: “ಈಜಿಪ್ಟಿನಿಂದ ನನ್ನ ಮಗನನ್ನು ನಾನು ಕರೆದೆನು,” ಎಂದು ಹೇಳಿದ ಮಾತು ಇದರಿಂದ ನೆರವೇರಿತು.
[16] ಜ್ಞಾನಿಗಳು ತನಗೆ ಮೋಸಮಾಡಿದರೆಂದು ತಿಳಿದ ಹೆರೋದನು ಬಹಳ ಕೋಪಗೊಂಡನು, ಜ್ಞಾನಿಗಳಿಂದ ಸೂಕ್ಷ್ಮವಾಗಿ ವಿಚಾರಿಸಿಕೊಂಡ ಪ್ರಕಾರವೇ, ಬೇತ್ಲೆಹೇಮ್ ಮತ್ತು ಅದರ ಸುತ್ತಮುತ್ತಲ ಪ್ರದೇಶದಲ್ಲಿದ್ದ ಎರಡು ವರ್ಷದೊಳಗಿನ ಎಲ್ಲಾ ಗಂಡು ಮಕ್ಕಳನ್ನು ಕೊಂದುಹಾಕಿಸಿದನು.
[17] ಪ್ರವಾದಿಯಾದ ಯೆರೆಮೀಯನ ಮೂಲಕ ಹೇಳಿದ ಮಾತು ನೆರವೇರಿತು:
[18] “ರಾಮದಲ್ಲಿ ರೋದನೆಯು ಕೇಳಿಸಿತು, ಗೋಳಾಟವೂ ಮಹಾ ಪ್ರಲಾಪವೂ ಕೇಳಿಬಂತು. ರಾಹೇಲಳು ತನ್ನ ಮಕ್ಕಳಿಗಾಗಿ ಗೋಳಾಡುತ್ತಾ, ಆದರಣೆ ಹೊಂದದೆ ಹೋಗಿದ್ದಾಳೆ. ಏಕೆಂದರೆ ಅವಳ ಮಕ್ಕಳು ಇನ್ನಿಲ್ಲ.”
[19] ಹೆರೋದನು ಸತ್ತಮೇಲೆ ಈಜಿಪ್ಟಿನಲ್ಲಿದ್ದ ಯೋಸೇಫನಿಗೆ ಕರ್ತನ ದೂತನು ಕನಸಿನಲ್ಲಿ ಕಾಣಿಸಿಕೊಂಡು,
[20] “ಎದ್ದೇಳು, ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಹಿಂದಿರುಗು, ಮಗುವಿನ ಪ್ರಾಣ ತೆಗೆಯಬೇಕೆಂದಿದ್ದವರು ಸತ್ತುಹೋದರು,” ಎಂದು ಹೇಳಿದನು.
[21] ಆಗ ಅವನು ಎದ್ದು ಮಗುವನ್ನೂ ತಾಯಿಯನ್ನೂ ಕರೆದುಕೊಂಡು ಇಸ್ರಾಯೇಲ್ ದೇಶಕ್ಕೆ ಬಂದನು.
[22] ಆದರೆ ಹೆರೋದನ ಮಗ ಅರ್ಖೆಲಾಯನು, ತಂದೆಯ ಬದಲಾಗಿ ಯೂದಾಯ ಪ್ರಾಂತವನ್ನು ಆಳುತ್ತಿದ್ದಾನೆಂದು ಕೇಳಿ, ಅಲ್ಲಿಗೆ ಹೋಗಲು ಭಯಪಟ್ಟನು. ಆಗ ಕನಸಿನಲ್ಲಿ ಹೊಂದಿದ ಎಚ್ಚರಿಕೆಯ ಪ್ರಕಾರ ಯೋಸೇಫನು ಗಲಿಲಾಯ ಪ್ರಾಂತಕ್ಕೆ ಹೋದನು.
[23] ಅಲ್ಲಿ ನಜರೇತ್ ಎಂಬ ಊರಲ್ಲಿ ವಾಸಮಾಡಿದನು. ಹೀಗೆ, “ನಜರಾಯನೆಂಬ ಹೆಸರು ಯೇಸುವಿಗೆ ಬರುವುದು,” ಎಂದು ಪ್ರವಾದಿಗಳು ಹೇಳಿದ ಮಾತು ನೆರವೇರಿತು.