[1] ಯೇಸು ಜನಸಮೂಹಕ್ಕೂ ತಮ್ಮ ಶಿಷ್ಯರಿಗೂ
[2] ಹೇಳಿದ್ದೇನೆಂದರೆ: “ನಿಯಮ ಬೋಧಕರೂ ಫರಿಸಾಯರೂ ಮೋಶೆಯ ಆಸನದಲ್ಲಿ ಕುಳಿತಿದ್ದಾರೆ.
[3] ಆದ್ದರಿಂದ ಅವರು ನಿಮಗೆ ಹೇಳುವುದನ್ನೆಲ್ಲಾ ಅನುಸರಿಸಿ ನಡೆಯಿರಿ. ಆದರೆ ಅವರ ನಡತೆಗಳ ಪ್ರಕಾರ ನೀವು ನಡೆಯಬೇಡಿರಿ. ಏಕೆಂದರೆ ಅವರು ಹೇಳಿದಂತೆ ಮಾಡುವುದಿಲ್ಲ.
[4] ಹೊರುವುದಕ್ಕೆ ಭಾರವಾದ ಮತ್ತು ಹೊರಲಾಗದ ಹೊರೆಗಳನ್ನು ಕಟ್ಟಿ ಜನರ ಹೆಗಲುಗಳ ಮೇಲೆ ಅವರು ಹೊರಿಸುತ್ತಾರೆ. ತಾವಾದರೋ ತಮ್ಮ ಬೆರಳಿನಿಂದಲೂ ಅವುಗಳನ್ನು ಮುಟ್ಟುವುದಿಲ್ಲ.
[5] “ಆದರೆ ತಾವು ಮಾಡುವ ತಮ್ಮ ಕ್ರಿಯೆಗಳನ್ನೆಲ್ಲಾ ಜನರು ನೋಡುವಂತೆ ಮಾಡುತ್ತಾರೆ. ಅವರು ತಮ್ಮ ಬಾಹುಗಳ ಮೇಲೆ ದೇವರ ವಾಕ್ಯವುಳ್ಳ ಡಬ್ಬಿಗಳನ್ನು ಮತ್ತು ಹಣೆಯ ಮೇಲೆ ಅಗಲ ಪಟ್ಟಿಗಳನ್ನು ಮಾಡಿ ಉಡುಪುಗಳ ಅಂಚುಗಳನ್ನು ಉದ್ದಮಾಡುತ್ತಾರೆ.
[6] ಔತಣಗಳಲ್ಲಿ ಮುಖ್ಯಸ್ಥಾನಗಳನ್ನೂ ಸಭಾಮಂದಿರಗಳಲ್ಲಿ ಅತ್ಯುನ್ನತ ಆಸನಗಳನ್ನೂ
[7] ಮಾರುಕಟ್ಟೆ ಬೀದಿಗಳಲ್ಲಿ ವಂದನೆಗಳನ್ನೂ ಮತ್ತು ಜನರಿಂದ, ‘ಬೋಧಕರೇ,’ ಎಂದು ಕರೆಯಿಸಿಕೊಳ್ಳಲು ಅವರು ಇಚ್ಛಿಸುತ್ತಾರೆ.
[8] “ಆದರೆ ನೀವು, ‘ಬೋಧಕರು,’ ಎಂದು ಕರೆಯಿಸಿಕೊಳ್ಳಬೇಡಿರಿ. ಏಕೆಂದರೆ ನಿಮಗಿರುವ ಬೋಧಕರು ಒಬ್ಬರೇ ನೀವೆಲ್ಲರೂ ಸಹೋದರರು.
[9] ಭೂಮಿಯಲ್ಲಿ ಯಾರನ್ನೂ ‘ತಂದೆ’ ಎಂದು ಕರೆಯಬೇಡಿರಿ, ಪರಲೋಕದಲ್ಲಿ ಇರುವವರೇ ನಿಮ್ಮ ತಂದೆ.
[10] ಗುರುವೆಂದೂ ಕರೆಯಿಸಿಕೊಳ್ಳಬೇಡಿರಿ. ಏಕೆಂದರೆ ಕ್ರಿಸ್ತನೊಬ್ಬನೇ ನಿಮ್ಮ ಗುರುವು.
[11] ಆದರೆ ನಿಮ್ಮಲ್ಲಿ ಅತಿ ದೊಡ್ಡವನಾಗಿರುವವನು ನಿಮ್ಮ ಸೇವಕನಾಗಿರಬೇಕು.
[12] ತಮ್ಮನ್ನು ತಾವೇ ಹೆಚ್ಚಿಸಿಕೊಳ್ಳುವವರು ತಗ್ಗಿನ ಅನುಭವ ಹೊಂದುವರು. ತಮ್ಮನ್ನು ತಾವೇ ತಗ್ಗಿಸಿಕೊಳ್ಳುವವರು ಉನ್ನತ ಅನುಭವ ಹೊಂದುವರು.
[13] “ಆದರೆ ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ಏಕೆಂದರೆ ನೀವು ಮನುಷ್ಯರ ಮುಂದೆ ಪರಲೋಕ ರಾಜ್ಯವನ್ನು ಮುಚ್ಚುತ್ತೀರಿ. ನೀವೂ ಪ್ರವೇಶಿಸುವುದಿಲ್ಲ, ಪ್ರವೇಶಿಸುವವರನ್ನೂ ನೀವು ಒಳಗೆ ಬಿಡುವುದಿಲ್ಲ.
[14] “ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ, ಏಕೆಂದರೆ ನೀವು ವಿಧವೆಯರ ಮನೆಗಳನ್ನು ನುಂಗುತ್ತೀರಿ. ನಟನೆಗಾಗಿ ಉದ್ದವಾದ ಪ್ರಾರ್ಥನೆಯನ್ನು ಮಾಡುತ್ತೀರಿ. ಆದ್ದರಿಂದ ನೀವು ಹೆಚ್ಚಾದ ದಂಡನೆಯನ್ನು ಹೊಂದುವಿರಿ.
[15] “ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ ನಿಮಗೆ ಕಷ್ಟ! ಏಕೆಂದರೆ ಒಬ್ಬನನ್ನು ಮತಾಂತರ ಮಾಡುವುದಕ್ಕೆ ನೀವು ಸಮುದ್ರವನ್ನೂ ಭೂಮಿಯನ್ನೂ ಸುತ್ತುತ್ತೀರಿ. ಮತಾಂತರ ಮಾಡಿದ ಮೇಲೆ ಅವನನ್ನು ನಿಮಗಿಂತಲೂ ಎರಡರಷ್ಟು ನರಕಕ್ಕೆ ಗುರಿಯಾಗುವಂತೆ ಮಾಡುತ್ತೀರಿ.
[16] “ಕುರುಡರಾದ ಮಾರ್ಗದರ್ಶಕರೇ! ನಿಮಗೆ ಕಷ್ಟ, ‘ಯಾವನಾದರೂ ದೇವಾಲಯದ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲ ಎನ್ನುತ್ತೀರಿ. ಆದರೆ ಯಾವನಾದರೂ ದೇವಾಲಯದ ಚಿನ್ನದ ಮೇಲೆ ಆಣೆಯಿಟ್ಟರೆ ಅವನು ಅದನ್ನು ಕೊಟ್ಟುಬಿಡಬೇಕು,’ ಎನ್ನುತ್ತೀರಿ.
[17] ಮೂರ್ಖರೇ, ಕುರುಡರೇ, ಯಾವುದು ದೊಡ್ಡದು? ಚಿನ್ನವೋ ಚಿನ್ನವನ್ನು ಪಾವನ ಮಾಡುವ ದೇವಾಲಯವೋ?
[18] ‘ಯಾರಾದರೂ ಬಲಿಪೀಠದ ಮೇಲೆ ಆಣೆಯಿಟ್ಟರೆ ಅದು ಏನೂ ಅಲ್ಲವೆಂದೂ ಯಾರಾದರೂ ಅದರಲ್ಲಿರುವ ಕಾಣಿಕೆ ಮೇಲೆ ಆಣೆಯಿಟ್ಟರೆ ಅವನು ಅದನ್ನು ಕೊಟ್ಟುಬಿಡಬೇಕು,’ ಎನ್ನುತ್ತೀರಿ.
[19] ಕುರುಡರೇ, ಯಾವುದು ದೊಡ್ಡದು? ಕಾಣಿಕೆಯೋ ಕಾಣಿಕೆಯನ್ನು ಪಾವನ ಮಾಡುವ ಬಲಿಪೀಠವೋ?
[20] ಆದ್ದರಿಂದ, ಬಲಿಪೀಠದ ಮೇಲೆ ಆಣೆಯಿಡುವವನು ಅದರ ಮೇಲೆಯೂ ಅದರಲ್ಲಿರುವ ಎಲ್ಲದರ ಮೇಲೆಯೂ ಆಣೆಯಿಡುವವನಾಗಿದ್ದಾನೆ.
[21] ದೇವಾಲಯದ ಮೇಲೆ ಆಣೆಯಿಡುವವನು ಅದರ ಮೇಲೆಯೂ ಅದರಲ್ಲಿ ವಾಸಿಸುವ ದೇವರ ಮೇಲೆಯೂ ಆಣೆಯಿಡುವವನಾಗಿದ್ದಾನೆ.
[22] ಪರಲೋಕದ ಮೇಲೆ ಆಣೆಯಿಡುವವನು ದೇವರ ಸಿಂಹಾಸನದ ಮೇಲೆಯೂ ಅದರ ಮೇಲೆ ಆಸೀನರಾದ ದೇವರ ಮೇಲೆಯೂ ಆಣೆಯಿಡುವವನಾಗಿದ್ದಾನೆ.
[23] “ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ಏಕೆಂದರೆ ನೀವು ಪುದೀನ, ಸದಾಪು, ಜೀರಿಗೆಗಳ ದಶಮಭಾಗವನ್ನು ಸಲ್ಲಿಸುತ್ತೀರಿ. ಆದರೆ ನಿಯಮದ ನ್ಯಾಯನೀತಿ, ಕರುಣೆ, ನಂಬಿಕೆ ಎಂಬ ಈ ಪ್ರಮುಖವಾದವುಗಳನ್ನು ಬಿಟ್ಟುಬಿಟ್ಟಿದ್ದೀರಿ. ಇವುಗಳೊಂದಿಗೆ ಆ ಬೇರೆಯವುಗಳನ್ನು ಬಿಟ್ಟುಬಿಡದೆ ಮಾಡಬೇಕಾಗಿತ್ತು.
[24] ಕುರುಡ ಮಾರ್ಗದರ್ಶಕರಾದ ನೀವು ಸೊಳ್ಳೆ ಸೋಸುತ್ತೀರಿ ಒಂಟೆ ನುಂಗುತ್ತೀರಿ.
[25] “ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ನೀವು ಪಾತ್ರೆಯ ಮತ್ತು ತಟ್ಟೆಯ ಹೊರಭಾಗವನ್ನು ಶುಚಿಮಾಡುತ್ತೀರಿ, ಆದರೆ ಅವು ಒಳಗೆ ಸುಲಿಗೆಯಿಂದಲೂ ದುರಾಶೆಯಿಂದಲೂ ತುಂಬಿರುತ್ತವೆ.
[26] ಕುರುಡನಾದ ಫರಿಸಾಯನೇ, ಮೊದಲು ಪಾತ್ರೆಯ ಮತ್ತು ತಟ್ಟೆಯ ಒಳಗಿನ ಭಾಗವನ್ನು ಶುಚಿಮಾಡು. ಆಗ ಅವುಗಳ ಹೊರಭಾಗವೂ ಶುಚಿಯಾಗುವುದು.
[27] “ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ಏಕೆಂದರೆ ನೀವು ಸುಣ್ಣ ಹಚ್ಚಿದ ಸಮಾಧಿಗಳಿಗೆ ಹೋಲಿಕೆಯಾಗಿದ್ದೀರಿ. ಅವು ಹೊರಗೆ ನಿಜಕ್ಕೂ ಅಂದವಾಗಿ ಕಾಣುತ್ತವೆ. ಆದರೆ ಒಳಗೆ ಸತ್ತವರ ಎಲುಬುಗಳಿಂದಲೂ ಎಲ್ಲಾ ಅಶುದ್ಧತೆಯಿಂದಲೂ ತುಂಬಿರುತ್ತವೆ.
[28] ಅದರಂತೆಯೇ, ನೀವು ಸಹ ಹೊರಗಡೆ ಮನುಷ್ಯರಿಗೆ ನೀತಿವಂತರಂತೆ ಕಾಣಿಸಿಕೊಳ್ಳುತ್ತೀರಿ. ಆದರೆ ನೀವು ಒಳಗೆ ಕಪಟದಿಂದಲೂ ಅನ್ಯಾಯದಿಂದಲೂ ತುಂಬಿದವರಾಗಿದ್ದೀರಿ.
[29] “ಕಪಟಿಗಳಾದ ನಿಯಮ ಬೋಧಕರೇ, ಫರಿಸಾಯರೇ, ನಿಮಗೆ ಕಷ್ಟ! ಏಕೆಂದರೆ ನೀವು ಪ್ರವಾದಿಗಳ ಸಮಾಧಿಗಳನ್ನು ಕಟ್ಟಿ ನೀತಿವಂತರ ಸಮಾಧಿಗಳನ್ನು ಅಲಂಕರಿಸುತ್ತೀರಿ.
[30] ಆದರೆ, ‘ನಾವು ನಮ್ಮ ಪಿತೃಗಳ ದಿನಗಳಲ್ಲಿ ಇರುತ್ತಿದ್ದರೆ ಪ್ರವಾದಿಗಳ ರಕ್ತಪಾತದಲ್ಲಿ ಪಿತೃಗಳೊಂದಿಗೆ ಪಾಲುಗಾರರಾಗುತ್ತಿರಲಿಲ್ಲ’ ಎಂದು ಹೇಳುತ್ತೀರಿ.
[31] ಆದ್ದರಿಂದ ನೀವು ಆ ಪ್ರವಾದಿಗಳನ್ನು ಕೊಂದವರ ಮಕ್ಕಳೇ ಎಂದು ನಿಮಗೆ ನೀವೇ ಸಾಕ್ಷಿಗಳಾಗಿದ್ದೀರಿ.
[32] ಹಾಗಾದರೆ ನಿಮ್ಮ ಪಿತೃಗಳ ಅಪರಾಧದ ಅಳತೆಯನ್ನು ನೀವೇ ಪೂರ್ಣಗೊಳಿಸಿರಿ.
[33] “ಹಾವುಗಳೇ, ಸರ್ಪಸಂತತಿಯವರೇ, ನೀವು ನರಕದಂಡನೆಯಿಂದ ಹೇಗೆ ತಪ್ಪಿಸಿಕೊಂಡೀರಿ?
[34] ಆದ್ದರಿಂದ ನೋಡಿರಿ, ನಾನು ಪ್ರವಾದಿಗಳನ್ನೂ ಜ್ಞಾನಿಗಳನ್ನೂ ನಿಯಮ ಬೋಧಕರನ್ನೂ ನಿಮ್ಮ ಬಳಿಗೆ ಕಳುಹಿಸುತ್ತೇನೆ. ಅವರಲ್ಲಿ ಕೆಲವರನ್ನು ಕೊಲ್ಲುವಿರಿ, ಶಿಲುಬೆಗೆ ಏರಿಸುವಿರಿ. ಕೆಲವರನ್ನು ನೀವು ನಿಮ್ಮ ಸಭಾಮಂದಿರಗಳಲ್ಲಿ ಕೊರಡೆಗಳಿಂದ ಹೊಡೆದು ಅವರನ್ನು ಪಟ್ಟಣದಿಂದ ಪಟ್ಟಣಕ್ಕೆ ಅಟ್ಟಿ ಹಿಂಸಿಸುವಿರಿ.
[35] ಹೀಗೆ ನೀತಿವಂತನಾದ ಹೇಬೆಲನ ರಕ್ತ ಮೊದಲುಗೊಂಡು ದೇವಾಲಯಕ್ಕೂ ಬಲಿಪೀಠಕ್ಕೂ ನಡುವೆ ನೀವು ಕೊಂದುಹಾಕಿದ ಬರಕೀಯನ ಮಗ ಜಕರೀಯನ ರಕ್ತದವರೆಗೂ ಭೂಮಿಯಲ್ಲಿ ಸುರಿಸಲಾದ ಎಲ್ಲಾ ನೀತಿವಂತರ ರಕ್ತಾಪರಾಧವು ನಿಮ್ಮ ಮೇಲೆ ಬರುವುದು.
[36] ನಿಮಗೆ ನಿಜವಾಗಿ ಹೇಳುತ್ತೇನೆ: ಇವೆಲ್ಲವೂ ಈ ಸಂತತಿಯವರ ಮೇಲೆ ಬರುವವು.
[37] “ಯೆರೂಸಲೇಮೇ, ಯೆರೂಸಲೇಮೇ, ಪ್ರವಾದಿಗಳನ್ನು ಕೊಲ್ಲುವವಳೇ, ನಿನ್ನ ಬಳಿಗೆ ಕಳುಹಿಸಿದವರನ್ನು ಕಲ್ಲೆಸೆಯುವವಳೇ, ಕೋಳಿಯು ತನ್ನ ಮರಿಗಳನ್ನು ತನ್ನ ರೆಕ್ಕೆಗಳ ಕೆಳಗೆ ಕೂಡಿಸುವಂತೆ ನಾನು ನಿನ್ನ ಮಕ್ಕಳನ್ನು ಕೂಡಿಸುವುದಕ್ಕೆ ನನಗೆ ಎಷ್ಟೋ ಸಾರಿ ಮನಸ್ಸಿತ್ತು. ಆದರೆ ನಿನಗೆ ಮನಸ್ಸಿಲ್ಲದೆ ಹೋಯಿತು.
[38] ನೋಡಿರಿ, ನಿಮ್ಮ ದೇವಾಲಯವು ನಿಮಗೆ ಬರಿದಾಗಿ ಹಾಳುಬೀಳುವುದು.
[39] ಏಕೆಂದರೆ, ‘ಕರ್ತನ ಹೆಸರಿನಲ್ಲಿ ಬರುವವರು ಧನ್ಯರು’ ಎಂದು ನೀವು ಹೇಳುವ ಸಮಯವು ಬರುವ ತನಕ ನೀವು ನನ್ನನ್ನು ಕಾಣುವುದೇ ಇಲ್ಲ ಎಂದು ನಾನು ನಿಮಗೆ ಹೇಳುತ್ತೇನೆ” ಎಂದರು.