Skip to content
Opens in a new window
Listen to this chapter • 6:39

[1] “ಜನರು ನೋಡಲಿ ಎಂದು ಅವರ ಮುಂದೆ, ನಿಮ್ಮ ದಾನಧರ್ಮಗಳನ್ನು ಮಾಡದಂತೆ ಎಚ್ಚರಿಕೆಯಿಂದಿರಿ. ಹಾಗೆ ಮಾಡಿದರೆ, ಪರಲೋಕದಲ್ಲಿರುವ ನಿಮ್ಮ ತಂದೆಯಿಂದ ನಿಮಗೆ ಪ್ರತಿಫಲ ಸಿಕ್ಕುವುದಿಲ್ಲ.

[2] “ಆದ್ದರಿಂದ ನೀನು ದಾನಧರ್ಮ ಮಾಡುವಾಗ, ಜನರಿಂದ ಹೊಗಳಿಸಿಕೊಳ್ಳಬೇಕೆಂದು ಕಪಟಿಗಳ ಹಾಗೆ ಸಭಾಮಂದಿರಗಳಲ್ಲಿಯೂ ಬೀದಿಗಳಲ್ಲಿಯೂ ತುತೂರಿಯನ್ನು ಊದಿಸಬೇಡ. ಅವರು ತಮ್ಮ ಪ್ರತಿಫಲವನ್ನು ಪೂರ್ತಿಯಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

[3] ಆದರೆ ನೀನು ದಾನಧರ್ಮ ಮಾಡುವಾಗ, ನಿನ್ನ ಬಲಗೈ ಕೊಡುವುದು ನಿನ್ನ ಎಡಗೈಗೆ ತಿಳಿಯದಿರಲಿ.

[4] ಹೀಗೆ ನಿನ್ನ ದಾನಧರ್ಮವು ಗುಟ್ಟಾಗಿರುವಾಗ, ಅಂತರಂಗದಲ್ಲಿ ಮಾಡುವುದನ್ನು ಕಾಣುವ ನಿನ್ನ ತಂದೆ ನಿನಗೆ ಪ್ರತಿಫಲವನ್ನು ಕೊಡುವರು.

[5] “ನೀವು ಪ್ರಾರ್ಥನೆ ಮಾಡುವಾಗ, ಕಪಟಿಗಳಂತೆ ಮಾಡಬೇಡಿರಿ. ಅವರು ಜನರಿಗೆ ಕಾಣುವಂತೆ ಸಭಾಮಂದಿರಗಳಲ್ಲಿಯೂ ಬೀದಿಚೌಕಗಳಲ್ಲಿಯೂ ನಿಂತುಕೊಂಡು ಪ್ರಾರ್ಥನೆಮಾಡುವುದಕ್ಕೆ ಇಷ್ಟಪಡುತ್ತಾರೆ. ಅವರು ತಮ್ಮ ಪ್ರತಿಫಲವನ್ನು ಪೂರ್ತಿಯಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

[6] ಆದರೆ ನೀನು ಪ್ರಾರ್ಥನೆ ಮಾಡುವಾಗ, ನಿನ್ನ ಕೋಣೆಯೊಳಗೆ ಹೋಗಿ, ಬಾಗಿಲನ್ನು ಮುಚ್ಚಿ ಅದೃಶ್ಯವಾಗಿರುವ ನಿನ್ನ ತಂದೆಗೆ ಪ್ರಾರ್ಥನೆ ಸಲ್ಲಿಸು. ಆಗ ರಹಸ್ಯದಲ್ಲಿ ನಡೆಯುವುದನ್ನು ಕಾಣುವ ನಿನ್ನ ತಂದೆ ನಿನಗೆ ಪ್ರತಿಫಲ ಕೊಡುವರು.

[7] ಆದರೆ ನೀವು ಪ್ರಾರ್ಥನೆ ಮಾಡುವಾಗ ಯೆಹೂದ್ಯರಲ್ಲದವರಂತೆ ವ್ಯರ್ಥವಾಗಿ ಹೇಳಿದ್ದನ್ನೇ ಪದೇಪದೇ ಹೇಳಬೇಡಿರಿ. ತಮ್ಮ ಅನೇಕ ಮಾತುಗಳ ದೆಸೆಯಿಂದ ತಮ್ಮ ಪ್ರಾರ್ಥನೆಯನ್ನು ದೇವರು ಆಲಿಸುತ್ತಾರೆಂದು ಅವರು ಭಾವಿಸುತ್ತಾರೆ.

[8] ನೀವು ಅವರಂತೆ ಇರಬೇಡಿರಿ, ಏಕೆಂದರೆ ನೀವು ಕೇಳುವುದಕ್ಕೆ ಮೊದಲೇ, ನಿಮ್ಮ ತಂದೆಗೆ ನಿಮ್ಮ ಅಗತ್ಯಗಳು ತಿಳಿದಿವೆ.

[9] “ಆದ್ದರಿಂದ ನೀವು ಹೀಗೆ ಪ್ರಾರ್ಥಿಸಿರಿ: “ ‘ಪರಲೋಕದಲ್ಲಿರುವ ನಮ್ಮ ತಂದೆಯೇ, ನಿಮ್ಮ ನಾಮವು ಪರಿಶುದ್ಧವೆಂದು ಎಣಿಸಲಾಗಲಿ,

[10] ನಿಮ್ಮ ರಾಜ್ಯವು ಬರಲಿ; ನಿಮ್ಮ ಚಿತ್ತವು ಪರಲೋಕದಲ್ಲಿ ನೆರವೇರುವ ಪ್ರಕಾರ ಭೂಲೋಕದಲ್ಲಿಯೂ ನೆರವೇರಲಿ.

[11] ನಮ್ಮ ಅನುದಿನದ ಆಹಾರವನ್ನು ನಮಗೆ ಈ ದಿನವೂ ದಯಪಾಲಿಸಿರಿ.

[12] ನಮಗೆ ಸಾಲಮಾಡಿದವರನ್ನು ನಾವು ಕ್ಷಮಿಸಿದಂತೆ, ನಮ್ಮ ಸಾಲಗಳನ್ನು ಕ್ಷಮಿಸಿರಿ.

[13] ನಮ್ಮನ್ನು ಶೋಧನೆಗೆ ಸೇರಿಸದೆ, ಕೇಡಿನಿಂದ ತಪ್ಪಿಸಿರಿ. ಏಕೆಂದರೆ ರಾಜ್ಯವೂ ಬಲವೂ ಮಹಿಮೆಯೂ ಸದಾಕಾಲ ನಿಮ್ಮದೇ. ಆಮೆನ್.’

[14] ನಿಮಗೆ ವಿರೋಧವಾಗಿ ತಪ್ಪುಮಾಡುವವರನ್ನು ನೀವು ಕ್ಷಮಿಸಿದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ನಿಮ್ಮನ್ನು ಕ್ಷಮಿಸುವರು.

[15] ಆದರೆ ನೀವು ಬೇರೆಯವರ ತಪ್ಪುಗಳನ್ನು ಕ್ಷಮಿಸದಿದ್ದರೆ, ನಿಮ್ಮ ತಂದೆ ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ.

[16] “ನೀವು ಉಪವಾಸ ಮಾಡುವಾಗ ಕಪಟಿಗಳಂತೆ ಮುಖ ಸಪ್ಪಗೆ ಮಾಡಿಕೊಳ್ಳಬೇಡಿರಿ, ತಾವು ಉಪವಾಸ ಮಾಡುತ್ತಿದ್ದೇವೆಂದು ಜನರಿಗೆ ತೋರ್ಪಡಿಸಿಕೊಳ್ಳುವುದಕ್ಕಾಗಿ ಅವರು ತಮ್ಮ ಮುಖವನ್ನು ಬಾಡಿಸಿಕೊಂಡಿರುತ್ತಾರೆ. ಅವರು ತಮಗೆ ಬರತಕ್ಕ ಪ್ರತಿಫಲವನ್ನು ಪೂರ್ತಿಯಾಗಿ ಹೊಂದಿದ್ದಾಯಿತೆಂದು ನಿಮಗೆ ಸತ್ಯವಾಗಿ ಹೇಳುತ್ತೇನೆ.

[17] ಆದರೆ ನೀನು ಉಪವಾಸ ಮಾಡುವಾಗ, ತಲೆಗೆ ಎಣ್ಣೆ ಹಚ್ಚಿಕೊಂಡು, ಮುಖ ತೊಳೆದುಕೋ.

[18] ಹೀಗೆ ಮಾಡಿದರೆ, ಕಾಣದಿರುವ ನಿನ್ನ ತಂದೆಯ ಹೊರತು ಬೇರೆ ಯಾರಿಗೂ ನೀನು ಉಪವಾಸದಿಂದಿರುವುದು ತಿಳಿಯುವುದಿಲ್ಲ ಮತ್ತು ಗುಟ್ಟಾಗಿ ಮಾಡುವುದನ್ನು ಕಾಣುವ ನಿನ್ನ ತಂದೆ, ನಿನಗೆ ಪ್ರತಿಫಲ ಕೊಡುವರು.

[19] “ಭೂಲೋಕದಲ್ಲಿ ನಿಮಗೋಸ್ಕರ ಆಸ್ತಿಪಾಸ್ತಿಯನ್ನು ಕೂಡಿಸಿಡಬೇಡಿರಿ, ಇಲ್ಲಿ ಅದಕ್ಕೆ ನುಸಿ ಮತ್ತು ಕಿಲುಬು ಹಿಡಿದು ಹಾಳಾಗುವುದು ಇಲ್ಲವೆ ಕಳ್ಳರು ಕನ್ನಾಕೊರೆದು ಕದಿಯುವರು.

[20] ಆದರೆ ಪರಲೋಕದಲ್ಲಿ ನಿಮಗಾಗಿ ನಿಕ್ಷೇಪವನ್ನು ಕೂಡಿಟ್ಟುಕೊಳ್ಳಿರಿ, ಅಲ್ಲಿ ಅದಕ್ಕೆ ನುಸಿ ಮತ್ತು ಕಿಲುಬು ಹಿಡಿದು ಹಾಳಾಗುವುದಿಲ್ಲ. ಕಳ್ಳರು ಕನ್ನ ಕೊರೆದು ಕದಿಯುವುದಿಲ್ಲ.

[21] ನಿಮ್ಮ ಸಂಪತ್ತು ಇರುವಲ್ಲಿಯೇ, ನಿಮ್ಮ ಹೃದಯವು ಸಹ ಇರುವುದು.

[22] “ಕಣ್ಣು ದೇಹಕ್ಕೆ ದೀಪವಾಗಿದೆ. ನಿನ್ನ ಕಣ್ಣು ಒಳ್ಳೆಯದಾಗಿದ್ದರೆ, ನಿನ್ನ ದೇಹವೆಲ್ಲಾ ಬೆಳಕಾಗಿರುವುದು.

[23] ನಿನ್ನ ಕಣ್ಣು ಕೆಟ್ಟದ್ದಾಗಿದ್ದರೆ, ನಿನ್ನ ದೇಹವೆಲ್ಲಾ ಕತ್ತಲಾಗಿರುವುದು. ನಿನ್ನಲ್ಲಿರುವ ಬೆಳಕೇ ಕತ್ತಲಾಗಿರುವುದಾದರೆ ಅದು ಎಂತಹ ಕಾರ್ಗತ್ತಲಲ್ಲವೇ!

[24] “ಯಾವನೂ ಇಬ್ಬರು ಯಜಮಾನರಿಗೆ ಸೇವೆಮಾಡಲಾರನು. ಅವನು ಒಬ್ಬನನ್ನು ದ್ವೇಷಿಸಿ ಮತ್ತೊಬ್ಬನನ್ನು ಪ್ರೀತಿಸುವನು; ಇಲ್ಲವೆ ಒಬ್ಬನನ್ನು ಹೊಂದಿಕೊಂಡು ಮತ್ತೊಬ್ಬನನ್ನು ತಿರಸ್ಕರಿಸುವನು. ನೀವು ದೇವರಿಗೂ ಧನಕ್ಕೂ ಸೇವೆ ಮಾಡಲಾರಿರಿ.

[25] “ಆದ್ದರಿಂದ ನಿಮ್ಮ ಜೀವನಕ್ಕಾಗಿ, ಏನು ಊಟಮಾಡಬೇಕು, ಏನು ಕುಡಿಯಬೇಕು ಅಥವಾ ನಿಮ್ಮ ದೇಹಕ್ಕೆ ಏನು ಧರಿಸಿಕೊಳ್ಳಬೇಕು ಎಂದು ಚಿಂತೆಮಾಡಬೇಡಿರಿ ಎಂದು ನಾನು ನಿಮಗೆ ಹೇಳುತ್ತೇನೆ. ಊಟಕ್ಕಿಂತ ಪ್ರಾಣವೂ ವಸ್ತ್ರಕ್ಕಿಂತ ದೇಹವೂ ಮೇಲಾದದ್ದಲ್ಲವೇ?

[26] ಆಕಾಶದಲ್ಲಿ ಹಾರಾಡುವ ಹಕ್ಕಿಗಳನ್ನು ನೋಡಿರಿ. ಅವು ಬಿತ್ತುವುದಿಲ್ಲ, ಕೊಯ್ಯುವುದಿಲ್ಲ, ಕಣಜಗಳಲ್ಲಿ ಕೂಡಿಡುವುದಿಲ್ಲ. ಆದರೂ ಪರಲೋಕದಲ್ಲಿರುವ ನಿಮ್ಮ ತಂದೆಯು ಅವುಗಳನ್ನು ಪೋಷಿಸುತ್ತಾರೆ. ಅವುಗಳಿಗಿಂತ ನೀವು ಎಷ್ಟೋ ಶ್ರೇಷ್ಠರಲ್ಲವೇ?

[27] ನೀವು ಚಿಂತಿಸುವುದರಿಂದ ನಿಮ್ಮ ಜೀವನಕ್ಕೆ ಒಂದು ತಾಸನ್ನು ಕೂಡಿಸಲು ಸಾಧ್ಯವೇ?

[28] “ನೀವು ಉಡುಪಿನ ವಿಷಯ ಚಿಂತಿಸುವುದೇಕೆ? ಅಡವಿಯಲ್ಲಿ ಹೂವುಗಳು ಬೆಳೆಯುವುದನ್ನು ಗಮನಿಸಿರಿ. ಅವು ದುಡಿಯುವುದಿಲ್ಲ, ನೂಲುವುದಿಲ್ಲ.

[29] ಆದರೂ ಅರಸನಾದ ಸೊಲೊಮೋನನು ತನ್ನ ಸರ್ವವೈಭವದಲ್ಲಿ ಇದ್ದಾಗಲೂ ಆ ಹೂವುಗಳಲ್ಲಿ ಒಂದರಂತೆಯಾದರೂ ಉಡುಪನ್ನು ಧರಿಸಿರಲಿಲ್ಲ ಎಂದು, ನಾನು ನಿಮಗೆ ಹೇಳುತ್ತೇನೆ.

[30] ಅಲ್ಪವಿಶ್ವಾಸಿಗಳೇ, ಇಂದಿದ್ದು ನಾಳೆ ಒಲೆಯ ಪಾಲಾಗುವ ಅಡವಿಯ ಹುಲ್ಲಿಗೇ ದೇವರು ಹೀಗೆ ಉಡಿಸಿದರೆ, ನಿಮಗೆ ಇನ್ನೂ ಎಷ್ಟೋ ಹೆಚ್ಚಾಗಿ ಉಡಿಸುವರಲ್ಲವೇ?

[31] ಆದ್ದರಿಂದ, ‘ಏನು ಊಟಮಾಡಬೇಕು? ಏನು ಕುಡಿಯಬೇಕು ಮತ್ತು ಏನು ಧರಿಸಬೇಕು?’ ಎಂದು ಚಿಂತಿಸಬೇಡಿರಿ.

[32] ಇವೆಲ್ಲವನ್ನು ದೇವರನ್ನು ಅರಿಯದವರು ಹುಡುಕುತ್ತಾರೆ. ಇವೆಲ್ಲಾ ನಿಮಗೆ ಅವಶ್ಯವೆಂದು ಪರಲೋಕದಲ್ಲಿರುವ ನಿಮ್ಮ ತಂದೆಯು ತಿಳಿದಿದ್ದಾರೆ.

[33] ನೀವು ಮೊದಲು ದೇವರ ರಾಜ್ಯವನ್ನೂ ಅದರ ನೀತಿಯನ್ನೂ ಹುಡುಕಿರಿ. ಆಗ ಇವುಗಳ ಕೂಡ ಅವೆಲ್ಲವೂ ನಿಮಗೆ ದೊರಕುವವು.

[34] ಆದ್ದರಿಂದ, ನಾಳೆಯ ವಿಷಯವಾಗಿ ಚಿಂತಿಸಬೇಡಿರಿ. ನಾಳೆಯ ದಿನವು ತನ್ನದನ್ನು ತಾನೇ ಚಿಂತಿಸಿಕೊಳ್ಳುವುದು, ಆ ದಿನದ ಪಾಡು ಆ ದಿನಕ್ಕೆ ಸಾಕು.

ಮತ್ತಾಯ — Chapters