[1] “ಪರಲೋಕ ರಾಜ್ಯವನ್ನು ತನ್ನ ದ್ರಾಕ್ಷಿಯ ತೋಟಕ್ಕೆ ಕೂಲಿಯಾಳುಗಳನ್ನು ಕರೆಯುವುದಕ್ಕಾಗಿ ಬೆಳಿಗ್ಗೆ ಹೊರಟ ಒಬ್ಬ ಯಜಮಾನನಿಗೆ ಹೋಲಿಸಲಾಗಿದೆ.
[2] ಅವನು ದಿನಕ್ಕೆ ಒಂದು ಬೆಳ್ಳಿನಾಣ್ಯ ಕೂಲಿಯಾಳುಗಳೊಂದಿಗೆ ಒಪ್ಪಂದ ಮಾಡಿಕೊಂಡು ತನ್ನ ದ್ರಾಕ್ಷಿಯ ತೋಟಕ್ಕೆ ಅವರನ್ನು ಕಳುಹಿಸಿಕೊಟ್ಟನು.
[3] “ಅವನು ಸುಮಾರು ಒಂಬತ್ತು ಗಂಟೆಗೆ ಹೊರಗೆ ಹೋಗಿ ಇನ್ನು ಕೆಲವರು ಸಂತೆಯ ಸ್ಥಳದಲ್ಲಿ ಕೆಲಸವಿಲ್ಲದೆ ನಿಂತಿರುವುದನ್ನು ಕಂಡು,
[4] ಅವರಿಗೆ, ‘ನೀವು ಸಹ ದ್ರಾಕ್ಷಿಯ ತೋಟಕ್ಕೆ ಹೋಗಿರಿ; ಸರಿಯಾದ ಕೂಲಿಯನ್ನು ನಾನು ನಿಮಗೆ ಕೊಡುತ್ತೇನೆ,’ ಎಂದು ಹೇಳಿದನು.
[5] ಆಗ ಅವರು ಹೊರಟು ಹೋದರು. “ಅವನು ಸುಮಾರು ಹನ್ನೆರಡು ಗಂಟೆಗೂ ಅನಂತರ ಮೂರು ಗಂಟೆಗೂ ತಿರುಗಿ ಹೋಗಿ ಹಾಗೆಯೇ ಮಾಡಿದನು.
[6] ತರುವಾಯ ಸುಮಾರು ಐದು ಗಂಟೆಗೆ ಅವನು ಹೊರಗೆ ಹೋಗಿ ಬೇರೆ ಕೆಲವರು ಕೆಲಸವಿಲ್ಲದೆ ನಿಂತಿರುವುದನ್ನು ಕಂಡು, ‘ನೀವು ದಿನವೆಲ್ಲಾ ಇಲ್ಲಿ ಕೆಲಸವಿಲ್ಲದೆ ನಿಂತಿರುವುದೇಕೆ?’ ಎಂದು ಕೇಳಿದನು.
[7] “ಅವರು, ‘ಯಾರೂ ನಮ್ಮನ್ನು ಕೂಲಿಗೆ ಕರೆಯಲಿಲ್ಲ,’ ಎಂದರು. “ಆಗ ಅವನು, ‘ನೀವು ಸಹ ದ್ರಾಕ್ಷಿಯ ತೋಟಕ್ಕೆ ಹೋಗಿರಿ,’ ಎಂದು ಹೇಳಿದನು.
[8] “ಸಂಜೆಯಾದಾಗ, ದ್ರಾಕ್ಷಿಯ ತೋಟದ ಯಜಮಾನನು ತನ್ನ ಮೇಸ್ತ್ರಿಗೆ, ‘ಕೂಲಿಯಾಳುಗಳನ್ನು ಕರೆದು, ಕೊನೆಯವನಿಂದ ಪ್ರಾರಂಭಿಸಿ ಮೊದಲನೆಯವನವರೆಗೆ ಕೂಲಿಯನ್ನು ಕೊಡು,’ ಎಂದು ಹೇಳಿದನು.
[9] “ಆಗ ಐದು ಗಂಟೆಗೆ ಕರೆದವರು ಬಂದಾಗ ಪ್ರತಿಯೊಬ್ಬನಿಗೂ ಒಂದೊಂದು ಬೆಳ್ಳಿನಾಣ್ಯ ಸಿಕ್ಕಿತು.
[10] ಆಗ ಮೊದಲು ಬಂದವರು, ತಮಗೆ ಹೆಚ್ಚು ದೊರೆಯುವುದೆಂದು ನೆನಸಿದರು. ಆದರೆ ಅವರಲ್ಲಿ ಪ್ರತಿಯೊಬ್ಬನಿಗೂ ಅದೇ ರೀತಿಯಲ್ಲಿ ಒಂದೊಂದೇ ಬೆಳ್ಳಿನಾಣ್ಯ ಸಿಕ್ಕಿತು.
[11] ಅವರು ಅದನ್ನು ತೆಗೆದುಕೊಂಡಾಗ, ಯಜಮಾನನ ವಿರೋಧವಾಗಿ ಗೊಣುಗುಟ್ಟುತ್ತಾ,
[12] ‘ಕಡೆಯವರಾದ ಇವರು ಒಂದೇ ತಾಸು ಕೆಲಸಮಾಡಿದ್ದಾರೆ, ಆದರೆ ದಿನವೆಲ್ಲಾ ಬಿಸಿಲಿನಲ್ಲಿ ಭಾರ ಹೊತ್ತು ಕೆಲಸಮಾಡಿದ ನಮ್ಮನ್ನು ನೀನು ಇವರಿಗೆ ಸಮಮಾಡಿದ್ದಿ,’ ಎಂದರು.
[13] “ಆದರೆ ಯಜಮಾನನು ಅವರಲ್ಲಿ ಒಬ್ಬನಿಗೆ ಉತ್ತರವಾಗಿ, ‘ಸ್ನೇಹಿತನೇ, ನಾನು ನಿನಗೆ ಅನ್ಯಾಯ ಮಾಡಲಿಲ್ಲ. ಒಂದು ಬೆಳ್ಳಿ ನಾಣ್ಯಕ್ಕೆ ನೀನು ನನ್ನೊಂದಿಗೆ ಒಪ್ಪಂದ ಮಾಡಿಕೊಳ್ಳಲಿಲ್ಲವೇ?
[14] ನಿನ್ನ ಕೂಲಿ ತೆಗೆದುಕೊಂಡು ಹೋಗು. ನಿನಗೆ ನಾನು ಕೊಟ್ಟಂತೆಯೇ ಈ ಕಡೆಯವನಿಗೂ ಕೊಡುವುದು ನನ್ನ ಇಷ್ಟ.
[15] ನನ್ನದನ್ನು ನನ್ನ ಇಷ್ಟಬಂದಂತೆ ಕೊಡುವುದಕ್ಕೆ ನನಗೆ ಹಕ್ಕಿಲ್ಲವೇ? ನಾನು ಔದಾರ್ಯವುಳ್ಳವನಾದ್ದರಿಂದ, ನಿನಗೆ ಹೊಟ್ಟೆಯುರಿಯೋ?’ ಎಂದನು.
[16] “ಹೀಗೆ ಕಡೆಯವರು ಮೊದಲನೆಯವರಾಗುವರು, ಮೊದಲನೆಯವರು ಕಡೆಯವರಾಗುವರು,” ಎಂದು ಹೇಳಿದರು.
[17] ಯೇಸು ಯೆರೂಸಲೇಮಿಗೆ ಹೋಗುತ್ತಿರುವಾಗ ಹನ್ನೆರಡು ಮಂದಿ ಶಿಷ್ಯರನ್ನು ದಾರಿಯಲ್ಲಿ ಪ್ರತ್ಯೇಕವಾಗಿ ಕರೆದು ಅವರಿಗೆ,
[18] “ಇಗೋ, ನಾವು ಯೆರೂಸಲೇಮಿಗೆ ಹೋಗುತ್ತಿದ್ದೇವೆ. ಅಲ್ಲಿ ಮನುಷ್ಯಪುತ್ರನಾದ ನನ್ನನ್ನು ಮುಖ್ಯಯಾಜಕರ ಮತ್ತು ನಿಯಮ ಬೋಧಕರ ಕೈಗೆ ಒಪ್ಪಿಸಿಕೊಡುವರು. ಅವರು ನನಗೆ ಮರಣದಂಡನೆಯನ್ನು ವಿಧಿಸುವರು.
[19] ಇದಲ್ಲದೆ ನನ್ನನ್ನು ಹಾಸ್ಯಮಾಡುವುದಕ್ಕೂ ಕೊರಡೆಗಳಿಂದ ಹೊಡೆಯುವುದಕ್ಕೂ ಶಿಲುಬೆಗೆ ಹಾಕುವುದಕ್ಕೂ ಯೆಹೂದ್ಯರಲ್ಲದವರ ಕೈಗೆ ಒಪ್ಪಿಸಿಕೊಡುವರು. ನಾನಾದರೋ ಮೂರು ದಿನದ ಮೇಲೆ ಜೀವಿತನಾಗಿ ಎದ್ದು ಬರುವೆನು,” ಎಂದು ಹೇಳಿದರು.
[20] ಜೆಬೆದಾಯನ ಮಕ್ಕಳ ತಾಯಿ ತನ್ನ ಪುತ್ರರ ಸಮೇತ ಯೇಸುವಿನ ಬಳಿಗೆ ಬಂದು, ಅವರ ಮುಂದೆ ಮೊಣಕಾಲೂರಿ ಬೇಡಿಕೊಂಡಳು.
[21] ಯೇಸು, “ನಿನ್ನ ಬೇಡಿಕೆ ಏನು?” ಎಂದು ಕೇಳಿದರು. “ನಿಮ್ಮ ರಾಜ್ಯದಲ್ಲಿ ಈ ನನ್ನ ಇಬ್ಬರು ಪುತ್ರರಲ್ಲಿ ಒಬ್ಬನು ನಿಮ್ಮ ಬಲಗಡೆಯಲ್ಲೂ ಇನ್ನೊಬ್ಬನು ನಿಮ್ಮ ಎಡಗಡೆಯಲ್ಲೂ ಕುಳಿತುಕೊಳ್ಳುವಂತೆ ಅನುಗ್ರಹಿಸಬೇಕು,” ಎಂದು ಬೇಡಿಕೊಂಡಳು.
[22] ಯೇಸು ಉತ್ತರವಾಗಿ, “ನೀವು ಬೇಡಿಕೊಂಡದ್ದು ಏನೆಂದು ನಿಮಗೆ ತಿಳಿಯದು. ನಾನು ಕುಡಿಯಲಿರುವ ಪಾತ್ರೆಯಿಂದ ಕುಡಿಯಲು ನಿಮ್ಮಿಂದಾದೀತೇ?” ಎಂದು ಕೇಳಿದರು. ಅವರು, “ಹೌದು, ನಮ್ಮಿಂದಾಗುವುದು,” ಎಂದು ಹೇಳಿದರು.
[23] ಅದಕ್ಕೆ ಯೇಸು, “ನನ್ನ ಪಾತ್ರೆಯಿಂದ ನೀವು ಕುಡಿಯುವಿರಿ, ಆದರೆ ನನ್ನ ಬಲಗಡೆಯಲ್ಲಾಗಲಿ ಎಡಗಡೆಯಲ್ಲಾಗಲಿ ಕುಳಿತುಕೊಳ್ಳುವಂತೆ ಅನುಗ್ರಹಿಸುವುದು ನನ್ನದಲ್ಲ, ನನ್ನ ತಂದೆಯಿಂದ ಅದು ಯಾರಿಗೋಸ್ಕರ ಸಿದ್ಧವಾಗಿದೆಯೋ ಅವರಿಗೇ ಕೊಡಲಾಗುವುದು,” ಎಂದು ಹೇಳಿದರು.
[24] ಬೇರೆ ಹತ್ತು ಮಂದಿ ಶಿಷ್ಯರು ಇದನ್ನು ಕೇಳಿದಾಗ, ಆ ಇಬ್ಬರು ಸಹೋದರರ ಮೇಲೆ ಸಿಟ್ಟುಗೊಂಡರು.
[25] ಆದರೆ ಯೇಸು ಶಿಷ್ಯರನ್ನು ತಮ್ಮ ಹತ್ತಿರಕ್ಕೆ ಕರೆದು, “ಯೆಹೂದ್ಯರಲ್ಲದವರ ಅಧಿಪತಿಗಳು ತಮ್ಮ ಪ್ರಜೆಗಳ ಮೇಲೆ ದೊರೆತನ ಮಾಡುತ್ತಾರೆಂದೂ ಉನ್ನತ ಅಧಿಕಾರಿಗಳು ಅವರ ಮೇಲೆ ಅಧಿಕಾರವನ್ನು ನಡೆಸುತ್ತಾರೆಂದೂ ನಿಮಗೆ ತಿಳಿದಿದೆ.
[26] ಆದರೆ ನೀವು ಹಾಗಿರಬಾರದು. ನಿಮ್ಮಲ್ಲಿ ದೊಡ್ಡವನಾಗಿರಬೇಕೆಂದಿರುವವನು ನಿಮ್ಮ ಸೇವಕನಾಗಿರಲಿ.
[27] ನಿಮ್ಮಲ್ಲಿ ಯಾವನಾದರೂ ಪ್ರಮುಖನಾಗಬೇಕೆಂದಿದ್ದರೆ, ಅವನು ನಿಮ್ಮ ಆಳಾಗಿರಲಿ.
[28] ಮನುಷ್ಯಪುತ್ರನಾದ ನಾನು ಸಹ ಸೇವೆಮಾಡಿಸಿಕೊಳ್ಳುವುದಕ್ಕಾಗಿ ಅಲ್ಲ, ಸೇವೆಮಾಡುವುದಕ್ಕಾಗಿಯೂ ಅನೇಕರಿಗಾಗಿ ನನ್ನ ಪ್ರಾಣವನ್ನೇ ಈಡಾಗಿ ಕೊಡುವುದಕ್ಕಾಗಿಯೂ ಬಂದಿದ್ದೇನೆ,” ಎಂದು ಹೇಳಿದರು.
[29] ಯೇಸು ಮತ್ತು ಅವರ ಶಿಷ್ಯರು ಯೆರಿಕೋವಿನಿಂದ ಹೊರಟು ಹೋಗುತ್ತಿರುವಾಗ, ಜನರು ದೊಡ್ಡ ಸಮೂಹವಾಗಿ ಯೇಸುವನ್ನು ಹಿಂಬಾಲಿಸಿದರು.
[30] ದಾರಿಯ ಮಗ್ಗುಲಲ್ಲಿ ಕೂತಿದ್ದ ಇಬ್ಬರು ಕುರುಡರು ಯೇಸು ಹಾದು ಹೋಗುತ್ತಿದ್ದಾರೆಂದು ಕೇಳಿ, “ಕರ್ತನೇ, ದಾವೀದನ ಪುತ್ರನೇ, ನಮ್ಮ ಮೇಲೆ ಕರುಣೆಯಿಡು!” ಎಂದು ಕೂಗಿ ಹೇಳಿದರು.
[31] ಅವರು ಸುಮ್ಮನಿರುವಂತೆ ಜನರ ಸಮೂಹವು ಅವರನ್ನು ಗದರಿಸಿತು. ಆದರೂ ಅವರು, “ಕರ್ತನೇ, ದಾವೀದನ ಪುತ್ರನೇ, ನಮ್ಮ ಮೇಲೆ ಕರುಣೆಯಿಡು!” ಎಂದು ಇನ್ನೂ ಗಟ್ಟಿಯಾಗಿ ಕೂಗಿಕೊಂಡರು.
[32] ಆಗ ಯೇಸು ನಿಂತು, ಅವರನ್ನು ಕರೆದು, “ನಾನು ನಿಮಗೆ ಏನು ಮಾಡಬೇಕೆಂದು ಅಪೇಕ್ಷಿಸುತ್ತೀರಿ?” ಎಂದು ಕೇಳಿದರು.
[33] ಅವರು ಯೇಸುವಿಗೆ, “ಕರ್ತದೇವರೇ, ನಮಗೆ ಕಣ್ಣು ಕಾಣುವಂತೆ ಮಾಡು,” ಎಂದರು.
[34] ಯೇಸು ಅವರ ಮೇಲೆ ಕನಿಕರಪಟ್ಟು ಅವರ ಕಣ್ಣುಗಳನ್ನು ಮುಟ್ಟಿದರು. ಕೂಡಲೇ ಅವರ ಕಣ್ಣುಗಳು ದೃಷ್ಟಿಯನ್ನು ಪಡೆದವು. ಅವರೂ ಯೇಸುವನ್ನು ಹಿಂಬಾಲಿಸಿದರು.