[1] ಅದೇ ದಿನದಲ್ಲಿ ಯೇಸು ಮನೆಯಿಂದ ಹೊರಟುಹೋಗಿ ಸರೋವರದ ಬಳಿಯಲ್ಲಿ ಕುಳಿತುಕೊಂಡರು.
[2] ಆಗ ಜನರ ದೊಡ್ಡ ಸಮೂಹವು ಯೇಸುವಿನ ಬಳಿಗೆ ಕೂಡಿಬಂದದ್ದರಿಂದ ಅವರು ದೋಣಿಯನ್ನು ಹತ್ತಿ ಕುಳಿತುಕೊಂಡರು, ಆ ಸಮೂಹದವರೆಲ್ಲಾ ದಡದ ಮೇಲೆ ನಿಂತಿದ್ದರು.
[3] ಆಗ ಯೇಸು ಅನೇಕ ವಿಷಯಗಳನ್ನು ಅವರಿಗೆ ಸಾಮ್ಯಗಳಲ್ಲಿ ಹೇಳಿದ್ದು: “ಒಬ್ಬ ರೈತನು ಬಿತ್ತುವುದಕ್ಕೆ ಹೊರಟನು;
[4] ಅವನು ಬಿತ್ತುತ್ತಿರುವಾಗ ಕೆಲವು ಬೀಜಗಳು ದಾರಿಯ ಪಕ್ಕದಲ್ಲಿ ಬಿದ್ದವು, ಪಕ್ಷಿಗಳು ಬಂದು ಅವುಗಳನ್ನು ತಿಂದುಬಿಟ್ಟವು.
[5] ಕೆಲವು ಬೀಜಗಳು ಹೆಚ್ಚು ಮಣ್ಣಿಲ್ಲದ ಬಂಡೆಯ ಸ್ಥಳಗಳಲ್ಲಿ ಬಿದ್ದವು. ಅಲ್ಲಿ ಆಳವಾದ ಮಣ್ಣಿಲ್ಲದ ಕಾರಣ ಅವು ಬೇಗನೆ ಮೊಳೆತವು.
[6] ಆದರೆ ಬಿಸಿಲೇರಿದಾಗ ಅವು ಬಾಡಿಹೋಗಿ, ಬೇರಿಲ್ಲದ ಕಾರಣ ಒಣಗಿಹೋದವು.
[7] ಕೆಲವು ಬೀಜಗಳು ಮುಳ್ಳುಗಿಡಗಳ ಮಧ್ಯದಲ್ಲಿ ಬಿದ್ದವು, ಆ ಮುಳ್ಳುಗಿಡಗಳು ಬೆಳೆದು ಅವುಗಳನ್ನು ಅಡಗಿಸಿಬಿಟ್ಟವು.
[8] ಆದರೆ ಕೆಲವು ಬೀಜಗಳು ಒಳ್ಳೆಯ ಭೂಮಿಯಲ್ಲಿ ಬಿದ್ದು, ಒಂದು ನೂರರಷ್ಟು ಮತ್ತೆ ಕೆಲವು ಅರವತ್ತರಷ್ಟು ಇನ್ನು ಕೆಲವು ಮೂವತ್ತರಷ್ಟು ಫಲಕೊಟ್ಟವು.
[9] ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ.”
[10] ತರುವಾಯ ಶಿಷ್ಯರು ಬಂದು ಯೇಸುವಿಗೆ, “ನೀವು ಸಾಮ್ಯಗಳಲ್ಲಿ ಅವರೊಡನೆ ಮಾತನಾಡುವುದೇಕೆ?” ಎಂದು ಕೇಳಿದರು.
[11] ಯೇಸು ಅದಕ್ಕೆ ಉತ್ತರವಾಗಿ ಹೇಳಿದ್ದು: “ಪರಲೋಕ ರಾಜ್ಯದ ರಹಸ್ಯಗಳನ್ನು ತಿಳಿದುಕೊಳ್ಳುವ ಜ್ಞಾನವು ನಿಮಗೆ ಕೊಡಲಾಗಿದೆ, ಆದರೆ ಅವರಿಗಲ್ಲ.
[12] ಇದ್ದವರಿಗೆ ಇನ್ನೂ ಹೆಚ್ಚಾಗಿ ಕೊಡಲಾಗುವುದು, ಅವರಿಗೆ ಹೆಚ್ಚು ಸಮೃದ್ಧಿಯಾಗುವುದು. ಇಲ್ಲದವರ ಕಡೆಯಿಂದ ಇದ್ದ ಅಲ್ಪವನ್ನೂ ತೆಗೆದುಕೊಳ್ಳಲಾಗುವುದು.”
[13] ಆದ್ದರಿಂದ, ನಾನು ಅವರೊಡನೆ ಸಾಮ್ಯಗಳಲ್ಲಿ ಮಾತನಾಡುತ್ತೇನೆ: “ಏಕೆಂದರೆ ಅವರು ಕಣ್ಣಾರೆ ನೋಡಿದರೂ ಕಾಣುವುದಿಲ್ಲ; ಕೇಳಿದರೂ ತಿಳಿದುಕೊಳ್ಳುವುದಿಲ್ಲ; ಅವರು ಗ್ರಹಿಸುವುದೂ ಇಲ್ಲ.
[14] ಹೀಗೆ ಯೆಶಾಯನ ಪ್ರವಾದನೆಯು ಅವರಲ್ಲಿ ನೆರವೇರಿತು. ಅದೇನೆಂದರೆ, “ ‘ನೀವು ಕೇಳುತ್ತಲೇ ಇರುವಿರಿ, ಎಂದೆಂದೂ ಅರ್ಥಮಾಡಿಕೊಳ್ಳಲಾರಿರಿ; ನೀವು ಕಾಣುತ್ತಲೇ ಇರುವಿರಿ, ಎಂದೆಂದೂ ಅರಿತುಕೊಳ್ಳಲಾರಿರಿ.
[15] ಈ ಜನರ ಹೃದಯವು ಕಠೋರವಾಗಿದೆ; ಇವರ ಕಿವಿಗಳು ಕೇಳದ ಹಾಗೆ ಮಂದವಾಗಿವೆ, ಇವರು ತಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿದ್ದಾರೆ. ಇಲ್ಲವಾದರೆ ತಾವು ಕಣ್ಣಿನಿಂದ ಕಂಡು, ಕಿವಿಯಿಂದ ಕೇಳಿ. ತಮ್ಮ ಹೃದಯದಿಂದ ತಿಳಿದು, ನನ್ನ ಕಡೆಗೆ ತಿರುಗಿಕೊಂಡಿದ್ದರೆ, ನಾನು ಅವರನ್ನು ಸ್ವಸ್ಥಪಡಿಸುತ್ತಿದ್ದೆನು,’ ಎಂಬುದೇ.
[16] ಆದರೆ ನಿಮ್ಮ ಕಣ್ಣುಗಳು ಕಾಣುವುದರಿಂದಲೂ ನಿಮ್ಮ ಕಿವಿಗಳು ಕೇಳುವುದರಿಂದಲೂ ನೀವು ಧನ್ಯರು.
[17] ನಾನು ಸತ್ಯವಾಗಿ ನಿಮಗೆ ಹೇಳುತ್ತೇನೆ, ಅನೇಕ ಪ್ರವಾದಿಗಳು ಮತ್ತು ನೀತಿವಂತರು ನೀವು ಕಾಣುವಂಥವುಗಳನ್ನು ಕಾಣಬೇಕೆಂದು ಅಪೇಕ್ಷಿಸಿದರೂ ಕಾಣಲಿಲ್ಲ ಮತ್ತು ನೀವು ಕೇಳುವಂಥವುಗಳನ್ನು ಕೇಳಬೇಕೆಂದು ಅಪೇಕ್ಷಿಸಿದರೂ ಅವರು ಕೇಳಲಿಲ್ಲ.
[18] “ಆದ್ದರಿಂದ ಬಿತ್ತುವವನ ಸಾಮ್ಯದ ಅರ್ಥವನ್ನು ನೀವು ಕೇಳಿರಿ:
[19] ಯಾರಾದರೂ ಪರಲೋಕ ರಾಜ್ಯದ ವಾಕ್ಯವನ್ನು ಕೇಳಿ ಗ್ರಹಿಸದೆ ಇರುವಾಗ, ಕೆಡುಕನು ಬಂದು ಅವರ ಹೃದಯದಲ್ಲಿ ಬಿತ್ತಿದ್ದನ್ನು ತೆಗೆದುಹಾಕುತ್ತಾನೆ, ಇದೇ ದಾರಿಯ ಪಕ್ಕದಲ್ಲಿ ಬಿತ್ತಲಾಗಿರುವ ಬೀಜವಾಗಿರುವದು.
[20] ಕಲ್ಲು ನೆಲದ ಮೇಲೆ ಬಿತ್ತಲಾಗಿರುವ ಬೀಜವಾಗಿರುವವರು, ವಾಕ್ಯವನ್ನು ಕೇಳಿದ ಕೂಡಲೇ ಸಂತೋಷದಿಂದ ಅದನ್ನು ಸ್ವೀಕರಿಸುತ್ತಾರೆ.
[21] ಆದರೆ ಅವರಲ್ಲಿ ಬೇರಿಲ್ಲದ ಕಾರಣ ಸ್ವಲ್ಪಕಾಲ ಮಾತ್ರ ಇದ್ದು, ವಾಕ್ಯದ ನಿಮಿತ್ತವಾಗಿ ಸಂಕಟ ಇಲ್ಲವೆ ಹಿಂಸೆ ಬಂದಾಗ, ಅವರು ಬೇಗನೆ ಬಿದ್ದು ಹೋಗುತ್ತಾರೆ.
[22] ಮುಳ್ಳುಗಿಡಗಳಲ್ಲಿ ಬಿತ್ತಲಾಗಿರುವ ಬೀಜವಾಗಿರುವವರು ವಾಕ್ಯವನ್ನು ಕೇಳುತ್ತಾರೆ, ಆದರೆ ಈ ಜೀವನದ ಚಿಂತೆಗಳೂ ಐಶ್ವರ್ಯದ ವ್ಯಾಮೋಹವೂ ವಾಕ್ಯವನ್ನು ಅಡಗಿಸುವುದರಿಂದ, ವಾಕ್ಯವು ಫಲವನ್ನು ಕೊಡುವುದಿಲ್ಲ.
[23] ಆದರೆ ಒಳ್ಳೆಯ ಭೂಮಿಯಲ್ಲಿ ಬಿತ್ತಲಾಗಿರುವ ಬೀಜವಾಗಿರುವವರು, ವಾಕ್ಯವನ್ನು ಕೇಳಿ ಅದನ್ನು ಗ್ರಹಿಸಿಕೊಳ್ಳುತ್ತಾರೆ. ಇವರು ಫಲ ಫಲಿಸುವವರಾಗಿ ನೂರರಷ್ಟು ಅರವತ್ತರಷ್ಟು ಮತ್ತು ಮೂವತ್ತರಷ್ಟು ಫಲವನ್ನು ಕೊಡುತ್ತಾರೆ.”
[24] ಯೇಸು ಮತ್ತೊಂದು ಸಾಮ್ಯವನ್ನು ಹೇಳಿದರು: “ಪರಲೋಕ ರಾಜ್ಯವು ಒಳ್ಳೆಯ ಬೀಜವನ್ನು ತನ್ನ ಹೊಲದಲ್ಲಿ ಬಿತ್ತಿದ ಒಬ್ಬ ಮನುಷ್ಯನಿಗೆ ಹೋಲಿಕೆಯಾಗಿದೆ.
[25] ಆದರೆ ಜನರು ನಿದ್ರಿಸುತ್ತಿರುವಾಗ, ಅವನ ವೈರಿಯು ಬಂದು ಗೋಧಿಯ ನಡುವೆ ಕಳೆಯನ್ನು ಬಿತ್ತಿ ಹೊರಟುಹೋದನು.
[26] ಗೋಧಿಯು ಮೊಳೆತು ಬೆಳೆಯುತ್ತಿರುವಾಗ, ಕಳೆ ಸಹ ಕಾಣಿಸಿಕೊಂಡಿತು.
[27] “ಮನೆಯ ಯಜಮಾನನ ಸೇವಕರು ಅವನ ಬಳಿಗೆ ಬಂದು ಅವನಿಗೆ, ‘ಅಯ್ಯಾ, ನೀನು ನಿನ್ನ ಹೊಲದಲ್ಲಿ ಒಳ್ಳೆಯ ಬೀಜವನ್ನು ಬಿತ್ತಿದೆಯಲ್ಲಾ? ಆದರೆ ಈ ಕಳೆಯು ಎಲ್ಲಿಂದ ಬಂತು?’ ಎಂದು ಕೇಳಿದರು.
[28] “ಯಜಮಾನನು ಅವರಿಗೆ, ‘ವೈರಿಯು ಇದನ್ನು ಮಾಡಿದ್ದಾನೆ,’ ಎಂದನು. “ಆಗ ಸೇವಕರು ಅವನಿಗೆ, ‘ನಾವು ಹೋಗಿ ಅವುಗಳನ್ನು ಕಿತ್ತುಹಾಕೋಣವೇ?’ ಎಂದು ಕೇಳಿದರು.
[29] “ಆದರೆ ಯಜಮಾನನು, ‘ಬೇಡ, ನೀವು ಕಳೆಯನ್ನು ಕೀಳುವಾಗ, ಅವುಗಳೊಂದಿಗೆ ಗೋಧಿಯನ್ನೂ ಕಿತ್ತುಬಿಟ್ಟೀರಿ.
[30] ಸುಗ್ಗಿಯ ಕಾಲದವರೆಗೆ ಎರಡೂ ಜೊತೆಯಲ್ಲಿ ಬೆಳೆಯಲಿ. ಸುಗ್ಗಿಯ ಕಾಲದಲ್ಲಿ ನಾನು ಕೊಯ್ಯುವವರಿಗೆ: ಮೊದಲು ಕಳೆಯನ್ನು ಕೂಡಿಸಿ ಅವುಗಳನ್ನು ಸುಡುವುದಕ್ಕೆ ಬೇರೆ ಕಟ್ಟಿಡಿರಿ, ಗೋಧಿಯನ್ನು ನನ್ನ ಕಣಜದಲ್ಲಿ ಕೂಡಿಸಿರಿ ಎಂದು ಹೇಳುವೆನು,’ ಅಂದನು.”
[31] ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದರು: “ಪರಲೋಕ ರಾಜ್ಯವು, ಒಬ್ಬ ಮನುಷ್ಯನು ಸಾಸಿವೆ ಕಾಳನ್ನು ತೆಗೆದುಕೊಂಡುಹೋಗಿ ತನ್ನ ಹೊಲದಲ್ಲಿ ಬಿತ್ತಿದ್ದಕ್ಕೆ ಹೋಲಿಕೆಯಾಗಿದೆ.
[32] ಅದು ಎಲ್ಲಾ ಬೀಜಗಳಿಗಿಂತಲೂ ಸಣ್ಣದಾಗಿದ್ದರೂ ಅದು ಬೆಳೆದಾಗ, ಎಲ್ಲಾ ಸಸ್ಯಗಳಿಗಿಂತಲೂ ದೊಡ್ಡದಾಗಿ ಮರವಾಯಿತು. ಹೀಗೆ ಆಕಾಶದ ಪಕ್ಷಿಗಳು ಬಂದು, ಅದರ ಕೊಂಬೆಗಳಲ್ಲಿ ಗೂಡು ಕಟ್ಟಿ ವಾಸಮಾಡುತ್ತವೆ.”
[33] ಯೇಸು ಮತ್ತೊಂದು ಸಾಮ್ಯವನ್ನು ಅವರಿಗೆ ಹೇಳಿದರು: “ಪರಲೋಕ ರಾಜ್ಯವು ಹುಳಿಹಿಟ್ಟಿಗೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಸ್ತ್ರೀಯು ತೆಗೆದುಕೊಂಡು ಹುಳಿಯಿಲ್ಲದ ಸುಮಾರು ಇಪ್ಪತ್ತೇಳು ಕಿಲೋಗ್ರಾಂ ಹಿಟ್ಟಿನಲ್ಲಿ ಕಲಸಿದಾಗ ಆ ಹಿಟ್ಟೆಲ್ಲಾ ಹುಳಿಯಾಯಿತು.”
[34] ಯೇಸು ಇವೆಲ್ಲವನ್ನು ಜನಸಮೂಹದೊಂದಿಗೆ ಸಾಮ್ಯಗಳಲ್ಲಿಯೇ ಹೇಳಿದರು; ಸಾಮ್ಯವಿಲ್ಲದೆ ಯೇಸು ಅವರಿಗೆ ಏನೂ ಹೇಳುತ್ತಿರಲಿಲ್ಲ.
[35] ಹೀಗೆ ಒಬ್ಬ ಪ್ರವಾದಿಯ ಮೂಲಕ ಹೇಳಿದ ಮಾತು ನೆರವೇರಿತು: “ನಾನು ಸಾಮ್ಯಗಳನ್ನು ಹೇಳುವಂತೆ ನನ್ನ ಬಾಯಿ ತೆರೆಯುವೆನು. ನಾನು ಲೋಕ ಪ್ರಾರಂಭದಿಂದ ಮರೆಯಾದವುಗಳನ್ನು ಪ್ರಕಟಪಡಿಸುವೆನು.”
[36] ತರುವಾಯ ಯೇಸು ಜನಸಮೂಹವನ್ನು ಕಳುಹಿಸಿಬಿಟ್ಟು ಮನೆಯೊಳಕ್ಕೆ ಹೋದರು. ಆಗ ಶಿಷ್ಯರು ಯೇಸುವಿನ ಬಳಿಗೆ ಬಂದು, “ಹೊಲದಲ್ಲಿರುವ ಕಳೆಯ ಸಾಮ್ಯವನ್ನು ನಮಗೆ ವಿವರಿಸಿರಿ,” ಎಂದರು.
[37] ಯೇಸು ಉತ್ತರವಾಗಿ ಅವರಿಗೆ, “ಒಳ್ಳೆಯ ಬೀಜ ಬಿತ್ತುವವನು ಮನುಷ್ಯಪುತ್ರನು.
[38] ಹೊಲವು ಈ ಲೋಕ; ಒಳ್ಳೆಯ ಬೀಜವು ದೇವರ ರಾಜ್ಯದ ಮಕ್ಕಳು; ಕಳೆಯು ಕೆಡುಕನ ಮಕ್ಕಳಾಗಿದ್ದಾರೆ.
[39] ಅದನ್ನು ಬಿತ್ತಿದ ವೈರಿಯು ಸೈತಾನನೇ. ಸುಗ್ಗಿಯ ಕಾಲವು ಲೋಕಾಂತ್ಯವಾಗಿದೆ. ಕೊಯ್ಯುವವರು ದೇವದೂತರೇ.
[40] “ಹೇಗೆ ಕಳೆಯನ್ನು ಕಿತ್ತು ಬೆಂಕಿಯಲ್ಲಿ ಸುಡುವರೋ, ಹಾಗೆಯೇ ಈ ಲೋಕಾಂತ್ಯದಲ್ಲಿ ಆಗುವುದು.
[41] ಮನುಷ್ಯಪುತ್ರನು ತನ್ನ ದೂತರನ್ನು ಕಳುಹಿಸುವನು. ಅವರು ಪಾಪಕ್ಕೆ ಆತಂಕವಾದ ಎಲ್ಲವನ್ನೂ, ಕೇಡುಮಾಡುವ ಎಲ್ಲರನ್ನೂ ಆತನ ರಾಜ್ಯದೊಳಗಿಂದ ಕೂಡಿಸಿ,
[42] ದೂತರು ಅವರನ್ನು ಅಗ್ನಿಕುಂಡದಲ್ಲಿ ಹಾಕುವರು. ಅಲ್ಲಿ ಗೋಳಾಟವೂ ಹಲ್ಲು ಕಡಿಯುವಿಕೆಯೂ ಇರುವವು.
[43] ಆಗ ನೀತಿವಂತರು ತಮ್ಮ ತಂದೆಯ ರಾಜ್ಯದಲ್ಲಿ ಸೂರ್ಯನಂತೆ ಪ್ರಕಾಶಿಸುವರು. ಕೇಳುವುದಕ್ಕೆ ಕಿವಿಯುಳ್ಳವರು ಕೇಳಲಿ.
[44] “ಪರಲೋಕ ರಾಜ್ಯವು ಹೊಲದಲ್ಲಿ ಹೂಳಿಟ್ಟ ನಿಕ್ಷೇಪಕ್ಕೆ ಹೋಲಿಕೆಯಾಗಿದೆ. ಅದನ್ನು ಒಬ್ಬ ಮನುಷ್ಯನು ಕಂಡುಕೊಂಡು ಮುಚ್ಚಿಟ್ಟು, ಅದರ ಸಂತೋಷದ ನಿಮಿತ್ತ ಹೊರಟುಹೋಗಿ, ತನಗಿದ್ದದ್ದನ್ನೆಲ್ಲಾ ಮಾರಿ ಆ ಹೊಲವನ್ನು ಕೊಂಡುಕೊಳ್ಳುತ್ತಾನೆ.
[45] “ಪರಲೋಕ ರಾಜ್ಯವು ಒಳ್ಳೆಯ ಮುತ್ತುಗಳನ್ನು ಹುಡುಕುವ ವ್ಯಾಪಾರಸ್ಥನಿಗೆ ಹೋಲಿಕೆಯಾಗಿದೆ.
[46] ಅವನು ಬಹು ಬೆಲೆಯುಳ್ಳ ಒಂದು ಮುತ್ತನ್ನು ಕಂಡು, ಹೊರಟುಹೋಗಿ ತನಗಿದ್ದದ್ದನ್ನೆಲ್ಲಾ ಮಾರಿ ಅದನ್ನು ಕೊಂಡುಕೊಳ್ಳುತ್ತಾನೆ.
[47] “ಪರಲೋಕ ರಾಜ್ಯವು, ಸರೋವರದಲ್ಲಿ ಬೀಸಲಾಗಿ ಎಲ್ಲಾ ತರವಾದ ಮೀನುಗಳನ್ನು ಕೂಡಿಸಿದ ಬಲೆಗೆ ಹೋಲಿಕೆಯಾಗಿದೆ.
[48] ಬಲೆ ತುಂಬಿದಾಗ, ಬೆಸ್ತರು ಅದನ್ನು ದಡಕ್ಕೆ ಎಳೆದು ಕೂತುಕೊಂಡು ಒಳ್ಳೆಯವುಗಳನ್ನು ಬುಟ್ಟಿಗಳಲ್ಲಿ ತುಂಬಿಸಿ, ಕೆಟ್ಟವುಗಳನ್ನು ಹೊರಗೆ ಬಿಸಾಡುತ್ತಾರೆ.
[49] ಹಾಗೆಯೇ ಲೋಕಾಂತ್ಯದಲ್ಲಿ ಇರುವುದು. ದೇವದೂತರು ಹೊರಟುಬಂದು ನೀತಿವಂತರ ಮಧ್ಯದಿಂದ ಕೆಡುಕರನ್ನು ಪ್ರತ್ಯೇಕಿಸಿ,
[50] ಅವರನ್ನು ಅಗ್ನಿಕುಂಡದಲ್ಲಿ ಹಾಕುವರು. ಅಲ್ಲಿ ಗೋಳಾಟವೂ ಹಲ್ಲು ಕಡಿಯುವಿಕೆಯೂ ಇರುವವು,” ಎಂದು ಹೇಳಿದರು.
[51] ಯೇಸು ಶಿಷ್ಯರಿಗೆ, “ಇವುಗಳನ್ನೆಲ್ಲಾ ನೀವು ಗ್ರಹಿಸಿದ್ದೀರಾ?” ಎಂದು ಕೇಳಿದರು. ಅದಕ್ಕೆ, ಅವರು ಯೇಸುವಿಗೆ, “ಹೌದು,” ಎಂದು ಹೇಳಿದರು.
[52] ಯೇಸು ಅವರಿಗೆ, “ಆದಕಾರಣ ಪರಲೋಕ ರಾಜ್ಯದ ಶಿಷ್ಯನಾಗಿರುವ ಪ್ರತಿಯೊಬ್ಬ ನಿಯಮ ಬೋಧಕನು, ತನ್ನ ಬೊಕ್ಕಸದೊಳಗಿಂದ ಹೊಸ ಮತ್ತು ಹಳೆಯ ವಸ್ತುಗಳನ್ನು ಹೊರಗೆ ತರುವ ಒಬ್ಬ ಮನೆ ಯಜಮಾನನಿಗೆ ಹೋಲಿಕೆಯಾಗಿದ್ದಾನೆ,” ಎಂದರು.
[53] ಈ ಸಾಮ್ಯಗಳನ್ನು ಮುಗಿಸಿದ ತರುವಾಯ ಯೇಸು ಅಲ್ಲಿಂದ ಹೊರಟು ಹೋದರು.
[54] ಯೇಸು ತಮ್ಮ ಸ್ವಂತ ಊರಿಗೆ ಬಂದು ಅವರ ಸಭಾಮಂದಿರದಲ್ಲಿ ಅವರಿಗೆ ಬೋಧನೆ ಮಾಡಲು ಪ್ರಾರಂಭಿಸಲು, ಅವರು ವಿಸ್ಮಯಗೊಂಡು, “ಈ ಜ್ಞಾನವೂ ಈ ಮಹತ್ಕಾರ್ಯಗಳೂ ಈತನಿಗೆ ಎಲ್ಲಿಂದ ಬಂದವು?
[55] ಈತನು ಬಡಗಿಯ ಪುತ್ರನಲ್ಲವೇ? ಮರಿಯಳೆಂಬುವಳು ಈತನ ತಾಯಿಯಲ್ಲವೇ? ಯಾಕೋಬ, ಯೋಸೇಫ, ಸೀಮೋನ, ಯೂದ ಎಂಬುವರು ಈತನ ತಮ್ಮಂದಿರಲ್ಲವೇ?
[56] ಈತನ ತಂಗಿಯರೆಲ್ಲರೂ ನಮ್ಮೊಂದಿಗೆ ಇದ್ದಾರಲ್ಲವೇ? ಹಾಗಾದರೆ, ಇವೆಲ್ಲವು ಈತನಿಗೆ ಎಲ್ಲಿಂದ ಬಂದವು?” ಎಂದು ಮಾತನಾಡಿಕೊಂಡರು.
[57] ಅವರು ಯೇಸುವನ್ನು ತಾತ್ಸಾರ ಮಾಡಿದರು. ಆದರೆ ಯೇಸು ಅವರಿಗೆ, “ಪ್ರವಾದಿಗೆ ತನ್ನ ಸ್ವಂತ ಊರಿನಲ್ಲಿ ಹಾಗೂ ತನ್ನ ಸ್ವಂತ ಮನೆಯಲ್ಲಿ ಮಾತ್ರ ಮರ್ಯಾದೆ ಇರುವುದಿಲ್ಲ,” ಎಂದರು.
[58] ಯೇಸು ಅವರ ಅಪನಂಬಿಕೆಯ ದೆಸೆಯಿಂದ ಅಲ್ಲಿ ಬಹಳ ಮಹತ್ಕಾರ್ಯಗಳನ್ನು ಮಾಡಲಿಲ್ಲ.