Skip to content
Opens in a new window
Listen to this chapter • 4:38

[1] ಕ್ರಿಸ್ತ ಯೇಸುವಿನ ವಂಶಾವಳಿಯ ದಾಖಲೆ. ಯೇಸು ದಾವೀದನ ವಂಶದವರು, ದಾವೀದನು ಅಬ್ರಹಾಮನ ವಂಶದವನು:

[2] ಅಬ್ರಹಾಮನು ಇಸಾಕನ ತಂದೆ, ಇಸಾಕನು ಯಾಕೋಬನ ತಂದೆ, ಯಾಕೋಬನು ಯೂದ ಮತ್ತು ಅವನ ಅಣ್ಣ ತಮ್ಮಂದಿರ ತಂದೆ,

[3] ಯೂದನು ಪೆರೆಸ ಮತ್ತು ಜೆರಹನ ತಂದೆ, ತಾಮಾರಳು ಇವರ ತಾಯಿ, ಪೆರೆಸನು ಹೆಚ್ರೋನನ ತಂದೆ, ಹೆಚ್ರೋನನು ಅರಾಮನ ತಂದೆ,

[4] ಅರಾಮನು ಅಮ್ಮೀನಾದಾಬನ ತಂದೆ, ಅಮ್ಮೀನಾದಾಬನು ನಹಶೋನನ ತಂದೆ, ನಹಶೋನನು ಸಲ್ಮೋನನ ತಂದೆ,

[5] ಸಲ್ಮೋನನು ಬೋವಜನ ತಂದೆ, ಬೋವಜನ ತಾಯಿ ರಾಹಾಬಳು, ಬೋವಜನು ಓಬೇದನ ತಂದೆ, ಓಬೇದನ ತಾಯಿ ರೂತಳು, ಓಬೇದನು ಇಷಯನ ತಂದೆ,

[6] ಇಷಯನು ರಾಜನಾದ ದಾವೀದನ ತಂದೆ. ದಾವೀದನು ಸೊಲೊಮೋನನ ತಂದೆ, ಇವನ ತಾಯಿ ಊರೀಯನ ಹೆಂಡತಿಯಾಗಿದ್ದವಳು,

[7] ಸೊಲೊಮೋನನು ರೆಹಬ್ಬಾಮನ ತಂದೆ, ರೆಹಬ್ಬಾಮನು ಅಬೀಯನ ತಂದೆ, ಅಬೀಯನು ಆಸನ ತಂದೆ,

[8] ಆಸನು ಯೆಹೋಷಾಫಾಟನ ತಂದೆ, ಯೆಹೋಷಾಫಾಟನು ಯೆಹೋರಾಮನ ತಂದೆ, ಯೆಹೋರಾಮನು ಉಜ್ಜೀಯನ ತಂದೆ,

[9] ಉಜ್ಜೀಯನು ಯೋತಾಮನ ತಂದೆ, ಯೋತಾಮನು ಆಹಾಜನ ತಂದೆ, ಆಹಾಜನು ಹಿಜ್ಕೀಯನ ತಂದೆ,

[10] ಹಿಜ್ಕೀಯನು ಮನಸ್ಸೆಯ ತಂದೆ, ಮನಸ್ಸೆಯು ಆಮೋನನ ತಂದೆ, ಆಮೋನನು ಯೋಷೀಯನ ತಂದೆ,

[11] ಯೋಷೀಯನಿಗೆ ಯೆಕೊನ್ಯ ಮತ್ತು ಅವನ ಸಹೋದರರು ಹುಟ್ಟಿದರು, ಈ ಸಮಯದಲ್ಲಿಯೇ ಯೆಹೂದ್ಯರನ್ನು ಬಾಬಿಲೋನಿಗೆ ಸೆರೆ ಒಯ್ದದ್ದು.

[12] ಬಾಬಿಲೋನಿಗೆ ಸೆರೆಹೋದ ಮೇಲೆ: ಯೆಕೊನ್ಯನು ಶೆಯಲ್ತೀಯೇಲನನ್ನು ಪಡೆದನು, ಶೆಯಲ್ತೀಯೇಲನು ಜೆರುಬ್ಬಾಬೆಲನ ತಂದೆ,

[13] ಜೆರುಬ್ಬಾಬೆಲನು ಅಬಿಹೂದನ ತಂದೆ, ಅಬಿಹೂದನು ಎಲಿಯಕೀಮನ ತಂದೆ, ಎಲಿಯಕೀಮನು ಅಜೋರನ ತಂದೆ,

[14] ಅಜೋರನು ಸದೋಕನ ತಂದೆ, ಸದೋಕನು ಅಖೀಮನ ತಂದೆ, ಅಖೀಮನು ಎಲಿಹೂದನ ತಂದೆ,

[15] ಎಲಿಹೂದನು ಎಲಿಯಾಜರನ ತಂದೆ, ಎಲಿಯಾಜರನು ಮತ್ತಾನನ ತಂದೆ, ಮತ್ತಾನನು ಯಾಕೋಬನ ತಂದೆ,

[16] ಯಾಕೋಬನು ಯೋಸೇಫನ ತಂದೆ, ಯೋಸೇಫನು ಮರಿಯಳ ಪತಿ, ಮರಿಯಳು ಕ್ರಿಸ್ತ ಎಂದು ಕರೆಯಲಾದ, ಯೇಸುಸ್ವಾಮಿಯ ತಾಯಿ.

[17] ಈ ರೀತಿಯಲ್ಲಿ ಅಬ್ರಹಾಮನಿಂದ ದಾವೀದನವರೆಗೆ ಹದಿನಾಲ್ಕು ತಲೆಮಾರುಗಳು, ದಾವೀದನಿಂದ ಬಾಬಿಲೋನಿಗೆ ಸೆರೆ ಹೋಗುವವರೆಗೆ ಹದಿನಾಲ್ಕು ತಲೆಮಾರುಗಳು, ಬಾಬಿಲೋನಿಗೆ ಸೆರೆಹೋದ ದಿನದಿಂದ ಕ್ರಿಸ್ತರವರೆಗೆ ಹದಿನಾಲ್ಕು ತಲೆಮಾರುಗಳು.

[18] ಕ್ರಿಸ್ತ ಯೇಸುವಿನ ಜನನದ ವಿವರ: ಯೇಸುವಿನ ತಾಯಿ ಮರಿಯಳನ್ನು ಯೋಸೇಫನಿಗೆ ನಿಶ್ಚಯ ಮಾಡಿದ್ದರು, ಆದರೆ ಅವರಿಬ್ಬರು ಕೂಡಿಬಾಳುವುದಕ್ಕಿಂತ ಮುಂಚೆಯೇ, ಮರಿಯಳು ಪವಿತ್ರಾತ್ಮರಿಂದ ಗರ್ಭಧರಿಸಿರುವುದು ತಿಳಿದುಬಂತು.

[19] ಯೋಸೇಫನು ನೀತಿವಂತನಾಗಿದ್ದರಿಂದ, ಆಕೆಯನ್ನು ಬಹಿರಂಗವಾಗಿ ಅವಮಾನ ಮಾಡುವುದಕ್ಕೆ ಮನಸ್ಸಿಲ್ಲದೆ, ಆಕೆಯನ್ನು ರಹಸ್ಯವಾಗಿ ಬಿಟ್ಟು ಬಿಡಬೇಕೆಂದಿದ್ದನು.

[20] ಅವನು ಹೀಗೆ ಯೋಚಿಸುತ್ತಿದ್ದಾಗ, ಕರ್ತನ ದೂತನು ಕನಸಿನಲ್ಲಿ ಅವನಿಗೆ ಪ್ರತ್ಯಕ್ಷನಾಗಿ, “ದಾವೀದನ ವಂಶದ ಯೋಸೇಫನೇ, ಮರಿಯಳನ್ನು ನಿನ್ನ ಹೆಂಡತಿಯನ್ನಾಗಿ ಸ್ವೀಕರಿಸಲು ಅಂಜಬೇಡ. ಆಕೆ ಗರ್ಭವತಿಯಾಗಿರುವುದು ಪವಿತ್ರಾತ್ಮರಿಂದಲೇ.

[21] ಅವಳು ಒಬ್ಬ ಮಗನನ್ನು ಹೆರುವಳು, ನೀನು ಆತನಿಗೆ, ‘ಯೇಸು’ ಎಂದು ಹೆಸರಿಡಬೇಕು. ಏಕೆಂದರೆ ಅವರೇ ತಮ್ಮ ಜನರನ್ನು ಅವರ ಪಾಪಗಳಿಂದ ರಕ್ಷಿಸುವರು,” ಎಂದು ಹೇಳಿದನು.

[22] ದೇವರು ತಮ್ಮ ಪ್ರವಾದಿಯ ಮುಖಾಂತರ ಹೇಳಿದ ಈ ಮಾತು ನೆರವೇರುವಂತೆ ಇದೆಲ್ಲಾ ನಡೆಯಿತು:

[23] “ಇಗೋ ಒಬ್ಬ ಕನ್ನಿಕೆಯು ಗರ್ಭಿಣಿಯಾಗಿ ಮಗನನ್ನು ಹೆರುವಳು, ಆ ಮಗುವಿಗೆ, ‘ಇಮ್ಮಾನುಯೇಲ್’ ಎಂದು ಹೆಸರಿಡುವರು.” ಈ ಹೆಸರಿನ ಅರ್ಥ, “ದೇವರು ನಮ್ಮ ಸಂಗಡ ಇದ್ದಾರೆ,” ಎಂಬುದು.

[24] ಯೋಸೇಫನು ನಿದ್ದೆಯಿಂದ ಎದ್ದ ಮೇಲೆ, ಕರ್ತನ ದೂತನು ಆಜ್ಞಾಪಿಸಿದಂತೆ ಮರಿಯಳನ್ನು ತನ್ನ ಹೆಂಡತಿಯನ್ನಾಗಿ ಸ್ವೀಕರಿಸಿಕೊಂಡನು.

[25] ಆದರೆ ಅವಳು ಮಗನನ್ನು ಹೆರುವತನಕ ಯೋಸೇಫನು ಆಕೆಯೊಂದಿಗೆ ದಾಂಪತ್ಯ ಜೀವನ ಮಾಡಲಿಲ್ಲ. ಯೋಸೇಫನು ಆ ಮಗುವಿಗೆ “ಯೇಸು” ಎಂದು ಹೆಸರಿಟ್ಟನು.

ಮತ್ತಾಯ — Chapters