[1] ಯೇಸು ಈ ಮಾತುಗಳನ್ನೆಲ್ಲಾ ಹೇಳಿ ಮುಗಿಸಿದ ನಂತರ ತಮ್ಮ ಶಿಷ್ಯರಿಗೆ,
[2] “ಎರಡು ದಿವಸಗಳಾದ ಮೇಲೆ ಪಸ್ಕಹಬ್ಬ ಇರುವುದೆಂದು ನೀವು ಬಲ್ಲಿರಿ. ಆಗ ಮನುಷ್ಯಪುತ್ರನಾದ ನನ್ನನ್ನು ಶಿಲುಬೆಗೆ ಹಾಕಲು ಹಿಡಿದುಕೊಡುವರು,” ಎಂದರು.
[3] ಆಗ ಮುಖ್ಯಯಾಜಕರೂ ಜನರ ಹಿರಿಯರೂ ಒಟ್ಟಾಗಿ ಸೇರಿ, ಕಾಯಫನೆಂಬ ಮಹಾಯಾಜಕನ ಅರಮನೆಗೆ ಬಂದು
[4] ತಾವು ಕುಯುಕ್ತಿಯಿಂದ ಯೇಸುವನ್ನು ಹಿಡಿದು ಕೊಲ್ಲಬೇಕೆಂದು ಆಲೋಚನೆ ಮಾಡಿಕೊಂಡರು.
[5] ಆದರೆ ಅವರು, “ಜನರಲ್ಲಿ ಗದ್ದಲವಾದೀತು, ಹಬ್ಬದಲ್ಲಿ ಬೇಡ,” ಎಂದರು.
[6] ಯೇಸು ಬೇಥಾನ್ಯದಲ್ಲಿ ಕುಷ್ಠರೋಗಿಯಾದ ಸೀಮೋನನ ಮನೆಯಲ್ಲಿದ್ದರು.
[7] ಯೇಸು ಅಲ್ಲಿ ಊಟಕ್ಕೆ ಕುಳಿತಿದ್ದಾಗ ಒಬ್ಬ ಸ್ತ್ರೀಯು ಬಹು ಬೆಲೆಯುಳ್ಳ ಸುಗಂಧ ತೈಲದ ಭರಣಿಯೊಂದಿಗೆ ಯೇಸುವಿನ ಬಳಿಗೆ ಬಂದು, ಅದನ್ನು ಅವರ ತಲೆಯ ಮೇಲೆ ಸುರಿದಳು.
[8] ಯೇಸುವಿನ ಶಿಷ್ಯರು ಇದನ್ನು ಕಂಡು ಕೋಪಗೊಂಡು, “ಏಕೆ ಈ ವ್ಯರ್ಥ ಖರ್ಚು?
[9] ಈ ತೈಲವನ್ನು ಹೆಚ್ಚಿನ ಬೆಲೆಗೆ ಮಾರಿ ಬಡವರಿಗೆ ಕೊಡಬಹುದಾಗಿತ್ತಲ್ಲಾ?” ಎಂದರು.
[10] ಯೇಸು ಅದನ್ನು ತಿಳಿದವರಾಗಿ ಅವರಿಗೆ, “ನೀವು ಏಕೆ ಈ ಸ್ತ್ರೀಗೆ ತೊಂದರೆಪಡಿಸುತ್ತೀರಿ? ಈಕೆ ನನಗೆ ಒಳ್ಳೆಯ ಕಾರ್ಯವನ್ನು ಮಾಡಿದ್ದಾಳೆ.
[11] ಬಡವರು ಯಾವಾಗಲೂ ನಿಮ್ಮ ಸಂಗಡ ಇರುತ್ತಾರೆ. ಆದರೆ ನಾನು ಯಾವಾಗಲೂ ನಿಮ್ಮ ಸಂಗಡ ಇರುವುದಿಲ್ಲ.
[12] ಈಕೆ ಈ ತೈಲವನ್ನು ನನ್ನ ದೇಹದ ಮೇಲೆ ಸುರಿದದ್ದರಿಂದ, ನನ್ನ ಶವಸಂಸ್ಕಾರಕ್ಕೆ ಸಿದ್ಧಮಾಡಿದ್ದಾಳೆ.
[13] ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ಲೋಕದಾದ್ಯಂತ ಎಲ್ಲೆಲ್ಲಿ ಸುವಾರ್ತೆಯು ಸಾರಲಾಗುವದೋ, ಅಲ್ಲೆಲ್ಲಾ ಈ ಸ್ತ್ರೀಯು ಮಾಡಿದ್ದನ್ನು ಸಹ ಈಕೆಯ ಜ್ಞಾಪಕಾರ್ಥವಾಗಿ ಹೇಳಲಾಗುವುದು,” ಎಂದರು.
[14] ಆಗ ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದ ಇಸ್ಕರಿಯೋತ ಎಂಬುವನು ಮುಖ್ಯಯಾಜಕರ ಬಳಿಗೆ ಹೋಗಿ,
[15] “ನಾನು ಆತನನ್ನು ನಿಮಗೆ ಒಪ್ಪಿಸಿಕೊಟ್ಟರೆ ನೀವು ನನಗೆ ಏನು ಕೊಡುತ್ತೀರಿ?” ಎಂದನು. ಆಗ ಅವರು ಅವನಿಗೆ ಮೂವತ್ತು ಬೆಳ್ಳಿಯ ನಾಣ್ಯಗಳನ್ನು ಎಣಿಸಿ ಕೊಟ್ಟರು.
[16] ಅಂದಿನಿಂದ ಯೂದನು ಯೇಸುವನ್ನು ಹಿಡಿದುಕೊಡುವುದಕ್ಕೆ ಸಂದರ್ಭವನ್ನು ಕಾಯುತ್ತಿದ್ದನು.
[17] ಹುಳಿಯಿಲ್ಲದ ರೊಟ್ಟಿಯ ಹಬ್ಬದ ಮೊದಲನೆಯ ದಿನದಲ್ಲಿ ಶಿಷ್ಯರು ಯೇಸುವಿನ ಬಳಿಗೆ ಬಂದು, “ನೀವು ಪಸ್ಕದ ಊಟ ಮಾಡಲು ನಾವು ನಿಮಗಾಗಿ ಎಲ್ಲಿ ಸಿದ್ಧಮಾಡಬೇಕೆಂದು ಬಯಸುತ್ತೀರಿ?” ಎಂದು ಕೇಳಿದರು.
[18] ಅದಕ್ಕೆ ಯೇಸು, “ನೀವು ಪಟ್ಟಣದೊಳಕ್ಕೆ ಇಂಥವನ ಬಳಿಗೆ ಹೋಗಿ, ‘ನನ್ನ ಸಮಯವು ಸಮೀಪವಾಗಿದೆ. ನನ್ನ ಶಿಷ್ಯರ ಜೊತೆಗೆ ನಿನ್ನ ಮನೆಯಲ್ಲಿ ಪಸ್ಕವನ್ನು ಆಚರಿಸುತ್ತೇನೆಂದು ಬೋಧಕರು ಕೇಳುತ್ತಾರೆ’ ಎಂಬುದಾಗಿ ಅವನಿಗೆ ಹೇಳಿರಿ,” ಎಂದರು.
[19] ಯೇಸು ಅವರಿಗೆ ಆಜ್ಞಾಪಿಸಿದಂತೆ ಶಿಷ್ಯರು ಪಸ್ಕವನ್ನು ಸಿದ್ಧಮಾಡಿದರು.
[20] ಸಂಜೆಯಾದಾಗ, ಯೇಸು ಹನ್ನೆರಡು ಮಂದಿ ಶಿಷ್ಯರೊಂದಿಗೆ ಊಟಕ್ಕೆ ಕುಳಿತುಕೊಂಡರು.
[21] ಅವರು ಊಟಮಾಡುತ್ತಿದ್ದಾಗ ಯೇಸು, “ನಾನು ನಿಮಗೆ ನಿಜವಾಗಿ ಹೇಳುತ್ತೇನೆ, ನಿಮ್ಮಲ್ಲಿ ಒಬ್ಬನು ನನಗೆ ದ್ರೋಹ ಮಾಡುವನು,” ಎಂದರು.
[22] ಆಗ ಅವರು ದುಃಖಪಟ್ಟು, “ಕರ್ತನೇ, ಅವನು ನಾನಲ್ಲವಲ್ಲಾ?” ಎಂದು ಅವರಲ್ಲಿ ಪ್ರತಿಯೊಬ್ಬರೂ ಯೇಸುವನ್ನು ಕೇಳಲಾರಂಭಿಸಿದರು.
[23] ಅದಕ್ಕೆ ಯೇಸು ಉತ್ತರವಾಗಿ, “ನನ್ನ ಸಂಗಡ ಪಾತ್ರೆಯಲ್ಲಿ ಕೈ ಅದ್ದಿದವನೇ ನನಗೆ ದ್ರೋಹ ಮಾಡುವನು.
[24] ಮನುಷ್ಯಪುತ್ರನಾದ ನನ್ನ ವಿಷಯದಲ್ಲಿ ಬರೆದಿರುವ ಪ್ರಕಾರ ಹೊರಟುಹೋಗುತ್ತೇನೆ. ಆದರೆ ಮನುಷ್ಯಪುತ್ರನಾದ ನನಗೆ ಯಾವನು ದ್ರೋಹಬಗೆಯುತ್ತಾನೋ ಆ ಮನುಷ್ಯನಿಗೆ ಕಷ್ಟ! ಆ ಮನುಷ್ಯನು ಹುಟ್ಟದೆ ಹೋಗಿದ್ದರೆ ಅವನಿಗೆ ಎಷ್ಟೋ ಒಳ್ಳೆಯದಾಗುತ್ತಿತ್ತು,” ಎಂದರು.
[25] ಆಗ ಯೇಸುವನ್ನು ಹಿಡಿದುಕೊಡಬೇಕೆಂದಿದ್ದ ಯೂದನು, “ಗುರುವೇ, ಅವನು ನಾನಲ್ಲವಲ್ಲಾ?” ಎಂದನು. “ನೀನೇ ಹೇಳಿದ್ದೀ,” ಎಂದು ಯೇಸು ಉತ್ತರಕೊಟ್ಟರು.
[26] ಅವರು ಊಟಮಾಡುತ್ತಿರುವಾಗ, ಯೇಸು ರೊಟ್ಟಿಯನ್ನು ತೆಗೆದುಕೊಂಡು ಅದನ್ನು ಆಶೀರ್ವದಿಸಿ, ಮುರಿದು ತಮ್ಮ ಶಿಷ್ಯರಿಗೆ ಕೊಟ್ಟು, “ತೆಗೆದುಕೊಳ್ಳಿರಿ, ತಿನ್ನಿರಿ, ಇದು ನನ್ನ ದೇಹ,” ಎಂದರು.
[27] ಪಾತ್ರೆಯನ್ನು ತೆಗೆದುಕೊಂಡು ದೇವರಿಗೆ ಕೃತಜ್ಞತಾಸ್ತುತಿ ಮಾಡಿ ಅವರಿಗೆ ಕೊಟ್ಟು, “ನೀವೆಲ್ಲರೂ ಇದರಲ್ಲಿರುವುದನ್ನು ಕುಡಿಯಿರಿ.
[28] ಇದು ಬಹುಜನರ ಪಾಪಗಳ ಪರಿಹಾರಕ್ಕೋಸ್ಕರ ಸುರಿಸಲಾಗುವ ಹೊಸ ಒಡಂಬಡಿಕೆಯ ನನ್ನ ರಕ್ತ.
[29] ನಾನು ನಿಮಗೆ ಹೇಳುವುದೇನೆಂದರೆ, ಇಂದಿನಿಂದ ನನ್ನ ತಂದೆಯ ರಾಜ್ಯದಲ್ಲಿ ನಿಮ್ಮೊಂದಿಗೆ ಹೊಸದಾಗಿ ಕುಡಿಯುವ ಆ ದಿನದವರೆಗೆ ನಾನು ಈ ದ್ರಾಕ್ಷಾರಸವನ್ನು ಕುಡಿಯುವುದೇ ಇಲ್ಲ,” ಎಂದರು.
[30] ಬಳಿಕ ಅವರೆಲ್ಲರು ಒಂದು ಕೀರ್ತನೆ ಹಾಡಿ ಓಲಿವ್ ಗುಡ್ಡಕ್ಕೆ ಹೊರಟು ಹೋದರು.
[31] ಆಗ ಯೇಸು ಅವರಿಗೆ, “ನೀವೆಲ್ಲರೂ ಈ ರಾತ್ರಿ ನನ್ನನ್ನು ಬಿಟ್ಟು ಓಡಿಹೋಗುವಿರಿ. ಪವಿತ್ರ ವೇದದಲ್ಲಿ ಹೀಗೆ ಬರೆದಿದೆ: “ ‘ಏಕೆಂದರೆ ನಾನು ಕುರುಬನನ್ನು ಹೊಡೆಯುವೆನು, ಮಂದೆಯ ಕುರಿಗಳು ಚದರಿಹೋಗುವುವು,’
[32] ಆದರೆ ನಾನು ಎದ್ದ ಮೇಲೆ, ನಿಮಗಿಂತ ಮುಂದಾಗಿ ಗಲಿಲಾಯಕ್ಕೆ ಹೋಗುವೆನು,” ಎಂದು ಹೇಳಿದರು.
[33] ಆಗ ಪೇತ್ರನು ಯೇಸುವಿಗೆ, “ಎಲ್ಲರೂ ನಿಮ್ಮನ್ನು ಬಿಟ್ಟು ಹೋದರೂ ನಾನು ನಿಮ್ಮನ್ನು ಬಿಟ್ಟು ಹೋಗುವುದಿಲ್ಲ,” ಎಂದನು.
[34] ಯೇಸು ಅವನಿಗೆ, “ಈ ರಾತ್ರಿಯಲ್ಲಿ ಹುಂಜ ಕೂಗುವುದಕ್ಕಿಂತ ಮುಂಚೆ, ನೀನು ಮೂರು ಸಾರಿ ನನ್ನನ್ನು ನಿರಾಕರಿಸುವೆ ಎಂದು ನಾನು ನಿನಗೆ ಸತ್ಯವಾಗಿ ಹೇಳುತ್ತೇನೆ,” ಎಂದರು.
[35] ಅದಕ್ಕೆ ಪೇತ್ರನು ಯೇಸುವಿಗೆ, “ನಾನು ನಿಮ್ಮೊಂದಿಗೆ ಸಾಯಬೇಕಾದರೂ ನಿಮ್ಮನ್ನು ನಿರಾಕರಿಸುವುದೇ ಇಲ್ಲ,” ಎಂದನು. ಅದರಂತೆಯೇ ಉಳಿದ ಶಿಷ್ಯರೆಲ್ಲರೂ ಹೇಳಿದರು.
[36] ತರುವಾಯ ಯೇಸು ತಮ್ಮ ಶಿಷ್ಯರ ಸಂಗಡ ಗೆತ್ಸೇಮನೆ ಎಂಬ ಸ್ಥಳಕ್ಕೆ ಬಂದು ಅವರಿಗೆ, “ನಾನು ಅಲ್ಲಿಗೆ ಹೋಗಿ ಪ್ರಾರ್ಥಿಸುವವರೆಗೆ ನೀವು ಇಲ್ಲೇ ಕುಳಿತುಕೊಳ್ಳಿರಿ,” ಎಂದರು.
[37] ಯೇಸು ತಮ್ಮ ಜೊತೆಯಲ್ಲಿ ಪೇತ್ರನನ್ನೂ ಜೆಬೆದಾಯನ ಇಬ್ಬರು ಪುತ್ರರನ್ನೂ ಕರೆದುಕೊಂಡು ಹೋಗಿ, ದುಃಖಿಸುವುದಕ್ಕೂ ಬಹು ವ್ಯಥೆಪಡುವುದಕ್ಕೂ ಆರಂಭಿಸಿದರು.
[38] ಯೇಸು ಅವರಿಗೆ, “ನನ್ನ ಪ್ರಾಣವು ಸಾಯುವಷ್ಟು ತೀವ್ರವಾದ ದುಃಖಕ್ಕೆ ಒಳಗಾಗಿದೆ. ನೀವು ಇಲ್ಲೇ ಇದ್ದು ನನ್ನೊಡನೆ ಎಚ್ಚರವಾಗಿರಿ,” ಎಂದರು.
[39] ಆಮೇಲೆ ಯೇಸು ಸ್ವಲ್ಪ ಮುಂದಕ್ಕೆ ಹೋಗಿ, ಬೋರಲು ಬಿದ್ದು ಪ್ರಾರ್ಥಿಸುತ್ತಾ, “ನನ್ನ ತಂದೆಯೇ, ಸಾಧ್ಯವಾದರೆ ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಲಿ. ಆದರೂ ನನ್ನ ಚಿತ್ತದಂತಲ್ಲ, ನಿನ್ನ ಚಿತ್ತದಂತೆಯೇ ಆಗಲಿ,” ಎಂದರು.
[40] ತರುವಾಯ ಯೇಸು ಬಂದು, ಶಿಷ್ಯರು ನಿದ್ರೆ ಮಾಡುವುದನ್ನು ಕಂಡು ಪೇತ್ರನಿಗೆ, “ಏನು, ನೀವು ಒಂದು ಗಳಿಗೆಯಾದರೂ ನನ್ನೊಡನೆ ಎಚ್ಚರವಾಗಿರಲಾರಿರಾ?
[41] ನೀವು ಶೋಧನೆಗೆ ಒಳಗಾಗದಂತೆ ಎಚ್ಚರವಾಗಿದ್ದು ಪ್ರಾರ್ಥಿಸಿರಿ. ಆತ್ಮವು ಸಿದ್ಧವಾಗಿದೆ, ಆದರೆ ಶರೀರವು ಬಲಹೀನವಾಗಿದೆ,” ಎಂದು ಹೇಳಿದರು.
[42] ಯೇಸು ಎರಡನೆಯ ಸಾರಿ ಹೋಗಿ, ಪ್ರಾರ್ಥಿಸುತ್ತಾ, “ನನ್ನ ತಂದೆಯೇ ನಾನು ಕುಡಿಯದ ಹೊರತು ಈ ಪಾತ್ರೆಯು ನನ್ನನ್ನು ಬಿಟ್ಟು ಹೋಗಕೂಡದಾಗಿದ್ದರೆ, ನಿನ್ನ ಚಿತ್ತವೇ ಆಗಲಿ,” ಎಂದರು.
[43] ಯೇಸು ಹಿಂತಿರುಗಿದಾಗ, ಅವರು ತಿರುಗಿ ನಿದ್ರೆ ಮಾಡುವುದನ್ನು ಕಂಡರು. ಅವರ ಕಣ್ಣುಗಳು ಭಾರವಾಗಿದ್ದವು.
[44] ಯೇಸು ಅವರನ್ನು ಬಿಟ್ಟು ಹೊರಟುಹೋಗಿ ಮೂರನೆಯ ಸಾರಿ ಅದೇ ಮಾತುಗಳನ್ನು ಪುನಃ ಹೇಳಿ ಪ್ರಾರ್ಥಿಸಿದರು.
[45] ತರುವಾಯ ಯೇಸು ತಮ್ಮ ಶಿಷ್ಯರ ಬಳಿಗೆ ಬಂದು ಅವರಿಗೆ, “ಇನ್ನೂ ವಿಶ್ರಮಿಸುತ್ತಿದ್ದೀರಾ? ಇಗೋ, ಮನುಷ್ಯಪುತ್ರನಾದ ನಾನು ಪಾಪಿಗಳ ಕೈವಶವಾಗುವ ಸಮಯವು ಸಮೀಪಿಸಿದೆ.
[46] ಏಳಿರಿ ಹೋಗೋಣ. ಇಗೋ, ನನಗೆ ದ್ರೋಹಬಗೆಯುವವನು ಸಮೀಪದಲ್ಲಿ ಇದ್ದಾನೆ,” ಎಂದು ಹೇಳಿದರು.
[47] ಯೇಸು ಇನ್ನೂ ಮಾತನಾಡುತ್ತಿರುವಾಗಲೇ, ಹನ್ನೆರಡು ಮಂದಿ ಶಿಷ್ಯರಲ್ಲಿ ಒಬ್ಬನಾದ ಯೂದನು ಬಂದನು. ಮುಖ್ಯಯಾಜಕರ ಮತ್ತು ಜನರ ಹಿರಿಯರ ಕಡೆಯಿಂದ ಬಂದಿದ್ದ ಜನರ ದೊಡ್ಡ ಸಮೂಹವು ಖಡ್ಗ ದೊಣ್ಣೆಗಳನ್ನು ಹಿಡಿದುಕೊಂಡು ಅವನೊಂದಿಗಿತ್ತು.
[48] ಯೇಸುವಿಗೆ ದ್ರೋಹಮಾಡುವುದಕ್ಕಿದ್ದವನು ಅವರಿಗೆ, “ನಾನು ಯಾರಿಗೆ ಮುದ್ದಿಡುತ್ತೇನೋ ಆತನೇ ಯೇಸು; ಆತನನ್ನು ಹಿಡಿಯಿರಿ,” ಎಂದು ಗುರುತು ಹೇಳಿಕೊಟ್ಟಿದ್ದನು.
[49] ಯೂದನು ಬಂದ ಕೂಡಲೇ ನೇರವಾಗಿ ಯೇಸುವಿನ ಕಡೆಗೆ ಹೋಗಿ, “ಗುರುವೇ, ನಮಸ್ಕಾರ,” ಎಂದು ಹೇಳಿ ಅವರಿಗೆ ಮುದ್ದಿಟ್ಟನು.
[50] ಅದಕ್ಕೆ ಯೇಸು ಅವನಿಗೆ, “ಸ್ನೇಹಿತನೇ, ನೀನು ಮಾಡಲು ಬಂದ ಕೆಲಸವನ್ನು ಮುಗಿಸು,” ಎಂದು ಹೇಳಿದರು. ಕೂಡಲೇ ಆ ಜನರು ಮುಂದೆ ಬಂದು, ಯೇಸುವನ್ನು ಹಿಡಿದು ಬಂಧಿಸಿದರು.
[51] ಆಗ, ಯೇಸುವಿನ ಸಂಗಡ ಇದ್ದವರಲ್ಲಿ ಒಬ್ಬನು ಕೈಚಾಚಿ ತನ್ನ ಖಡ್ಗವನ್ನು ಹಿರಿದು, ಮಹಾಯಾಜಕನ ಆಳನ್ನು ಹೊಡೆದು ಅವನ ಕಿವಿಯನ್ನು ಕಡಿದುಹಾಕಿದನು.
[52] ಆಗ ಯೇಸು ಅವನಿಗೆ, “ನಿನ್ನ ಖಡ್ಗವನ್ನು ತಿರುಗಿ ಅದರ ಒರೆಯಲ್ಲಿ ಹಾಕು. ಖಡ್ಗವನ್ನು ಹಿಡಿದವರೆಲ್ಲರೂ ಖಡ್ಗದಿಂದ ನಾಶವಾಗುವರು.
[53] ನಾನು ಈಗ ನನ್ನ ತಂದೆಗೆ ಕೇಳಿಕೊಂಡರೆ ಅವರು ಈಗಲೇ ಹನ್ನೆರಡು ದಳಗಳಿಗಿಂತ ಹೆಚ್ಚಾದ ದೂತರನ್ನು ನನಗೆ ಕೊಡಲಾರರೆಂದು ನೀನು ನೆನಸುತ್ತೀಯಾ?
[54] ಹಾಗಾದರೆ ಇವುಗಳು ಹೀಗೆಯೇ ಆಗಬೇಕೆಂಬ ಪವಿತ್ರ ವೇದದ ವಾಕ್ಯಗಳು ನೆರವೇರುವುದು ಹೇಗೆ?” ಎಂದರು.
[55] ಅದೇ ಗಳಿಗೆಯಲ್ಲಿ ಯೇಸು ಜನಸಮೂಹಕ್ಕೆ, “ಒಬ್ಬ ಕಳ್ಳನನ್ನು ಹಿಡಿಯುವುದಕ್ಕೆ ಬರುವಂತೆ ಖಡ್ಗಗಳೊಂದಿಗೆ ದೊಣ್ಣೆಗಳೊಂದಿಗೆ ನನ್ನನ್ನು ಹಿಡಿಯುವುದಕ್ಕಾಗಿ ಬಂದಿರಾ? ನಾನು ದಿನಾಲು ನಿಮ್ಮ ಸಂಗಡ ದೇವಾಲಯದಲ್ಲಿ ಕುಳಿತುಕೊಂಡು ಬೋಧಿಸುತ್ತಿದ್ದಾಗ, ನೀವು ನನ್ನನ್ನು ಹಿಡಿಯಲಿಲ್ಲ.
[56] ಆದರೆ ಪವಿತ್ರ ವೇದದ ಪ್ರವಾದನೆಗಳು ನೆರವೇರುವಂತೆ ಇದೆಲ್ಲಾ ಆಯಿತು,” ಎಂದು ಹೇಳಿದರು. ಆಗ ಶಿಷ್ಯರೆಲ್ಲರೂ ಯೇಸುವನ್ನು ಬಿಟ್ಟು ಓಡಿಹೋದರು.
[57] ಯೇಸುವನ್ನು ಹಿಡಿದಿದ್ದವರು ಅವರನ್ನು ಮಹಾಯಾಜಕನಾದ ಕಾಯಫನ ಬಳಿಗೆ ತೆಗೆದುಕೊಂಡು ಹೋದರು. ಅಲ್ಲಿ ನಿಯಮ ಬೋಧಕರೂ ಹಿರಿಯರೂ ಕೂಡಿ ಬಂದಿದ್ದರು.
[58] ಆದರೆ ಪೇತ್ರನು ಮಹಾಯಾಜಕನ ಅರಮನೆಗೆ ದೂರದಿಂದಲೇ ಯೇಸುವನ್ನು ಹಿಂಬಾಲಿಸಿ, ಒಳಗೆ ಹೋಗಿ ಅಂತ್ಯವೇನಾಗುವುದೆಂದು ನೋಡಲು ಸೇವಕರೊಂದಿಗೆ ಕುಳಿತುಕೊಂಡನು.
[59] ಆಗ ಮುಖ್ಯಯಾಜಕರೂ ಆಲೋಚನಾ ಸಭೆಯವರೆಲ್ಲರೂ ಯೇಸುವಿಗೆ ವಿರೋಧವಾಗಿ ಯೇಸುವನ್ನು ಕೊಲ್ಲಿಸಬೇಕೆಂದು ಸುಳ್ಳುಸಾಕ್ಷಿಗಾಗಿ ಹುಡುಕಿದರು.
[60] ಬಹುಮಂದಿ ಸುಳ್ಳುಸಾಕ್ಷಿಗಳು ಬಂದರೂ ಅವರಿಗೆ ಸರಿಯಾದ ಸಾಕ್ಷ್ಯವು ದೊರೆಯಲಿಲ್ಲ. ಕಡೆಯಲ್ಲಿ ಇಬ್ಬರು ಸುಳ್ಳುಸಾಕ್ಷಿಗಳು ಬಂದು,
[61] “ನಾನು ದೇವಾಲಯವನ್ನು ಕೆಡವಿ ಮೂರು ದಿನಗಳಲ್ಲಿ ಕಟ್ಟಬಲ್ಲೆನೆಂದು ಈತನು ಹೇಳಿದನು,” ಎಂದರು.
[62] ಮಹಾಯಾಜಕನು ಎದ್ದು ಯೇಸುವಿಗೆ, “ನೀನು ಏನೂ ಉತ್ತರ ಕೊಡುವುದಿಲ್ಲವೋ? ಇವರು ನಿನಗೆ ವಿರೋಧವಾಗಿ ಸಾಕ್ಷಿ ಹೇಳುವುದು ಏನು?” ಎಂದು ಕೇಳಿದನು.
[63] ಆದರೆ ಯೇಸು ಸುಮ್ಮನಿದ್ದರು. ಆಗ ಮಹಾಯಾಜಕನು ಉತ್ತರವಾಗಿ ಯೇಸುವಿಗೆ, “ಜೀವಸ್ವರೂಪನಾದ ದೇವರ ಮೇಲೆ ಆಣೆಯಿಟ್ಟು ನಮಗೆ ಇದನ್ನು ಹೇಳು: ನೀನು ದೇವಪುತ್ರನಾದ ಕ್ರಿಸ್ತನೋ?” ಎಂದನು.
[64] ಅದಕ್ಕೆ ಯೇಸು ಅವನಿಗೆ, “ನೀನೇ ಹೇಳಿದ್ದೀ; ಆದರೂ ಇನ್ನು ಮೇಲೆ ಮನುಷ್ಯಪುತ್ರನಾದ ನಾನು ಸರ್ವಶಕ್ತರ ಬಲಗಡೆಯಲ್ಲಿ ಕುಳಿತಿರುವುದನ್ನೂ ಆಕಾಶದ ಮೇಘಗಳ ಮೇಲೆ ಬರುವುದನ್ನೂ ನೀವು ಕಾಣುವಿರಿ ಎಂದು ನಾನು ನಿಮಗೆ ಹೇಳುತ್ತೇನೆ,” ಎಂದರು.
[65] ಆಗ ಮಹಾಯಾಜಕನು ತನ್ನ ಬಟ್ಟೆಗಳನ್ನು ಹರಿದುಕೊಂಡು, “ಈತನು ದೇವದೂಷಣೆ ಮಾಡಿದ್ದಾನೆ. ನಮಗೆ ಇನ್ನು ಹೆಚ್ಚಿನ ಸಾಕ್ಷಿಗಳು ಏತಕ್ಕೆ? ನೋಡಿ, ಈಗ ಈತನ ದೇವದೂಷಣೆಯನ್ನು ನೀವೇ ಕೇಳಿದ್ದೀರಲ್ಲಾ
[66] ನಿಮಗೆ ಹೇಗೆ ತೋರುತ್ತದೆ?” ಎಂದು ಕೇಳಿದ್ದಕ್ಕೆ ಅವರು ಉತ್ತರವಾಗಿ, “ಈತನು ಮರಣಕ್ಕೆ ಪಾತ್ರನು,” ಎಂದರು.
[67] ಆಮೇಲೆ ಅವರು ಯೇಸುವಿನ ಮುಖದ ಮೇಲೆ ಉಗುಳಿ ಅವರನ್ನು ಗುದ್ದಿದರು. ಬೇರೆ ಕೆಲವರು ಅವರ ಕೆನ್ನೆಗೆ ಹೊಡೆದು,
[68] “ಕ್ರಿಸ್ತನೇ, ನಿನ್ನನ್ನು ಹೊಡೆದವರು ಯಾರು? ನಮಗೆ ಪ್ರವಾದನೆ ಹೇಳು,” ಎಂದರು.
[69] ಆಗ ಪೇತ್ರನು ಹೊರಾಂಗಣದಲ್ಲಿ ಕುಳಿತಿರಲು, ಒಬ್ಬ ದಾಸಿಯು ಅವನ ಬಳಿಗೆ ಬಂದು, “ನೀನೂ ಗಲಿಲಾಯದ ಯೇಸುವಿನೊಂದಿಗೆ ಇದ್ದವನು,” ಎಂದಳು.
[70] ಆದರೆ ಅವನು ಎಲ್ಲರ ಮುಂದೆ, “ನೀನು ಏನು ಹೇಳುತ್ತೀಯೋ ನನಗೆ ತಿಳಿಯದು,” ಎಂದು ನಿರಾಕರಿಸಿದನು.
[71] ಅವನು ಮುಖ್ಯ ದ್ವಾರದೊಳಗೆ ಹೋದಾಗ, ಮತ್ತೊಬ್ಬ ಹುಡುಗಿಯು ಅವನನ್ನು ನೋಡಿ ಅಲ್ಲಿದ್ದವರಿಗೆ, “ಇವನು ಸಹ ನಜರೇತಿನ ಯೇಸುವಿನೊಂದಿಗೆ ಇದ್ದವನು,” ಎಂದಳು.
[72] ಆಗ ಅವನು ಆಣೆ ಮಾಡಿ, “ನಾನು ಆ ಮನುಷ್ಯನನ್ನು ಅರಿಯೆನು,” ಎಂದು ತಿರುಗಿ ನಿರಾಕರಿಸಿದನು.
[73] ಸ್ವಲ್ಪ ಸಮಯವಾದ ಮೇಲೆ ಅಲ್ಲಿ ನಿಂತಿದ್ದವರು ಪೇತ್ರನಿಗೆ, “ನಿಶ್ಚಯವಾಗಿಯೂ ನೀನು ಸಹ ಅವರಲ್ಲಿ ಒಬ್ಬನು. ನಿಜವಾಗಿಯೂ ನಿನ್ನ ಭಾಷೆಯು ನಿನ್ನನ್ನು ತೋರಿಸಿಕೊಡುತ್ತದೆ,” ಎಂದರು.
[74] ಅದಕ್ಕೆ ಅವನು, “ಆ ಮನುಷ್ಯನನ್ನು ನಾನು ಅರಿಯೆನು,” ಎಂದು ಶಪಿಸಿಕೊಳ್ಳುವುದಕ್ಕೂ ಆಣೆಯಿಟ್ಟುಕೊಳ್ಳುವುದಕ್ಕೂ ಪ್ರಾರಂಭಿಸಿದನು. ಕೂಡಲೇ ಹುಂಜ ಕೂಗಿತು.
[75] ಆಗ ಪೇತ್ರನು, “ಹುಂಜ ಕೂಗುವುದಕ್ಕಿಂತ ಮುಂಚಿತವಾಗಿ ನೀನು ಮೂರು ಸಾರಿ ನನ್ನನ್ನು ನಿರಾಕರಿಸುವೆ,” ಎಂದು ಯೇಸು ತನಗೆ ಹೇಳಿದ ಮಾತನ್ನು ಜ್ಞಾಪಕಮಾಡಿಕೊಂಡು ಹೊರಗೆ ಹೋಗಿ ಬಹಳವಾಗಿ ವ್ಯಥೆಪಟ್ಟು ಅತ್ತನು.