Skip to content
Opens in a new window
Listen to this chapter • 8:46

[1] ಯೇಸು ದೇವಾಲಯದಿಂದ ಹೊರಗೆ ಹೋದಾಗ ಅವರ ಶಿಷ್ಯರು ಆ ದೇವಾಲಯದ ಕಟ್ಟಡಗಳನ್ನು ತೋರಿಸುವುದಕ್ಕಾಗಿ ಯೇಸುವಿನ ಬಳಿಗೆ ಬಂದರು.

[2] ಆಗ ಯೇಸು ಅವರಿಗೆ, “ಇವುಗಳನ್ನೆಲ್ಲಾ ನೀವು ನೋಡುತ್ತೀರಲ್ಲಾ? ಇಲ್ಲಿ ಕಲ್ಲಿನ ಮೇಲೆ ಕಲ್ಲು ಉಳಿಯುವುದಿಲ್ಲ; ಎಲ್ಲವೂ ಕೆಡವಲಾಗುವವು ಎಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ,” ಎಂದರು.

[3] ಯೇಸು ಓಲಿವ್ ಗುಡ್ಡದ ಮೇಲೆ ಕುಳಿತುಕೊಂಡಾಗ, ಶಿಷ್ಯರು ಪ್ರತ್ಯೇಕವಾಗಿ ಯೇಸುವಿನ ಬಳಿಗೆ ಬಂದು, “ಈ ಸಂಗತಿಗಳು ಸಂಭವಿಸುವುದು ಯಾವಾಗ? ನಿನ್ನ ಆಗಮನದ ಹಾಗೂ ಲೋಕಾಂತ್ಯದ ಸೂಚನೆ ಏನು? ನಮಗೆ ತಿಳಿಸು,” ಎಂದು ಕೇಳಿದರು.

[4] ಆಗ ಯೇಸು ಉತ್ತರವಾಗಿ ಅವರಿಗೆ, “ಯಾರೂ ನಿಮ್ಮನ್ನು ಮೋಸಗೊಳಿಸದಂತೆ ಎಚ್ಚರಿಕೆಯಾಗಿರಿ.

[5] ಅನೇಕರು ನನ್ನ ಹೆಸರಿನಲ್ಲಿ ಬಂದು, ‘ನಾನೇ ಕ್ರಿಸ್ತನು’ ಎಂದು ಹೇಳಿ ಅನೇಕರನ್ನು ಮೋಸಗೊಳಿಸುವರು.

[6] ಯುದ್ಧಗಳನ್ನೂ ಯುದ್ಧಗಳ ಸುದ್ದಿಗಳನ್ನೂ ನೀವು ಕೇಳುವಿರಿ, ಆದರೆ ನೀವು ಕಳವಳಗೊಳ್ಳದಂತೆ ನೋಡಿಕೊಳ್ಳಿರಿ. ಏಕೆಂದರೆ ಇವೆಲ್ಲವು ಸಂಭವಿಸುವುದು ಅಗತ್ಯ. ಆದರೆ ಇದು ಇನ್ನೂ ಅಂತ್ಯವಲ್ಲ.

[7] ಜನಾಂಗಕ್ಕೆ ವಿರೋಧವಾಗಿ ಜನಾಂಗವೂ ರಾಜ್ಯಕ್ಕೆ ವಿರೋಧವಾಗಿ ರಾಜ್ಯವೂ ಏಳುವವು. ಅಲ್ಲಲ್ಲಿ ಬರಗಾಲಗಳು ಮತ್ತು ಭೂಕಂಪಗಳು ಸಂಭವಿಸುತ್ತವೆ.

[8] ಇವೆಲ್ಲವೂ ಪ್ರಸವವೇದನೆಯ ಪ್ರಾರಂಭ ಮಾತ್ರ.

[9] “ಆಗ ಜನರು ನಿಮ್ಮನ್ನು ಹಿಂಸೆಪಡಿಸುವುದಕ್ಕಾಗಿ ಒಪ್ಪಿಸಿ ನಿಮ್ಮನ್ನು ಕೊಲ್ಲುವರು. ಇದಲ್ಲದೆ ನನ್ನ ಹೆಸರಿನ ನಿಮಿತ್ತವಾಗಿ ಎಲ್ಲಾ ಜನಾಂಗದವರು ನಿಮ್ಮನ್ನು ದ್ವೇಷಮಾಡುವರು.

[10] ಆಗ ಅನೇಕರು ವಿಶ್ವಾಸದಿಂದ ಬಿದ್ದವರಾಗಿ ಒಬ್ಬರಿಗೊಬ್ಬರು ದ್ರೋಹ ಬಗೆಯುವರು ಮತ್ತು ಒಬ್ಬರನ್ನೊಬ್ಬರು ದ್ವೇಷಿಸುವರು.

[11] ಬಹುಮಂದಿ ಸುಳ್ಳು ಪ್ರವಾದಿಗಳು ಎದ್ದು ಅನೇಕರನ್ನು ಮೋಸಗೊಳಿಸುವರು.

[12] ಅನ್ಯಾಯವು ಹೆಚ್ಚಾಗುವುದರಿಂದ ಬಹುಜನರ ಪ್ರೀತಿಯು ತಣ್ಣಗಾಗುವುದು.

[13] ಆದರೆ ಕೊನೆಯವರೆಗೂ ತಾಳುವವನೇ ರಕ್ಷಣೆಹೊಂದುವನು.

[14] ಪರಲೋಕ ರಾಜ್ಯದ ಈ ಸುವಾರ್ತೆಯು ಲೋಕದಲ್ಲೆಲ್ಲಾ ಸರ್ವಜನಾಂಗಗಳಿಗೆ ಸಾಕ್ಷಿಯಾಗಿ ಸಾರಲಾಗುವದು, ತರುವಾಯ ಅಂತ್ಯ ಬರುವುದು.

[15] “ಆದ್ದರಿಂದ ಪ್ರವಾದಿ ದಾನಿಯೇಲನಿಂದ ಹೇಳಿದ ಹಾಗೆ ‘ಅಸಹ್ಯ ವಸ್ತು’ ಪವಿತ್ರ ಸ್ಥಳದಲ್ಲಿ ನಿಂತಿರುವುದನ್ನು ನೀವು ಕಾಣುವಾಗ, ಓದುವವನು ತಿಳಿದುಕೊಳ್ಳಲಿ.

[16] ಆಗ ಯೂದಾಯದಲ್ಲಿ ಇರುವವರು ಬೆಟ್ಟಗಳಿಗೆ ಓಡಿಹೋಗಲಿ.

[17] ಮಾಳಿಗೆಯ ಮೇಲಿರುವವನು ತನ್ನ ಮನೆಯೊಳಗಿಂದ ಏನಾದರೂ ತೆಗೆದುಕೊಳ್ಳುವುದಕ್ಕೆ ಕೆಳಗೆ ಇಳಿಯದಿರಲಿ.

[18] ಹೊಲದಲ್ಲಿರುವವನು ತನ್ನ ಬಟ್ಟೆಗಳನ್ನು ತೆಗೆದುಕೊಳ್ಳುವುದಕ್ಕೆ ಹಿಂದಿರುಗದಿರಲಿ.

[19] ಆ ದಿವಸಗಳಲ್ಲಿ ಗರ್ಭಿಣಿಯರಿಗೂ ಹಾಲುಣಿಸುವ ತಾಯಂದಿರಿಗೂ ಕಷ್ಟ!

[20] ಆದರೆ ನಿಮ್ಮ ಪಲಾಯನವು ಚಳಿಗಾಲದಲ್ಲಾಗಲಿ, ಸಬ್ಬತ್ ದಿನದಲ್ಲಾಗಲಿ ಆಗದಂತೆ ಪ್ರಾರ್ಥಿಸಿರಿ.

[21] ಅಂಥ ಮಹಾ ಸಂಕಟವು ಲೋಕಾದಿಯಿಂದ ಇಂದಿನವರೆಗೂ ಆಗಲಿಲ್ಲ. ಇನ್ನು ಮುಂದೆಯೂ ಆಗುವುದಿಲ್ಲ.

[22] “ಆ ದಿನಗಳನ್ನು ಕಡಿಮೆ ಮಾಡದಿದ್ದರೆ, ಒಬ್ಬನೂ ಉಳಿಯುವಂತಿಲ್ಲ. ಆದರೆ ಆಯ್ಕೆಯಾದವರಿಗಾಗಿ ಆ ದಿನಗಳನ್ನು ಕಡಿಮೆ ಮಾಡಲಾಗುವುದು.

[23] ಆಗ ಯಾರಾದರೂ ನಿಮಗೆ, ‘ಇಗೋ ಕ್ರಿಸ್ತನು ಇಲ್ಲಿದ್ದಾನೆ! ಅಗೋ ಅಲ್ಲಿದ್ದಾನೆ!’ ಎಂದು ಹೇಳಿದರೆ ಅವನನ್ನು ನಂಬಬೇಡಿರಿ.

[24] ಏಕೆಂದರೆ ಸುಳ್ಳು ಕ್ರಿಸ್ತರು ಮತ್ತು ಸುಳ್ಳು ಪ್ರವಾದಿಗಳು ಎದ್ದು ಸಾಧ್ಯವಾದರೆ ಆಯ್ಕೆಯಾದವರನ್ನು ಸಹ ಮೋಸಗೊಳಿಸುವಂತೆ ದೊಡ್ಡ ಸೂಚಕಕಾರ್ಯಗಳನ್ನೂ ಅದ್ಭುತಕಾರ್ಯಗಳನ್ನೂ ಮಾಡಿ ತೋರಿಸುವರು.

[25] ನೋಡಿರಿ, ಮುಂಚಿತವಾಗಿ ನಾನು ನಿಮಗೆ ಹೇಳಿದ್ದೇನೆ.

[26] “ಅವರು ನಿಮಗೆ, ‘ನೋಡಿ, ಆತನು ಅರಣ್ಯದಲ್ಲಿದ್ದಾನೆ’ ಎಂದು ಹೇಳಿದರೆ ಹೋಗಬೇಡಿರಿ. ‘ನೋಡಿ, ಆತನು ಒಳ ಕೋಣೆಯಲ್ಲಿದ್ದಾನೆ,’ ಎಂದು ಹೇಳಿದರೂ ನಂಬಬೇಡಿರಿ.

[27] ಏಕೆಂದರೆ ಮಿಂಚು ಪೂರ್ವದಿಂದ ಮಿನುಗಿ ಪಶ್ಚಿಮದವರೆಗೆ ಹೊಳೆಯುವಂತೆಯೇ ಮನುಷ್ಯಪುತ್ರನಾದ ನನ್ನ ಬರುವಿಕೆಯೂ ಇರುವುದು.

[28] ಹೆಣ ಇದ್ದಲ್ಲಿಗೆ, ಹದ್ದುಗಳು ಬಂದು ಸೇರುತ್ತವೆ.

[29] “ಆ ಸಂಕಟದ ದಿವಸಗಳು ಮುಗಿದ ತಕ್ಷಣವೇ, “ ‘ಸೂರ್ಯನು ಕತ್ತಲಾಗುವನು; ಚಂದ್ರನು ಕಾಂತಿಹೀನನಾಗುವನು. ಆಕಾಶದಿಂದ ನಕ್ಷತ್ರಗಳು ಬೀಳುವವು; ಮತ್ತು ಆಕಾಶದ ಶಕ್ತಿಗಳು ಕದಲುವವು.’

[30] “ಆಗ ಮನುಷ್ಯಪುತ್ರನಾದ ನನ್ನ ಸೂಚನೆಯು ಆಕಾಶದಲ್ಲಿ ಕಾಣುವುದು. ಭೂಮಿಯ ಎಲ್ಲಾ ಜನಾಂಗದವರು ಗೋಳಾಡುವರು. ಮನುಷ್ಯಪುತ್ರನಾದ ನಾನು ಆಕಾಶದ ಮೇಘಗಳಲ್ಲಿ, ಶಕ್ತಿಯಿಂದಲೂ ಮಹಾಪ್ರಭಾವದಿಂದಲೂ ಬರುವುದನ್ನು ಅವರು ಕಾಣುವರು.

[31] ಆತನು ತನ್ನ ದೂತರನ್ನು ತುತೂರಿಯ ಮಹಾಶಬ್ದದೊಂದಿಗೆ ಕಳುಹಿಸುವನು. ಆಗ ಅವರು ಆತನಿಂದ ಆಯ್ಕೆಯಾದವರನ್ನು ನಾಲ್ಕು ದಿಕ್ಕುಗಳಿಂದಲೂ ಆಕಾಶದ ಒಂದು ಕಡೆಯಿಂದ ಮತ್ತೊಂದು ಕಡೆಯವರೆಗೂ ಒಟ್ಟುಗೂಡಿಸುವರು.

[32] “ಅಂಜೂರ ಮರದ ದೃಷ್ಟಾಂತದಿಂದ ಈ ಪಾಠವನ್ನು ಕಲಿತುಕೊಳ್ಳಿರಿ: ಅದರ ರೆಂಬೆ ಇನ್ನೂ ಎಳೆಯದಾಗಿದ್ದು ಎಲೆಗಳನ್ನು ಬಿಡುವಾಗ ಬೇಸಿಗೆಯು ಹತ್ತಿರವಾಯಿತೆಂದು ನೀವು ತಿಳಿದುಕೊಳ್ಳುತ್ತೀರಿ.

[33] ಅದೇ ಪ್ರಕಾರ, ಇವೆಲ್ಲವೂ ಆಗುವುದನ್ನು ನೀವು ಕಾಣುವಾಗ, ಅಂತ್ಯವು ಬಾಗಿಲ ಹತ್ತಿರದಲ್ಲಿಯೇ ಇದೆ ಎಂದು ತಿಳಿದುಕೊಳ್ಳಿರಿ.

[34] ಇವೆಲ್ಲವೂ ನೆರವೇರುವವರೆಗೆ ಈ ಸಂತತಿಯು ಅಳಿದುಹೋಗುವುದೇ ಇಲ್ಲವೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

[35] ಭೂಮ್ಯಾಕಾಶಗಳು ಅಳಿದುಹೋಗುವುವು, ಆದರೆ ನನ್ನ ಮಾತುಗಳು ಅಳಿದುಹೋಗುವುದೇ ಇಲ್ಲ.

[36] “ಆ ದಿನದ ಮತ್ತು ಆ ಗಳಿಗೆಯ ವಿಷಯವಾಗಿ ತಂದೆಗೆ ಹೊರತು ಯಾವ ಮನುಷ್ಯನಿಗಾಗಲಿ, ಪರಲೋಕದಲ್ಲಿರುವ ದೂತರಿಗಾಗಲಿ, ಮನುಷ್ಯಪುತ್ರನಾದ ನನಗೂ ತಿಳಿಯದು.

[37] ಆದರೆ ನೋಹನ ದಿವಸಗಳು ಇದ್ದಂತೆಯೇ, ಮನುಷ್ಯಪುತ್ರನಾದ ನನ್ನ ಬರುವಿಕೆಯೂ ಇರುವುದು.

[38] ಪ್ರಳಯವು ಬರುವುದಕ್ಕಿಂತ ಮುಂಚಿನ ಆ ದಿವಸಗಳಲ್ಲಿ, ನೋಹನು ನಾವೆಯಲ್ಲಿ ಸೇರಿದ ದಿವಸದವರೆಗೆ ಜನರು ತಿನ್ನುತ್ತಾ, ಕುಡಿಯುತ್ತಾ, ಮದುವೆ ಮಾಡಿಕೊಳ್ಳುತ್ತಾ, ಮದುವೆ ಮಾಡಿಕೊಡುತ್ತಾ ಇದ್ದರು.

[39] ಜಲಪ್ರಳಯವು ಬಂದು ಅವರನ್ನು ಕೊಚ್ಚಿಕೊಂಡು ಹೋಗುವವರೆಗೂ ಅವರಿಗೆ ಅದು ತಿಳಿದಿರಲಿಲ್ಲ. ಹಾಗೆಯೇ ಮನುಷ್ಯಪುತ್ರನಾದ ನನ್ನ ಬರುವಿಕೆಯೂ ಇರುವುದು.

[40] ಆಗ ಇಬ್ಬರು ಹೊಲದಲ್ಲಿರುವರು; ಒಬ್ಬನನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬನನ್ನು ಬಿಡಲಾಗುವುದು.

[41] ಇಬ್ಬರು ಹೆಂಗಸರು ಬೀಸುವ ಕಲ್ಲಿನಲ್ಲಿ ಬೀಸುತ್ತಿರುವಾಗ, ಒಬ್ಬಳನ್ನು ತೆಗೆದುಕೊಳ್ಳಲಾಗುವುದು, ಮತ್ತೊಬ್ಬಳನ್ನು ಬಿಡಲಾಗುವುದು.

[42] “ನಿಮ್ಮ ಕರ್ತನು ಯಾವ ಗಳಿಗೆಯಲ್ಲಿ ಬರುತ್ತಾನೋ ನಿಮಗೇ ಗೊತ್ತಿಲ್ಲವಾದ್ದರಿಂದ ಎಚ್ಚರವಾಗಿರಿ.

[43] ಕಳ್ಳನು ಯಾವ ಗಳಿಗೆಯಲ್ಲಿ ಬರುತ್ತಾನೆಂದು ಮನೆಯ ಯಜಮಾನನಿಗೆ ತಿಳಿದಿದ್ದರೆ, ಅವನು ಎಚ್ಚರವಾಗಿದ್ದು ತನ್ನ ಮನೆಗೆ ಕನ್ನಾಹಾಕದಂತೆ ಕಾಯುತ್ತಿದ್ದನೆಂದು ನೀವು ತಿಳಿದುಕೊಳ್ಳಿರಿ.

[44] ಆದಕಾರಣ ನೀವು ಸಹ ಸಿದ್ಧವಾಗಿರಿ, ಏಕೆಂದರೆ ನೀವು ನಿರೀಕ್ಷಿಸದ ಸಮಯದಲ್ಲಿ ಮನುಷ್ಯಪುತ್ರನಾದ ನಾನು ಬರುತ್ತೇನೆ.

[45] “ಹಾಗಾದರೆ ತನ್ನ ಮನೆಯಲ್ಲಿದ್ದವರಿಗೆ ತಕ್ಕ ಕಾಲದಲ್ಲಿ ಆಹಾರ ಕೊಡುವಂತೆ ಅವರ ಮೇಲೆ ತನ್ನ ಯಜಮಾನನು ನೇಮಿಸಿದ ನಂಬಿಗಸ್ತನೂ ಜ್ಞಾನಿಯೂ ಆಗಿರುವ ಸೇವಕನು ಯಾರು?

[46] ತನ್ನ ಯಜಮಾನನು ಬಂದಾಗ ಯಾವ ಸೇವಕನು ಸೇವೆ ಮಾಡುವುದನ್ನು ಕಾಣುವನೋ ಆ ಸೇವಕನು ಧನ್ಯನು.

[47] ಅವನನ್ನು ಯಜಮಾನನು ತನ್ನ ಎಲ್ಲಾ ಆಸ್ತಿಯ ಮೇಲೆ ಆಡಳಿತಗಾರನಾಗಿ ನೇಮಿಸುವನೆಂದು ನಾನು ನಿಮಗೆ ನಿಜವಾಗಿ ಹೇಳುತ್ತೇನೆ.

[48] ಆದರೆ ದುಷ್ಟ ಸೇವಕನು ತನ್ನ ಹೃದಯದಲ್ಲಿ, ‘ನನ್ನ ಯಜಮಾನನು ಬರುವದಕ್ಕೆ ತಡಮಾಡುತ್ತಾನೆ,’ ಎಂದು ಹೇಳಿಕೊಂಡು

[49] ತನ್ನ ಜೊತೆಯ ಸೇವಕರನ್ನು ಹೊಡೆಯುತ್ತಾ, ಕುಡುಕರ ಸಂಗಡ ತಿನ್ನುವುದಕ್ಕೂ, ಕುಡಿಯುವುದಕ್ಕೂ ಪ್ರಾರಂಭಿಸುವುದಾದರೆ,

[50] ಆ ಸೇವಕನು ನಿರೀಕ್ಷಿಸದ ದಿನದಲ್ಲಿಯೂ ತಿಳಿಯದ ಸಮಯದಲ್ಲಿಯೂ ಅವನ ಯಜಮಾನನು ಬಂದು,

[51] ಅವನನ್ನು ಕ್ರೂರವಾಗಿ ಹಿಂಸಿಸಿ ಕಪಟಿಗಳೊಂದಿಗೆ ಅವನ ಪಾಲನ್ನು ನೇಮಿಸುವನು. ಅಲ್ಲಿ ಗೋಳಾಟವೂ ಹಲ್ಲು ಕಡಿಯುವಿಕೆಯೂ ಇರುವವು.

ಮತ್ತಾಯ — Chapters