[1] ಯೇಸು ಒಂದು ಸಬ್ಬತ್ ದಿನ ಪೈರಿನ ಹೊಲವನ್ನು ಹಾದುಹೋಗುತ್ತಿದ್ದಾಗ, ಅವರ ಶಿಷ್ಯರು ಹಸಿದಿದ್ದರಿಂದ ತೆನೆಗಳನ್ನು ಕಿತ್ತು ತಿನ್ನಲಾರಂಭಿಸಿದರು.
[2] ಫರಿಸಾಯರು ಅದನ್ನು ಕಂಡು ಯೇಸುವಿಗೆ, “ಇಗೋ, ನಿನ್ನ ಶಿಷ್ಯರು ಸಬ್ಬತ್ ದಿನದಲ್ಲಿ ನಿಯಮಕ್ಕೆ ವಿರುದ್ಧವಾಗಿರುವದನ್ನು ಮಾಡುತ್ತಿದ್ದಾರೆ,” ಎಂದರು.
[3] ಅದಕ್ಕೆ ಯೇಸು ಅವರಿಗೆ, “ದಾವೀದನು ಮತ್ತು ಅವನ ಸಂಗಡಿಗರು ಹಸಿದಿದ್ದಾಗ ಅವನು ಏನು ಮಾಡಿದನೆಂದು ನೀವು ಓದಲಿಲ್ಲವೇ?
[4] ಅವನು ದೇವರ ಆಲಯದೊಳಗೆ ಹೋಗಿ, ಯಾಜಕರ ಹೊರತು ತಾನಾಗಲಿ ತನ್ನ ಸಂಗಡಿಗರಾಗಲಿ, ತಿನ್ನುವುದಕ್ಕೆ ಧರ್ಮಸಮ್ಮತವಲ್ಲದ ನೈವೇದ್ಯದ ರೊಟ್ಟಿಯನ್ನು ತಿನ್ನಲಿಲ್ಲವೇ?
[5] ಇದಲ್ಲದೆ ಸಬ್ಬತ್ ದಿನದಲ್ಲಿ ಯಾಜಕರು ದೇವಾಲಯದಲ್ಲಿ ಸಬ್ಬತ್ ದಿನವನ್ನು ಉಲ್ಲಂಘಿಸಿದರೂ ನಿರ್ದೋಷಿಗಳಾಗಿದ್ದಾರೆಂದು ನೀವು ನಿಯಮದಲ್ಲಿ ಓದಲಿಲ್ಲವೇ?
[6] ದೇವಾಲಯಕ್ಕಿಂತಲೂ ದೊಡ್ಡವನು ಇಲ್ಲಿದ್ದಾನೆ ಎಂದು ನಾನು ನಿಮಗೆ ಹೇಳುತ್ತೇನೆ.
[7] ಆದರೆ, ‘ನಾನು ಯಜ್ಞವನ್ನಲ್ಲ, ಕರುಣೆಯನ್ನೇ ಅಪೇಕ್ಷಿಸುತ್ತೇನೆ’ ಎಂಬುದರ ಅರ್ಥವನ್ನು ನೀವು ತಿಳಿದಿದ್ದರೆ, ನಿರಪರಾಧಿಗಳನ್ನು ಖಂಡಿಸುತ್ತಿರಲಿಲ್ಲ.
[8] ಏಕೆಂದರೆ ಮನುಷ್ಯಪುತ್ರನಾದ ನಾನು ಸಬ್ಬತ್ ದಿನಕ್ಕೆ ಒಡೆಯನಾಗಿದ್ದೇನೆ,” ಎಂದು ಹೇಳಿದರು.
[9] ಯೇಸು ಅಲ್ಲಿಂದ ಹೊರಟು ಅವರ ಸಭಾಮಂದಿರದೊಳಕ್ಕೆ ಹೋದರು.
[10] ಅಲ್ಲಿ ಕೈ ಬತ್ತಿದ ಒಬ್ಬ ಮನುಷ್ಯನಿದ್ದನು. ಆಗ ಫರಿಸಾಯರು ಯೇಸುವಿನ ಮೇಲೆ ತಪ್ಪು ಹೊರಿಸಬೇಕೆಂದು ಆತನಿಗೆ, “ಸಬ್ಬತ್ ದಿನದಲ್ಲಿ ಸ್ವಸ್ಥಮಾಡುವುದು ನ್ಯಾಯಸಮ್ಮತವೋ?” ಎಂದು ಕೇಳಿದರು.
[11] ಅದಕ್ಕೆ ಯೇಸು ಅವರಿಗೆ, “ನಿಮ್ಮಲ್ಲಿ ಯಾವನಿಗಾದರೂ ಒಂದು ಕುರಿಯಿರಲಾಗಿ ಅದು ಸಬ್ಬತ್ ದಿನದಲ್ಲಿ ಕುಣಿಯೊಳಗೆ ಬಿದ್ದರೆ, ಅವನು ಅದನ್ನು ಮೇಲಕ್ಕೆ ಎತ್ತದೆ ಇರುವನೇ?
[12] ಕುರಿಗಿಂತಲೂ ಒಬ್ಬ ಮನುಷ್ಯನು ಎಷ್ಟೋ ಮೌಲ್ಯವುಳ್ಳವನಾಗಿದ್ದಾನಲ್ಲವೇ? ಆದ್ದರಿಂದ ಸಬ್ಬತ್ ದಿನಗಳಲ್ಲಿ ಒಳ್ಳೆಯದನ್ನು ಮಾಡುವುದು ನ್ಯಾಯಸಮ್ಮತವಾಗಿದೆ!” ಎಂದು ಹೇಳಿದರು.
[13] ಆಗ ಯೇಸು ಆ ಮನುಷ್ಯನಿಗೆ, “ನಿನ್ನ ಕೈಚಾಚು” ಎಂದರು. ಅವನು ಕೈಚಾಚಿದಾಗ ಅದು ಸಂಪೂರ್ಣ ವಾಸಿಯಾಗಿ ಇನ್ನೊಂದು ಕೈಯಂತೆಯೇ ಆಯಿತು.
[14] ಆದರೆ ಫರಿಸಾಯರು ಹೊರಗೆ ಹೋಗಿ ಯೇಸುವನ್ನು ಹೇಗೆ ಕೊಲ್ಲಬೇಕೆಂದು ಅವರ ವಿರೋಧವಾಗಿ ಆಲೋಚನೆಮಾಡಿದರು.
[15] ಆದರೆ ಯೇಸು ಅದನ್ನು ತಿಳಿದು ಅಲ್ಲಿಂದ ಹೊರಟು ಹೋದರು. ದೊಡ್ಡ ಜನರ ಗುಂಪು ಅವರನ್ನು ಹಿಂಬಾಲಿಸಿತು. ಯೇಸು ಅವರಲ್ಲಿ ಅಸ್ವಸ್ಥರಾದವರನ್ನು ಗುಣಪಡಿಸಿದರು.
[16] ಆದರೆ ಯೇಸು ತಾನು ಯಾರೆಂದು ಯಾರಿಗೂ ಪ್ರಕಟಿಸಬಾರದೆಂದು ಅವರನ್ನು ಎಚ್ಚರಿಸಿದರು.
[17] ಹೀಗೆ ದೇವರು ಪ್ರವಾದಿಯಾದ ಯೆಶಾಯನ ಮುಖಾಂತರ ಹೇಳಿದ ಮಾತು ನೆರವೇರಿತು. ಅದೇನೆಂದರೆ:
[18] “ಈತನು ನಾನು ಆರಿಸಿಕೊಂಡ ನನ್ನ ದಾಸನು, ಈ ನನ್ನ ಪ್ರಿಯನಲ್ಲಿ ನನ್ನ ಪ್ರಾಣವು ಸಂಪೂರ್ಣ ಮೆಚ್ಚಿದೆ. ನಾನು ಈತನ ಮೇಲೆ ನನ್ನ ಆತ್ಮವನ್ನು ಇರಿಸುವೆನು, ಈತನು ಜನಾಂಗಗಳಿಗೆ ನ್ಯಾಯವನ್ನು ಸಾರುವನು.
[19] ಈತನು ಜಗಳವಾಡುವವನಲ್ಲ, ಕೂಗಾಡುವವನಲ್ಲ; ಬೀದಿಗಳಲ್ಲಿ ಈತನ ಸ್ವರವನ್ನು ಯಾರೂ ಕೇಳಿಸಿಕೊಳ್ಳುವುದೂ ಇಲ್ಲ.
[20] ಈತನು ನ್ಯಾಯವನ್ನು ಜಯಕ್ಕೆ ನಡೆಸುವವರೆಗೆ, ಜಜ್ಜಿದ ದಂಟನ್ನು ಮುರಿಯುವವನಲ್ಲ, ಆರಿ ಹೋಗುತ್ತಿರುವ ಬತ್ತಿಯನ್ನು ನಂದಿಸುವವನೂ ಅಲ್ಲ.
[21] ಈತನ ಹೆಸರಿನಲ್ಲಿಯೇ ಯೆಹೂದ್ಯರಲ್ಲದವರು ನಿರೀಕ್ಷೆ ಇಡುವರು.”
[22] ಆಗ ಕೆಲವರು ದೆವ್ವಹಿಡಿದ ಕುರುಡನೂ ಮೂಕನೂ ಆಗಿದ್ದ ಒಬ್ಬನನ್ನು ಯೇಸುವಿನ ಬಳಿಗೆ ತಂದರು. ಅವರು ಅವನನ್ನು ಗುಣಪಡಿಸಿದ್ದರಿಂದ, ಕುರುಡನೂ ಮೂಕನೂ ಆಗಿದ್ದವನು ಮಾತನಾಡಿದನು ಮತ್ತು ದೃಷ್ಟಿ ಹೊಂದಿದನು.
[23] ಆಗ ಜನರೆಲ್ಲರೂ ವಿಸ್ಮಯಗೊಂಡವರಾಗಿ, “ದಾವೀದನ ಪುತ್ರನು ಈತನೇ ಅಲ್ಲವೇ?” ಎಂದರು.
[24] ಆದರೆ ಫರಿಸಾಯರು ಇದನ್ನು ಕೇಳಿದಾಗ, “ಈತನು ದೆವ್ವಗಳನ್ನು ಓಡಿಸುತ್ತಿರುವುದು ದೆವ್ವಗಳ ಅಧಿಪತಿಯಾದ ಬೆಲ್ಜೆಬೂಲನಿಂದಲೇ,” ಎಂದರು.
[25] ಯೇಸು ಅವರ ಆಲೋಚನೆಗಳನ್ನು ತಿಳಿದು ಅವರಿಗೆ, “ತನಗೆ ವಿರೋಧವಾಗಿ ವಿಭಜಿಸಿಕೊಳ್ಳುವ ಪ್ರತಿಯೊಂದು ರಾಜ್ಯವು ನಾಶವಾಗುವುದು ಮತ್ತು ತನಗೆ ವಿರೋಧವಾಗಿ ವಿಭಾಗವಾಗಿರುವ ಪ್ರತಿಯೊಂದು ಪಟ್ಟಣವಾಗಲಿ ಮನೆಯಾಗಲಿ ನಿಲ್ಲುವುದಿಲ್ಲ.
[26] ಇದಲ್ಲದೆ ಸೈತಾನನು ಸೈತಾನನನ್ನು ಹೊರಗೆ ಓಡಿಸಿದರೆ, ಅವನು ತನಗೆ ವಿರೋಧವಾಗಿ ವಿಭಾಗವಾಗಿರುವನು. ಹಾಗಾದರೆ ಅವನ ರಾಜ್ಯವು ನಿಲ್ಲುವುದು ಹೇಗೆ?
[27] ಬೆಲ್ಜೆಬೂಲನಿಂದ ನಾನು ದೆವ್ವಗಳನ್ನು ಓಡಿಸುವುದಾದರೆ, ನಿಮ್ಮ ಜನರು ಯಾರಿಂದ ಅವುಗಳನ್ನು ಓಡಿಸುತ್ತಾರೆ? ಆದ್ದರಿಂದ, ನಿಮ್ಮವರೇ ನಿಮಗೆ ನ್ಯಾಯಾಧಿಪತಿಗಳಾಗಿರುವರು.
[28] ನಾನು ದೇವರ ಆತ್ಮನಿಂದ ದೆವ್ವಗಳನ್ನು ಓಡಿಸುವುದಾದರೆ ದೇವರ ರಾಜ್ಯವು ನಿಸ್ಸಂದೇಹವಾಗಿ ನಿಮ್ಮ ಬಳಿಗೆ ಬಂದಿದೆಯಲ್ಲಾ.
[29] “ಇದಲ್ಲದೆ, ಯಾವನಾದರೂ ಮೊದಲು ಬಲಿಷ್ಠನನ್ನು ಕಟ್ಟಿಹಾಕದೆ, ಅವನ ಮನೆಯನ್ನು ಪ್ರವೇಶಿಸಿ ಅವನ ಸೊತ್ತನ್ನು ಸೂರೆ ಮಾಡಲಾದೀತೇ? ಕಟ್ಟಿದ ನಂತರ ಅವನ ಮನೆಯನ್ನು ಕೊಳ್ಳೆ ಹೊಡೆಯಬಹುದು.
[30] “ನನ್ನ ಪರವಾಗಿ ಇರದವನು ನನಗೆ ವಿರೋಧಿಯಾಗಿದ್ದಾನೆ, ನನ್ನೊಡನೆ ಶೇಖರಿಸದವನು ಚದರಿಸುತ್ತಾನೆ.
[31] ಆದಕಾರಣ ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರು ಮಾಡುವ ಎಲ್ಲಾ ಪಾಪಕ್ಕೂ ದೂಷಣೆಗೂ ಕ್ಷಮಾಪಣೆಯಾಗುವುದು, ಆದರೆ ಪವಿತ್ರಾತ್ಮರಿಗೆ ವಿರೋಧವಾಗಿ ದೂಷಣೆ ಮಾಡಿದರೆ ಅದಕ್ಕೆ ಕ್ಷಮಾಪಣೆಯಿಲ್ಲ.
[32] ಯಾರಾದರೂ ಮನುಷ್ಯಪುತ್ರನಾದ ನನಗೆ ವಿರೋಧವಾಗಿ ಮಾತನಾಡುವ ಪ್ರತಿಯೊಬ್ಬರಿಗೂ ಕ್ಷಮಾಪಣೆಯಾಗುವುದು, ಆದರೆ ಪವಿತ್ರಾತ್ಮನಿಗೆ ವಿರೋಧವಾಗಿ ಮಾತನಾಡಿದರೆ, ಈ ಯುಗದಲ್ಲೇ ಆಗಲಿ ಬರುವ ಯುಗದಲ್ಲೇ ಆಗಲಿ ಅದಕ್ಕಾಗಿ ಅವರಿಗೆ ಕ್ಷಮೆ ದೊರಕುವುದಿಲ್ಲ.
[33] “ಮರವು ಒಳ್ಳೆಯದಾಗಿದ್ದರೆ, ಅದರ ಫಲವು ಒಳ್ಳೆಯದಾಗಿರುವುದು; ಮರವು ಕೆಟ್ಟದ್ದಾಗಿದ್ದರೆ, ಅದರ ಫಲವು ಕೆಟ್ಟದ್ದಾಗಿರುವುದು. ಏಕೆಂದರೆ ಮರವನ್ನು ಅದರ ಫಲದಿಂದಲೇ ಗುರುತಿಸಲಾಗುವುದು.
[34] ಸರ್ಪಸಂತತಿಯವರೇ, ಕೆಟ್ಟವರಾಗಿರುವ ನೀವು ಒಳ್ಳೆಯದೇನನ್ನಾದರೂ ಮಾತನಾಡುವಿರೋ? ಹೃದಯದಲ್ಲಿ ತುಂಬಿರುವದನ್ನೇ ಅವನ ಬಾಯಿ ಮಾತನಾಡುತ್ತದೆ.
[35] ಒಳ್ಳೆಯವನು ಒಳ್ಳೆಯ ಬೊಕ್ಕಸದಿಂದ ಒಳ್ಳೆಯದನ್ನೇ ಹೊರತರುತ್ತಾನೆ; ಕೆಟ್ಟವನು ಕೆಟ್ಟ ಬೊಕ್ಕಸದಿಂದ ಕೆಟ್ಟದ್ದನ್ನೇ ಹೊರತರುತ್ತಾನೆ.
[36] ನಾನು ನಿಮಗೆ ಹೇಳುವುದೇನೆಂದರೆ, ಮನುಷ್ಯರು ಆಡುವ ಪ್ರತಿಯೊಂದು ವ್ಯರ್ಥ ಮಾತಿಗಾಗಿ ನ್ಯಾಯವಿಚಾರಣೆಯ ದಿನದಲ್ಲಿ ಅವರು ಲೆಕ್ಕಕೊಡಬೇಕು.
[37] ನೀನು ನಿನ್ನ ಮಾತುಗಳಿಂದಲೇ ನೀತಿವಂತನೆಂದು ನಿರ್ಣಯಿಸಲಾಗುವುದು ಮತ್ತು ನಿನ್ನ ಮಾತುಗಳಿಂದಲೇ ನೀನು ಅಪರಾಧಿಯೆಂದು ನಿರ್ಣಯಿಸಲಾಗುವುದು,” ಎಂದು ಹೇಳಿದರು.
[38] ಆಗ ನಿಯಮ ಬೋಧಕರೂ ಫರಿಸಾಯರೂ, “ಬೋಧಕರೇ, ನಿನ್ನಿಂದ ಒಂದು ಸೂಚಕಕಾರ್ಯವನ್ನು ಕಾಣಬೇಕೆಂದಿದ್ದೇವೆ,” ಎಂದು ಕೇಳಿದರು.
[39] ಯೇಸು ಉತ್ತರವಾಗಿ ಅವರಿಗೆ, “ವ್ಯಭಿಚಾರದ ಕೆಟ್ಟ ಸಂತತಿಯು ಸೂಚಕಕಾರ್ಯವನ್ನು ಹುಡುಕುತ್ತದೆ. ಪ್ರವಾದಿ ಯೋನನ ಸೂಚಕಕಾರ್ಯವೇ ಹೊರತು ಬೇರೆ ಯಾವ ಸೂಚಕಕಾರ್ಯವೂ ಈ ಸಂತತಿಗೆ ಕೊಡಲಾಗುವುದಿಲ್ಲ.
[40] ಯೋನನು ಮೂರು ಹಗಲು ಮತ್ತು ಮೂರು ರಾತ್ರಿ ದೊಡ್ಡ ಮೀನಿನ ಹೊಟ್ಟೆಯಲ್ಲಿ ಇದ್ದ ಹಾಗೆಯೇ ಮನುಷ್ಯಪುತ್ರನಾದ ನಾನು ಮೂರು ಹಗಲು ಮತ್ತು ಮೂರು ರಾತ್ರಿ ಭೂಗರ್ಭದಲ್ಲಿರುವೆನು.
[41] ನಿನೆವೆ ಪಟ್ಟಣದವರು ನ್ಯಾಯತೀರ್ಪಿನಲ್ಲಿ ಈ ಸಂತತಿಗೆ ಎದುರಾಗಿ ಎದ್ದು ನಿಂತು ಇದನ್ನು ಅಪರಾಧ ಎಂದು ತೀರ್ಪುಮಾಡುವರು, ಏಕೆಂದರೆ ಯೋನನು ಸಾರಿದ್ದನ್ನು ಕೇಳಿ ಅವರು ದೇವರ ಕಡೆಗೆ ತಿರುಗಿಕೊಂಡರು; ಇಗೋ, ಇಲ್ಲಿ ಯೋನನಿಗಿಂತಲೂ ತುಂಬಾ ದೊಡ್ಡವನು ಇದ್ದಾನೆ.
[42] ನ್ಯಾಯತೀರ್ಪಿನಲ್ಲಿ ದಕ್ಷಿಣದ ರಾಣಿಯು ಈ ಸಂತತಿಗೆ ಎದುರಾಗಿ ಎದ್ದು ಇವರನ್ನು ಅಪರಾಧಿಗಳೆಂದು ತೀರ್ಪುಮಾಡುವಳು. ಏಕೆಂದರೆ ಆಕೆಯು ಸೊಲೊಮೋನನ ಜ್ಞಾನವನ್ನು ಕೇಳುವುದಕ್ಕಾಗಿ ಭೂಮಿಯ ಕಟ್ಟಕಡೆಯಿಂದ ಬಂದಳು. ಇಗೋ, ಇಲ್ಲಿ ಸೊಲೊಮೋನನಿಗಿಂತಲೂ ತುಂಬಾ ದೊಡ್ಡವನು ಇಲ್ಲಿದ್ದಾನೆ.
[43] “ಅಶುದ್ಧಾತ್ಮವು ಒಬ್ಬ ಮನುಷ್ಯನಿಂದ ಹೊರಗೆ ಹೋದ ಮೇಲೆ ನೀರಿಲ್ಲದ ಸ್ಥಳಗಳಲ್ಲಿ ವಿಶ್ರಾಂತಿಗಾಗಿ ಹುಡುಕಾಡಿದರೂ ಅದನ್ನು ಕಂಡುಕೊಳ್ಳದೆ, ಅದು,
[44] ‘ನಾನು ಹೊರಟು ಬಂದ ನನ್ನ ಮನೆಗೆ ಹಿಂದಿರುಗುವೆನು,’ ಎಂದು ಹೇಳಿಕೊಂಡು ಬಂದು, ಆ ಮನೆಯು ಬರಿದಾಗಿಯೂ ಗುಡಿಸಿ ಅಲಂಕರಿಸಿರುವುದನ್ನು ಕಾಣುತ್ತದೆ.
[45] ಆಗ ಅದು ಹೋಗಿ ತನಗಿಂತಲೂ ಕೆಟ್ಟವುಗಳಾದ ಬೇರೆ ಏಳು ಅಶುದ್ಧಾತ್ಮಗಳನ್ನು ತನ್ನೊಂದಿಗೆ ಕರೆದುಕೊಂಡು ಅವನ ಒಳಗೆ ಸೇರಿ ಅಲ್ಲಿ ವಾಸಮಾಡುವವು. ಹೀಗೆ ಆ ಮನುಷ್ಯನ ಕಡೆಯ ಸ್ಥಿತಿಯು ಮೊದಲಿಗಿಂತ ಕೆಟ್ಟದ್ದಾಗಿರುವುದು. ಅದರಂತೆಯೇ ಈ ದುಷ್ಟ ಸಂತತಿಗೂ ಆಗುವುದು,” ಎಂದು ಹೇಳಿದರು.
[46] ಯೇಸು ಇನ್ನೂ ಜನರ ಸಂಗಡ ಮಾತನಾಡುತ್ತಿದ್ದಾಗ, ಅವರ ತಾಯಿ ಮತ್ತು ಸಹೋದರರು ಅವರೊಂದಿಗೆ ಮಾತನಾಡಬೇಕೆಂದು ಅಪೇಕ್ಷಿಸಿ ಹೊರಗೆ ನಿಂತಿದ್ದರು.
[47] ಆಗ ಒಬ್ಬನು ಯೇಸುವಿಗೆ, “ನಿಮ್ಮ ತಾಯಿಯೂ ಸಹೋದರರೂ ನಿಮ್ಮೊಂದಿಗೆ ಮಾತನಾಡಲು ಅಪೇಕ್ಷಿಸಿ ಹೊರಗೆ ನಿಂತಿದ್ದಾರೆ,” ಎಂದನು.
[48] ಅದಕ್ಕೆ ಯೇಸು ತಮಗೆ ಹೇಳಿದವನಿಗೆ ಉತ್ತರವಾಗಿ, “ನನ್ನ ತಾಯಿ ಯಾರು? ನನ್ನ ಸಹೋದರರು ಯಾರು?” ಎಂದು ಹೇಳಿ,
[49] ಶಿಷ್ಯರ ಕಡೆಗೆ ತಮ್ಮ ಕೈಚಾಚಿ, “ಇಗೋ, ಇವರೇ ನನ್ನ ತಾಯಿ ಮತ್ತು ನನ್ನ ಸಹೋದರರು.
[50] ಪರಲೋಕದಲ್ಲಿರುವ ನನ್ನ ತಂದೆಯ ಚಿತ್ತವನ್ನು ಮಾಡುವವನೇ ನನ್ನ ಸಹೋದರ, ಸಹೋದರಿ ಮತ್ತು ತಾಯಿ,” ಎಂದು ಹೇಳಿದರು.