[1] ಆಗ ಯೆಹೋವ ದೇವರು ಮೋಶೆಯ ಸಂಗಡ ಮಾತನಾಡಿ,
[2] “ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಸಭೆಯ ಡೇರೆಯನ್ನು ಮತ್ತು ಗುಡಾರವನ್ನು ಎತ್ತಿ ನಿಲ್ಲಿಸು.
[3] ಒಡಂಬಡಿಕೆಯ ಮಂಜೂಷವನ್ನು ಅದರಲ್ಲಿ ಇಟ್ಟು, ಅದನ್ನು ನೀನು ಪರದೆಯಿಂದ ಮುಚ್ಚಬೇಕು.
[4] ಮೇಜನ್ನು ಒಳಗೆ ತಂದು, ಅದರ ಮೇಲಿಡಬೇಕಾದದ್ದನ್ನು ಸರಿಯಾಗಿ ಇಡಬೇಕು. ದೀಪಸ್ತಂಭವನ್ನು ಒಳಗೆ ತಂದು, ನೀನು ಅದರ ದೀಪಗಳನ್ನು ಅಂಟಿಸಬೇಕು.
[5] ನೀನು ಮಾಡಿದ ಚಿನ್ನದ ಧೂಪಪೀಠವನ್ನು ಒಡಂಬಡಿಕೆಯ ಮಂಜೂಷದ ಎದುರಾಗಿ ಇಟ್ಟು, ದೇವದರ್ಶನದ ಗುಡಾರದ ಬಾಗಿಲಿಗೆ ಪರದೆಯನ್ನು ಹಾಕಬೇಕು.
[6] “ನೀನು ದಹನಬಲಿಯ ಪೀಠವನ್ನು ಸಭೆಯ ಡೇರೆಯಾದ ಗುಡಾರದ ಬಾಗಿಲಿಗೆ ಎದುರಾಗಿ ಇಡಬೇಕು.
[7] ನೀನು ದೇವದರ್ಶನದ ಗುಡಾರಕ್ಕೂ, ಬಲಿಪೀಠಕ್ಕೂ ಮಧ್ಯದಲ್ಲಿ ಗಂಗಾಳವನ್ನಿಟ್ಟು, ಅದರಲ್ಲಿ ನೀರನ್ನು ತುಂಬಿಸಬೇಕು.
[8] ಅದರ ಸುತ್ತಲೂ ಆವರಣವನ್ನು ನಿಲ್ಲಿಸಿ, ಆ ಆವರಣದ ಬಾಗಿಲಿನ ಬಳಿಯಲ್ಲಿ ನೀನು ಪರದೆಯನ್ನು ತೂಗು ಹಾಕಬೇಕು.
[9] “ನೀನು ಅಭಿಷೇಕ ತೈಲವನ್ನು ತೆಗೆದುಕೊಂಡು ಗುಡಾರವನ್ನೂ, ಅದರಲ್ಲಿರುವ ಎಲ್ಲವುಗಳನ್ನೂ ಅಭಿಷೇಕಿಸಿ, ಅದರಲ್ಲಿರುವ ಎಲ್ಲಾ ಸಾಮಗ್ರಿಗಳನ್ನೂ ಪರಿಶುದ್ಧ ಮಾಡು. ಆಗ ಅದು ಪರಿಶುದ್ಧವಾಗುವುದು.
[10] ದಹನಬಲಿಯ ಪೀಠವನ್ನೂ, ಅದರ ಎಲ್ಲಾ ಸಲಕರಣೆಗಳನ್ನೂ ನೀನು ಅಭಿಷೇಕಿಸಿ, ಬಲಿಪೀಠವನ್ನು ಪವಿತ್ರಮಾಡು. ಆಗ ಅದು ಅತಿಪರಿಶುದ್ಧವಾದ ಬಲಿಪೀಠವಾಗುವುದು.
[11] ಗಂಗಾಳವನ್ನೂ, ಅದರ ಕಾಲುಗಳನ್ನೂ ನೀನು ಅಭಿಷೇಕಿಸಿ, ಅದನ್ನು ಪ್ರತಿಷ್ಠಾಪನೆ ಮಾಡಬೇಕು.
[12] “ಆರೋನನನ್ನೂ, ಅವನ ಮಕ್ಕಳನ್ನೂ ದೇವದರ್ಶನದ ಗುಡಾರದ ಬಾಗಿಲಿನ ಬಳಿಗೆ ಬರಮಾಡಿ, ಅವರನ್ನು ನೀರಿನಿಂದ ಸ್ನಾನ ಮಾಡಿಸಬೇಕು.
[13] ಆರೋನನು ನನಗೆ ಯಾಜಕ ಸೇವೆ ಮಾಡುವ ಹಾಗೆ ಅವನಿಗೆ ಪರಿಶುದ್ಧ ವಸ್ತ್ರಗಳನ್ನು ತೊಡಿಸಿ, ಅವನನ್ನು ಅಭಿಷೇಕಿಸಿ, ಅವನನ್ನು ಶುದ್ಧಮಾಡಬೇಕು.
[14] ಅವನ ಪುತ್ರರನ್ನು ನೀನು ಬರಮಾಡಿಕೊಂಡು, ಅವರಿಗೆ ಅಂಗಿಗಳನ್ನು ತೊಡಿಸಿ,
[15] ಅವರ ತಂದೆಯನ್ನು ಅಭಿಷೇಕಿಸಿದ ಪ್ರಕಾರ, ಅವರು ನನಗೆ ಯಾಜಕ ಸೇವೆಯನ್ನು ಮಾಡುವ ಹಾಗೆ ಅವರನ್ನೂ ನೀನು ಅಭಿಷೇಕಿಸು. ಅವರ ಈ ಅಭಿಷೇಕದಿಂದ ಅವರ ಸಂತತಿಗಳಲ್ಲಿ ನಿತ್ಯವಾದ ಯಾಜಕತ್ವವಾಗಿರುವುದು,” ಎಂದು ಹೇಳಿದರು.
[16] ಮೋಶೆಯು ಯೆಹೋವ ದೇವರು ತನಗೆ ಆಜ್ಞಾಪಿಸಿದ ಪ್ರಕಾರವೇ ಅವನು ಎಲ್ಲವನ್ನು ಮಾಡಿದನು.
[17] ಎರಡನೆಯ ವರ್ಷದ ಮೊದಲನೆಯ ತಿಂಗಳಿನ ಮೊದಲನೆಯ ದಿವಸದಲ್ಲಿ ಗುಡಾರವು ಎದ್ದುನಿಂತಿತು.
[18] ಆಗ ಮೋಶೆಯು ಗುಡಾರವನ್ನು ನಿಲ್ಲಿಸಿ, ಅದರ ಕಾಲುಗಳನ್ನು ಬಿಗಿದು, ಅದರ ಚೌಕಟ್ಟುಗಳನ್ನು ಇರಿಸಿ, ಅಗುಳಿಗಳನ್ನು ಹಾಕಿ, ಅದರ ಸ್ತಂಭಗಳನ್ನು ನಿಲ್ಲಿಸಿದನು.
[19] ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಗುಡಾರದ ಮೇಲೆ ಡೇರೆಯನ್ನು ಹರಡಿಸಿ, ಡೇರೆಯ ಹೊದಿಕೆಯನ್ನು ಅದರ ಮೇಲೆ ಹಾಕಿದನು.
[20] ಅವನು ಆಜ್ಞಾಶಾಸನಗಳನ್ನು ತೆಗೆದುಕೊಂಡು ಮಂಜೂಷದ ಪೆಟ್ಟಿಗೆಯಲ್ಲಿಟ್ಟು, ಮಂಜೂಷಕ್ಕೆ ಕೋಲುಗಳನ್ನು ಸೇರಿಸಿ, ಮಂಜೂಷದ ಮೇಲೆ ಕರುಣಾಸನವನ್ನು ಇಟ್ಟನು.
[21] ಅವನು ಮಂಜೂಷವನ್ನು ಗುಡಾರಕ್ಕೆ ತಂದು, ಮರೆಮಾಡುವ ಪರದೆಯನ್ನಿರಿಸಿ, ಒಡಂಬಡಿಕೆಯ ಮಂಜೂಷವನ್ನು ಮರೆಮಾಡಿದನು. ಯೆಹೋವ ದೇವರು ಆಜ್ಞಾಪಿಸಿದ ಹಾಗೆಯೇ ಮೋಶೆಯು ಮಾಡಿದನು.
[22] ಅನಂತರ ಮೋಶೆ ದೇವದರ್ಶನದ ಗುಡಾರದ ಉತ್ತರ ಭಾಗದಲ್ಲಿ, ಪರದೆಯ ಹೊರಗೆ ಮೇಜನ್ನು ಇಟ್ಟನು.
[23] ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ರೊಟ್ಟಿಯನ್ನು ಯೆಹೋವ ದೇವರ ಸನ್ನಿಧಿಯಲ್ಲಿ ಕ್ರಮವಾಗಿ ಇಟ್ಟನು.
[24] ದೇವದರ್ಶನದ ಗುಡಾರದಲ್ಲಿ ಮೇಜಿಗೆ ಎದುರಾಗಿ ಗುಡಾರದ ದಕ್ಷಿಣ ಭಾಗದಲ್ಲಿ ದೀಪಸ್ತಂಭವನ್ನು ಇಟ್ಟನು.
[25] ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಯೆಹೋವ ದೇವರ ಸನ್ನಿಧಿಯಲ್ಲಿ ದೀಪಗಳನ್ನು ಇರಿಸಿದನು.
[26] ಚಿನ್ನದ ಧೂಪವೇದಿಯನ್ನು ದೇವದರ್ಶನದ ಗುಡಾರದಲ್ಲಿ ಪರದೆಯ ಮುಂದೆ ಇಟ್ಟನು.
[27] ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ಅದರ ಮೇಲೆ ಪರಿಮಳ ಧೂಪವನ್ನು ಸುಟ್ಟನು.
[28] ಗುಡಾರದ ಬಾಗಿಲಿನ ಪರದೆಯನ್ನು ತೂಗುಹಾಕಿದನು.
[29] ದೇವದರ್ಶನದ ಗುಡಾರದ ಬಳಿಯಲ್ಲಿ ದಹನಬಲಿಯ ಪೀಠವನ್ನು ಇಟ್ಟನು. ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆ ದೇವದರ್ಶನದ ಗುಡಾರದ ಬಾಗಿಲಿನ ಮುಂದೆ ಬಲಿಪೀಠ ಇಟ್ಟು ಅದರ ಮೇಲೆ ದಹನಬಲಿ ಮತ್ತು ಧಾನ್ಯ ಸಮರ್ಪಣೆಯನ್ನೂ ಅರ್ಪಿಸಿದನು.
[30] ದೇವದರ್ಶನದ ಗುಡಾರಕ್ಕೂ, ಬಲಿಪೀಠಕ್ಕೂ ಮಧ್ಯ ಗಂಗಾಳವನ್ನು ಇಟ್ಟು, ಅದರಲ್ಲಿ ತೊಳೆಯುವುದಕ್ಕೆ ನೀರನ್ನು ತುಂಬಿಸಿದನು.
[31] ಮೋಶೆಯೂ, ಆರೋನನೂ, ಅವನ ಪುತ್ರರೂ ಅದರಲ್ಲಿ ಕೈಕಾಲುಗಳನ್ನು ತೊಳೆದುಕೊಂಡರು.
[32] ಅವರು ದೇವದರ್ಶನದ ಗುಡಾರದ ಒಳಗೆ ಸೇರುವ ಸಮಯದಲ್ಲಿಯೂ, ಬಲಿಪೀಠದ ಸಮೀಪಕ್ಕೆ ಬರುವ ಸಮಯದಲ್ಲಿಯೂ ಯೆಹೋವ ದೇವರು ಮೋಶೆಗೆ ಆಜ್ಞಾಪಿಸಿದ ಹಾಗೆಯೇ ಅವರು ಸ್ನಾನ ಮಾಡಿದರು.
[33] ಮೋಶೆಯು ಗುಡಾರಕ್ಕೂ, ಬಲಿಪೀಠಕ್ಕೂ ಸುತ್ತಲೂ ಅಂಗಳವನ್ನು ನಿಲ್ಲಿಸಿ, ಅಂಗಳದ ಬಾಗಿಲಿನ ಪರದೆಯನ್ನು ತೂಗುಹಾಕಿದನು. ಈ ಪ್ರಕಾರ ಮೋಶೆಯು ಆ ಕೆಲಸವನ್ನು ತೀರಿಸಿದನು.
[34] ಆಗ ಮೇಘವು ದೇವದರ್ಶನದ ಗುಡಾರವನ್ನು ಮುಚ್ಚಿಕೊಂಡು, ಯೆಹೋವ ದೇವರ ಮಹಿಮೆಯು ದೇವದರ್ಶನದ ಗುಡಾರವನ್ನು ತುಂಬಿಕೊಂಡಿತು.
[35] ದೇವದರ್ಶನದ ಗುಡಾರದ ಮೇಲೆ ಮೇಘವು ನೆಲೆಯಾಗಿದ್ದದರಿಂದಲೂ, ಯೆಹೋವ ದೇವರು ಮಹಿಮೆಯು ದೇವದರ್ಶನದ ಗುಡಾರವನ್ನು ತುಂಬಿದ್ದರಿಂದಲೂ, ಮೋಶೆಯು ಒಳಗೆ ಪ್ರವೇಶಿಸಲಾರದೆ ಇದ್ದನು.
[36] ಮೇಘವು ಗುಡಾರವನ್ನು ಬಿಟ್ಟು ಮೇಲಕ್ಕೆ ಹೋದಾಗ, ಇಸ್ರಾಯೇಲರು ತಮ್ಮ ಪ್ರಯಾಣಕ್ಕಾಗಿ ಮುಂದೆ ಹೊರಡುತ್ತಿದ್ದರು.
[37] ಆದರೆ ಮೇಘವು ಮೇಲಕ್ಕೆ ಎತ್ತದೇ ಇರುವಾಗ ಅದು ಎತ್ತುವ ದಿವಸದವರೆಗೆ ಅವರು ಪ್ರಯಾಣ ಮಾಡಲಿಲ್ಲ.
[38] ಏಕೆಂದರೆ ಇಸ್ರಾಯೇಲರ ಎಲ್ಲಾ ಪ್ರಯಾಣಗಳಲ್ಲಿ ಅವರ ಕಣ್ಣುಗಳ ಮುಂದೆ ಹಗಲಿನಲ್ಲಿ ಯೆಹೋವ ದೇವರ ಮೇಘವು ಗುಡಾರದ ಮೇಲೆ ಇತ್ತು. ರಾತ್ರಿಯಲ್ಲಿ ಮೇಘದೊಳಗೆ ಅಗ್ನಿಯು ಪ್ರಕಾಶಿಸುತ್ತಿತ್ತು.